Home Important ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ವಾದವನ್ನು ವಿರೋಧಿಸುತ್ತೇನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ವಾದವನ್ನು ವಿರೋಧಿಸುತ್ತೇನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

SHARE

ಚಿತ್ರದುರ್ಗ: ನಾನು ಜಾತ್ಯತೀತ ತತ್ವಕ್ಕೆ ಬದ್ಧನಾಗಿದ್ದು, ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ವಾದವನ್ನು ವಿರೋಧಿಸುತ್ತೇನೆ. ಆದರೆ ನೀವು ಕೇಳುವ ಮೃದು ಹಿಂದುತ್ವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಇಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಕಾಂಗ್ರೆಸ್ ಮೃದು ಹಿಂದುತ್ವ ಪಾಲಿಸುತ್ತಿದೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮೃದು ಹಿಂದುತ್ವ .ಯಾವುದೋ ನನಗೆ ಗೊತ್ತಿಲ್ಲ. ಆದರೆ ಬಿಜೆಪಿಯವರ ಹಿಂದುತ್ವಕ್ಕೆ ನನ್ನ ವಿರೋಧವಿದೆ ಎಂದರು.

ಇದೇ ವೇಳೆ ಆರ್ ಎಸ್ ಎಸ್ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದ್ದೀರಿ. ಯಾಕೆ, ಅವರನ್ನು ಕಂಡರೆ ಭಯನಾ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನನಗ್ಯಾಕ್ರಿ ಭಯ? ಚುನಾವಣೆ ಸಮಯದಲ್ಲಿ ಆರ್‌ಎಸ್ ಎಸ್ ನವರು ರಾಜ್ಯಕ್ಕೆ ಬಂದು ಬೆಂಕಿ ಹಚ್ಚಿಬಿಟ್ಟಾರು. ಹುಷಾರಾಗಿರಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.

ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಮಗೆ ಅದರ ಅಗತ್ಯವಿಲ್ಲ. ಮಹಾದಾಯಿ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಅಥವಾ ಕಾಂಗ್ರೆಸ್ ವಿರುದ್ದ ಪ್ರತಿಭಟನೆ ಮಾಡುತ್ತಿಲ್ಲ. ಅವರು ಪ್ರತಿಭಟನೆ ಮಾಡುತ್ತಿರುವುದು ಬಿಜೆಪಿಯ ಯಡಿಯೂರಪ್ಪ ವಿರುದ್ದ. ಅವರು ಸುಳ್ಳು ಹೇಳಿದ್ದಕ್ಕೆ ಪ್ರತಿಭಟಿಸುತ್ತಿದ್ದಾರೆ ಎಂದರು.

ಮಹಾದಾಯಿ ವಿಚಾರದಲ್ಲಿ ನ್ಯಾಯಯುತವಾಗಿ ಸಿಗಬೇಕಾದ ನೀರು ರಾಜ್ಯಕ್ಕೆ ಸಿಗಬೇಕು. ಅದಕ್ಕಾಗಿ ಕಾನೂನು ರೀತಿ ಹೋರಾಟ ಮಾಡುತ್ತಿದ್ದೇವೆ. ಗೋವಾ ಮುಖ್ಯಮಂತ್ರಿಗೆ ಮಾತುಕತೆಗೆ ಬರುವಂತೆ ಪತ್ರ ಬರೆದಿದ್ದೇನೆ ಎಂದರು.