Home Important ದೀಪಕ್‌ ಹತ್ಯೆ: ಸಿನಿಮೀಯ ರೀತಿ ಕಾರು ಬೆನ್ನಟ್ಟಿ ಆರೋಪಿಗಳ ಸೆರೆ!

ದೀಪಕ್‌ ಹತ್ಯೆ: ಸಿನಿಮೀಯ ರೀತಿ ಕಾರು ಬೆನ್ನಟ್ಟಿ ಆರೋಪಿಗಳ ಸೆರೆ!

SHARE

ಮಂಗಳೂರು: ಕಾಟಿಪಳ್ಳದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತ ದೀಪಕ್‌ ರಾವ್‌ ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆಗೈದು ಸ್ವಿಫ್ಟ್‌ ಕಾರಿನಲ್ಲಿ ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಘಟನೆ ನಡೆದ ಕೇವಲ ಮೂರೂವರೆ ತಾಸಿನೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ, ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಕಿನ್ನಿಗೋಳಿಯಿಂದ ಬೆನ್ನಟ್ಟಿದ್ದ ಪೊಲೀಸರು ಸುಮಾರು 27 ಕಿ.ಮೀ. ದೂರ ಬೆನ್ನಟ್ಟುವ ಮೂಲಕ ಸಿನಿಮೀಯ ಮಾದರಿಯಲ್ಲಿ ಬಂಧಿಸಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜತೆಗೆ ದಕ್ಷಿಣ ಕನ್ನಡ ಜಿಲ್ಲೆ ಇತಿಹಾಸದಲ್ಲೇ ಕೋಮು ದ್ವೇಷದಿಂದ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿರುವುದು ಇತ್ತೀಚಿನ ವರ್ಷಗಳ ಅಪರೂಪದ ಪ್ರಕರಣವೆಂದು ಕೂಡ ಬಣ್ಣಿಸಲಾಗುತ್ತಿದೆ.

ದೀಪಕ್‌ ಮೇಲೆ ಕಾಟಿಪಳ್ಳದಲ್ಲಿ ಬುಧ ವಾರ ಮಧ್ಯಾಹ್ನ 1.30ರ ಸುಮಾರಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ಆರೋಪಿಗಳು ಕಾಟಿಪಳ್ಳದಿಂದ ಹೊರಟು ಸೂರಿಂಜೆ, ಶಿಬರೂರು ಮಾರ್ಗವಾಗಿ ಕಿನ್ನಿಗೋಳಿಯಾಗಿ ಸಂಚರಿಸುತ್ತಿದ್ದರು.

ಎಲ್ಲೆಡೆ ತುರ್ತು ಸಂದೇಶ
ಘಟನೆ ನಡೆದ ತತ್‌ಕ್ಷಣ ಎಚ್ಚೆತ್ತುಕೊಂಡಿದ್ದ ಮಂಗಳೂರು ನಗರ ಪೊಲೀಸರು, ಸುತ್ತಮುತ್ತಲಿನ ಎಲ್ಲ ಪೊಲೀಸ್‌ ಠಾಣೆಗಳಿಗೆ ಅಂದರೆ, ಸುರತ್ಕಲ್‌, ಮೂಲ್ಕಿ, ಬಜಪೆ ಹಾಗೂ ಮೂಡಬಿದಿರೆ ಠಾಣೆಗಳಿಗೆ ಆರೋಪಿಗಳ ಸುಳಿವು ಬಗ್ಗೆ ನಿಗಾವಹಿಸುವಂತೆ ಮಾಹಿತಿ ರವಾನಿಸಿದ್ದರು. ಹೀಗಿರುವಾಗ ಘಟನೆಯಾದ ಕೆಲವೇ ಹೊತ್ತಿನಲ್ಲಿ ಮೂಲ್ಕಿ ಪೊಲೀಸರಿಗೆ ದೀಪಕ್‌ನನ್ನು ಹತ್ಯೆ ಮಾಡಿರುವ ನಾಲ್ವರು ಆರೋಪಿಗಳು ರಕ್ತಸಿಕ್ತ ತಲವಾರುಗಳನ್ನು ಗಾಡಿಯಲ್ಲಿ ಇಟ್ಟುಕೊಂಡು ಸಂಚರಿಸುತ್ತಿರುವ ಬಗ್ಗೆ ಮೂಲ್ಕಿ ಠಾಣೆಯ ಪೊಲೀಸರೊಬ್ಬರಿಗೆ ಮಾಹಿತಿ ದೊರಕಿತ್ತು. ಕೂಡಲೇ ಅವರು ಠಾಣೆಯ ಗಸ್ತು ವಾಹನಕ್ಕೆ ಮಾಹಿತಿ ರವಾನಿದರು. ಗಸ್ತು ವಾಹನ ಈ ಸಮಯದಲ್ಲಿ ಕಿನ್ನಿಗೋಳಿಯಲ್ಲಿದ್ದು, ಅದರಲ್ಲಿ ಎಸ್‌ಐ ಸಹಿತ ಸಿಬಂದಿ ಇದ್ದರು. ಮಾಹಿತಿ ಬಂದ ಕೂಡಲೇ ಅಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸಿದ್ದರು. ಈ ಹಂತದಲ್ಲಿ ಬಂದ ಸ್ವಿಫ್ಟ್ ಕಾರಿಗೆ ನಿಲ್ಲಿಸಲು ಸೂಚಿಸಿದರೂ ಕೇಳದೆ ವೇಗವಾಗಿ ಮುನ್ನುಗ್ಗಿತ್ತು.

ಖಾಸಗಿ ಕಾರಿನಲ್ಲಿ ಬೆನ್ನಟ್ಟಿದರು
ಕೂಡಲೇ ಕಾರ್ಯಪ್ರವೃತ್ತರಾದ ಮೂಲ್ಕಿ ಪೊಲೀಸರು ತತ್‌ಕ್ಷಣಕ್ಕೆ ಲಭ್ಯವಾದ ಖಾಸಗಿ ಕಾರನ್ನು ಪಡೆದು ಕಾರ್ಯಾಚರಣೆಗೆ ಇಳಿದರು. ಒಂದು ಕಾರಿನಲ್ಲಿ ಇಬ್ಬರು ಮತ್ತೂಂದು ಕಾರಿನಲ್ಲಿ ಇನ್ನೊಬ್ಬರು ಬೇರೆ ಬೇರೆ ಮಾರ್ಗದಲ್ಲಿ ಕಾರು ಹೋಗಿರುವ ದಾರಿಯಲ್ಲಿಯೇ ಹುಡುಕಾಟ ಆರಂಭಿಸಿದರು. ಮತ್ತೂಂದು ಬದಿಯಿಂದ ಬಜಪೆ ಪೊಲೀಸರು ಕೂಡ ಇದೇ ಜಾಡಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು.

ಕಿನ್ನಿಗೋಳಿಯಾಗಿ ಬಂದ ಕಾರು ದಾಮಸ್‌ಕಟ್ಟೆ, ಪಟ್ಟೆಕ್ರಾಸ್‌, ಕದ್ರಿಪದವು, ನಿಡ್ಡೋಡಿಯಾಗಿ ಮಿಜಾರು ದಡ್ಡಿಯಾಗಿ ಧೂಮಚಡವು ಕ್ರಾಸ್‌ಗೆ ಬಂದು ಮಿಜಾರುಗುತ್ತು ದೋಟಮನೆಯನ್ನು ದಾಟಿ ಪರಾರಿಯಾಗಲೆತ್ನಿಸಿದ್ದಾರೆ. ಈ ರೀತಿ ಸುಮಾರು 27 ಕಿ.ಮೀ. ದೂರಕ್ಕೆ ಪೊಲೀಸರು ಆರೋಪಿಗಳು ಹೋಗುತ್ತಿದ್ದ ಕಾರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ದಾರಿ ಮಧ್ಯೆಯೇ ಒಂದೆರಡು ಬಾರಿ ಪೊಲೀಸರು ಆರೋಪಿಗಳು ಇದ್ದ ಕಾರಿಗೆ ಹಿಂಬದಿಯಿಂದ ಗುಂಡು ಹಾರಿಸಿದ್ದಾರೆ. ಆದರೆ ಪೊಲೀಸರ ಫೈರಿಂಗ್‌ಗೂ ಕ್ಯಾರ್‌ ಮಾಡದೆ ಆರೋಪಿಗಳು ಭಾರೀ ವೇಗವಾಗಿ ಕಾರನ್ನು ನುಗ್ಗಿಸಿಕೊಂಡು ಮುಂದೆ ಸಾಗುತ್ತಿದ್ದರು. ಕೊನೆಗೂ ಎಡಪದವು ಸಮೀಪದ ಮಿಜಾರು ಗುತ್ತು ಗರಡಿ ಹಿಂಭಾಗದಲ್ಲಿರುವ ಒಂದು ಮೋರಿಯಲ್ಲಿ ಕಾರು ಸಿಕ್ಕಿ ಹಾಕಿಕೊಂಡಿತು. ಖಾಸಗಿ ಮಾರ್ಗದ ನಡುವೆ ಎದುರಾಗುವ ಸುಮಾರು ಆರಡಿ ಎತ್ತರದ ಕಿರು ಸೇತುವೆಯ ಕಲ್ಲಿನ ಸ್ಲಾಬ್‌ಗಳು ಮುರಿದು ಬಿದ್ದಿದೆ. ಸೇತುವೆ ಕುಸಿದಿದ್ದ ಕಾರಣ ಜನರಿಗೆ ಕಾಲ್ನಡಿಗೆಯಲ್ಲಿ ಚಲಿಸುವುದಕ್ಕೆ ಅನುಕೂಲವಾಗುವಂತೆ ಮರದ ಹಲಗೆ ಹಾಕಲಾಗಿತ್ತು. ಹೀಗಾಗಿ ಆರೋಪಿಗಳಿಗೆ ಮುಂದಕ್ಕೆ ಕಾರು ಚಲಾಯಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಆರೋಪಿಗಳ ಕಾರು ಆ ಮೋರಿಯಲ್ಲೇ ಸಿಲುಕಿಕೊಂಡಿತ್ತು.

ಕುಸಿದಿದ್ದ ಮೋರಿಯಲ್ಲಿ ಸಿಕ್ಕಿಬಿದ್ದರು
ಮೋರಿಯಲ್ಲಿ ಸಿಲುಕಿಕೊಂಡಿದ್ದ ಕಾರಿಗೆ ಎಷ್ಟೇ ಪ್ರಯತ್ನಿಸಿದ್ದರೂ ಮುಂದಕ್ಕೆ ಚಲಿಸುವುದಕ್ಕೆ ಸಾಧ್ಯ ವಾಗಿರಲಿಲ್ಲ. ಈ ನಡುವೆ ಮೋರಿಯಲ್ಲಿ ಸಿಲುಕಿಕೊಂಡಿದ್ದ ಕಾರಿನ ಎದುರಿನ ಭಾಗ ಮೇಲ್ಮುಖವಾಗಿತ್ತು. ಇದರಿಂದಾಗಿ ಕಾರಿನಿಂದ ಏಕಾಏಕಿ ಇಳಿಯುವುದಕ್ಕೂ ಸಾಧ್ಯವಾಗಿರಲಿಲ್ಲ. ಅಷ್ಟೊತ್ತಿಗೆ ಬೆನ್ನಟ್ಟಿ ಬರುತ್ತಿದ್ದ ಪೊಲೀಸರು ಆರೋಪಿಗಳು ಇದ್ದ ಕಾರಿನ ಹತ್ತಿರ ಬಂದಾಗಿತ್ತು. ಆಮೇಲೆ ಹಲವು ಸುತ್ತಿನ ಗುಂಡು ಹಾರಿಸಿ ಆರೋಪಿಗಳನ್ನು ಸುತ್ತುವರಿಯಲ್ಲಿ ಯಶಸ್ವಿಯಾದರು. ಅದೇ ವೇಳೆಗೆ ಮೂಡಬಿದಿರೆ ಹಾಗೂ ಬಜಪೆ ಠಾಣೆ ಪೊಲೀಸರು ಕೂಡ ಆ ಜಾಗಕ್ಕೆ ದೌಡಾಯಿಸಿ ಬಂದಿದ್ದರು. ಅದರಲ್ಲಿಯೂ ಬಜಪೆ ಠಾಣೆ ಪೊಲೀಸರ ಮತ್ತೂಂದು ತಂಡವೂ ಮುಚ್ಚಾರಿನಿಂದ ಆರೋಪಿಗಳ ಕಾರನ್ನು ಬೆನ್ನಟ್ಟುವುದಕ್ಕೆ ಪ್ರಾರಂಭಿಸಿದ್ದರು. ಒಟ್ಟಿನಲ್ಲಿ ಎಲ್ಲೆಡೆ ಯಿಂದಲೂ ಬೇರೆ ಬೇರೆ ಪೊಲೀಸ್‌ ತಂಡ ಬೆನ್ನಟ್ಟುತ್ತಿದ್ದರಿಂದ ಆರೋಪಿಗಳಿಗೆ ಏನೂ ಮಾಡಲಾಗಲಿಲ್ಲ.

ಭೀತಿ ಹುಟ್ಟಿಸಿದ ಕಾರು
ಕಾರು ಮೋರಿಯಲ್ಲಿ ಸಿಲುಕಿಕೊಂಡು ಪೊಲೀಸರು ಕಾರ್ಯಾಚರಣೆ ಮುಂದುವರಿಸುತ್ತಿದ್ದಂತೆ ಸ್ಥಳೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಿದ್ದರು. ಅಲ್ಲಿನ ಪ್ರತ್ಯಕ್ಷದರ್ಶಿಗಳು ಪರಿಸರದವರು ಹೇಳುವಂತೆ, ಆರೋಪಿಗಳು ಎರ್ರಾಬಿರ್ರಿಯಾಗಿ ವಾಹನ ಚಲಾಯಿಸುತ್ತಿದ್ದರೆನ್ನಲಾಗಿದೆ. ಅತೀ ವೇಗದಲ್ಲಿ ಕಾರು ಸಾಗುವಾಗ, ದ್ವಿಚಕ್ರ ವಾಹನದಲ್ಲಿÉ ಅಲ್ಪ ಪ್ರಮಾಣದ ಕಟ್ಟಿಗೆ ಪೇರಿಸಿಕೊಂಡು ತಮ್ಮ ಮನೆಯತ್ತ ಸಾಗುತ್ತಿದ್ದ ಓರ್ವ ಬಡಪಾಯಿ ಕಾರಿನ ಅಡಿಗೆ ಬಿದ್ದು ಪ್ರಾಣ ಕಳಕೊಳ್ಳುವ ಅಪಾಯ ಸ್ವಲ್ಪದರಲ್ಲೇ ತಪ್ಪಿತ್ತು. ಬೆಳ್ಳೆಚಾರು ಶಾಲೆಯ ಹಿಂಭಾಗದ ರಸ್ತೆಯು ತೀರಾ ದುರ್ಗಮ ಹಾದಿಯಾಗಿದ್ದು ಬಹುತೇಕ ಖಾಸಗಿಯವರು ಬಿಟ್ಟು ಕೊಟ್ಟ ಜಾಗದಲ್ಲಿ ಈ ರಸ್ತೆ ಹಾದುಹೋಗಿದ್ದು ಒಂದು ವೇಳೆ ದೋಟಮನೆಯ ಬಳಿಯ ಕಿರು ಸೇತುವೆಯ ಸ್ಲಾಬ್‌ಗಳು ಮುರಿದು ಬಿದ್ದಿರದೇ ಇರುತ್ತಿದ್ದಲ್ಲಿ ಆರೋಪಿಗಳು ಮಿಜಾರು ಗರಡಿಯಾಗಿ ತೋಡಾರ್‌ನತ್ತ ಬಂದು ಪರಾರಿಯಾಗುವ ಸಾಧ್ಯತೆ ಇತ್ತು. ತೀರಾ ಹಳ್ಳಿಪ್ರದೇಶದಲ್ಲಿ, ವಾಹನ ಸಂಚಾರವೇ ಇಲ್ಲದ ಹಾದಿಯಲ್ಲಿ , ಮುಸ್ಸಂಜೆ ವೇಳೆ ಹೀಗೆ ದಿಢೀರನೇ ದುಷ್ಕರ್ಮಿಗಳ ವಾಹನಗಳು ಶರವೇಗದಲ್ಲಿ ಸಾಗಿಬರುವುದನ್ನು ನೋಡಿದ್ದ ಜನರು ಕೂಡ ಭೀತಿಗೆ ಒಳಗಾಗಿದ್ದರು. ಆದರೂ ಪೊಲೀಸರ ಧೈರ್ಯದ ಕಾರ್ಯಾಚರಣೆಯ ಬಗ್ಗೆ ಊರವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಾಲ್ಕು ಬಾರಿ ಗುಂಡು ಹಾರಿಸಿದರು
ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆ ಯುವುದಕ್ಕೂ ಮುನ್ನ ಪೊಲೀಸರು ಆರೋಪಿಗಳು ಕುಳಿತಿದ್ದ ಕಾರಿನತ್ತ ನಾಲ್ಕೈದು ಬಾರಿ ಗುಂಡು ಹಾರಿಸುವ ಮೂಲಕ ಆರೋಪಿಗಳು ಇಳಿದು ಪರಾರಿ ಯಾಗದಂತೆ ಭಯ ಹುಟ್ಟಿಸಿದ್ದರು. ಕೊನೆಗೆ ಬಜಪೆ, ಮೂಡಬಿದಿರೆ ಪೊಲೀಸರ ಸಹಕಾರ ದೊಂದಿಗೆ ಮೂಲ್ಕಿಯಿಂದ ಬೆನ್ನಟ್ಟಿ ಬಂದಿದ್ದ ಪೊಲೀಸರ ತಂಡವು ಕಾರಿನಲ್ಲಿದ್ದವರ ಸೆರೆಗೆ ಮುಂದಾಯಿತು. ಈ ಹಂತದಲ್ಲಿಯೂ ಕಾರಲ್ಲಿದ್ದವರು ತಲವಾರು ಬೀಸಿದ್ದರು. ಇದರಿಂದ ಪೊಲೀಸ್‌ ಓರ್ವರು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದರು. ಅಷ್ಟರಲ್ಲಿ ಇತರ ಪೊಲೀಸರು ಶೂಟ್‌ ಮಾಡುವ ಎಚ್ಚರಿಕೆ ನೀಡಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ, ಅಲ್ಲಿಂದ ಮತ್ತೂಂದು ಪೊಲೀಸ್‌ ವಾಹನದಲ್ಲಿ ಹೆಚ್ಚಿನ ತನಿಖೆಗಾಗಿ ಮಂಗಳೂರಿನಲ್ಲಿರುವ ಪೊಲೀಸ್‌ ಕಮಿಷನರ್‌ ಕಚೇರಿಗೆ ಕರೆದೊಯ್ದರು.

ಬಟ್ಟೆ ಬದಲಿಸಿದ್ದ ಆರೋಪಿಗಳು
ದೀಪಕ್‌ ಹತ್ಯೆಯ ಬಳಿಕ ಆರೋಪಿಗಳು ತಮ್ಮ ಬಟ್ಟೆಯನ್ನು ಬದಲಿದ್ದರು. ಮಾರಕಾಯುಧಗಳಿಂದ ಕಡಿಯುವಾಗ ದೀಪಕ್‌ ಮೈಯಿಂದ ಚಿಮ್ಮಿದ ರಕ್ತ ಆರೋಪಿಗಳ ಟಿ-ಶರ್ಟ್‌ ಮೇಲೆ ಬಿದ್ದಿತ್ತು. ಆರೋಪಿಗಳು ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆ ಗಳನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ದಾರಿ ಮಧ್ಯೆ ಕಾರಿನಲ್ಲಿ ಕುಳಿತುಕೊಂಡು ಬದಲಾಯಿಸಿದ್ದಾರೆ.

ರಕ್ತಸಿಕ್ತ ವಸ್ತ್ರವನ್ನು ಕಂಡು ಸಾರ್ವಜನಿಕರಿಗೆ ತಮ್ಮ ಮೇಲೆ ಅನುಮಾನ ಬರುವುದುಬೇಡ ಎಂದು ಆರೋಪಿಗಳು ಎಚ್ಚರ ವಹಿಸಿದ್ದರಾದರೂ ಕೊಲೆಗೆ ಬಳಸಿದ ನಾಲ್ಕು ತಲವಾರುಗಳನ್ನು ಕಾರಿನ ಹಿಂಭಾಗದಲ್ಲಿ ಇಟ್ಟುಕೊಂಡಿದ್ದರು. ಆದರೆ ಈ ತಲವಾರು ಮಾತ್ರ ರಕ್ತಸಿಕ್ತವಾಗಿಯೇ ಇತ್ತು.

ಕಾರು ಚಾಲಕನ ಸಮಯಪ್ರಜ್ಞೆ
ಆರೋಪಿಗಳನ್ನು ಬಹಳ ವೇಗವಾಗಿ ಬೆನ್ನಟ್ಟಿ ಪೊಲೀಸರು ಸೆರೆ ಹಿಡಿಯುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದು, ಪೊಲೀಸರು ಬಾಡಿಗೆಗೆ ಪಡೆದುಕೊಂಡಿದ್ದ ಖಾಸಗಿ ಕಾರಿನ ಚಾಲಕ ಎನ್ನಲಾಗಿದೆ. ಸುಮಾರು 25ರ ಆಸುಪಾಸಿನ ಈ ಯುವಕ ಬಹಳ ಧೈರ್ಯ ಹಾಗೂ ಜಾಣ್ಮೆ ಪ್ರದರ್ಶಿಸುವ ಜತೆಗೆ, ಪೊಲೀಸರ ಕಾರ್ಯಾಚರಣೆಗೆ ಬಹಳ ಮೆಚ್ಚುಗೆಗೆ ಪಾತ್ರವಾಗುವ ರೀತಿ ಸಹಕರಿಸಿದ್ದಾರೆ. ಕಿನ್ನಿಗೋಳಿಯಿಂದ ಕಡಿದಾದ ಒಳ ರಸ್ತೆಗಳಲ್ಲಿ ಆರೋಪಿಗಳು ವಾಯು ವೇಗದಲ್ಲಿ ಪರಾರಿಯಾಗುತ್ತಿದ್ದರೆ, ಅದನ್ನು ಬೆನ್ನಟ್ಟುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಆ ಖಾಸಗಿ ಕಾರಿನ ಚಾಲಕ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಆರೋಪಿಗಳ ಕಾರನ್ನು ಸುಮಾರು 27 ಕಿ.ಮೀ. ದೂರದವರೆಗೆ ಹಿಂಬಾಲಿಸಿಕೊಂಡು ಹೋಗಿರುವುದು ಪ್ರಶಂಸನೀಯ.