Home Local ಅಂತರಾಷ್ಟ್ರೀಯ ಸ್ಕೂಬಾ ಉತ್ಸವಕ್ಕೆ ಚಾಲನೆ ;ಸ್ಕೂಬಾ ಡೈವಿಂಗ್ ಮಾಡಿದ ಸಚಿವರು!

ಅಂತರಾಷ್ಟ್ರೀಯ ಸ್ಕೂಬಾ ಉತ್ಸವಕ್ಕೆ ಚಾಲನೆ ;ಸ್ಕೂಬಾ ಡೈವಿಂಗ್ ಮಾಡಿದ ಸಚಿವರು!

SHARE

ಮುರ್ಡೇಶ್ವರ: ತಾಲೂಕಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಶನಿವಾರ ಅಂತರಾಷ್ಟ್ರೀಯ ಸ್ಕೂಬಾ ಉತ್ಸವಕ್ಕೆ ಚಾಲನೆ ದೊರೆತಿದೆ. ಕಾರ್ಯಕ್ರಮ ಉದ್ಘಾಟಿಸಿದ ಉಸ್ತುವಾರಿ ಸಚಿವರಾದ ಆರ್.ವಿ ದೇಶಪಾಂಡೆ ಮಾತನಾಡಿ ‘ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಅದು ದೊಡ್ಡ ಸಮಸ್ಯೆಯಾಗಿ ತಲೆದೂರಿದೆ. ಕನಿಷ್ಠ ವಿದ್ಯಾರ್ಹತೆ ಹೊಂದಿರುವವರಿಗೂ ಪ್ರವಾಸೋದ್ಯಮದಲ್ಲಿ ಉದ್ಯೋಗವಾಕಾಶ ನೀಡಬಹುದಾಗಿದ್ದು, ಈ ಬಗ್ಗೆ ಚಿಂತನೆ ನಡೆಸಬೇಕಿದೆ’ ಎಂದು ಹೇಳಿದರು.

‘ನೇತ್ರಾಣಿಯಲ್ಲಿ ಅಂತರಾಷ್ಟ್ರೀಯ ಸ್ಕೂಬಾ ಉತ್ಸವವನ್ನು ಆಯೋಜಿಸಬೇಕು ಎಂಬ ಆಸೆ ಬಹಳ ವರ್ಷದಿಂದ ಇತ್ತು. ಅದನ್ನು ಈಗಿನ ಜಿಲ್ಲಾಧಿಕಾರಿ ಆಸಕ್ತಿ ವಹಿಸಿ, ಎಲ್ಲರ ಸಹಕಾರದೊಂದಿಗೆ ನೆರವೇರಿಸಿದ್ದಾರೆ. ಇಲ್ಲಿನ ಸ್ಕೂಬಾ ಉತ್ಸವ ಪ್ರತೀ ವರ್ಷ ನಡೆಯಬೇಕು. ಅದಕ್ಕಾಗಿ ಒಂದು ದಿನವನ್ನು ನಿಗದಿಪಡಿಸಿ, ಪ್ರತೀ ವರ್ಷ ಅದನ್ನು ಆಚರಿಸಬೇಕು’ ಎಂದು ತಿಳಿಸಿದರು.

‘ವಿಶ್ವವನ್ನೇ ಆಕರ್ಷಿಸುವ ಶಕ್ತಿ ಉತ್ತರಕನ್ನಡ ಜಿಲ್ಲೆಗಿದೆ. ಸಿಆರ್‌ಝೆಡ್ ನಿಯಮ ಸಡಿಲಿಕೆಯಾದರೆ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಅದಕ್ಕಾಗಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಲಿದ್ದೇನೆ’ ಎಂದರು.

‘ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದಾಗ, ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಇಲ್ಲಿಗೆ ಪ್ರವಾಸಿಗರು ಬರಲು ಸಾಧ್ಯ. ಅದರಂತೆ ಜೊಯಿಡಾದ ಕೆನೊಪಿ ವಾಕ್‌ ರಚನೆಯಾದಾಗ ಅದಕ್ಕೆ ಅನೇಕರಿಂದ ಟೀಕೆಗಳು ಬಂದವು. ನಾಡಿನ ಹಾಗೂ ಜನರ ಹಿತಕ್ಕಾಗಿ ಅಭಿವೃದ್ಧಿಗಳು ಆಗಬೇಕು. ಅದರ ವಿರುದ್ಧವಾದಾಗ ಮಾತ್ರ ಟೀಕೆಗಳನ್ನು ಮಾಡಬೇಕು. ಆದರೆ ಒಳ್ಳೆಯ ಕಾರ್ಯಗಳಿಗೆ ಸದಾ ಬೆಂಬಲ ನೀಡಬೇಕು’ ಎಂದರು.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿ ಹಾಜರಿದ್ದು ಪ್ರವಾಸೋಧ್ಯಮ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ, ‘ಪ್ರವಾಸೋದ್ಯಮದ ಅಭಿವೃದ್ಧಿಗಾಗಿ, ಪ್ರವಾಸಿ ಸ್ಥಳಗಳ ಅಭಿವೃದ್ಧಿಗಾಗಿ ಇಂಥ ಚಟುವಟಿಕೆಗಳು ಸದಾ ನಡೆಯುತ್ತಿರಬೇಕು. ಇದು ಇಲ್ಲಿನ ಸ್ಥಳೀಯರಿಗೆ ಅನುಕೂಲವಾಗಲಿದೆ’ ಎಂದರು.

ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ವಸಂತರೆಡ್ಡಿ, ಜಿಲ್ಲೆಯ ಕರಾವಳಿ ತೀರಗಳಲ್ಲಿ ಕಂಡು ಬರುವ ಕಡಲಾಮೆಗಳ ವಿಶೇಷ ತಳಿಗಳನ್ನು ಹಾಗೂ ಪುಣೆಯ ಫಿನ್‌ಕಿಕ್‌ ಅಡ್ವೆಂಚರ್ಸ್‌ನ ವೀವನ್, ಸ್ಕೂಬಾ ಡೈವಿಂಗ್‌ನ ವೇಳೆ ಕಂಡು ಬರುವ ವಿವಿಧ ಜಲಚರಗಳ ಮಾಹಿತಿಯನ್ನು ದೃಶ್ಯಾವಳಿಗಳ ಮೂಲಕ ಪರಿಚಯಿಸಿದರು.

ಸ್ಕೂಬಾ ಡೈವಿಂಗ್ ಮಾಡಿದ ಸಚಿವರು: ಕಡಲತೀರದಿಂದ ಬೋಟಿನಲ್ಲಿ ನೇತ್ರಾಣಿ ದ್ವಿಪಕ್ಕೆ ತೆರಳಿದ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯ್ತಿ ಸಿಇಒ ಎಲ್.ಚಂದ್ರಶೇಖರ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳು ಅಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದ ಅಪರೂಪದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡರು.