Home Article ಅಪ್ಪ ಸತ್ತ ಜಾಡು

ಅಪ್ಪ ಸತ್ತ ಜಾಡು

SHARE

ಲೇಖಕರು: ಶುಭಾ ಗಿರಣಿಮನೆ

ಕಾದು ಕುಳಿತ ಶಬರಿಗೆ ಕಾಡಿಗೆ ಹೋಗಿ ಬರುತ್ತೇನೆ ಎಂದ ಮಗ ಇನ್ನು ಮನೆಗೆ ಬರಲಿಲ್ಲ ಎಂದು ಆತಂಕವಾಯಿತು. ಕಾಲೇಜು ರಜೆ ಇದ್ದಿದ್ದರಿಂದ ಬೆಳಗ್ಗೆ ಗಂಜಿ ಕುಡಿದವನು “ಅಮ್ಮಾ ಹಾಗೆ ಒಂದು ಸಲ ಹುತ್ತಪ್ಪನ ಬೆಟ್ಟಕ್ಕೆ ಹೋಗಿ ಬರುವೆ” ಎಂದು ಹೋದ ಸಂತೋಷ ಸೂರ್ಯ ಮುಳುಗಿ ದೀಪ ಹಚ್ಚಿದರೂ ಬರಲಿಲ್ಲ ಅಂದಾಗ ಶಬರಿಗೆ ತನ್ನ ಗಂಡನ ನೆನಪು ಅವಳನ್ನು ಕಂಗಾಲಾಗಿಸಿತು.

ಕಾಡಿಗೆ ದನ ಮೇಯಿಸಲು ಹೋಗುವ ಶಬರಿಯ ಗಂಡ ಪರಮ ದಿನವೂ ಸಂಜೆ ಐದಾರುಗಂಟೆಗೆಲ್ಲ ವಾಪಸ್ಸಾಗುತ್ತಿದ್ದ. ಆದರೆ ಕಳೆದ ಎರಡು ವರ್ಷದ ಹಿಂದೆ ಎಂದನಂತೆ ಹುತ್ತಪ್ಪನ ಬೆಟ್ಟದತ್ತ ದನವನ್ನು ಮೇಯಿಸಲು ಕರೆದುಕೊಂಡು ಹೋದವನು ಮತ್ತೆ ಬಾರಲೇ ಇಲ್ಲ. ಅದೆಲ್ಲಿ ಹೋದ ಎಂದು ಯಾರಿಗೂ ತಿಳಿಯಲಿಲ್ಲ. ದನಗಳು ಗಾಬರಿಯಾಗಿ ಬೇಗನೇ ಮನೆಗೆ ಓಡಿ ಬಂದಿದ್ದವು. ಊರ ಜನ ಕಾಡಿನ ಒಂದಿಂಚಿನ ಜಾಗ ಬಿಡದೆ ಹುಡುಕಿದರೂ ಯಾವ ಸುಳಿವು ಸಿಗಲೇ ಇಲ್ಲ. ಪರಮ ಏನಾಗಿ ಹೋದ ಎಂದು ತಿಳಿಯದೆ ಪೋಲಿಸರು ನಾಲ್ಕು ದಿನ ಹುಡುಕಿ ತಣ್ಣಗಾದರು. ಶಬರಿ ಗಂಡ ಬದುಕಿದ್ದಾನೆ ಎಂದು ತಾಳಿ ಬಿಚ್ಚದೆ ಕಾದು ಕುಳಿತಳು.

ಇಂದು ಮಗನೂ ಅದೇ ಕಾಡಿಗೆ ಹೋಗಿದ್ದಾನೆ ರಾತ್ರಿಯಾದರೂ ಅವನ ಸುಳಿವಿಲ್ಲ. ಅದೇಕೆ ಆ ಹುತ್ತಪ್ಪ ಬೆಟ್ಟದತ್ತ ಹೋಗಲು ಮನಸ್ಸು ಮಾಡಿದ. ತಾನೇಕೆ ತಡೆಯಲಿಲ್ಲ, ಎಂದು ಚಡಪಡಿಸಿತು ತಾಯಿ ಹೃದಯ. ಊರಿಗೆ ಸುದ್ದಿ ಹರಡಿತು. ಕತ್ತಲಲ್ಲೂ ಸೂಡಿ ದೀಪ ಹುತ್ತಪ್ಪ ಬೆಟ್ಟದಲ್ಲಿ ಚಲಿಸಿತು. ಸಂತೋಷ ಕಾಣಿಸಲೇ ಇಲ್ಲ. ಯಾವ ಪ್ರಾಣಿಯ ಕೂಗು ಕೇಳಲಿಲ್ಲ. ಗಾಳಿ ಇಲ್ಲದೆ ಹುಡುಕುವ ಮಂದಿಯ ಮೈಯ್ಯಲ್ಲಿ ಬೆವರಿಳಿದಿತ್ತು. ಮಧ್ಯರಾತ್ರಿಯಾಗುತ್ತಲೇ ಒಬ್ಬೊಬರಾಗಿ ಊರಿನತ್ತ ಬರಿಗೈಯ್ಯಲ್ಲಿ ಮರಳಿದರು.

ಶಬರಿ ಸೋತು ಕುಳಿತಳು. ಇನ್ನು ತನ್ನ ಉಸಿರು ಇದ್ದು ಪ್ರಯೋಜನ ಏನು ಎಂದು ಅತ್ತಳು. ಅವಳ ಅಳು ಆಕಾಶ ತಲುಪಿತ್ತು. ಅಂದು ಊರಿಗೆ ಊರೇ ನಿದ್ದೆ ಇಲ್ಲದೆ ಕಂಬನಿ ಮಿಡಿಯಿತು. ಬೆಳಗ್ಗೆ ಊರ ಹಿರಿಯರು ಎರಡು ಜನ ಸೇರಿ ಪೋಲಿಸರಿಗೆ ಸುದ್ದಿ ಮುಟ್ಟಿಸಿ ಅವರು ಬಂದು ಊರ ಜನರ ಕರೆದುಕೊಂಡು ಕಾಡಿಗೆ ಹೊರಡಬೇಕು ಎನ್ನುವಾಗ ಪೋಲಿಸ್ಟೇಶನ್‍ನಿಂದ ಪೇದೆ ಬಂದ. ಅವನ ಹಿಂದೆ ಇದ್ದ ಸಂತೋಷನನ್ನು ನೋಡಿ ಇಡೀ ಊರೆ ಹುಬ್ಬೆರಿಸಿತ್ತು. ಸಂತೋಷನ ಬಟ್ಟೆ ಕೂದಲು ಎಲ್ಲ ಅಸ್ತವ್ಯಸ್ತವಾಗಿತ್ತು.

ಶಬರಿ ಮಗನನ್ನು ಅಪ್ಪಿ “ಏನಾಯಿತೋ ಮಗನೇ, ಎಲ್ಲಿಗೆ ಹೋಗಿದ್ದೆ ಎಂದು ಕೇಳಿದಳು. ಸಂತೋಷ ಸೋತ ನಗು ಚೆಲ್ಲಿ “ಅಪ್ಪ ಸತ್ತ ಜಾಡು ಹಿಡಿದು ಹೋಗಿದ್ದೆ ಅಮ್ಮ. ಅಪ್ಪ ಕಳೆದು ಹೋಗಿಲ್ಲ ಕೊಲೆಯಾಗಿದ್ದಾರೆ. ನಮ್ಮ ಪಕ್ಕದ ಹಳ್ಳಿ ಮಾಂತಪ್ಪ ಎನ್ನುವವನೇ ಇದಕ್ಕೆಲ್ಲ ಮುಖ್ಯ ರೂವಾರಿ. ಹೀಗೆ ಒಂಟಿಯಾಗಿ ಹೋಗುವ ಮನುಷ್ಯರನ್ನು ಕಿಡ್ನಾಪ್ ಮಾಡಿ ಎಳೆದುಕೊಂಡು ಹೋಗಿ ಕಣ್ಣು, ಕಿಡ್ನಿಯನ್ನು ತೆಗೆದು ಅವರನ್ನು ಕೊಂದು ಎಲ್ಲಿಯಾದರೂ ದೂರ ಬಿಸಾಡುತ್ತಾರೆ. ಈ ರೀತಿ ಕಿಡ್ನಿ ತೆಗೆದು ಹೊರದೇಶಗಳಿಗೆ ಮಾರಿ ದುಡ್ಡು ಮಾಡುವ ದೊಡ್ಡ ಜಾಲವೇ ಇದೆ. ಇದರಲ್ಲಿ ಬಡವನಿಂದ ಡಾಕ್ಟರದರು, ಮಂತ್ರಿಗಳ ಕೈವಾಡ ಸಹ ಇದೆ. ನನಗೆ ಒಂದು ದಿನ ಅನುಮಾನ ಬಂತು. ಹಾಗಾಗಿ ನನ್ನ ಸ್ನೇಹಿತರಿಗೆ ತಿಳಿಸಿ ನಿನ್ನೆ ಮಾಚ ದನ ಕಾಯಲು ಹೋಗಬೇಕಾದ್ದನ್ನು ತಪ್ಪಿಸಿ ನಾನೇ ದನ ಮೇಯಿಸಲು ಹೋದೆ. ಮಾಚನ ಬದಲು ನನ್ನ ಜೀಪಿನಲ್ಲಿ ಎತ್ತಿ ಹಾಕಿಕೊಂಡು ಪೇಟೆಯ ಹೊರವಲಯದತ್ತ ಸಾಗಿದರು. ನನ್ನ ಸ್ನೇಹಿತರು ಹಿಂಬಾಲಿಸಿದ್ದು ಅವರಿಗೆ ತಿಳಿಯಲಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಎಚ್ಚರ ತಪ್ಪಿಸಿ ಕಿಡ್ನಿ ತೆಗೆಯಬೇಕು ಎಂದಾಗ ಪೋಲಿಸರ ಸಹಾಯದಿಂದ ಹಿಡಿದು ಹಾಕಲಾಯ್ತು. ಅಪ್ಪನ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿತಮ್ಮ” ಎಂದು ಹೇಳುತ್ತ ಕುಸಿದು ಕುಳಿತ. ಶಬರಿಯ ಕತ್ತಲ್ಲಿದ್ದ ತಾಳಿ ಮಗುಚಿ ಬಿದ್ದು ಸಂತೋಷನನ್ನೇ ನೋಡುತಲಿತ್ತು.