Home Article ಮದುವೆಯಲ್ಲಿ ಮದರಂಗಿಯ ಮಹತ್ವ

ಮದುವೆಯಲ್ಲಿ ಮದರಂಗಿಯ ಮಹತ್ವ

SHARE
ಶುಭಶ್ರೀ ಭಟ್ಟ ಗುಡಬಳ್ಳಿ,ಬೆಂಗಳೂರು
 ಮದುವೆಯೆಂಬುದು ಒಂದು ಮಹತ್ವಪೂರ್ಣ ಸಂಸ್ಕಾರ,ಸ್ತ್ರೀ-ಪುರುಷ ಶಕ್ತಿಗಳ ಸಂಗಮ,ಪ್ರಕೃತಿ-ಪುರುಷರ ಸಮಾಗಮದ ಶುಭಘಳಿಗೆ.ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಮದುವೆಯೆಂಬುದು ಒಂದು ಮುಖ್ಯವಾದ ಘಟ್ಟ.ಇಂತಹ ಶುಭದಿನದಲ್ಲಿ ಮದರಂಗಿಯಿಲ್ಲದೇ ಮದುವೆಯಾಗುವ ಭಾರತೀಯ ಹೆಣ್ಣುಮಕ್ಕಳು ಬಲು ವಿರಳ. ಮದ      ರಂಗಿಗೆ ಅದರದ್ದೇ ಆದ ಮಹತ್ವವಿದೆ. ಮದರಂಗಿಯು ಭಾರತೀಯ ಹೆಣ್ಣುಮಕ್ಕಳ ಪಾಲಿಗೆ ಕೇವಲ ಪುರಾತನ ಕಲೆ ಮಾತ್ರವಲ್ಲದೆ, ಶುಭ ಸಮಾರಂಭಗಳಾದ ಮದುವೆ, ಹಬ್ಬ-ಹರಿದಿನ, ಸಾಂಪ್ರದಾಯಿಕ ಆಚರಣೆಯಲ್ಲಿನ ಒಂದು ಅವಿಭಾಜ್ಯ ಅಂಗ. ಭಾರತೀಯರ ವಿವಾಹ ಸಮಾರಂಭಗಳಲ್ಲಿ ಮದರಂಗಿ ಹಚ್ಚುವ ಕ್ರಿಯೆ ಒಂದು ಸಂಪ್ರದಾಯವಾಗಿದ್ದು,ಉತ್ತರ ಭಾರತೀಯರಲ್ಲಿ ಮದುವೆಯ ಹಿಂದಿನದಿನ `ಮೆಹಂದಿ ಕಾ ರಾತ್’ (ಮದರಂಗಿಯ ರಾತ್ರಿ) ಎಂದೇ ಪ್ರಸಿದ್ಧವಾಗಿದ್ದರೆ,ದಕ್ಷಿಣ ಭಾರತೀಯರಲ್ಲಿ ‘ಮದರಂಗಿ ಇಡುವುದು’ ಎಂಬ ಹೆಸರಿನಿಂದ ಆಚರಿಸಲ್ಪಡುತ್ತಿದೆ.
ದಕ್ಷಿಣ ಭಾರತೀಯರಲ್ಲಿ ಮದರಂಗಿ ಇಡುವ ಆಚರಣೆ ಹೀಗಿದೆ:
     ಹಿಂದಿನ ಕಾಲದಲ್ಲಿ ಮದುವೆಯ ಹಿಂದಿನ ದಿನ ಬೆಳಿಗ್ಗೆ ಮದರಂಗಿ ಎಲೆಯನ್ನು ಆರಿಸಿ,ತೊಳೆದು ಅದಕ್ಕೆ ವೀಳ್ಯದೆಲೆ-ಸುಣ್ಣವನ್ನು ಸ್ವಲ್ಪ ಮಿಶ್ರಣಮಾಡಿ (ಒಳ್ಳೆಯ ಬಣ್ಣ ಬರಲೆಂದು) ಅರೆದು,ಸಂಜೆ ಮದರಂಗಿ ಇಡುತ್ತಿದ್ದರು.ಮೂರುಸಂಜೆ ಹೊತ್ತಲ್ಲಿ ಕೈಕಾಲು ಮುಖತೊಳೆದ ಮದುವಣಗಿತ್ತಿ ದೇವರಿಗೆ ದೀಪ ಹಚ್ಚಿಟ್ಟು ತುಳಸಿಕಟ್ಟೆಯಲ್ಲಿ ಹಾಸಿದ ಹೊಸಚಾಪೆಯ ಮೇಲೆ ಕುಳಿತುಕೊಳ್ಳಬೇಕಿತ್ತು,ಅವಳಿಗೆ ಸಕ್ಕರೆಬೆರೆತ ಹಾಲು ಕುಡಿಸಿ ಮದರಂಗಿ ಇಡುವ ಸಂಪ್ರದಾಯಕ್ಕೆ ಚಾಲನೆ ನೀಡುತ್ತಿದ್ದರು.ಮದುವಣಗಿತ್ತಿಯನ್ನು ರೇಗಿಸುತ್ತಾ,ನಗಿಸುತ್ತಾ,ರಂಜಿಸುತ್ತಾ, ಅವಳ ಮೊಗದಾವರೆಯನ್ನು ಕೆಂಪಾಗಿಸಿ,ಮದುವೆಯ ಬಗೆಗಿನ ತಳಮಳ, ತವರು ಬಿಟ್ಟು ಹೋಗುವ ಬಗೆಗಿನ ಅವಳ ದುಗುಡವನ್ನು ಕಡಿಮೆ ಮಾಡಲು ಈ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತಂತೆ.ಆದರೆ ಈ ಕಾರ್ಯಕ್ರಮ ಶನಿವಾರ ನಡೆಸುವಂತಿಲ್ಲ.ಹಿಂದಿನಿಂದ ಬಂದ ನಂಬಿಕೆಯ ಪ್ರಕಾರ ಶನಿವಾರ ಯಾವುದೇ ಶುಭಸಮಾರಂಭವನ್ನು ಶುರುಮಾಡುವಂತಿಲ್ಲ.
ಉತ್ತರ ಭಾರದತದಲ್ಲಿ ಮದರಂಗಿ(ಮೆಹಂದಿ)ಯ ಆಚರಣೆ ಹೀಗಿರುತ್ತದೆ:
  ‘ಮೆಹಂದಿ ಸಮಾರಂಭ’ (ಮೆಹಂದಿ ರಾತ್) ಕಾರ್ಯಕ್ರಮಕ್ಕಾಗೇ ವೇದಿಕೆಯೊಂದು ಸಿದ್ಧವಾಗಿರುತ್ತದೆ. ವಧು ತನ್ನ ಹೊಸ ಲೆಹೆಂಗಾ ಛೋಲಿ ಧರಿಸಿ ಮದುಮಗಳಂತೇ ತಯಾರಾಗಿ ವೇದಿಕೆಗೆ ಬರುವುದೇ ತಡ,ಆರತಿಯಾಗುತ್ತದೆ,ನಂತರ ಮೆಹಂದಿ ಹಚ್ಚುವ ಕಾರ್ಯಕ್ರಮ ಶುರುವಾಗುತ್ತದೆ. ಈ ಸಮಾರಂಭ  ವರ್ಣರಂಜಿತವಾಗಿರುವುದರ ಜೊತೆ ಸಂಗೀತ-ನೃತ್ಯದಿಂದ ಕೂಡಿದ್ದು, ಜೀವನೋತ್ಸಾಹ ಹೆಚ್ಚಿಸುವ ಕಾರ್ಯಕ್ರಮವಾಗಿರುತ್ತದೆ. ಭಾವಿ ವಧು ಹಾಗೂ ಆಕೆಯ ಕುಟುಂಬದ ಹೆಣ್ಣುಮಕ್ಕಳಿಗೆ  ಹಸ್ತ ಮತ್ತು ಪಾದಕ್ಕೆ ವೈವಿಧ್ಯಮಯವಾದ ಚಿತ್ತಾರದೊಳಗೊಂಡ ಮೆಹಂದಿ ಹಚ್ಚಲಾಗುತ್ತದೆ.
     ಮದರಂಗಿ ಮೂಲತಃ ಸಂಸ್ಕøತದ ಮೆಂಧಿಕಾ ಶಬ್ದದ ಮೂಲದಿಂದ ಉತ್ಪತ್ತಿಯಾಗಿರುವ ಪದ. ವೇದ ಗ್ರಂಥಗಳ ಪ್ರಕಾರ ಹಸ್ತದ ಮೇಲೆ ಮೂಡಿಸುವ ಮದರಂಗಿ ಹಾಗೂ ಅರಿಶಿಣವನ್ನು ಮಿಶ್ರ ಮಾಡಿ ಮೂಡಿಸುವ ಚಿತ್ತಾರ ಸೂರ್ಯನ ಒಳ ಮತ್ತು ಹೊರ ಮೈಬಣ್ಣದ ಸಂಕೇತ. ಹಳದಿ ಸೂರ್ಯನ ಹೊರ ಮೈಬಣ್ಣವನ್ನು ಸಂಕೇತಿಸಿದರೆ, ಕೆಂಪು ಒಳ ಮೈಬಣ್ಣವನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಮದುಮಗ ಹಾಗೂ ಮದುಮಗಳಿಗೆ ಮದರಂಗಿ ಹಚ್ಚುವುದು ಭಾರತದ ಅತ್ಯಂತ ಪುರಾತನ ಸಂಪ್ರದಾಯವಾಗಿದ್ದು, ಮುಖ್ಯವಾಗಿ ಮದುಮಗಳಿಗೆ ಸುವಿಸ್ತಾರವಾಗಿ ಆಕೆಯ ಹಸ್ತ ಹಾಗೂ ಪಾದಗಳ ಮೇಲೆ ಚೆಂದದ ಚಿತ್ತಾರವನ್ನು ಬಿಡಿಸಲಾಗುತ್ತದೆ. ಆದರೆ, ಮದುಮಗನಿಗೆ ಕೇವಲ ಶುಭಸೂಚವೆಂದು ಪುಟ್ಟದೊಂದು ಬೊಟ್ಟಿನಂತಹ ಚಿತ್ತಾರವನ್ನು ಬಿಡಿಸಲಾಗುತ್ತದೆ. ಹಿಂದೂಗಳಲ್ಲಿ ಮಾತ್ರವಲ್ಲದೇ ಮುಸ್ಲಿಂರಲ್ಲೂ ಈ ಸಂಪ್ರದಾಯ ಜನಪ್ರಿಯವಾಗಿದೆ. ಭಾರತೀಯರ ವಿವಾಹ ಸಮಾರಂಭಗಳಲ್ಲಿ ಮಾತ್ರವಲ್ಲದೆ, ನೆರೆಯ ದೇಶಗಳಾದ ಪಾಕಿಸ್ತಾನ, ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲೂ ವಿವಾಹ ಸಮಾರಂಭಗಳಲ್ಲಿ ಮದರಂಗಿ ಹಚ್ಚುವುದು ಒಂದು ಸಂಪ್ರದಾಯವಾಗಿದೆ.ಈ ಎಲ್ಲ ಹಿನ್ನೆಲೆಯಲ್ಲಿ ಭಾರತ ಉಪಖಂಡ ಸೇರಿದಂತೆ ಅರಬ್ ರಾಷ್ಟ್ರಗಳಲ್ಲೂ ಮದರಂಗಿ ಕಾರ್ಯಕ್ರಮ ಮಹತ್ವದ ಪಾತ್ರ ಪಡೆದುಕೊಂಡಿದೆ.ಇದನ್ನು ವಿವಾಹ ಭಾಂಧವ್ಯದ ಸಂಕೇತ ಎಂದು ಪರಿಗಣಿಸಲಾಗಿದ್ದು, ಇದಕ್ಕೆ `ಶುಭಶಕುನ’ ಎಂದೂ ಕರೆಯುತ್ತಾರೆ.
      ಮದರಂಗಿಯ ಬಣ್ಣದ ಗಾಢತೆಯ ಮೇಲೆ ಭಾವಿ ದಂಪತಿಗಳ ನಡುವಿನ ಪ್ರೀತಿ-ಅನ್ಯೋನ್ಯತೆಯ ಅರಿವಾಗುತ್ತದೆ ಎಂಬ ನಂಬಿಕೆಯೂ ಚಾಲ್ತಿಯಲ್ಲಿದೆ. ಆ ಪೈಕಿ ಮದುಮಗಳ ಹಸ್ತದ ಮೇಲಿನ ಮದರಂಗಿಯ ಬಣ್ಣ ಗಾಢವಾಗಿ ಮೂಡಿಬಂದರೆ ಅದು ಭಾವಿ ದಂಪತಿಗಳ ನಡುವಿನ ಗಾಢ ಪ್ರೀತಿಯನ್ನು-ಅವರ ನಡುವಿನ ಸಾಮರಸ್ಯವನ್ನೂ ಸಂಕೇತಿಸುತ್ತದೆ.ಇನ್ನೂ ಕೆಲವೆಡೆ ಮದರಂಗಿಯ ಗಾಢತೆಯ ಬಣ್ಣ  ಭಾವಿ ಮದುಮಗಳು ಮತ್ತವಳ ಅತ್ತೆಯ ನಡುವಿನ ಹೊಂದಾಣಿಕೆಯನ್ನು ಸೂಚಿಸುತ್ತದೆ ಎಂದು ನಂಬುವರಿದ್ದಾರೆ. ಮದರಂಗಿಯ ಬಣ್ಣ ಎಷ್ಟು ಕಾಲ ಉಳಿಯುತ್ತದೋ ಅಷ್ಟು ನವದಂಪತಿಗಳ ಪಾಲಿಗೆ ಒಳ್ಳೆಯದು ಎಂಬ ನಂಬಿಕೆಯೂ ಇದೆ. ವೈಜ್ನಾನಿಕವಾಗಿ ಹೇಳಬೇಕೆಂದರೆ ಮದರಂಗಿ ತನ್ನ ವೈದ್ಯಕೀಯ ಗುಣಗಳಿಂದಲೇ ಹೆಚ್ಚು ಪ್ರಸಿದ್ಧವಾಗಿದೆ. ಮದರಂಗಿಗೆ ತಂಪು ಮಾಡುವ ಶಕ್ತಿಯಿದ್ದು, ಅದರಿಂದ ತಲೆನೋವು,ಒತ್ತಡ ನಿವಾರಣೆ ಹಾಗೂ ಜ್ವರಶಮನವಾಗುತ್ತದೆ. ವಿವಾಹಪೂರ್ವದಲ್ಲಿ ಮದರಂಗಿ ಹಚ್ಚುವುದರಿಂದ ವಧು-ವರರನ್ನು ವೈರಾಣು ಜ್ವರಕ್ಕೆ ಒಳಗಾಗುವುದರಿಂದ ತಪ್ಪಿಸಬಹುದು. ಹೀಗಾಗಿ ನೂತನ ವಧು-ವರರು ವಿವಾಹದ ಒತ್ತಡದಿಂದ ಹೊರಬರಲು ಮದರಂಗಿಯನ್ನು ಹಚ್ಚುವ ಸಂಪ್ರದಾಯ ಶುರುವಾಯಿತೆಂದೂ ಹೇಳಬಹುದು.