Home Important ಒಂದು ವರ್ಷ ಪೂರೈಸಿದ ‘ಗೋಕರ್ಣ ಗೌರವ’ ಕಾರ್ಯಕ್ರಮ

ಒಂದು ವರ್ಷ ಪೂರೈಸಿದ ‘ಗೋಕರ್ಣ ಗೌರವ’ ಕಾರ್ಯಕ್ರಮ

SHARE

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಾಡಿನ ವಿವಿಧ ಸಂತರುಗಳಿಂದ ಲೋಕಕಲ್ಯಾಣಾರ್ಥ ಶ್ರೀ ಆತ್ಮಲಿಂಗ ಪೂಜೆ ಹಾಗು ಸಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ “ಗೋಕರ್ಣ ಗೌರವ” ದಿನಾಂಕ 09-01-2017 ಸೋಮವಾರ ಶುಭಾರಂಭಗೊಂಡಿತ್ತು. ಶ್ರೀಮದ್ ಗಿರಿರಾಜಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಸೂರ್ಯಸಿಂಹಾಸನ ಮಠಾಧೀಶ . ಶ್ರೀಶೈಲ ಆಂಧ್ರಪ್ರದೇಶ ಇವರು ಈ ವಿನೂತನ , ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು .

ಆತ್ಮಲಿಂಗ ಸನ್ನಿಧಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯವು ಭಕ್ತರ ಕೇಂದ್ರವಾಗಿದ್ದು ಇನ್ನು ಮುಂದೆ ಸಂತರ ಕೇಂದ್ರವಾಗಲಿದೆ . ರಾಜ್ಯದಲ್ಲಿ ಸುಮಾರು ೫೦೦೦ ಕ್ಕೂ ಹೆಚ್ಚಿನ ಮಠಗಳಿದ್ದು , ಎಲ್ಲ ಮಠಾಧೀಶರನ್ನು ಸಂಪರ್ಕಿಸಿ , ಅವರನ್ನು ಗೋಕರ್ಣಕ್ಕೆ ಆಹ್ವಾನಿಸಲಾಗುವುದು . ಪ್ರತಿದಿನ ಒಬ್ಬರು ಸಂತರಿಂದ ಆತ್ಮಲಿಂಗ ಪೂಜೆಗೆ ವ್ಯವಸ್ಥೆ ಮಾಡಲಾಗುವುದು ಎಂದು ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಿಳಿಸಿದ್ದಾರೆ .

ಪ್ರತಿದಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವ ‘ಗೋಕರ್ಣ ಗೌರವ’ ಕಾರ್ಯಕ್ರಮವು ಶ್ರೀ ಕ್ಷೇತ್ರ ಗೋಕರ್ಣ ಉಪಾಧಿವಂತ ಮಂಡಳದ ಸಹಯೋಗದೊಂದಿಗೆ , ಸಂತಸೇವಕ ಸಮಿತಿಯ ಸಂಘಟನೆಯಲ್ಲಿ ಕಳೆದ ಒಂದು ವರ್ಷದಿಂದ ಒಂದು ದಿನವೂ ತಪ್ಪದಂತೆ ನಿರಂತರವಾಗಿ ನಡೆಯುತ್ತಿದ್ದು ದಿನಾಂಕ 08-01-2018 ರಂದು 365 ದಿನಗಳನ್ನು ಪೂರೈಸಿದೆ. ಇಂದು ಪ ಪೂ ಶ್ರೀ ಮ ನಿ ಪ್ರ ಜಯಶಾಂತಲಿಂಗ ಮಹಾಸ್ವಾಮಿಗಳು, ಶ್ರೀ ಶಾಂತಲಿಂಗೇಶ್ವರ ಮಠ , ಬಸವಕಲ್ಯಾಣ ಇವರು ಪೂಜೆ ಸಲ್ಲಿಸಿದ್ದಾರೆ .

ಆಗಮಿಸಿದ ಎಲ್ಲ ಸಂತರು ತಮ್ಮ ಶಿಷ್ಯ ಜನತೆಯ ಒಳಿತನ್ನು ಹಾಗೂ ಲೋಕಕಲ್ಯಾಣವನ್ನು ಸಂಕಲ್ಪಿಸಿ, ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ, ನವಧಾನ್ಯ ಅಭಿಷೇಕ, ರುದ್ರಾಭಿಷೇಕ , ಬಿಲ್ವಾರ್ಚನೆ , ಮಂಗಳಾರತಿ ಹಾಗೂ ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿ , ಶಿವಸಂಪ್ರೀತಿಯನ್ನು ಪಡೆದು, ಈ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ತಮ್ಮ ಅತಿ ಸಂತಸವನ್ನು ವ್ಯಕ್ತಪಡಿಸಿ ಆಶೀರ್ವದಿಸುತ್ತಿದ್ದಾರೆ. ಪೂಜೆಯ ನಂತರ ಪ್ರತಿದಿನದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ವಿವಿಧ ಸಮಾಜದ ಮುಖಂಡರಿಂದ ನಡೆಸಿಕೊಂಡು ಬರಲಾಗಿದೆ. 366 ನೇಯ ದಿನದಂದು (09-01-2018) ಪ ಪೂ ಜಗದ್ಗುರು ಫಕ್ಕೀರೇಶ್ವರ ಮಹಾಸ್ವಾಮಿಗಳು, ಶ್ರೀ ಫಕೀರೇಶ್ವರ ಸರ್ವಧರ್ಮ ಸಮನ್ವಯ ಭಾವೈಕ್ಯ ಪೀಠ, ಶಿರಹಟ್ಟಿ ಗದಗ ಇವರು ಪೂಜೆ ಸಲ್ಲಿಸಲಿದ್ದಾರೆ.

ಸಂತರುಗಳಿಂದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಪೂಜೆ ನೆರವೇರಿಸುವ ಈ ಅದ್ವಿತೀಯವಾದ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿಯೂ ನಡೆಸಿಕೊಂಡು ಬರುವಂತೆ ಪೂಜ್ಯ ಸಂತರುಗಳು ಆಶೀರ್ವದಿಸಬೇಕಾಗಿಯೂ, ಉಪಾಧಿವಂತ ಮಂಡಳ ಹಾಗೂ ಜನಸಮುದಾಯ ಸಹಕರಿಸಬೇಕಾಗಿಯೂ ಶ್ರೀ ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ವಿನಂತಿಸಿದ್ದಾರೆ .

ಇಂದು ನಡೆದ ಗೋಕರ್ಣ ಗೌರವ

ಪ ಪೂ ಶ್ರೀ ಮ.ನಿ. ಪ್ರ. ಜಯಶಾಂತಲಿಂಗ ಸ್ವಾಮಿಗಳು,ಶಾಂತಲಿಂಗೇಶ್ವರಮಠ, ಬಸವಕಲ್ಯಾಣ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 365 ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಪ್ರಧಾನ ಅರ್ಚಕರಾದ ವೇ. ಶಿತಿಕಂಠ ಹಿರೇ ಭಟ್ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಸಂತ ಸೇವಕ ಸಮಿತಿಯ ಉಪಾಧ್ಯಕ್ಷ ಶ್ರೀ ವಿ ಡಿ ಭಟ್ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಭಾಗವಹಿಸಿದ್ದರು . ವೇ ವಿಶ್ವನಾಥ ಭಟ್ ಬಾಳೆಹಿತ್ಲು ಇವರು ಪೂಜಾ ಕೈಂಕರ್ಯ ನೆರವೇರಿಸಿದರು .