Home Local ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ ಆರೋಪ ; ಗ್ರಾ.ಪಂ ಗೆ ಬಿತ್ತು ಬೀಗ! ದಿಗ್ಬಂಧನಕ್ಕೆ ಒಳಗಾದ ಕಾರ್ಯದರ್ಶಿ...

ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ ಆರೋಪ ; ಗ್ರಾ.ಪಂ ಗೆ ಬಿತ್ತು ಬೀಗ! ದಿಗ್ಬಂಧನಕ್ಕೆ ಒಳಗಾದ ಕಾರ್ಯದರ್ಶಿ ಹಾಗೂ ಪಿಡಿಒ

SHARE

ಕಾರವಾರ: ‘ಅಭಿವೃದ್ಧಿಯ ಬಗ್ಗೆ ಲಕ್ಷ್ಯ ವಹಿಸದೇ ಕಾಟಾಚಾರಕ್ಕೆ ಸಭೆ ನಡೆಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಸಭೆಯನ್ನು ಬಹಿಷ್ಕರಿಸಿ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ, ಕಾರ್ಯದರ್ಶಿ ಹಾಗೂ ಪಿಡಿಒಗೆ ಸದಸ್ಯರೇ ದಿಗ್ಬಂಧನ ಹಾಕಿದ ವಿಚಿತ್ರ ಘಟನೆ ಇಲ್ಲಿನ ಅಮದಳ್ಳಿಯಲ್ಲಿ ಬುಧವಾರ ನಡೆದಿದೆ.

ಬುಧವಾರ ಪಂಚಾಯ್ತಿ ಆವರಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿತ್ತು. ಈ ವೇಳೆ ಅದನ್ನು ಬಹಿಷ್ಕರಿಸಿದ ಸದಸ್ಯರು, ‘ಪಂಚಾಯ್ತಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಪಂಚಾಯ್ತಿ ಕಾರ್ಯದರ್ಶಿ ನಾರಾಯಣಗೌಡ, ಅಭಿವೃದ್ಧಿ ಅಧಿಕಾರಿ ಪವಿತ್ರಾ ಅವರು ಜನಸಾಮಾನ್ಯರಿಗೆ ಕೆಲಸಗಳನ್ನು ವಿಳಂಬ ಮಾಡುತ್ತಿದ್ದು, ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿ ಎಲ್ಲ ಪಂಚಾಯ್ತಿಗೆ ಬೀಗ ಹಾಕಿ ಅದರೆದುರು ಪ್ರತಿಭಟನೆ ನಡೆಸಿದರು. ಕಾರ್ಯದರ್ಶಿ ನಾರಾಯಣಗೌಡ ಹಾಗೂ ಅಭಿವೃದ್ಧಿ ಅಧಿಕಾರಿ ಪವಿತ್ರಾ ಅವರನ್ನು ಅದರೊಳಗೆ ದಿಗ್ಬಂಧನ ಹಾಕಿದರು.

ಈ ಬಗ್ಗೆ ಮಾತನಾಡಿದ ಪಂಚಾಯ್ತಿ ಸದಸ್ಯ ದೇವಾನಂದ ಚಂಡೇಕರ್, ‘ಅವರ ಕಾರ್ಯ ವೈಖರಿಯನ್ನು ಗಮನಿಸಿ ಈ ಹಿಂದೆ ನಡೆದ ಸಾಮಾನ್ಯ ಸಭೆಯನ್ನು ಭಹಿಷ್ಕರಿಸಲಾಗಿತ್ತು. ಆದರೂ ಕೂಡ ಅವರು ತಮ್ಮ ಚಾಳಿಯನ್ನು ಮುಂದುವರಿಸಿದ್ದು, ಅದರಿಂದ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗುತ್ತಿದೆ. ಕಳೆದ ಕೆಲ ತಿಂಗಳಿನಿಂದ ಪಂಚಾಯ್ತಿಯಲ್ಲಿ ಅಭಿವೃದ್ಧಿ ಅಧಿಕಾರಿ ಇದ್ದಿರಲಿಲ್ಲ. ಹೀಗಾಗಿ ಸದಸ್ಯರು ಕಳೆದ ತಿಂಗಳ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ, ಶೀಘ್ರವೇ ಹುದ್ದೆಯನ್ನು ಭರ್ತಿ ಮಾಡುವಂತೆ ಆಗ್ರಹಿಸಿದ್ದೆವು. ಅದರಂತೆ ಚೆಂಡಿಯಾದ ಪಿಡಿಒ ಪವಿತ್ರಾ ಅವರನ್ನು ಇಲ್ಲಿಗೆ ಪ್ರಭಾರ ಪಿಡಿಒ ಆಗಿ ನೇಮಕ ಮಾಡಿದ್ದಾರೆ. ಆದರೆ ಅವರು ವಾರದಲ್ಲಿ ಮೂರ್ನಾಲ್ಕು ದಿನವೂ ಪಂಚಾಯ್ತಿಯಲ್ಲಿ ಲಭ್ಯ ಇರುವುದಿಲ್ಲ’ ಎಂದು ದೂರಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತ್ಯ ನಾರಾಯಣ ಪಡ್ತಿ, ಉಪಾಧ್ಯಕ್ಷೆ ಐಯುವಿ ಫರ್ನಾಂಡೀಸ್, ಸದಸ್ಯರಾದ ಶೀಧರ ತಳೇಕರ, ದತ್ತಾತ್ರಯ ಗೌಡ, ಶಶಿಕಾಂತ ನಾಯ್ಕ, ಪ್ರಕಾಶ ಪಡ್ತಿ ಇದ್ದರು.