Home Important ರೈತರು ಆರ್ಥಿಕವಾಗಿ ಸದೃಢವಾಗಬೇಕು : ರಾಘವೇಶ್ವರಶ್ರೀ

ರೈತರು ಆರ್ಥಿಕವಾಗಿ ಸದೃಢವಾಗಬೇಕು : ರಾಘವೇಶ್ವರಶ್ರೀ

SHARE

 

ರಾಮಾಪುರ(ಚಾಮರಾಜನಗರ): ರೈತರಿಗೆ ಸಹಾಯವಾಗುವ ಗವ್ಯೋದ್ಯಮವನ್ನು ಆರಂಭಿಸಲಾಗಿದ್ದು, ಗೋವುಗಳನ್ನು ಮಾರದೆ ಗೋಮಯ – ಗೋಮೂತ್ರ ಮಾರಿ ರೈತರು ಆರ್ಥಿಕವಾಗಿ ಸದೃಢರಾಗಬೇಕು. ತಳಿ ಸಂಕರ ಮಾಡುವ ಕಾರ್ಯಕ್ಕೆ ಯಾರೂ ಮುಂದಾಗಬಾರದು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕೆಂಪಯ್ಯನ ಹಟ್ಟಿಯಲ್ಲಿ ಶ್ರೀರಾಮಚಂದ್ರಾಪುರಮಠ ಹಾಗೂ ಮಲೆಮಹದೇಶ್ವರ ಭಾರತೀಯ ಗೋಪರಿವಾರದ ವತಿಯಿಂದ ಗೋಪಾಲಕರ ಹಾಗೂ ಗೋಭಕ್ತರ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಒಳ್ಳೆಯ ಕೆಲಸಕ್ಕೆ ದೈವಾನುಗ್ರಹ ಇರುತ್ತದೆ ಎಂಬುದಕ್ಕೆ ಈ ಭಾಗದಲ್ಲಿ ಅವಧಿಗೆ ಮೊದಲು ಮಳೆ ಬಂದು ಗೋವುಗಳಿಗೆ ಮೇವು ಆಗಿರುವುದೇ ನಿದರ್ಶನ. ಬೆಟ್ಟಕ್ಕೆ ಹಾಕಿರುವ ಬೇಲಿಯನ್ನು ತೆಗೆದು ಹಸುಗಳಿಗೆ ಮೇಯಲು ಅವಕಾಶ ಮಾಡಿಕೊಡಬೇಕು, ಇದಕ್ಕೆ ಎಂಥ ಹೋರಾಟವನ್ನು ನಡೆಸಲು ಶ್ರೀರಾಮಚಂದ್ರಾಪುರಮಠ ಸಿದ್ದವಿದೆ. ಸರ್ಕಾರ ಜವಾಬ್ದಾರಿ ಮರೆತರೂ, ಗೋಸಂರಕ್ಷಣೆಗೆ ಮಠ ಬದ್ಧವಾಗಿದೆ. ಗೋವುಗಳಿಗೆ ಮೇವಿನ ಕೊರತೆ ಆದರೆ, ಯಾವುದೇ ಸಂಕೋಚ ಮಾಡದೇ; ಮಠವನ್ನು ಸಂಪರ್ಕಿಸಿ ಎಂದು ಹೇಳಿದರು.

ಗೋಪ್ರೇಮಿಗಳ, ದಾನಿಗಳ ಹಾಗೂ ಸ್ಥಳೀಯರ ಸಹಕಾರದಿಂದ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ 3000ಕ್ಕು ಅಧಿಕ ಟನ್ ಮೇವು ನೀಡಿ ಗೋಸೇವೆ ನಡೆಸಲು ಸಾಧ್ಯವಾಯಿತು. ಗೋಪಾಲಕರು ಕೈತುಂಬ ಸಂಪತ್ತು ಹೊಂದುವ ರೀತಿ ಆಗಬೇಕು. ಭಾರತೀಯ ಗೋಪರಿವಾರ ಇದಕ್ಕೆ ಬೇಕಾದ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಸ್ಥಳೀಯರಾದ ಕೆ. ವಿ. ಸಿದ್ದಪ್ಪ ಮಾತನಾಡಿ, ಹಣದ ಹೊಳೆ ದೇಶದ ಯಾವ ಭಾಗದಲ್ಲಿ ಹರಿದರೂ ಪ್ರಯೋಜನವಿಲ್ಲ. ಸರಿಯಾದ ಸಮಯಕ್ಕೆ ಮೇವು ವಿತರಣೆ ನಡೆದು ಹಸುಗಳ ರಕ್ಷಣೆ ಕಾರ್ಯಕ್ಕೆ ಮೇವಿನ ಸಾಗರ ಹರಿಸಿದ ಕಾರ್ಯ ಬಹಳ ಮುಖ್ಯವಾದದ್ದು. ವೈದ್ಯರು ರೈತರ ಕರೆಗೆ ಸ್ಪಂದಿಸದೆ ಗೋವುಗಳಿಗೆ ತೊಂದರೆ ಆಗುತ್ತಿದೆ. ಜಾನುವಾರುಗಳ ರಕ್ಷಣೆಗೆ ಸರ್ಕಾರ ಪ್ರತ್ಯೇಕ ಸಹಾಯ ವಾಣಿ ತೆರೆಯುವ ಅಗತ್ಯವಿದೆ ಎಂದರು.

ಗೋಪ್ರೇಮಿ ದಾನಿ ಕೆವಿ ರಾಜೇಂದ್ರ ಮಾತನಾಡಿ ಎಷ್ಟು ಕಷ್ಟ ಗೋವುಗಳನ್ನು ಕಟುಕರ ಕೈಗೆ ಕೊಡಬಾರದು. ಗೋವಿನ ರಕ್ಷಣೆಯ ಕಾರ್ಯ ನಿರಂತರವಾಗಿ ನಡೆದರೆ ಪರಿಸರಕ್ಕೆ ಉತ್ತಮ ಎಂಬುದನ್ನು ನಾವು ಈ ಭಾಗದಲ್ಲಿ ಕಂಡುಕೊಂಡಿದ್ದೇವೆ. ಗೋವಿನ ಕಾರ್ಯಕ್ಕೆ ಎಷ್ಟು ಭೂಮಿಯನ್ನು ಬೇಕಾದರೂ ನೀಡಲು ಸಿದ್ಧ ಎಂದು ತಿಳಿಸಿದರು.

ಗೋಪಾಲಕರಾದ ವೀರಬಸವ ಚೆನ್ನೂರು, ರಾಜು ಪಚ್ಚೆದೊಡ್ಡಿ ಮಾತನಾಡಿದರು. ಡಾ. ಬಿರಾದಾರ್, ಮೇವುವಿತರಕ ನಾಗೇಶ್ ಅನುಭವ ಹಂಚಿಕೊಂಡರು. ಶ್ರೀಮಠದ ಗವ್ಯೋದ್ಯಮಕ್ಕಾಗಿ ಕೆವಿ ರಾಜೇಂದ್ರ ಅವರು 24 ಎಕ್ರೆ ಭೂಮಿ ಸಮರ್ಪಣೆ ಮಾಡಿದರು. ರಂಗಸ್ವಾಮಿ ತಾಮ್ರ ಶಾಸನದ ಬಗ್ಗೆ ಮಾಹಿತಿ ನೀಡಿ, ತಮ್ಮಲ್ಲಿದ್ದ ಶಾಸನವನ್ನು ಸಮರ್ಪಿಸಿದರು.

ಗವ್ಯೋದ್ಯಮಕ್ಕೆ ಚಾಲನೆ:
ಗೋಪಾಲಕ ರಾಮಚಂದ್ರ ಅವರಿಂದ ದೇಸೀ ಹಸುವಿನ ಹಾಲು ಖರೀದಿಸುವ ಮೂಲಕ ಗವ್ಯೋದ್ಯಮಕ್ಕೆ ಚಾಲನೆ ನೀಡಲಾಯಿತು. ಗವ್ಯೋದ್ಯಮಕ್ಕಾಗಿ ದೇಸೀ ಹಸುವಿನ ಹಾಲನ್ನು ಲೀಟರ್ ಗೆ 40ರೂ ನಂತೆ ಖರೀದಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗೋಮಯ – ಗೋಮೂತ್ರಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಮಾರುಕಟ್ಟೆ ಮೌಲ್ಯ ಒದಗಿಸುವ ವ್ಯವಸ್ಥೆ ಆಗಲಿದೆ.

ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ ಡಾ. ವೈ. ವಿ. ಕೃಷ್ಣ ಮೂರ್ತಿ ಪ್ರಸ್ತಾವನೆಗೈದರು. ವಿನಾಯಕ ತಲವಾಟ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮ್ ಭಟ್ ಬೇರ್ಕಡವು, ಅಶೋಕ ಕೆದ್ಲ ಸಹಕರಿಸಿದರು. ಗವ್ಯೋದ್ಯಮ ಉಸ್ತುವಾರಿ ಜಿ ಟಿ ದಿವಾಕರ್ ಮಂಜುನಾಥ್ ಉಪಸ್ಥಿತರಿದ್ದರು.