Home Local ಜಗತ್ತಿನ ಎಲ್ಲ ಜೀವಿಗಳೂ ಸಹ ಪರಮಾತ್ಮನ ಪ್ರತಿಬಂಬವಾಗಿದೆ : ಸ್ವರ್ಣವಲ್ಲೀ ಶ್ರೀ

ಜಗತ್ತಿನ ಎಲ್ಲ ಜೀವಿಗಳೂ ಸಹ ಪರಮಾತ್ಮನ ಪ್ರತಿಬಂಬವಾಗಿದೆ : ಸ್ವರ್ಣವಲ್ಲೀ ಶ್ರೀ

SHARE

ಶಿರಸಿ: ಜಗತ್ತಿನ ಎಲ್ಲ ಜೀವಿಗಳೂ ಸಹ ಪರಮಾತ್ಮನ ಪ್ರತಿಬಂಬವಾಗಿದೆ. ನಮ್ಮೊಳಗಿನ ಮೂಲಬಿಂಬ ಪರಮಾತ್ಮನ ಧ್ಯಾನ ಸ್ಮರಣೆಯ ಮೂಲಕ ಗಟ್ಟಿಯಾಗಿಟ್ಟುಕೊಂಡರೆ ಪ್ರತಿಬಿಂಬವೂ ದೀರ್ಘ ಅವಧಿಯ ಜೀವಿತವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಶನಿವಾರ ತಾಲೂಕಿನ ಕಡಬಾಳದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

ವ್ಯಕ್ತಿಯೊಬ್ಬನ ನೂರು ವರ್ಷದ ಆಯುಷ್ಯಕ್ಕೆ ಕತ್ತರಿ ಹಾಕಿಕೊಂಡವ ಮನುಷ್ಯನೆ ಆಗಿದ್ದಾನೆ. ಮನುಷ್ಯ ಜೀವನದ ಪ್ರಮುಖ ಆರು ತಪ್ಪುಗಳೆಂದು ಕರೆಯಲ್ಪಡುವ ಅತಿಯಾದ ಗರ್ವ, ಮಾತು, ಸಂಪಾದನೆ, ಸ್ವಾರ್ಥ ದೃಷ್ಟಿ, ಕೋಪ, ನಂಬಿಕೆ ದ್ರೋಹದಿಂದ ಆರೋಗ್ಯ ಮತ್ತು ಸುಸ್ಥಿತ ಜೀವನಕ್ಕೆ ಹೆಚ್ಚು ಘಾಸಿಯುಂಟು ಮಾಡುತ್ತದೆ. ಇವೆಲ್ಲದರಿಂದ ದೂರ ಸರಿದು ದೇವರ ಅನುಗ್ರಹ ಪಡೆಯುವತ್ತ ಮನಸ್ಸನ್ನು ಒಯ್ಯಬೇಕು ಎಂದರು.

ಹಿರಿಯರ ಆಶಿರ್ವಾದಿಂದ ದೀರ್ಘವಾದ ಆಯುಷ್ಯ ಪಡೆಯಲು ಮುಖ್ಯ ಕಾರಣವಾಗಿದೆ. ಬದುಕು ಅಶಾಶ್ವತ. ದೀರ್ಘ ಆಯುಷ್ಯಕ್ಕೆ ದೇವರ ಅನುಗ್ರಹ ಬೇಕು. ಸಹಜವಾಗಿ ಪ್ರತಿದಿನವು ಹೇಗೆ ಬದುಕಿತ್ತೇವೆ ಎಂಬುದರ ಮೇಲೆ ಮರಣ ಕಾಣುತ್ತೇವೆ. ಭಗವಂತನ ನಾಮ ಸ್ಮರಣೆ ಮಾಡಬೇಕು. ವಿವೇಕದಿಂದ ನಡೆದುಕೊಳ್ಳಬೇಕು. ಹಿರಿಯರ ಆಶೀರ್ವಾದ ಇರುವಂತೆ ನಮ್ಮ ನಿತ್ಯ ಜೀವನ ಇರಬೇಕು ಎಂದರು.

ಪ್ರತಿಯೊಬ್ಬರೂ ನಂಬಿಕೆ ಉಳಿಸಿಕೊಂಡು ಜೀವನ ನಡೆಸಬೇಕು. ಆಳವಾಗಿ ಭಗವಂತನ ಚಿಂತನೆ ಮಾಡಿದರೆ ಉತ್ತಮ ಆರೋಗ್ಯ ಮತ್ತು ದೇಹದಲ್ಲಿ ಹೆಚ್ಚಿನ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ ಎಂದ ಅವರು, ಅಂತರ್ಜಾತಿ ವಿವಾಹ ವೈಜ್ಞಾನಿಕವಾಗಿ ಕೂಡ ಸರಿಯಲ್ಲ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಳ್ಳಿ ಬದುಕನ್ನು ಉಳಿಸಿಕೊಳ್ಳಬೇಕು. ಸದಾಚಾರ ಹಾಗೂ ಸಂಖ್ಯೆ ಉಳಿಸಿಕೊಳ್ಳಬೇಕು ಎಂದೂ ಹೇಳಿದರು.

ಮಂಜುಗುಣಿಯ ವೆಂಕಟರಮಣ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟ ಮಾತನಾಡಿ, ಮನಷುಯ ಕೊನೆಯಲ್ಲಿ ಬಯಸುವುದು ಸಮಾಧಾನ. ಸಮಾದಾನಕ್ಕೋಸ್ಕರ ಅನೇಕ ಮಾರ್ಗಗಳನ್ನು ಅರಸುತ್ತೇವೆ. ಸಂಪತ್ತು, ಆಭರಣ, ಸುಂದರ ರೂಪಕ್ಕಾಗಿ ಮಾಡುವ ಕಾರ್ಯಗಳು ಕ್ಷಣಿಕ ಸಮಾದಾನವಾಗಿದೆ. ಜೀವನದಲ್ಲಿ ಯಾವುದು ಪ್ರಕೃತಿ ಸಹಜವಾಗಿದೆಯೋ ಅದರ ಜೊತೆಯಲ್ಲಿ ಆನಂದ ಪಡೆಯುವದನ್ನು ಸಂತೃಪ್ತಿ ಎನ್ನಬಹುದು. ಆ ನಿಟ್ಟಿನಲ್ಲಿ ಪ್ರಕೃತಿದತ್ತವಾಗಿ ಭೌತಿಕ ಧರ್ಮವನ್ನು ಅನುಸರಿಸಿ ಸಾಗಬೇಕೆಂದು ಹಿರಿಯರು ತಿಳಿಸಿದ್ದಾರೆ ಎಂದರು.

ಬಯಕೆಯನ್ನು ತೀರಿಸಲು ಎಷ್ಟೇ ತೃಪ್ತಿಯನ್ನು ನೀಡಿದರೂ ಸಹ ಬಯಕೆಗೆ ಅಂತಿ ಅವಸ್ಥೆ ಎಂಬುದಿಲ್ಲ. ಹೇಗೆ ಜ್ವಲಿಸುತ್ತಿರುವ ಅಗ್ನಿಗೆ ತುಪ್ಪ ಹಾಕಿದಾಗ ಅಗ್ನಿ ಮತ್ತೆ ಹೆಚ್ಚು ಜ್ವಲಿಸುತ್ತದೆಯೋ ಅದರಂತೆಯೇ ಬಯಕೆಯೂ ಸಹ ಅಗ್ನಿಯೆ ಆಗಿದೆ. ಋಷಿ ಮುನಿಗಳ ಮಾತಿನಂತೆ ಮನುಷ್ಯರ ಜೀವನದಲ್ಲಿ ವೃದ್ಧಾಪ್ಯ ಮತ್ತು ಮೃತ್ಯುವನ್ನು ಸ್ವೀಕರಿಸಲು ಕಷ್ಟವಾಗುತ್ತದೆ. ಒಪ್ಪಿಕೊಳ್ಳಲು ಕಷ್ಟವಾದ ಮುಪ್ಪನ್ನು ಸಹಜವಾಗಿ ಸ್ವೀಕರಿಸಲು ಹಾಗೂ ವಯೋಸಹಜ ಮಾನಸಿಕ ದೌರ್ಬಲ್ಯದ ಬದಲಾವಣೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಧಾರ್ಮಿಕ ಕೈಂಕರ್ಯಗಳ ಮೂಲಕ ಇನ್ನೂ ಹೆಚ್ಚಿನ ದೀರ್ಘಕಾಲ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ. ಮರಣಕ್ಕೂ ಮೊದಲು ಭಗವಂತನ ಕೀರ್ತನೆ, ಗುಣಗಾನ, ಚಿಂತನೆಯ ಮೂಲಕ ಜೀವನ ಕಳೆಯುವುದು ಮನುಷ್ಯನ ಬದುಕಿನ ಸಾವಿನೊಳಗಿನ ಕೃತಾರ್ಥತೆ ಪಡೆದುಕೊಳ್ಳುವ ವ್ಯವಸ್ಥೆಯಾಗಿದೆ ಎಂದು ಕಿಬ್ಬಳ್ಳಿ ಗಣಪತಿ ಭಟ್ಟ ಹೇಳಿದರು.