Home Important ಭಾವಕ್ಕೂ ಸಾಕ್ಷಿ ಬೇಕು ಎನ್ನುತ್ತಿರುವ ಕಾಲವಿದು : ಶ್ರೀಶ್ರೀರಾಘವೇಶ್ವರಭಾರತೀ ಶ್ರೀ

ಭಾವಕ್ಕೂ ಸಾಕ್ಷಿ ಬೇಕು ಎನ್ನುತ್ತಿರುವ ಕಾಲವಿದು : ಶ್ರೀಶ್ರೀರಾಘವೇಶ್ವರಭಾರತೀ ಶ್ರೀ

SHARE

ಮಾಲೂರು : ಭಾವಕ್ಕೂ ಸಾಕ್ಷಿ ಬೇಕು ಎನ್ನುತ್ತಿರುವ ಕಾಲವಿದು. ಹಾಗಾಗಿ ಜನತೆಯ ಭಾವವನ್ನು ಬರಹವಾಗಿಸುವ ಪ್ರಯತ್ನ ಅಭಯಾಕ್ಷರ. ಜನತೆಯ ಹೃದಯಾಕ್ಷರ ಅದು ಅಭಯಾಕ್ಷರ ಎಂದು ಶ್ರೀಮದ್ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಸಂದೇಶ ನೀಡಿದರು.

ಮಾಲೂರು, ಗಂಗಾಪುರದ ಶ್ರೀ ರಾಘವೆಂದ್ರ ಗೋ ಆಶ್ರಮದಲ್ಲಿ ನಡೆದ ಅಭಯಗೋಯಾತ್ರೆಯ‌ ಅಭಯ ಮಂಗಲ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಗೋಸಂದೇಶ ಅನುಗ್ರಹಿಸಿದ ಶ್ರೀಗಳು, ಕುಂಭಕರ್ಣ ನಿದ್ದೆಯಿಂದ ಭಾರತೀಯರನ್ನು ಎಚ್ಚರಿಸಿ, ಗೋವಂಶವುಳಿಸಲು ಆಂಜನೇಯ ಶಕ್ತಿ ಬೇಕಾಗಿದೆ. ಅಂತಹಾ ಶಕ್ತಿಯನ್ನು ಆಂಜನೇಯ ಅನುಗ್ರಹಿಸಲಿ ಎಂದು ಆಶಿಸಿದರು.

ನಗರದಲ್ಲಿರುವ ವಿಷದ ಮಧ್ಯೆ ಅಮೃತದ ಬಗೆಗಿನ ಮಾತಾಡುವ ಬದಲು ಅಮೃತದ ನಡುವೆ ಅಮೃತದ ಮಾತಾಡಬೇಕು ಅನ್ನುವ ಕಾರಣಕ್ಕಾಗಿ ಅಭಯ ಮಂಗಲ ಕಾರ್ಯಕ್ರಮ ಮಾಲೂರಿನ ಗಂಗಾಪುರದಲ್ಲಿ ಏರ್ಪಟ್ಟಿದೆ. ಕೋಟ್ಯಂತರ ಜನರು ರಕ್ತಾಕ್ಷರವನ್ನು ನೀಡುತ್ತಿರುವುದು ಕೂಡಾ ಗೋವಿಗೆ ಅಮೃತತ್ವ ನೀಡುವ ಸಲುವಾಗಿಯೇ ಎಂದರು.

ಮಾಡಬೇಕಾದ್ದನ್ನು ಯಾವುದನ್ನೂ ಮಾಡದ, ಮಾಡಬಾರದ್ದನ್ನೆಲ್ಲವನ್ನೂ ಮಾಡುವ ವ್ಯವಸ್ಥೆಗೆ ಸರ್ಕಾರವೆಂದು ಹೆಸರಿಸಬಹುದು. ನಶಿಸುತ್ತಿರುವ ಮಲೆನಾಡು ಗಿಡ್ಡದಂತಹ ತಳಿಗಳನ್ನು ಉಳಿಸುವ ಕಾರ್ಯವನ್ನು ಮಾಡಲು ಸರ್ಕಾರ ವಿಫಲವಾಗಿದೆ ಎಂದರು.

ಸ್ವರಕ್ತವನ್ನು ಕಂಡು ಹರ್ಷಿಸುವ ಸಮಯವಿದ್ದರೆ ಅದು ಗೋವಿಗಾಗಿ ರಕ್ತಾಕ್ಷರ ಕೊಡುವ ಸಂದರ್ಭ ಮಾತ್ರ. ಮನುಷ್ಯರೆಲ್ಲರ ಅಭಯಾಕ್ಷರ ಪಡೆದುಕೊಳ್ಳುವವರೆಗೂ ಗೋವಿಗಾಗಿ ಹಕ್ಕೊತ್ತಾಯದ ಪತ್ರವನ್ನು ಸಲ್ಲಿಸುವ ಕಾರ್ಯ ಮುಂದುವರೆಯಲಿದೆ. ಮನುಷ್ಯರಲ್ಲದವರ ಬಗ್ಗೆ ಪ್ರಶ್ನೆಯಿಲ್ಲ ಎಂದರು.

ಗವ್ಯೋತ್ಪನ್ನಗಳು ಶುದ್ಧ ಪಾರದರ್ಶಕ ವ್ಯವಸ್ಥೆಯಲ್ಲಿ ಉತ್ಪಾದಿತವಾಗುತ್ತಿವೆ ಎನ್ನುವುದನ್ನು ಸಾಕ್ಷಿಯ ಮೂಲಕವೇ ವಿತರಿಸುವ ಕಾರ್ಯವನ್ನು ಶ್ರೀಮಠ ಮುಂದಿನ ದಿನಗಳಲ್ಲಿ ಮಾಡಲಿದೆ. ಹಾಗಾಗಿ ಮುಂದಿನ ದಿನಗಳು ಗೋವನ್ನು ‘ಲಕ್ಷ್ಮೀ’ ಎಂದು ಸಾದರಪಡಿಸುವುದಕ್ಕೆ ಮೀಸಲು ಎಂದು ಗೋಸಂದೇಶ ನೀಡಿದರು.

ಸಿದ್ಧಾರೂಢ ಮಿಷನ್ ನ ಆರೂಢಭಾರತೀ ಸ್ವಾಮಿಗಳು ಮಾತನಾಡಿ, ವಿದೇಶಗಳಲ್ಲಿ ಬಾಹ್ಯ ಶ್ರೀಮಂತಿಕೆಯಿದೆ. ಆದರೆ ಭಾರತದಲ್ಲಿ ಆಂತರಿಕ ಶ್ರೀಮಂತಿಕೆಯಿದೆ. ಜೀವನದುದ್ದಕ್ಕೂ ಪರೋಪಕಾರ ಮಾಡುವ ಗೋವಿನ ಮೂಲಕ ಇದು ಅಭಿವ್ಯಕ್ತವಾಗುತ್ತದೆ. ಆದರೆ ವಿಕೃತ ಮನದ ಕೆಲವರು ಗೋಮಾಂಸ ತಿನ್ನುವ ಕುಕೃತ್ಯಕ್ಕೆ ಇಳಿಯುತ್ತಿರುವುದು ನೋವಿನ ವಿಷಯ. ಅದಕ್ಕಾಗಿಯೇ ಅಧ್ಯಾತ್ಮದಲ್ಲಿ ಮಾತ್ರ ತೊಡಗಬೇಕಾದ ರಾಘವೇಶ್ವರ ಶ್ರೀಗಳು, ಲೋಕಕಲ್ಯಾಣಕ್ಕಾಗಿ ಗೋಕಾರ್ಯದಲ್ಲಿ ಕೂಡಾ ತೊಡಗಿಕೊಂಡಿದ್ದಾರೆ. ಒಂದು ಬಗೆಯ ಆಧ್ಯಾತ್ಮ ಹಾಗೂ ಲೋಕಕಲ್ಯಾಣದ ಮಹಾನ್ ಸಂಗಮವಿದು. ಹಾಗಾಗಿ ಶ್ರೀಗಳ ಅಪೇಕ್ಷೆಯಂತೆ ಗೋಹತ್ಯೆ ನಿಷೇಧ ಇಂದಲ್ಲ ನಾಳೆ ಆಗಿಯೇ ಸಿದ್ಧ ಎಂದರು.

ವಿದುಷಿ ಡಾ.ಪದ್ಮಾಶೇಖರ್ ಅವರು ಮಾತನಾಡಿ, ಮನುಷ್ಯ ಮತ್ತು ನಿಸರ್ಗದಂತೆಯೇ ಪ್ರಾಣಿ ಹಾಗೂ ನಿಸರ್ಗದ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಗೋವು ತಾಯಿಗೆ ಪರ್ಯಾಯವಾಗಿರುವಂತದ್ದು. ದುರಂತವೆಂದರೆ ಯಾವುದನ್ನು ಪಂಚಮಹಾಪಾತಕವೆಂದು ಪರಿಗಣಿಸುತ್ತೇವೆಯೋ ಅವೇ ಇಂದು ಘಟಿಸುತ್ತಿದೆ. ಕೇವಲ ನಾಲ್ಕು ಗೋವುಗಳನ್ನು ಮನೆಯಲ್ಲಿ ಸಾಕಿಕೊಂಡರೂ ಸಾಕು ಅತ್ಯಂತ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.

ಶ್ರೀ ಆದಿದೇವಾನಂದ ಸ್ವಾಮೀಜಿಯವರು ಮಾತನಾಡಿ, ಕಣ್ಣಿದ್ದೂ ಕುರುಡರಾಗಿರುವ, ಕಿವಿಯಿದ್ದೂ ಕಿವುಡಾಗಿರುವ ಸರ್ಕಾರಕ್ಕೆ, ಚುನಾವಣೆಯ ಸಮಯದಲ್ಲಿ ತಕ್ಕ ಉತ್ತರ ನೀಡಬೇಕಿದೆ. ಯಾವುದೇ ಕಾರಣಕ್ಕೂ ಗೋಹತ್ಯೆ ನಿಷೇಧವಾಗಬೇಕು ಎನ್ನುವ ಕಾರಣಕ್ಕಾಗಿ ನಾಡಿನ ಯತಿವರ್ಯರು ರಾಜಕೀಯಕ್ಕೆ ಧುಮುಕಿ ಗೋವನ್ನು ರಕ್ಷಿಸಲೂ ಸಿದ್ಧ ಎಂದರು.

ಡಾ. ಸುಬ್ಮಣಿಯನ್ ಸ್ವಾಮಿಯವರು ಮಾತನಾಡಿ, ಗೋವಿಗೆ ಕೂಡಾ ಆಧಾರ್ ಕಾರ್ಡ್ ಮಾಡಿಸಬೇಕಾದ ಸಂದರ್ಭ ಇಂದಿದೆ. ಮಹಾತ್ಮಗಾಂಧಿಯವರ ನಿರ್ದೇಶನದಲ್ಲೇ ಸಂವಿಧಾನದಲ್ಲಿ ಗೋಹತ್ಯೆಯ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ನಿಧಾನವಾಗಿ ವೈಜ್ಞಾನಿಕ ಆಧಾರದೊಂದಿಗೆ ಗೋವನ್ನು ಹೇಗೆ ರಕ್ಷಿಸಬೇಕೆನ್ನುವುದೂ ಜನರಿಗೆ ಮನದಟ್ಟಾಗುತ್ತಿದೆ. ಬಾಸ್ ಇಂಡಿಕಾಸ್ ಹೆಸರಿನಲ್ಲಿ ಎ2 ಮಿಲ್ಕ್ ಎನ್ನುವ ಹೆಸರಿನಲ್ಲಿ ಹಲವು ಕಡೆ ಚಾಲ್ತಿಯಲ್ಲಿದೆ. ಯೋಗವನ್ನೂ, ಸಂಸ್ಕೃತವನ್ನೂ, ಗೋವನ್ನೂ ಬೇರೆ ದೇಶದವರು ಒಪ್ಪಿಕೊಂಡ ನಂತರವೇ ನಾವು ಕೊಂಡಾಡುವುದು ಭಾರತೀಯರ ಮನಸ್ಥಿತಿಯಾಗಿಬಿಟ್ಟಿದೆ.

ಗೋಹತ್ಯೆ ಎನ್ನುವುದು ಮಾನವ ಹತ್ಯೆಗೆ ಸಮಾನವಾದದ್ದು. ಮಾನವ ಹತ್ಯೆಗೆ ಹೇಗೆ ಮರಣದಂಡನೆಯ ಶಿಕ್ಷೆಯನ್ನು ಘೋಷಿಸುತ್ತೇವೆಯೋ ಹಾಗೆಯೇ ಗೋಹತ್ಯೆಗೆ ಕೂಡಾ ಮರಣದಂಡನೆಯ ಶಿಕ್ಷೆಯನ್ನು ಘೋಷಿಸುವ ಕಾಲ ಬರಬೇಕಿದೆ.

ಗೋಹತ್ಯೆ ನಿಷೇಧದಿಂದ ಮಾತ್ರ ಭಾರತೀಯರು ಸಂತುಷ್ಟರಾಗಬೇಕಿಲ್ಲ. ಬದಲಾಗಿ ಗೋವಿನ ಕುರಿತಾದ ಭಾವನೆ ಭಾರತೀಯರ ಮನ ಮನಗಳಲ್ಲಿ ಮನೆಮಾಡಲಿ ಎಂದು ಅಭಿಪ್ರಾಯಪಟ್ಟರು.