Home Article ಅಮ್ಮನಾಗುವ ಅವಳು, ನಾನು, ಮಗಳು

ಅಮ್ಮನಾಗುವ ಅವಳು, ನಾನು, ಮಗಳು

SHARE

ಶುಭಾ ಗಿರಣಿಮನೆ.
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಹಾಡು ಕೇಳಿದಾಗ ಎಲ್ಲರಿಗೂ ಒಮ್ಮೆಯಾದರೂ ತನ್ನ ತಾಯಯ ಮಡಿಲಲ್ಲಿ ಮಲಗಿದ ನೆನಪು ಕಾಡುವುದು. ಅಮ್ಮನ ಮಡಿಲೇ ಹಾಗೆ. ಅವಳು ಬೈಯ್ಯಲಿ ಹೊಡೆಯಲಿ ಅಮ್ಮನ ಪ್ರೀತಿ ವಾತ್ಯಲ್ಯಕ್ಕೆ ಬೆಲೆಕಟ್ಟಲಾಗುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಮ್ಮ ಎನ್ನುವುದು ಒಂದು ಸ್ವರ್ಗವೇ ಸರಿ.
ಅಮ್ಮನ ಕಷ್ಟಗಳು ಸಂತೋಷಗಳು ಬರೆದಷ್ಟು ಅನುಭವಿಸಲು ಸುಲಭವಲ್ಲ. ಅದು ಅನುಭವಕ್ಕೆ ಬಂದರೆ ಮಾತ್ರ ಅದರೊಳಗಿನ ತಿರುಳು ಅರ್ಥವಾಗುವುದು. ಅನುಭವಕ್ಕೆ ಬರಬೇಕು ಎಂದರೆ ಅಮ್ಮನಾಗಲೇ ಬೇಕೆ ಎಂದು ಕೇಳಬೇಡಿ. ಅಮ್ಮನ ಮನಸ್ಸು ಆ ವ್ಯಕ್ತಿಯ ಹೃದಯದಲ್ಲಿ ಇರಬೇಕು. ಅಮ್ಮನ ಹೃದಯದಲ್ಲಿ ಮಗುವಿನ ಬಗ್ಗೆ ಇರುವುದು ಪ್ರೀತಿ ವಾತ್ಸಲ್ಯ ತುಂಬಿದ ಕಟುತನ. ಅರ್ಥವಾಗಲಿಲ್ಲ ಅಲ್ಲವೇ? ಹೌದು ಅಮ್ಮನ ಹೆಸರಿಗೆ ಕಟುತನ ಸೇರಿಸಿದರೆ ಆಶ್ಚರ್ಯವಾಗುವುದು ಸಹಜ. ಅಮ್ಮ ಎಂದು ಮಕ್ಕಳನ್ನು ಕಟುವಾಗಿ ನಡೆಸಿಕೊಳ್ಳುವುದಿಲ್ಲ. ಆದರೆ ತನ್ನ ಮಗು ಹೀಗೇ ಬೆಳೆಯಕು ಎನ್ನುವುದು ಆಕೆಗೆ ಗೊತ್ತು ಆಗೆಲ್ಲ ಆಕೆ ಕಠಿಣವಾಗುತ್ತಾಳೆ. ಮಗುವಿಗೆ ಅತೀಯಾದ ಮುದ್ದು ಸಲ್ಲದು ಎಂದು ಆಕೆ ತಿಳಿದೇ ತನ್ನ ಕಟುತನವನ್ನು ತೋರುತ್ತಾಳೆ. ಇಲ್ಲವಾದಲ್ಲಿ ಮುಂದೆ ಆ ಮಗುವಿನಿಂದ ನಿರೀಕ್ಷಿತವಾದ ಉತ್ತಮ ಫಲಿತಾಂಶ ಸಿಗುವುದಿಲ್ಲ ಎಂದು ಆಕೆಗೆ ತಿಳಿದಿದೆ.
ನಾವು ಚಿಕ್ಕವರಿದ್ದಾಗ ಅಮ್ಮ ಬೈದರೆ ‘ಇವಳೊಬ್ಬಳು ಯಾವಾಗಲೂ ಗೊಣಗುತ್ತಾಳೆ. ನನ್ನ ಪಾಡಿಗೆ ನಾನಿರಲು ಬಿಡುವುದಿಲ್ಲ. ಆಟವಾಡಲು ಕಳಿಸೆಂದರೆ ಬಿಸಿಲು ತಣಿಯಲಿ ಎನ್ನುವಳು ಮತ್ತೆ ಅರ್ಧಗಂಟೆಗೆ ಸಂಜೆ ಆಯಿತು ಮನೆಯೊಳಗೆ ಬಾ ಎನ್ನುವಳು. ಆಮೇಲೆ ಹೋಮ್‍ವರ್ಕ್ ಮಾಡುತ್ತೇನೆ ಎಂದರೆ ಗದರುವಳು. ನಮಗೆ ಅವಳಂತೆ ಸ್ವತಂತ್ರವೇ ಇಲ್ಲ’ ಅಂತ ಹೀಗೆಲ್ಲ ಅಂದುಕೊಳ್ಳುತ್ತಿದ್ದೆವು. ಅವಳಲ್ಲಿ ಇರುವ ನಿಜವಾದ ಪ್ರೀತಿ ನಮಗೆ ತಿಳಿಯದೆ ಅಮ್ಮ ನನ್ನನ್ನು ಬೈಯ್ಯುತ್ತಾಳೆ. ದಂಡಿಸುತ್ತಾಳೆ ಎನ್ನುವುದು ಮಾತ್ರ ಕಾಣಿಸುತಿತ್ತು. ಅವಳು ಕಟುವಿನ ಮಾತು ನಮಗೆ ಅತೀಯಾಗಿ ಕಾಣಿಸುತಿತ್ತು.
ಆದರೆ ನಾವೇ ಆ ತಾಯಿ/ತಂದೆ ಸ್ಥಾನದಲ್ಲಿ ನಿಂತಾಗ ಆಗ ಅಮ್ಮ ನಮಗೆ ಏನು ಮಾಡುತ್ತಿದ್ದಳೋ, ಹೇಗೆ ನಡೆಸಿಕೊಳ್ಳುತ್ತಿದ್ದಳೋ ಅದನ್ನೆ ನಾವು ನಮ್ಮ ಮಕ್ಕಳೀಗೆ ಮಾಡುತ್ತೇವೆ. ಹಾಗಾದರೆ ಅಮ್ಮ ಮಾಡಿದ್ದು ತಪ್ಪೇ? ಖಂಡಿತ ಇಲ್ಲ ಎಂದು ಈಗ ಸಾರಾಸಗಟಾಗಿ ಹೇಳುತ್ತೇವೆ. ಅಮ್ಮನಂತೆ ಪ್ರೀತಿ ಮಮತೆ ವಾತ್ಸಲ್ಯ ತುಂಬಿದ ಕಟುತನ ನಾವು ನಮ್ಮ ಮಕ್ಕಳ ಮೇಲೆ ಈಗ ತೋರುತ್ತೇವೆ ಎಂದರೆ ಅಮ್ಮ ಮಾಡಿದ ರೀತಿ ಸರಿಯಾಗಿದೆ ಎಂದು ಅರ್ಥವಲ್ಲವೆ?
ಈಗ ಮಗಳು ಹೇಳುತ್ತಾಳೆ ಅಮ್ಮ ನೀನು ಸುಮ್ಮನಿರು ನನಗೆ ಎಲ್ಲವೂ ಗೊತ್ತು. ನಾನು ನನ್ನ ಸ್ನೇಹಿತರ ಜೊತೆ ಹೇಗಿರಬೇಕು ಎಂದು ನೀನು ಹೇಳಬೇಕಿಲ್ಲ. ನಾನು ಯಾವ ಆಟ ಆಡಬೇಕು ಎಂದು ನೀನು ಕಲಿಸಬೇಕಿಲ್ಲ. ನನಗೆ ಮೊಬೈಲ್ ಬೇಕೆ ಬೇಕು. ನಾನು ಈತರದ್ದೆ ಕಾಲೇಜ್‍ಗೆ ಹೋಗಬೇಕು ಎಂದು ಮಕ್ಕಳು ಹೇಳುವಾಗಲೆಲ್ಲ ಅಮ್ಮ ಮತ್ತು ನನ್ನ ಹಲವು ಮಾತುಗಳು ನೆನಪಾಗಿ ಕಣ್ಣು ತುಂಬುವುದು. ಮಗಳಾಡುವ ಮಾತಿಗೆ ಈಗ ದಿಕ್ಕರಿಸುವಂತಿಲ್ಲ. ಆಗಿನ ಮಗಳೇ ಬೇರೆ ಈಗಿನ ಮಗಳೇ ಬೇರೆ ಎನ್ನಿಸುತ್ತದೆ. ಆದರೂ ತಾಯಿಗಾಗಿ ಮಹತ್ತರವಾದ ಪಾತ್ರ ಜಗತ್ತಿನಲ್ಲಿದೆ.
ಇಂದಿನ ಮಗಳ ಹಠದ ಸ್ವಭಾವವನ್ನು ತಿದ್ದುವ ಪರಿ ತಾಯಿಗೆ ಸುಲಭವಲ್ಲ. ಮೊದಲಿನ ಮಕ್ಕಳಂತೆ ಹಿರಿಯರ ಮಾತಿಗೆ ಹೆಚ್ಚಿನ ಗಮನವಿರುವುದಿಲ್ಲ. ಎಲ್ಲ ಆಗು ಹೋಗುಗಳ ತಿಳುವಳಿಕೆ ಹಲವು ತಂತ್ರಜ್ಞಾನ ಬಳಕೆಯಿಂದ ತಿಳಿದಿದ್ದು ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೆ ನಡೆಯುತ್ತ ಇರುತ್ತಾರೆ ಎನ್ನುವುದು ತಾಯಿಯ ಅಭಿಪ್ರಾಯ. ಆದರೆ ತಾಯಿ ಈ ಬೆಳವಣಿಗೆ ಸರಿ ತಪ್ಪು ಎಂದು ತಿಳಿಯುವ ಮೊದಲೇ ದೂರ ಸಾಗಿ ಹೋಗಿರುವ ಮಕ್ಕಳನ್ನು ಕಂಡು ಬೆರಗಾಗಿ ನಿಲ್ಲುತ್ತಾಳೆ. ತನ್ನ ಮಗು ಚೆಂದದಲಿ ನಿಂತಾಗ ಹರುಷಹೊಂದುತ್ತಾಳೆ. ಅದೇ ಸೋತು ಬಂದಾಗ ತನ್ನ ದುಃಖವನ್ನು ಮರೆಮಾಚಿ ತನ್ನ ಕಂದನಿಗೆ ಸಮಾಧಾನ ಮಾಡುತ್ತ ತನ್ನ ಮಗುವಿಗಾದ ಅನ್ಯಾಯಕ್ಕೆ ತಾನೆ ಹೊಣೆ ಎನ್ನುವ ಭಾವ ತೊಳೆದು ಕೊರಗುತ್ತಾಳೆ.
ಆ ಮಗಳು ಅಮ್ಮನಾದಾಗ ತನ್ನದಲ್ಲದ, ಕಳೆದು ಹೋದ ಅಮ್ಮನ ಪ್ರೀತಿಯನ್ನು ತಾನು ತನ್ನ ಮಗುವಿಗೆ ನೀಡಲು ಪ್ರಯತ್ನಿಸುತ್ತಾಳೆ. ಆ ಪ್ರೀತಿಯಲ್ಲಿ ತನ್ನ ಜಗತ್ತನ್ನು ಸೀಮಿತಗೊಳಿಸಿಕೊಳ್ಳುತ್ತಾಳೆ. ಆದರೆ ತನ್ನ ಮಗಳು ಅಮ್ಮನಾಗುವಾಗ ಮಾತ್ರ ತಾನು ಮಗುವಾಗಿ ಮಗಳನ್ನು ಆರೈಕೆ ಮಾಡಿ ಆ ಮಗುವಿಗೂ ಅಮ್ಮನಾಗಿ ಅಜ್ಜಿಯ ಪಟ್ಟವೇರಿಸಿಕೊಂಡು ಮೆರೆಯುತ್ತಾಳೆ. ಆ ತಾಯಿ ಎನ್ನುವ ಮಾತೆಗೆ ಅಮ್ಮ ಎಂದು ತನ್ನ ಮಗು ಕರೆಯುವ ಎರಡಕ್ಷರವೇ ಸಂಬ್ರಮ. ಜಗತ್ತಿನ ಯಾವುದೇ ಮನುಷ್ಯ ತನಗೆ ಎನೇ ಹೇಳಲಿ ಒಮ್ಮೆ ದುಃಖಿಸಿ ಸುಮ್ಮನಿರುತ್ತಾಳೆ. ಆದರೆ ತನ್ನ ಕರುಳ ಕುಡಿಗೆ ಒಂದು ಬಿಂದುವಿನಷ್ಟು ಕೊಂಕು ಮಾತು, ನೋವು ಆದರೂ ಆಕೆ ಸಹಿಸಲಾರಳು. ಕೆಂಡಮಂಡಲವಾಗಿ ವಿಷವನ್ನು ಕಕ್ಕಿದರೂ ಆಶ್ಚರ್ಯವಿಲ್ಲ. ಹಾಗಾಗಿಯೇ ಶಿವನ ಸತಿ ಪಾರ್ವತಿ ಕಾರ್ತಿಕೇಯನ ಪಿಂಡ ಸ್ವರೂಪಿಯನ್ನು ರಾಕ್ಷಸರ ಕೈಗೆ ಸಿಗದಂತೆ ಕಾಪಾಡಲು ಅಗ್ನಿದೇವ ಆ ಪಿಂಡವನ್ನು ತೆಗೆದೊಯ್ಯುವುದನ್ನು ಕಂಡ ಪಾರ್ವತಿ ಸಿಟ್ಟಿಗೆದ್ದು ನೀನು ಹೋದಲೆಲ್ಲ ಸುಟ್ಟು ಭಸ್ಮವಾಗಲಿ. ನಿನ್ನ ಮುಟ್ಟಿದವರೆಲ್ಲ ಸುಟ್ಟು ಹೋಗಲಿ. ನಿನ್ನಿಂದ ಬರುವ ಹೊಗೆಯು ಕಪ್ಪಾಗಿರಲಿ ಎಂದು ಶಾಪವನ್ನು ನೀಡುತ್ತಾಳೆ. ತಾಯಿ ಮಕ್ಕಳ ಕರುಳ ಬಂಧವೇ ಹಾಗೆ. ತನ್ನ ಮಗುವಿಗೆ ಕಿಂಚಿತ್ತು ತೊಂದರೆ ಬರದಂತೆ ಕಾಪಾಡುವಳು.
ತನ್ನ ಮಗುವಿನ ಸಾಧನೆಗೆ ಹೆಗಲೊಡ್ಡುವ ತಾಯಿ ತನ್ನ ಗಂಡು ಮಗು ತನ್ನ ಹೆಣ್ಣು ಮಗು ಎಂದು ಭೇಧ ಎಣಿಸುವುದಿಲ್ಲ. ತನ್ನ ಮಗುವಿಗಾಗಿ ಯಾವ ಕಷ್ಟಕ್ಕು ಎದೆಯೊಡ್ಡಿ ನಿಲ್ಲುವ ಛಲ ಇರುವುದು ಹೆತ್ತ ತಂದೆ ತಾಯಿಗೆ ಮಾತ್ರ ಇರುವುದು. ಅಪ್ಪ ಆಕಾಶ ಎನ್ನುವರು ಆದರೆ ಅಮ್ಮ ಮಗುವಿನ ಹೃದಯ ಎಂದರೆ ಸಣ್ಣ ಶಬ್ದವಾಗುತ್ತದೆಯೇನೊ. ಆ ಅಮ್ಮನ ಪಾತ್ರದಲ್ಲಿ ನಿನ್ನೆ ಅವಳು ಇಂದು ನಾನು ನಾಳೆ ಮಗಳು ಹೀಗೆ ಸಾಲು ಸಾಲು ಜೀವಗಳು ಬಂಧವಾಗಿ ಬೆಸೆದು ಸಾಗುತ್ತಲೇ ಇರುತ್ತದೆ.