Home Local ರಾಷ್ಟ್ರೀಯ ನಾಟ್ಯೋತ್ಸವದ ಎರಡನೇ ದಿನ: ಸಾಧಕರಿಗೆ ಸಂದಿತು ಗೌರವ

ರಾಷ್ಟ್ರೀಯ ನಾಟ್ಯೋತ್ಸವದ ಎರಡನೇ ದಿನ: ಸಾಧಕರಿಗೆ ಸಂದಿತು ಗೌರವ

SHARE

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮವನ್ನು ಶ್ರೀ ಅನಂತ ಹೆಗಡೆ ದಂತಳಿಕೆಯವರ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ನಾಟ್ಯೋತ್ಸವ ಕಾರ್ಯಕ್ರಮವನ್ನು ಡಾ. ನಾರಾಯಣ ಸಭಾಹಿತರವರು ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು. ಶ್ರೀಮಯ ಕಲಾಪೆÇೀಷಕ ಪ್ರಶಸ್ತಿಯನ್ನು ಡಾ. ಆರ್. ವಿ. ರಾಘವೇಂದ್ರ, ಬೆಂಗಳೂರು ಇವರಿಗೆ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಕಲೆಯ ಉತ್ತೇಜನಕ್ಕೆ ನನ್ನ ಅಳಿಲು ಸೇವೆಯಿಂದ ಮಾನಸಿಕ ತೃಪ್ತಿ ಪಡೆದಿದ್ದೇನೆಂದರು.

ಕಾರ್ಯಕ್ರಮ ಉದ್ಘಾಟಿಸಿ ಡಾ. ನಾರಾಯಣ ಸಭಾಹಿತರು ಮಾತನಾಡಿ ಯಕ್ಷಗಾನ ಒಂದು ಗ್ರಾಮೀಣ ಸಾಂಪ್ರದಾಯಿಕ ಸಮಗ್ರ ಕಲೆ ಎಂದರು. ನನ್ನ ಉನ್ನತ ಶೈಕ್ಷಣಿಕ ಬೆಳವಣಿಗೆಗೆ ಬಾಲ್ಯದ ಯಕ್ಷಗಾನ ವೀಕ್ಷಣೆಯು ಪೂರಕವಾಗಿದೆ ಎಂಬುದನ್ನ ದೃಷ್ಠೀಕರಿಸುತ್ತೇನೆಂದರು. ಸಾವಿರಾರು ವರ್ಷ ಇತಿಹಾಸವಿರುವ ಯಕ್ಷ್ಷಗಾನ ರಂಗಭೂಮಿಯಲ್ಲಿ ಶ್ರೀಮಯವು ತನ್ನದೇ ವಿಶಿಷ್ಠ ಪರಂಪರೆ, ಶೈಲಿ ಹಾಗೂ ಸಂಪ್ರದಾಯದಿಂದ ಪ್ರಖ್ಯಾತವಾಗಿ 80ನೇ ಸಂಭ್ರಮ ಕಾಣುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾನ್ಯ ಕುಲಸಚಿವರು ಡಾ. ನಿರಂಜನ ವಾನಳ್ಳಿ ಮಾತನಾಡಿ ಬೆಳೆಯುತ್ತಿರುವ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ನೀಡಿ ಈ ಕ್ಷೇತ್ರದ ಉತ್ಕರ್ಷಕ್ಕೆ ಕೈ ಜೋಡಿಸುವ ಪ್ರಯತ್ನ ಆರಂಭವಾಗಿದೆ ಎಂದರು. ಯಕ್ಷಗಾನ ಸಾಂಪ್ರದಾಯಿಕ ಕಲೆಗೆ ಶೈಕ್ಷಣಿಕ ಚೌಕಟ್ಟನ್ನು ನೀಡುವ ಕಾರ್ಯವನ್ನು ನಮ್ಮ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಪಿ.ಕೆ. ಪ್ರಕಾಶರವರು ಮಾತನಾಡಿ ಜನಪದ ಕಲೆಗಳಲ್ಲಿ ಯಕ್ಷಗಾನವೂ ಒಂದು ವಿಶಿಷ್ಟವಾದ ಕಲೆ ಎಂದರು. ರಸಾನುಭಾವ, ಭಾವಾನುಭವ ಮತ್ತು ರಸಸಿದ್ಧಿಗಳು ಪರಂಪರಾಗತ ಯಕ್ಷಗಾನದಲ್ಲಿದೆ ಎಂದರು. ಶಿಕ್ಷಣದ ಕಲಿಕೆಯ ಕೆಳಸ್ಥರದಲ್ಲಿ ಯಕ್ಷಗಾನವನ್ನೂ ಸಮನ್ವಯಗೊಳಿಸಿದರೆ ಶೈಕ್ಷಣಿಕ ರಂಗ ಸೃಜನಶೀಲತೆಯನ್ನು ಪಡೆದಂತಾಗುತ್ತದೆ ಎಂದರು.

ಬರಹಗಾರರಾದ ಶ್ರಿ ಸಂತೋಷಕುಮಾರ ಮೆಹಂದಳೆಯವರು ಮಾತನಾಡಿ ಇಂದಿನ ಯುವಕರು ಕಲೆ, ಸಂಸ್ಕೃತಿಯನ್ನು ಮರೆತು ತಮ್ಮದೇ ಲೋಕದಲ್ಲಿ ವ್ಯವಹರಿಸುತ್ತಿರುವುದು ಮುಂದಿನ ತಲೆಮಾರಿನ ಪರಿಶುದ್ಧತೆಗೆ ಅಪಾಯ ಒಡ್ಡುವ ಸಾಧ್ಯತೆ ಇದೆ ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ ಶ್ರೀ ಕೆ.ಎಂ. ಉಡುಪರವರು ಮಾತನಾಡಿ ಗ್ರಾಮೀಣ ಮಟ್ಟದಲ್ಲಿ 9 ವರ್ಷಗಳಿಂದ ನಾಟ್ಯೋತ್ಸವವನ್ನು ಸಂಭ್ರಮದಿಂದ ನಿರಂತರವಾಗಿ ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು. ಶ್ರೀ ಶಿವಾನಂದ ಹೆಗಡೆಯವರು ಎಲ್ಲರನ್ನೂ ವಂದಿಸಿದರು.