Home Article “ನನ್ನ ಕನಸಿನ ಕರ್ನಾಟಕ”ಕ್ಕೆ ಇರಲಿ ನಿಮ್ಮ ಚಿಂತನೆ, ಜೊತೆಗೆ ಒಂದಿಷ್ಟು ಬೆಂಬಲ.

“ನನ್ನ ಕನಸಿನ ಕರ್ನಾಟಕ”ಕ್ಕೆ ಇರಲಿ ನಿಮ್ಮ ಚಿಂತನೆ, ಜೊತೆಗೆ ಒಂದಿಷ್ಟು ಬೆಂಬಲ.

SHARE

ಇಡಿಯ ದೇಶವೇ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಸ್ಥಿತಿಗತಿಯನ್ನೂ ಔನ್ನತ್ಯಕ್ಕೇರಿಸುವ ಸಮಯ ಬಂದಿದೆ. ಈಗ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ಎಂದರೆ ಮತ್ತದೇ ಜಾತಿ ರಾಜಕಾರಣ, ಆಶ್ವಾಸನೆಗಳು, ಹಣದ ಹೊಳೆ ಹರಿಸೋದು. ಆದರೆ, ಕರ್ನಾಟಕವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ಮುಂದುವರಿಸಿಕೊಂಡು ಹೋಗುವಂತಹ ನಾಯಕನಿಗೆ ನಾವು ಕರ್ನಾಟಕದ ಅಧಿಕಾರವನ್ನು ಒಪ್ಪಿಸಬೇಕು. ನಮ್ಮ ರಾಜ್ಯದ ಕುರಿತಂತೆ ನಾವೊಂದು ಕನಸು ಕಾಣಬೇಕಿದೆ. ಪಕ್ಷ ಯಾವುದೇ ಬರಲಿ. ವ್ಯಕ್ತಿ ಯಾರೇ ಅಧಿಕಾರದಲ್ಲಿರಲಿ. ರಾಜ್ಯದ ಜನತೆಯ ಕನಸನ್ನು ನನಸು ಮಾಡುವುದಷ್ಟೇ ಅವರ ಕರ್ತವ್ಯವಾಗಿರಬೇಕು. ಅಂತಹ ಪ್ರಜ್ಞಾವಂತಿಕೆ ನಾವೂ ಬೆಳೆಸಿಕೊಳ್ಳಬೇಕು ನಾಯಕರಿಗೂ ತುಂಬಬೇಕು. ನಿಜಾರ್ಥದಲ್ಲಿ ಪ್ರಜಾಪ್ರಭುತ್ವ ಆಚರಿಸುವಂತಾಗಬೇಕು. ಅದಕ್ಕೇ ಈ ಬಾರಿ ಸದೃಢ ಕರ್ನಾಟಕಕ್ಕೊಂದು ಕನಸು ಕಾಣೋಣ ಅಂದಿದ್ದು. ಯಾವಾಗ ಕನಸು ಕಾಣಲು ಶುರುಮಾಡುತ್ತೇವೆಯೋ ಆಗಲೇ ಗೊತ್ತಗೋದು ನಮಗೆ ರಾಜ್ಯದ ಕುರಿತಂತೆ ಗೊತ್ತಿರೋದು ಕಡಿಮೆ ಅಂತ. ಬಹುತೇಕರು ಗಿಡನೆಡಿ, 24 ತಾಸು ನೀರುಕೊಡಿ ಅಂತೆಲ್ಲಾ ಕನಸು ಕಂಡುಬಿಡುತ್ತಾರೆ. ಆದರೆ ಗಿಡನೆಡಲು ರಾಜ್ಯದಲ್ಲಿರುವ ಒಟ್ಟಾರೆ ಖಾಲಿಜಾಗ ಎಷ್ಟೆಂಬ ಅಂದಾಜಾದರೂ ಇದೆಯಾ? ಮನೆಗೊಂದು ಮರ ಕಡ್ಡಾಯಗೊಳಿಸಿ ಎನ್ನುವವರಿಗೆ ಬೆಂಗಳೂರಿನಲ್ಲಿ ತುಳಸಿ ಗಿಡಕ್ಕೆ ಜಾಗವಿಲ್ಲ ಎಂಬುದರ ಅರಿವಿದೆಯಾ? ನೀರು 24 ತಾಸು ಕೊಡಬೇಕೆಂದಾಗ ಅಷ್ಟು ನೀರಿನ ದಾಸ್ತಾನು ಉಳಿಸಿಕೊಂಡಿರುವ ಬಗ್ಗೆ ಖಾತ್ರಿಯಿದೆಯಾ? ಅಂತರ್ಜಲದ ಪರಿಸ್ಥಿತಿ ಹೇಗಿದೆ, ಕರ್ನಾಟಕದಲ್ಲಿ ಬರದ ಪ್ರಮಾಣ ಎಷ್ಟಿದೆ ಎಂಬುದರ ಅರಿವಿದೆಯಾ? ಇವೆಲ್ಲವನ್ನೂ ತಿಳಿದುಕೊಂಡೇ ಕನಸು ಕಾಣಬೇಕು. ಇದರಿಂದ ಎರಡು ಲಾಭವಿದೆ. ಮೊದಲನೆಯದು ರಾಜ್ಯದ ಸಮಗ್ರ ಅರಿವು ದೊರೆಯುತ್ತದೆ ಎರಡನೆಯದು ರಾಜ್ಯದ ಯಾವುದೇ ಸಮಸ್ಯೆಗೂ ಸಮಗ್ರ ಪರಿಹಾರ ನಾವೇ ಕೊಡಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆ ಪ್ರಜ್ಞಾವಂತನಾಗೋದು ಹೀಗೇ.

ಹೀಗೆ ನಾವು ರಾಜ್ಯದ ಅಭಿವೃದ್ಧಿಯ ಕುರಿತಂತೆ, ಜಿಲ್ಲೆ-ತಾಲೂಕು ಮತ್ತು ಹಳ್ಳಿಗಳ ಬೆಳವಣಿಗೆಯ ಕುರಿತಂತೆ ಅಲ್ಲಲ್ಲಿಯ ಪ್ರಜ್ಞಾವಂತರು ಸೇರಿ ನೀಲಿನಕಾಶೆ ತಯಾರು ಮಾಡಿಟ್ಟು ಅದಕ್ಕೆ ಪೂರಕವಾಗಿ ಪಂಚಾಯತಿಯಿಂದ ಹಿಡಿದು ರಾಜ್ಯದವರೆಗೆ ಎಲ್ಲರೂ ಕೆಲಸ ಮಾಡುವಂತಾಗಬೇಕು ಅಷ್ಟೇ. ಹೌದು. ಪ್ರಜಾಪ್ರಭುತ್ವವೆಂದರೆ ಹಾಗೇನೇ. ಪ್ರಧಾನಮಂತ್ರಿ ಹೇಳಿದ್ದನ್ನು ಪಂಚಾಯತಿ ಜಾರಿಗೆ ತರುವುದಲ್ಲ. ಪಂಚಾಯತಿಯ ಅಪೇಕ್ಷೆಗಳನ್ನು ಜಾರಿಗೆ ತರಲು ಪ್ರಧಾನಿ ಯೋಜನೆ ರೂಪಿಸುವುದು. ಅಧಿಕಾರಿಗಳು ಹೇಳಿದ್ದಂತೆ ನಡೆದುಕೊಳ್ಳುವುದಲ್ಲ ಗ್ರಾಮಸ್ಥನ ಬದುಕು ಬದಲಿಗೆ ವಿಧಾನಸೌಧದೊಳಗಿನ ಅಧಿಕಾರಿಗಳಿಗೆ ತಿಳಿ ಹೇಳಿ ಕೆಲಸ ಮಾಡಿಸಬಲ್ಲ ಸ್ವಾತಂತ್ರ್ಯ ಗ್ರಾಮಪ್ರತಿನಿಧಿಗಿರಬೇಕು. ಆಗ ಮಾತ್ರ ಕೊನೆಯ ವ್ಯಕ್ತಿಯ ಸಂದೇಶವೂ ರಾಜನೀತಿಯಲ್ಲಿ ಮಹತ್ವದ ಹೊಣೆ ಹೊಂದಿರುತ್ತದೆ.

ನನ್ನ ಕನಸಿನ ಕರ್ನಾಟಕದ ಕಲ್ಪನೆ ನಾವು ಹರಿಬಿಟ್ಟಿರುವುದೇ ಇದಕ್ಕೆ. ಜಗತ್ತಿಕ ಬೇರೆ ಬೇರೆ ರಾಷ್ಟ್ರಗಳೊಂದಿಗೆ ತುಲನೆ ಮಾಡುವಂತೆ ಕರ್ನಾಟಕವನ್ನು ಕಟ್ಟಬೇಕೇ ಹೊರತು, ತೆಲಂಗಾಣ, ಒರಿಸ್ಸಾ, ಬಿಹಾರ, ಮಿಜೋರಾಂಗಳೊಂದಿಗಲ್ಲ. ಸಿಂಗಪೂರದ ಪ್ರವಾಸೋದ್ಯಮದಿಂದ ನಾವು ಪ್ರೇರಣೆ ಪಡೆದು ನಮ್ಮ ಪ್ರವಾಸ ಕೇಂದ್ರಗಳನ್ನು ಜಾಗತಿಕ ಮಟ್ಟದ ಕೇಂದ್ರವಾಗಿ ರೂಪಿಸಬೇಕಲ್ಲವೇ? ದುಬೈನಿಂದ ಪ್ರೇರಣೆ ಪಡೆದು
ಜಗತ್ತಿನ ಉದ್ಯಮಿಗಳನ್ನು ಆಹ್ವಾನಿಸುವ ರೀತಿ ರೂಪಿಸಬೇಕಲ್ಲವೇ? ಚೀನಾದಿಂದ ಪ್ರೇರಣೆ ಪಡೆದು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ವಿಕ್ರಮ ಸ್ಥಾಪಿಸುವುದು ಬೇಡವೇ? ಇಸ್ರೇಲಿನಿಂದ ಪ್ರಭಾವಿತರಾಗಿ ಸ್ವಾಭಿಮಾನದ ಶಿಕ್ಷಣ, ಸ್ವಾವಲಂಬಿ ಕೃಷಿ ಆಲೋಚಿಸುವವರಾಗಬೇಕಲ್ಲವೇ? ಇವೆಲ್ಲವುಗಳನ್ನೂ ಅರ್ಥೈಸಿಕೊಂಡು ಅದನ್ನು ಇಲ್ಲಿನ ಸ್ಥಳೀಯ ರಾಜನೀತಿಗೆ ಹೊಂದುವಂತೆ ಬದಲಾಯಿಸಿ ನಮ್ಮದೇ ತರುಣರನ್ನು ಸಂಶೋಧನೆಗೆ ಹಚ್ಚಿ ಸರ್ಕಾರದ ಸಹಾಯದಿಂದ ಈ ಕನಸುಗಳನ್ನು ನನಸು ಮಾಡಿಕೊಂಡರಾಯ್ತು. ಇಲ್ಲಿ ಯಾವುದೂ ಇತರರ ಅನುಕರಣೆಯಲ್ಲ; ಬೇರೆ ರಾಷ್ಟ್ರಗಳ ಶ್ರೇಷ್ಠ ಸಂಗತಿಯನ್ನು ಗುರುತಿಸಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಿ ನಮ್ಮವರನ್ನು ಕ್ರಿಯಾಶೀಲಗೊಳಿಸಿ ಅಪ್ಪುವ ವಿಧಾ£.À ಸದ್ಯಕ್ಕೆ ನಾವು ಯೂರೋಪು-ಅಮೇರಿಕಾಗಳಿಂದ ಪಡೆಯುತ್ತಿರುವ ಪ್ರೇರಣೆ ಯಾವುದಕ್ಕೆ ಗೊತ್ತೇನು? ರಸ್ತೆಗಳಲ್ಲಿ ಗೀಚುವ ಟ್ರಾಫಿಕ್ ಪೇಂಟುಗಳ ಬಗ್ಗೆ ಮಾತ್ರ.

ನೆನಪಿಡಿ. ಇಡಿಯ ದೇಶದಲ್ಲಿ ಇಂಥದ್ದೊಂದು ಅಭಿಯಾನ ನಡೆದಿಲ್ಲ. ಎಲ್ಲರೂ ನಾಯಕರನ್ನು ನಂಬಿ ಅವರಿಗಾಗಿ ಕೆಲಸ ಮಾಡಿದ್ದಾರಷ್ಟೇ. ನಾವು ಆ ಪರಂಪರೆಯನ್ನು ಬದಲಾಯಿಸೋಣ. ಈ ಬಾರಿ ನಾವು ಬೆಂಬಲಿಸೋದು ವ್ಯಕ್ತಿಗಲ್ಲ, ನಾಡಿನ ಅಭಿವೃದ್ಧಿಗೆ ಎಂಬುದನ್ನು ದೃಢ ಪಡಿಸಿಕೊಳ್ಳೋಣ. ಒಮ್ಮೆ ನಮ್ಮ ಕನಸುಗಳು ಬಲ್ಲವರ ಕೈ ಸೇರಿ ಅವರು ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಸಿ ನೀಲಿನಕಾಶೆ ತಯಾರಿಸಿ ಕೊಡಲಿ. ಅದಕ್ಕೆ ತಕ್ಕಂತೆ ದುಡಿಯುವುದಷ್ಟೇ ಆಳುವ ಕೈಗಳ ಕೆಲಸವಾಗುತ್ತದೆ. ಆಗ ಹೇಗೆ ಕೃಷಿಕ ಹೊಲದಲ್ಲಿ ದುಡಿಯುತ್ತಾನೋ, ಹೇಗೆ ಶಿಕ್ಷಕ ತರಗತಿಯಲ್ಲಿ ಪಾಠ ಮಾಡುತ್ತಾನೋ, ಹೇಗೆ ಕಚೇರಿಯಲ್ಲಿ ಅಧಿಕಾರಿಗಳು ಮಂಡೆ ಬಗ್ಗಿಸಿ ಫೈಲಿನ ಮುಂದೆ ಕುಳಿತುಕೊಳ್ಳುತ್ತಾರೋ ಹಾಗೆಯೇ ರಾಜಕಾರಣಿಯೂ ಜನರ ಕನಸುಗಳ ಫೈಲನ್ನು ಮುಂದಿರಿಸಿಕೊಂಡು ಅದನ್ನು ಪೂರೈಸುವಲ್ಲಿ ಮೈಬಗ್ಗಿಸಿ ದುಡಿಯಬೇಕು ಅಷ್ಟೇ. ಇಲ್ಲಿ ಪ್ರಭುಗಳೆಂದರೆ ಜನತೆ ಮಾತ್ರ, ಉಳಿದವರೆಲ್ಲ ಸೇವಕರೇ! ಇದನ್ನು ಸವiರ್ಪಕವಾಗಿ ಅರ್ಥೈಸಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದಕ್ಕಿದಂತೆಯೇ. ಅದಕ್ಕೆ ಕನಸು ಹೆಣೆಯಲು ಆರಂಭಿಸಿ ಎಂದು ಕೇಳಿಕೊಳ್ಳುತ್ತಿರುವುದು. ಅದಾಗಲೇ ಜಗತ್ತಿನ ಬೇರೆ-ಬೇರೆ ಭಾಗಗಳಲ್ಲಿರುವ ಕನ್ನಡಿಗರೂ ಕೈಜೋಡಿಸುತ್ತಿದ್ದಾರೆ. ಮತ್ತೇಕೆ ತಡ?

ನನ್ನ ಕನಸಿನ ಕರ್ನಾಟಕವೆಂದರೆ ಯಾವುದೇ ರಾಜಕೀಯ ಪಕ್ಷವಲ್ಲ. ಅದೊಂದು ಸಾಮಾಜಿಕ ಆಂದೋಲನ. ನಮ್ಮ ರಾಜ್ಯವನ್ನು ಸುಂದರಗೊಳಿಸುವ ಪ್ರಯತ್ನ. ನನ್ನ ಕನಸಿನ ಕರ್ನಾಟಕದಿಂದ ಆಗುವ ಲಾಭವಾದರೂ ಏನು ಎಂದು ನೀವು ಕೇಳಬಹುದು. ಜನ ಪ್ರಗತಿಯ ಕನಸನ್ನು ಕಾಣುವಂತಾಗುತ್ತದೆ. ಕನಸನ್ನು ಕಂಡವರು ಅದನ್ನು ಸಾಕಾರಗೊಳಿಸಿಕೊಳ್ಳುವ ದಾರಿಗಳನ್ನು ಹುಡುಕುತ್ತಾರೆ. ತಾವು ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳಲು ತಾವೇ ಕೆಲಸಕ್ಕೆ ನಿಲ್ಲುತ್ತಾರೆ. ನನ್ನ ಕನಸಿನ ಕರ್ನಾಟಕದ ಗುರಿಯೇ ಪ್ರಜ್ಞಾವಂತ
ನಾಗರಿಕರನ್ನು ನಿರ್ಮಾಣ ಮಾಡುವುದಾಗಿದೆ. ಈ ಯೋಜನೆಯಡಿಯಲ್ಲಿ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಮೂರು ರೀತಿಯಲ್ಲಿ ಕೆಲಸ ಮಾಡಬಹುದು. ತಮ್ಮ ಹಳ್ಳಿ, ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವಲ್ಲಿ 50 ಪ್ರತಿಶತದಷ್ಟು ಕೆಲಸವನ್ನು ನಾವೇ ಮಾಡಬಹುದು. 25 ಪ್ರತಿಶತದಷ್ಟು ಕೆಲಸಗಳನ್ನು ನಮ್ಮ ಜಿಲ್ಲೆಯ ಅಧಿಕಾರಿಗಳು ಮಾಡುವಂತಹ ಕೆಲಸಗಳು. ಇನ್ನುಳಿದ 25 ಪ್ರತಿಶತದಷ್ಟು ಕೆಲಸವನ್ನು ಮಾಡಲು ರಾಜಕೀಯ ಶಕ್ತಿ ಬೇಕು. ಅವುಗಳನ್ನು ಸಾಕಾರಗೊಳಿಸುವ ನಾಯಕರನ್ನು ಆಯ್ಕೆ ಮಾಡುವುದು ನಮ್ಮ ಕೈಲಿದೆ.

ಹೀಗೆ ನಮ್ಮ ಹಳ್ಳಿ, ಊರು, ನಮ್ಮ ರಾಜ್ಯ ನಮ್ಮಿಚ್ಚೆಗೆ ತಕ್ಕಂತೆ ರೂಪುಗೊಳ್ಳಬೇಕು. ಅದಕ್ಕಾಗಿ ನಾವೊಂದು ನೀಲಿನಕ್ಷೆಯನ್ನು ತಯಾರಿಸಬೇಕು. ನಮ್ಮ-ನಮ್ಮ ಜಿಲ್ಲೆಗಳಲ್ಲಿ ಆಯಾ ಕ್ಷೇತ್ರದ ಬುದ್ಧಿವಂತರನ್ನು, ಪ್ರಜ್ಞಾವಂತರನ್ನು ಆರಿಸಿ, ಅವರೊಡನೆ ಚರ್ಚೆ ನಡೆಸಿ, ತಮ್ಮ ಜಿಲ್ಲೆ ಹೇಗಿರಬೇಕೆಂಬ ಒಂದು ನೀಲಿನಕ್ಷೆಯನ್ನು ತಯಾರಿಸುವುದು. ಯಾರಾದರು ನಿಮ್ಮ ಊರಿಗೆ ಬಂದು ಕೈಮುಗಿದು ನಿಂತ ಮಾತ್ರಕ್ಕೆ ಅವರಿಗೆ ಮತ ಚಲಾಯಿಸಬೇಕಿಲ್ಲ. ನಾವು ತಯಾರು ಮಾಡಿರುವ ನೀಲಿನಕ್ಷೆಯನ್ನು ಅವರ ಮುಂದಿಟ್ಟು ಮುಂದಿನ ಐದು ವರ್ಷಗಳ ಕಾಲ ಅದರಂತೆಯೇ ಕೆಲಸ ಮಾಡುವ ಮಾತನ್ನು ನೀಡಿದರೆ ಮಾತ್ರವೇ ಮತ ಚಲಾಯಿಸುವಂತಾಗಬೇಕು. ಯಾವ ಜಾತಿ, ಯಾವ ಪಕ್ಷವಾದರೂ ಸರಿ ಅವರ ಮುಂದೆ ನಮ್ಮ ಕನಸುಗಳನ್ನು ಬಿಚ್ಚಿಡೋಣ. ಸದೃಢ ಕರ್ನಾಟಕವನ್ನು ಕಟ್ಟೋಣ.