Home Important ಸಂಘಟನೆಯ ಕಾರ್ಯಕ್ಷಮತೆಯ ಪ್ರತಿಬಿಂಬ “ಕುಮಟಾ ಉತ್ಸವ”

ಸಂಘಟನೆಯ ಕಾರ್ಯಕ್ಷಮತೆಯ ಪ್ರತಿಬಿಂಬ “ಕುಮಟಾ ಉತ್ಸವ”

SHARE

ಕುಮಟಾ: “ಜಿಲ್ಲೆಯ ಸಾಂಸ್ಕೃತಿಕ ಪ್ರತಿಬಿಂಬ” ಎನಿಸಿಕೊಂಡಿದ್ದ ಕುಮಟಾ ಉತ್ಸವವು ಸಂಘಟಕರಾದ ರವಿಕುಮಾರ ಶೆಟ್ಟಿ ಹಾಗೂ ಮಿತ್ರರು ಮತ್ತು ಅವರ “ತಂಡದ ಕಾರ್ಯಕ್ಷಮತೆಯ ಪ್ರತಿಬಿಂಬ” ಅಂತಲೇ ಎನಿಸಿಕೊಂಡಿದೆ.

ಹೌದು, ಐದು ದಿನಗಳ ಕಾಲ ಮನರಂಜನೆಯ ಸುಗ್ಗಿಯನ್ನೇ ನೀಡಿದ್ದ ಕುಮಟಾ ಉತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ . ಕುಮಟಾ ಉತ್ಸವದ ಎಲ್ಲ ರೀತಿಯ ವ್ಯವಸ್ಥೆಗಳು ಜನ ಮೆಚ್ಚುಗೆ ಗಳಿಸಿದೆ . ಉತ್ತರ ಕನ್ನಡದ ಜನತೆಗೆ ಸಾಂಸ್ಕೃತಿಕ ರಸದೌತಣ ನೀಡಿರುವ ಕುಮಟಾ ಉತ್ಸವ ಸರ್ವ ಜನರ ಹಿಗ್ಗಿನ ತಾಣ ಆಗಿದ್ದಂತೂ ಸತ್ಯ .

ಅಪಾರ ಜನಮೆಚ್ಚುಗೆ ಗಳಿಸಿರುವ ಕುಮಟಾ ಉತ್ಸವದ ವ್ಯವಸ್ಥೆಗಳೇನು? ಇದರ ಬಗ್ಗೆ ಜನತೆ ಹೇಳೋದೇನು? “ಸತ್ವಾಧಾರಾ ನ್ಯೂಸ್ “ನ ಸಮಗ್ರ ವರದಿ ಇಲ್ಲಿದೆ ನೋಡಿ .

ಪದ್ಮಶ್ರೀ ಚಿಟ್ಟಾಣಿಯವರ ನೆನಪು ಮಾಡಿದ ಮಹಾದ್ವಾರ.

ಭೌತಿಕವಾಗಿ ನಮ್ಮೆಲ್ಲರಿಂದ ದೂರವಾದರೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿರುವ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸವಿ ನೆನಪಿನಲ್ಲಿ ಪೂಜ್ಯರ ಗೌರವಾರ್ಥ ನಿರ್ಮಿಸಲಾಗಿದ್ದ ಕುಮಟಾ ಉತ್ಸವದ ಮಹಾದ್ವಾರವೇ “ಚಿಟ್ಟಾಣಿ ರಾಮಚಂದ್ರ ಹೆಗಡೆ ಮಹಾದ್ವಾರ “. ಕಾಲಾಧೀನರಾದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ನೆನಪಿನಲ್ಲಿ ನಿರ್ಮಿಸಿದ್ದ ಈ ಮಹಾದ್ವಾರ ಅಪಾರ ಜನಮೆಚ್ಚುಗೆ ಗಳಿಸಿಕೊಂಡಿದೆ .

ಭವ್ಯ ವೇದಿಕೆ

ವರ್ಣಮಯ ಅಷ್ಟೇ ವೈವಿದ್ಯಮಯವಾಗಿ ಸಜ್ಜುಗೊಳಿಸಲಾಗಿದ್ದ ವಿದ್ಯುದ್ದೀಪಾಲಂಕೃತವಾದ ಭವ್ಯವಾದ ವೇದಿಕೆ ‘ಕುಮಟಾ ಉತ್ಸವ’ದ ಕೇಂದ್ರ ಬಿಂದುವಾಗಿತ್ತು. ವೇದಿಕೆಯ ಎದುರಿನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯಂತೂ ಸಹಸ್ರಾರು ಜನರಿಗೆ ವೇದಿಕೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದ ರಸಧಾರೆಯನ್ನು ಕಣ್ಣೊಳಗೆ ತುಂಬಿಕೊಳ್ಳಲು ಸಹಾಯಕವಾಗಿತ್ತು .

ಜನರನ್ನು ಆಕರ್ಷಿಸಿದ ಸ್ಟಾಲ್ ಗಳು.

ಜನರನ್ನು ಆಕರ್ಷಿಸಿದ್ದು ವೈವಿಧ್ಯಮಯ ತಿಂಡಿ ತಿನಿಸುಗಳ ಸ್ಟಾಲ್ ಗಳು ಮತ್ತು ಮನರಂಜನೆಯ ಆಟಗಳು . ವೇದಿಕೆಯ ಎದುರಿನಲ್ಲಿ ಅನತಿ ದೂರದಲ್ಲಿಯೇ ಒಳ ಪ್ರವೇಶ ಮಾಡಿದರೆ ನಿಮಗೆ ವೈವಿಧ್ಯಮಯ ತಿನಿಸುಗಳ ಸ್ಟಾಲ್ ಗಳು ಗೋಚರಿಸುತ್ತಿದ್ದು ,ಜನರು ಮುಗಿಬಿದ್ದು ತಿಂಡಿ ತಿನಿಸುಗಳ ಖರೀದಿಯಲ್ಲಿ ಮಗ್ನರಾಗಿದ್ದರು. ಬೆಣ್ಣೆ ದೋಸೆ ,ರುಮಾಲಿ ರೋಟಿ , ಪಕೋಡ, ಮಿರ್ಚಿ , ಬೋಂಡಾ , ಪಾನಿಪುರಿ ಸೆಂಟರ್ ಗಳು ಜನತೆಯ ಹಸಿವು ತಣಿಸುತ್ತಿದ್ದವು. ಇವುಗಳ ಜೊತೆಗೆ ಬಟ್ಟೆಯಂಗಡಿಗಳು,ವಿವಿಧ ಸ್ಟೇಶನರಿ ಹಾಗೂ ಬಳೇ ಪೇಟೆ ಸ್ತ್ರೀಯರನ್ನು ಆಕರ್ಷಿಸಿತ್ತು.

ಇವುಗಳ ನಡುವೆಯೇ ಕೆಲವು ಕಡೆ ಸಸ್ಯಹಾರಿ ಮತ್ತು ಮಾಂಸಹಾರಿ ಸ್ಟಾಲ್ ಗಳು ಒಂದರ ಪಕ್ಕದಲ್ಲಿ ಒಂದು ಸೇರಿರುವುದರಿಂದ ಸ್ವಲ್ಪ ಮಟ್ಟಿಗೆ ಸಸ್ಯಾಹಾರಿಗಳಿಗೆ ತೊಂದರೆಯಾಯಿತು ಅಂತಾರೆ ಸುಮಂಗಲಾ ಭಟ್ . ಆದರೆ ಕುಮಟಾ ಉತ್ಸವದ ವ್ಯವಸ್ಥೆ ಮಾತ್ರ ಸೂಪರ್ ಅನ್ನೋದು ಅವರ ಅಭಿಪ್ರಾಯ .

ಎಲ್ಲೆಡೆಯಲ್ಲಿ ಧೂಳೇ ಧೂಳು ಎನ್ನುವ ಈ ಕಾಲದಲ್ಲಿ ಧೂಳು ಮೇಲೇಳದಂತೆ ನೀರು ಸಿಂಪಡಿಸಿರುವ ವ್ಯವಸ್ಥೆ ಮತ್ತು ಹಸಿರು ಹಾಸಿನ ವ್ಯವಸ್ಥೆ ಜನತೆಯ ಆರೋಗ್ಯದ ದೃಷ್ಟಿಯಿಂದ ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಬಹಳಾನೇ ಅನುಕೂಲ ಆಗಿ ಜನತೆಗೆ ಸಂತಸ ಉಂಟುಮಾಡಿದೆಯಂತೆ. ಸ್ವಚ್ಛತೆಯೆಡೆಗೆ ಪುರಸಭೆ ಹಾಗೂ ಉತ್ಸವ ಸಮೀತಿ ಸಾಕಷ್ಟು ಮುಂಜಾಗ್ರತೆ ಹಾಗೂ ಎಚ್ಚರಿಕೆ ನೀಡಿದ್ದರೂ ಸಹ ಜನತೆ ಇನ್ನೂ ಹೆಚ್ಚು ಸ್ವಚ್ಛತೆಯ ಬಗ್ಗೆ ಜಾಗ್ರತರಾಗಿ ಕಾರ್ಯ ನಿರ್ವಹಿಸಬೇಕು ಎಂಬುದು ಮಂಜುನಾಥ ನಾಯ್ಕ ಅವರ ಅನಿಸಿಕೆ.

ಮಕ್ಕಳನ್ನು ಆಕರ್ಷಿಸಿದ ಆಟಗಳು

‘ಕುಮಟಾ ಉತ್ಸವ’ ಕೇವಲ ಯುವಕ ಯುವತಿಯರಿಗೆ ಅಷ್ಟೇ ಅಲ್ಲದೇ ಮಕ್ಕಳಿಗೂ ಮನರಂಜನೆಯ ರಸದೌತಣ ನೀಡಿತ್ತು .ವಾಟರ್ ಬೋಟ್ ಗಳು, ಚಲಿಸುವ ಕಾರುಗಳು , ಏರುವ ವಿಮಾನ, ಮೋಟರ್ ಬೈಕ್ ಗಳು ಇವೆಲ್ಲವೂ ಮಕ್ಕಳನ್ನು ತಮ್ಮತ್ತ ಸೆಳೆಯುತ್ತಿತ್ತು . ಮಕ್ಕಳು ಮಾತ್ರ ಅಪ್ಪ ಅಮ್ಮನ ಜೊತೆಗೆ ಈ ಆಟದ ಜಾಗದಿಂದ ಕದಲದೇ ಇರೋದು ಕುಮಟಾ ಉತ್ಸವ ಮನರಂಜನೆಯ ಕ್ಷಣಕ್ಕೆ ಸಾಕ್ಷಿಯಾಗಿತ್ತು . ಈ ಎಲ್ಲಾ ಆಟಗಳು ಸಕತ್ ಖುಷ್ ನೀಡಿದೆ ಎಂದು ‘ಸತ್ವಾಧಾರ ನ್ಯೂಸ್’ ಜೊತೆ ಮಾತನಾಡಿದ ಪುಟಾಣಿ ಅಕ್ಷತಾ,ಖುಷಿಯಿಂದಲೇ ಹೇಳುತ್ತಾಳೆ.

ವೇದಿಕೆಯ ಸುತ್ತ ಅಳವಡಿಸಲಾಗಿದ್ದ ಎಲ್ಇಡಿ ಸ್ಕ್ರೀನ್ ಗಳು ಎಲ್ಲರಿಗೂ ವೇದಿಕೆಯ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಸಹಾಯಕವಾಗಿತ್ತು . ಇದರ ಜೊತೆ ಜೊತೆಗೆ ಅಲ್ಲಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಕುಮಟಾ ಉತ್ಸವಕ್ಕೆ ಸುಭದ್ರ ಕೋಟೆಯನ್ನು ನಿರ್ಮಿಸಿತ್ತು.
ಯಾವುದೇ ರೀತಿಯ ಕಳ್ಳತನ, ಚುಡಾಯಿಸುವಿಕೆ,ಗಲಾಟೆ ಇಲ್ಲದೆ ಸಮಾಜ ಬಾಂಧವರೆಲ್ಲರೂ ಪಕ್ಷ ಬೇಧ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸವಿ ಸವಿದ ಬಗ್ಗೆ ಆರಕ್ಷಕ ಇಲಾಖಾಧಿಕಾರಿಗಳೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯ್ತು.

ಒಂದೆಡೆ ಹಾಡು-ನೃತ್ಯ ಹಾಗೂ ಇತರೆ ಕಾರ್ಯಕ್ರಮಗಳು ನಡೆದರೆ ಇನ್ನೊಂದೆಡೆ ಅಮ್ಯೂಸ್ಮೆಂಟ್ ಪಾರ್ಕ್ ಗಳು ಹಾಗೂ ವೈವಿಧ್ಯಮಯ ಸ್ಟಾಲ್ ಗಳದ್ದೇ ಕಾರುಬಾರು .

ಒಟ್ಟಿನಲ್ಲಿ ಸುಸಂಘಟಿತ ಸಂಘಟನೆಯಿಂದ ಅತ್ಯುತ್ತಮವಾದ ಕಾರ್ಯಗಳನ್ನು ಸಂಘಟಿಸಬಹುದು ಎನ್ನುವುದಕ್ಕೆ ಮಾದರಿಯಾಯ್ತು ‘ಕುಮಟಾ ಉತ್ಸವ ಸಮಿತಿ’. ರವಿಕುಮಾರ ಶೆಟ್ಟಿ ಹಾಗೂ ಅವರ ಸಂಘಟನೆಯವರ ಕಾರ್ಯಯೋಜನೆ ಹಾಗೂ ಕಾರ್ಯ ನೈಪುಣ್ಯತೆ ಜನಮೆಚ್ಚುಗೆ ಪಡೆದುಕೊಂಡಿದ್ದಂತೂ ಸತ್ಯ.

ಸಹಕಾರ: ಶ್ರೀ ಜಯದೇವ ಬಳಗಂಡಿ.
ವರದಿ-ಸತ್ವಾಧಾರ ನ್ಯೂಸ್.