Home Important ಸಂತರನ್ನು ಶಾಂತವಾಗಿರಲು ಬಿಡಿ, ಸಂತ ಶಕ್ತಿಯ ಪ್ರಖರತೆ ತೋರುವಂತೆ‌ ಮಾಡದಿರಿ: ಸಂತ ಸೇವಕ ಸಮಿತಿ ಎಚ್ಚರಿಕೆ.

ಸಂತರನ್ನು ಶಾಂತವಾಗಿರಲು ಬಿಡಿ, ಸಂತ ಶಕ್ತಿಯ ಪ್ರಖರತೆ ತೋರುವಂತೆ‌ ಮಾಡದಿರಿ: ಸಂತ ಸೇವಕ ಸಮಿತಿ ಎಚ್ಚರಿಕೆ.

SHARE

ಬೆಂಗಳೂರು : ನಾಡಿನ ಪ್ರಖ್ಯಾತ ಹಾಗೂ ಶ್ರೇಷ್ಠ ಪರಂಪರೆ ಹೊಂದಿರುವ ಮಠಗಳನ್ನು ಹಾಗೂ ಅವುಗಳ ಅಧೀನ ಸಂಸ್ಥೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ವಹಿಸಿಕೊಳ್ಳುವ ಕುರಿತಾಗಿ ಅಭಿಪ್ರಾಯ ಸಂಗ್ರಹಿಸುವ ಸುತ್ತೋಲೆಯನ್ನು ಹಿಂಪಡೆದಿದ್ದು, ಘಟಿಸಬಹುದಾಗಿದ್ದ ಘೋರ ಅನ್ಯಾಯ ತಪ್ಪಿಹೋಗಿರುತ್ತದೆ.ಇಂತಹ ಕುಚೋದ್ಯದ ವಿಷಯಗಳನ್ನು ಆಗಾಗ ಎಬ್ಬಿಸುವುದನ್ನು ಶಾಶ್ವತವಾಗಿ ಕೊನೆಗಾಣಿಸಬೇಕೆಂದು ಉಗ್ರವಾಗಿ ಆಗ್ರಹಿಸುತ್ತದೆ.

ನಮ್ಮ ನಾಡಿನಲ್ಲಿ ‌ಮಠಗಳು ಮಾಡುತ್ತಿರುವ ಸಾಮಾಜಿಕ – ಧಾರ್ಮಿಕ – ಶೈಕ್ಷಣಿಕ – ಆರೋಗ್ಯದಾನ – ಅನ್ನದಾಸೋಹ ಕಾರ್ಯಗಳು ಯಾವುದೇ ಸರ್ಕಾರದ ಕಾರ್ಯಕ್ಕಿಂತ ಕಡಿಮೆಯಲ್ಲ. ಜಾತಿ – ಮತ – ಪಂಗಡಗಳನ್ನು ನೋಡದೇ ವಿಶ್ವಮಾನವ ಪ್ರಜ್ಞೆಯಲ್ಲಿ ಈ ಕಾರ್ಯ ಮಾಡುತ್ತಿವೆ ಮಠಗಳು. ಅದರಲ್ಲಿ ಸಿದ್ದಂಗಂಗಾ, ಆದಿಚುಂಚನಗಿರಿ, ಸುತ್ತೂರು, ರಾಮಚಂದ್ರಾಪುರಮಠ, ಉಡುಪಿ, ಧರ್ಮಸ್ಥಳ, ತರಳಬಾಳು, ಮಂತ್ರಾಲಯ, ಶೃಂಗೇರಿ, ಬೇಲಿ ಮಠ, ಪಂಚಪೀಠಗಳು… ಮುಂತಾದ ಸಹಸ್ರಾರು ಮಠಗಳು ನಿರಂತರವಾಗಿ ಈ ಮಹೋನ್ನತ ಕಾರ್ಯವನ್ನು ನಿರ್ವಹಿಸುತ್ತಿವೆ. ಹೀಗಿದ್ದೂ ಸಂತರನ್ನು ರಕ್ಷಿಸಬೇಕಾದ ಸರ್ಕಾರ ಹಾಗೆ ಮಾಡದಿರುವುದು ಆತಂಕಕಾರಿ.

ಉದಾಹರಣೆಗೆ: ನಮ್ಮ ದೇಶೀ ಗೋತಳಿಗಳ ಸಂರಕ್ಷಣೆಗಾಗಿ ಕಳೆದೆರಡು ದಶಕಗಳಿಂದ ಹೋರಾಡುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ವಿರುದ್ಧ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳು.

ಇದರಲ್ಲಿ ಗಾಯಕಿ ಪ್ರೇಮಲತಾ ದಿವಾಕರ ಎನ್ನುವವರು ಸಲ್ಲಿಸಿದ್ದ ದೂರನ್ನು ಆದರಿಸಿ CID ಚಾರ್ಜ್ ಶೀಟ್ ಸಲ್ಲಿಸಿತ್ತು. ಇದನ್ನು ಒಪ್ಪದ ಘನ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಇದಕ್ಕಿಂತ ಮೊದಲು ಅದೇ ದೂರುದಾರರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಶ್ರೀಮಠದ ಭಕ್ತರು ದೂರು ಸಲ್ಲಿಸಿದ್ದರು. ಆ ತನಿಖೆ ನಡೆಸಿದ CID, ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ, ಘನ ನ್ಯಾಯಾಲಯ ಆ ಬಿ ರಿಪೋರ್ಟ್ ತಿರಸ್ಕರಿಸಿ, ಏಳು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.

ನ್ಯಾಯಾಲಯಗಳ ಈ ಎರಡು ಪ್ರಕರಣಗಳಲ್ಲಿನ ನಿಲುವಿನಿಂದಾಗಿ ಸಂತರಾದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನಿಷ್ಕಲಂಕರು ಹಾಗೂ ಪರಿಶುದ್ದರು ಎಂಬುದು ಈಗ ಸಮಸ್ತ ಲೋಕಕ್ಕೇ ಸ್ಪಷ್ಟವಾಗಿದೆ. ಹೀಗಿರುವಾಗ ಈ ಉದ್ದೇಶಪೂರ್ವಕ ಷಡ್ಯಂತ್ರವು ಸಂತರ ಮೇಲೆಯೇ ನಡೆಯುತ್ತಿರುವ ವ್ಯವಸ್ಥಿತ ಸಂಚು ಎಂಬುದು ಸ್ಪಷ್ಟ. ಇಂತಹ ಷಡ್ಯಂತ್ರಗಳನ್ನು ಸರ್ಕಾರ ಭೇದಿಸಿ, ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಬೇಕೆಂದು ಆಗ್ರಹಿಸುತ್ತೇವೆ.

ಇತ್ತೀಚಿಗೆ ನಮಗೆ ಆತಂಕ ತಂದ ಇನ್ನೊಂದು ಪ್ರಕರಣ – ಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಮೇಲೆ ಎರಡನೆಯ ದೂರುದಾರ್ತಿ ದಾಖಲಿಸಿದ ಮಿಥ್ಯಾಪವಾದದ ಇನ್ನೊಂದು ದೂರಿನ ತನಿಖೆ. ಇದನ್ನು ಇಷ್ಟು ಕಾಲ ಕಳೆದರೂ ಇತ್ಯರ್ಥಗೊಳಿಸದೆ ಇರಲು ಕಾರಣವೇನು ಎನ್ನುವುದೇ ತಿಳಿಯುತ್ತಿಲ್ಲ. ಸಂತರ ಮೇಲೆ ಸರಕಾರಕ್ಕೆ ಹಿಡಿತ ಸಾಧಿಸುವ ಉದ್ದೇಶವೇನಾದರು ಇದೆಯೇ? ಇಲ್ಲವಾದರೆ CID ಯಾಕೆ ವರದಿ ಸಲ್ಲಿಸುತ್ತಿಲ್ಲ?

ಇದನ್ನು ಕೂಡಲೇ ಇತ್ಯರ್ಥಗೊಳಿಸಿ, ವರದಿ ಸಲ್ಲಿಸಿ, ಶ್ರೀರಾಘವೇಶ್ವರಭಾರತಿಯವರನ್ನು ಮತ್ತೊಮ್ಮೆ ನಿರ್ದೋಷಿ ಎಂದು ಸಾಬೀತು ಪಡಿಸಲಿ ಎಂದು ಸಂತಸೇವಕ ಸಮಿತಿ ಆಗ್ರಹಿಸುತ್ತದೆ.

ನಾಡಿನ ಏಳಿಗೆಗಾಗಿ ಶ್ರಮಿಸುತ್ತಿರುವ ಸಂತರ ಮೇಲೆ ಅಥವಾ ಮಠಗಳ ಮೇಲೆ ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಗಳಿಂದ ಯಾವುದೇ ವಿಧದ ಆಕ್ರಮಣಗಳು ನಡೆದರೂ, ಮಿಥ್ಯಾರೊಪ ಬಂದರೂ, ಈ ನಾಡಿನ ಸಂತ ಶಕ್ತಿ ಒಗ್ಗಟ್ಟಾಗಿ ಅದನು ಪ್ರತಿರೋಧಿಸುತ್ತದೆ.

ಸಂತರ ರಕ್ಷಣೆಗೆ ಸಂತರು ಹಾಗೂ ಶಿಷ್ಯರು ಸದಾ ಸನ್ನದ್ಧರು. ಹಾಗಾಗಿ ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆ ವಿನಾಕಾರಣ ನಮ್ಮ ಸಹನೆಯನ್ನು ಕೆಣಕದಿರಿ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ