Home Article ಹಣ್ಣುಗಳಿಂದ ನೀತಿಯ ಪಾಠ

ಹಣ್ಣುಗಳಿಂದ ನೀತಿಯ ಪಾಠ

SHARE

ಹಣ್ಣುಗಳು ಎಂದರೆ ಮೊದಲು ಜ್ಞಾಪಕಕ್ಕೆ ಬರುವುದು ಹಣ್ಣುಗಳ ರಾಜ ಮಾವಿನಹಣ್ಣು, ನಂತರ ಬೇರೆ ಹಣ್ಣುಗಳು ಜ್ಞಾಪಕಕ್ಕೆ ಬರುತ್ತವೆ. ಇನ್ನೊಂದು ವಿಶೇಷತೆ ಎಂದರೆ ಅಂಗಡಿಯಿಂದ ಎಲ್ಲಾ ಹಣ್ಣುಗಳನ್ನು ತಂದು ತಟ್ಟೆಯಲ್ಲಿಟ್ಟರೂ ಕಳೆಯೇ ಇರುವುದಿಲ್ಲ. ಬಾಳೆ ಹಣ್ಣು ಇಟ್ಟಲ್ಲಿ ಮಾತ್ರ ಒಂದು ರೀತಿಯ ಕಳೆ ಇರುತ್ತದೆ.

ಯಾವುದೇ ಮರದ ಕಾಯಿ ಹಣ್ಣಾಗುವುದಕ್ಕೆ ಮೊದಲು ಕಾಯಿದ್ದಾಗ ಒಗಚು ರುಚಿ ಅಥವಾ ಹುಳಿಯಾಗಿದ್ದು, ಹಣ್ಣಾದ ನಂತರ ಸಿಹಿಯಾಗಿ ಎಲ್ಲರೂ ತಿನ್ನಲು ಯೋಗ್ಯವಾಗಿರುತ್ತವೆ. ಯಾವುದಾದರೂ ಹಣ್ಣನ್ನು ನೋಡಿದರೆ ಅದು ಹಣ್ಣಾಗಿದೆ ಅಥವಾ ಕಾಯಿ ರೀತಿ ಇದೆ ಪರೀಕ್ಷಿಸಿ ನೋಡಿದರೆ ತಿಳಿಯುತ್ತದೆ. ಸ್ವಲ್ಪ ಕಾಯಿ ಎನಿಸಿದರೂ ತಿನ್ನಲು ಮನಸ್ಸಿಗೆ ಹಿತವೆನಿಸುವುದಿಲ್ಲ. ಪೂರ್ತಿ ಹಣ್ಣಾಗಿಲ್ಲ ಕಾಯಿರೀತಿ ಇದೆ ತಿನ್ನಲು ಯೋಗ್ಯವಲ್ಲ ಎಂದು ಹೇಳಿ ಬಿಸಾಡುತ್ತೇವೆ. ಹಣ್ಣುಗಳು ಮರದಲ್ಲಿ ಇದ್ದಾಗಲೇ ಹಣ್ಣಾದಲ್ಲಿ ತಿನ್ನಲು ಬಹಳ ರುಚಿ ಇರುತ್ತದೆ. ಕಾಯಿಗಳು ಪಕ್ವವಾದ ಹಣ್ಣಾಗಲು ಬಹಳ ಸಮಯ ಹಿಡಿಯುತ್ತದೆ. ಅಷ್ಟು ಸಮಯ ಕಾಯಲು ತಾಳ್ಮೆಇಲ್ಲದೆ ಅಥವಾ ವ್ಯಾಪಾರ ದೃಷ್ಠಿಯಿಂದ ಮಾವಿನ ಹಣ್ಣುಗಳನ್ನು,ಬಾಳೆಹಣ್ಣು ಇತರೆ ಕೆಲವು ಹಣ್ಣುಗಳನ್ನು ಕಾಯಿ ಇರುವಾಗಲೇ ಮರದಿಂದ ಕಿತ್ತು ನಂತರ ಕೃತಕವಾಗಿ ಹಣ್ಣಾಗಿಸಿದರೆ ಅಷ್ಟಾಗಿ ರುಚಿಸುವುದಿಲ್ಲ. ಎಲ್ಲಾ ಕಾಯಿಗಳು ಮರದಲ್ಲಿಯೇ ಇದ್ದು, ಪಕ್ವವಾದ ಹಣ್ಣಾಗಬೇಕು ಅದರ ರುಚಿ ಬಹಳ ಚೆನ್ನಾಗಿರುತ್ತದೆ.

ಹಣ್ಣುಗಳಲ್ಲಿ ನಾನಾ ವಿಧದ ಹಣ್ಣುಗಳು ಇರುತ್ತದೆ. ಕಾಯಿದ್ದಾಗ ಹುಳಿ ಇದ್ದು, ಹಣ್ಣಾದ ನಂತರ ಸಿಹಿ ಬರುವುದು, ಕಾಯಲ್ಲಿ ಒಗಚು ಇದ್ದು, ಹಣ್ಣಾದಾಗ ಸಿಹಿ ಬರುವುದು, ಹಾಗೂ ಕಾಯಿ ಯಾಗಿದ್ದಾಗ ಹುಳಿ ಇದ್ದು, ಹಣ್ಣಾದಾಗಲೂ ಹುಳಿಯೇ ಇರುವುದು. ಸಾಮಾನ್ಯವಾಗಿ ಮಾವು ದ್ರಾಕ್ಷಿ ಹಣ್ಣುಗಳು ಕಾಯಿಯಾಗಿದ್ದಾಗ ಹುಳಿ ಇದ್ದು, ಹಣ್ಣಾದಾಗ ಸಿಹಿ ಬರುತ್ತವೆ. ನಿಂಬೆ ಹಣ್ಣುಗಳು ಕಾಯಿದ್ದಾಗ ಹುಳಿ ಇದ್ದು, ಹಣ್ಣಾದಾಗ ಹುಳಿಯೇ ಇರುತ್ತದೆ. ಬೇರೆ ಹಣ್ಣುಗಳು ಅಂದರೆ ಬಾಳೆಹಣ್ಣು ಸಪೋಟ ಸೀಬೇಹಣ್ಣು ಇತರೆ ಹಣ್ಣುಗಳು ಕಾಯಿದ್ದಾಗ ಒಗಚು ಇದ್ದು ಹಣ್ಣಾದಾಗ ಸಿಹಿ ಬರುತ್ತವೆ.

ಮನುಷ್ಯನಾದವನು ಮರದಲ್ಲಿಯೇ ಇದ್ದು ಒಳ್ಳೆಯ ಪಕ್ವವಾದ ಹಣ್ಣಿನಂತೆ ವಿದ್ಯೆಯನ್ನು ಕಲಿತು ಪರಿಪೂರ್ಣನಾಗಬೇಕು. ಹಿಂದಿನ ಕಾಲದಲ್ಲಿ 64 ವಿದ್ಯೆಯಲ್ಲಿ ವಿದ್ವಾಂಸನಾದರೆ ಪರಿಪೂರ್ಣನಾದಂತೆ ಎನ್ನುತ್ತಿದ್ದರು. ಈಗ ಕಾಲ ಸಂಪೂರ್ಣ ಬದಲಾಗಿದೆ. ಈಗಿನ ಕಾಲದಲ್ಲಿ ಜ್ಞಾನವೆಂಬುದು ವಿಶಾಲವಾದ ಸಪ್ತ ಸಮುದ್ರವಿದ್ದಂತೆ ಇಡೀ ಜಗತ್ತನ್ನೇ ಆವರಿಸಿದೆ. ಹಲವಾರು ಪದವಿಗಳು ಇದ್ದು, ಅದರಲ್ಲಿ ಹಲವಾರು ವಿಷಯಗಳು. ಈ ಹಲವಾರು ವಿಷಯಗಳು ಓದಿದಷ್ಟೂ ಬೆಳೆಯುತ್ತಾ ಹೋಗುತ್ತದೆ. ಪ್ರತಿ ದಿನವೂ ಹೊಸ ಹೊಸ ಅವಿಷ್ಕಾರಗಳು ಉದ್ಭವವಾಗಿ ಅದಕ್ಕೆ ತಕ್ಕಂತೆ ಲಕ್ಷಾಂತರ ಪುಸ್ತಕಗಳು ಮಾರುಕಟ್ಟೆಯನ್ನು ಸೇರಿರುತ್ತವೆ. ಯಾರೊಬ್ಬರೂ ಎಲ್ಲಾ ವಿದ್ಯೆಯನ್ನು ಕಲಿತು ಪರಿಪೂರ್ಣರಾಗಲು ಸಾಧ್ಯವಿಲ್ಲ. ಮನುಷ್ಯನು ತನ್ನ ಜೀವಿತ ಕಾಲದಲ್ಲಿ ಯಾವುದಾದರೂ ಕೆಲವು ವಿಷಯಗಳಲ್ಲಿ ಮಾತ್ರ ಪರಿಪೂರ್ಣನಾಗಬಹುದು. ಎಲ್ಲಾ ವಿಷಯಗಳಲ್ಲಿ ಪರಿಪೂರ್ಣನಾಗಲು ನೂರು ಜನ್ಮ ಎತ್ತಿಬಂದರೂ ಸಾಧ್ಯವಿಲ್ಲ. ತನ್ನ ಜೀವಿತಾವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜ್ಞಾನವನ್ನು ಸಂಪಾದನೆ ಮಾಡಿ ಪರಿಪೂರ್ಣನಾದರೆ ಅಥವಾ ಮನುಷ್ಯನ ಜ್ಞಾನವೂ ಹಣ್ಣಿನಂತೆ ಪಕ್ವವಾಗಿದ್ದರೆ ಮಾತ್ರ ಕೆಲವು ವಿಷಯದಲ್ಲಿ ಪರಿಪೂರ್ಣನಾಗಿದ್ದಾನೆ ಎಂದು ತಿಳಿಯಬಹುದು. ಎಲ್ಲ ಕಲಿಯುತ್ತೇನೆ ಎಂದು ಹೇಳಿ ಎಲ್ಲವನ್ನು ಅರ್ಧಕ್ಕೆ ನಿಲ್ಲಿಸಿದರೆ ಅದು ಮರದಿಂದ ಎಳೆಕಾಯಿಗಳನ್ನು ಕಿತ್ತಂತೆ ಆಗುತ್ತದೆ. ಅದನ್ನು ಯಾರೂ ಸ್ವೀಕರಿಸುವುದಿಲ್ಲ. ಅಂತಹ ಮನುಷ್ಯನ ಭೋದನೆಗಳನ್ನು ಯಾರೂ ಕೇಳುವುದಿಲ್ಲ. ಎಲ್ಲವನ್ನು ಅರ್ಧಂಬರ್ಧ ಕಲಿತಿದ್ದಾನೆ. ಎಡಬಿಡಂಗಿ ಎಳೆ ನಿಂಬೆಕಾಯಿಯಂತೆ ಆಡುತ್ತಾನೆ ಎಂದು ಹೀಗಳೆಯುವುದುಂಟು. ಅಂತಹ ಮನುಷ್ಯನು ಯಾರಿಗೂ ಸರಿಯಾದ ಮಾರ್ಗದರ್ಶನ ನೀಡುವುದಿಲ್ಲ ಅನೇಕ ವಿಷಯಗಳನ್ನು ಅಪೂರ್ಣವಾಗಿ ಅಭ್ಯಸಿಸಿ ಅಪೂರ್ಣನಾಗಿದ್ದರೆ, ಕಾಯಿಗಳನ್ನು ತಿನ್ನಲಾಗದೆ ತಿರಸ್ಕರಿಸುವಂತೆ ಅಂತಹ ಮನುಷ್ಯನ ಭೋದನೆಯನ್ನು ತಿರಸ್ಕರಿಸುತ್ತಾರೆ. ಯಾವುದಾದರೂ ವಿಷಯವನ್ನು ಅರೆಬರೆ ಕಲಿತು ತಾನೇ ವಿಧ್ವಾಂಸನೆಂದು ಮೆರೆದರೆ ಪರಿಪೂರ್ಣವಾಗಿ ಕಲಿತವರ ಮುಂದೆ ಅಪಮಾನಕ್ಕೆ ಒಳಗಾಗಬೇಕಾಗುತ್ತದೆ.

ಕಾಯಿಗಳನ್ನು ಹಣ್ಣಾಗುವವರೆಗೆ ಮರದಲ್ಲಿಯೇ ಬಿಟ್ಟು ಪಕ್ವವಾದ ನಂತರ ಕೀಳುವಂತೆ ಮಕ್ಕಳು ಎಲ್ಲಿಯವರೆವಿಗೆ ಓದುತ್ತಾರೋ ಅಲ್ಲಿಯವರೆವಿಗೆ ಅವರ ಇಷ್ಟದಂತೆ ಓದಿಸಿ ಹಣ್ಣು ಮರದಲ್ಲಿಯೇ ಪಕ್ವವಾಗುವಂತೆ ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ಪೂರ್ಣ ಓದಿಸಿ ಪಕ್ವವಾದ ವಿದ್ಯಾವಂತನನ್ನಾಗಿ ಮಾಡಬೇಕು. ನಂತರ ಪೂರ್ಣ ಕಲಿತಿದ್ದಾನೆಂದು ತಿಳಿದು ಕೆಲಸಕ್ಕೆ ಸೇರುವಂತೆ ಪ್ರೇರೇಪಿಸಬೇಕು. ಮಕ್ಕಳು ಯಾವುದೋ ಒಂದು ಗುರಿಯನ್ನು ಇಟ್ಟುಕೊಂಡು ಓದುತ್ತಾ ಇದ್ದು, ಅವರ ಗುರಿಯನ್ನು ಮುಟ್ಟುವ ತನಕ ಹುರಿದುಂಬಿಸಿ ಅವರಿಗೆ ಸಹಾಯವನ್ನು ಮಾಡಿದರೆ ಮಕ್ಕಳು ಪರಿಪೂರ್ಣರಾಗಿ ತನ್ನ ಹೆತ್ತವರಿಗೆ ದೇಶಕ್ಕೆ ಕೀರ್ತಿ ತರಬಹುದು. ಸಮಾಜದಲ್ಲಿ ಒಳ್ಳೆ ಗೌರವಯುತವಾದ ಜೀವನವನ್ನು ನಡೆಸಬಹುದು. ಹೆತ್ತವರು ಶಕ್ತರಾಗಿದ್ದು, ಮಕ್ಕಳಿಗೆ ಓದಲು ಆಸೆ ಇದ್ದಲ್ಲಿ, ಹೆತ್ತವರು ಅದಕ್ಕೆ ಅಡ್ಟಿಪಡಿಸಿ ಅವರ ಓದನ್ನು ಮೊಟಕುಗೊಳಿಸಬಾರದು. ಜೊತೆಯವರು ಆಗಲೇ ಕೆಲಸಕ್ಕೆ ಹೋಗಿ, ಮದುವೆಯಾಗಿ ಸಂಸಾರಸ್ಥ ರಾಗಿದ್ದಾರೆ ನನ್ನ ಮಗನಿನ್ನೂ ಓದುತ್ತಲೇ ಇದ್ದಾನೆ ಎಷ್ಟು ಓದಿದರೂ ಅಷ್ಟೇ ಓದಿದ್ದು ಸಾಕು ಕೆಲಸಕ್ಕೆ ಹೋಗು ಎಂದು ಬಲವಂತ ಪಡಿಸಿದರೆ ಮಕ್ಕಳ ಭವಿಷ್ಯಕ್ಕೆ ಕಲ್ಲನ್ನು ಹಾಕಿದಂತೆ ಆಗುತ್ತದೆ. ಅವರ ಆಸೆ ಪೂರ್ಣವಾಗುವುದಿಲ್ಲ. ಹೆತ್ತವರ ಬಲವಂತಕ್ಕೆ ಮನಸ್ಸಿಲ್ಲದೆ ಯಾವುದೋ ಒಂದು ಕೆಲಸಕ್ಕೆ ಸೇರಿ ಸಂಸಾರಸ್ಥರಾಗಿ ಜೀವನಪರ್ಯಂತ ಮಾನಸಿಕವಾಗಿ ಕೊರಗುವಂತೆ ಅಗಬಹುದು. ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರದ ನೊಗ ಹೊತ್ತು, ಪರಿಪೂರ್ಣನಾದ ವಿದ್ಯಾವಂತನಾಗದೆ ವಿವಾಹವಾಗಿ ತನ್ನ ಪತ್ನಿಗೆ ಪರಿಪೂರ್ಣನಾದ ಒಳ್ಳೆಯ ಗಂಡನೆನಿಸಿಕೊಳ್ಳುವುದಿಲ್ಲ. ಇದರಿಂದ ಮಾನಸಿಕ ಕ್ಷೋಭೆಗೆ ಒಳಗಾಗಿ ಸಂಸಾರದಲ್ಲಿ ಬಿರುಕು ಉಂಟಾಗಬಹುದು. ವಿದ್ಯಾಭ್ಯಾಸದ ವಿಷಯವನ್ನು ಮಕ್ಕಳ ತೀರ್ಮಾನಕ್ಕೆ ಬಿಡುವುದು ಒಳ್ಳೆಯದು.

ಮಕ್ಕಳಿಗೆ ಓದಲು ಬಹಳ ಆಸೆ ಇದ್ದು ಅನಿವಾರ್ಯ ಕಾರಣಗಳಿಂದ ಓದುವುದನ್ನು ಅರ್ಧಕ್ಕೆ ನಿಲ್ಲಿಸುವ ಸನ್ನಿವೇಶ ಉಂಟಾಗಬಹುದು. ಕೆಲವು ಮಕ್ಕಳಿಗೆ ಅನಿರೀಕ್ಷಿತವಾಗಿ ದುಡಿಯುತ್ತಿದ್ದ ತಂದೆಯು ಮೃತನಾಗಿ ಅವನಿಗೆ ತಮ್ಮ ಅಥವಾ ತಂಗಿ ಇದ್ದು, ತಾಯಿಗೆ ತಿಳುವಳಿಕೆ ಕಡಿಮೆ ಇದ್ದರೆ ಅಂತಹ ಸಂಸಾರದ ಜವಾಬ್ದಾರಿಯನ್ನು ಹೊರಬೇಕಾದ ಸಂದರ್ಭ ಒದಗಿಬರಬಹುದು. ಆಗ ಯತ್ನವಿಲ್ಲದೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಸನ್ನಿವೇಶ ಉಂಟಾಗುತ್ತದೆ. ಇದಕ್ಕೆ ವಿರುದ್ದವಾಗಿ ತಾಯಿ ಬುದ್ದಿವಂತಳಾಗಿದ್ದರೆ ಮಕ್ಕಳಿಗೆ ಪೂರ್ಣ ವಿದ್ಯಾಭ್ಯಾಸ ಕೊಡಿಸಬಹುದು.

ಮರಗಳಲ್ಲಿ ಹಣ್ಣಿಗೆ ಬರುವ ಕಾಯಿಗಳಿದ್ದು, ಪೃಕೃತಿ ವಿಕೋಪದಿಂದ ಬಿರುಗಾಳಿ ಬೀಸಿ ಜೋರಾದ ಮಳೆ ಬಂದ ಸಂದರ್ಭಗಳಲ್ಲಿ ಮರದಲ್ಲಿರುವ ಕಾಯಿಗಳು ಉದುರಿಹೋಗಬಹುದು. ಅದೇ ರೀತಿ ಹಲವಾರು ಸನ್ನಿವೇಶಗಳಲ್ಲಿ ಮಕ್ಕಳಿಗೆ ಅನಿರೀಕ್ಷಿತ ಖಾಯಿಲೆ ಬಂದು ಅಥವಾ ತನ್ನದಲ್ಲದ ತಪ್ಪಿಗೆ ಅಂಗವಿಕಲನಾಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಬಂದೊದಗಿದರೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವ ಪ್ರಸಂಗ ಒದಗಿ ಬರಬಹುದು. ಇದೊಂದು ಅನಿರೀಕ್ಷಿತ ಅಘಾತವಾಗಿರುತ್ತದೆ. ಇಂತಹ ಸನ್ನಿವೇಶಗಳಲ್ಲಿ ಯಾರನ್ನೂ ದೂರಲಾಗುವುದಿಲ್ಲ. ಅದಕ್ಕೆ ಎಚ್ಚರಿಕೆ ಯಿಂದ ಜೀವನವನ್ನು ನಡೆಸಿ ವಿದ್ಯಾಭ್ಯಾಸವನ್ನು ಮುಗಿಸಬೇಕು.

ಮರದಲ್ಲಿರುವ ಕಾಯಿಗಳನ್ನು ಕೆಲವರು ಕಲ್ಲುಗಳನ್ನು ಹೊಡೆದು ಉರುಳಿಸುವಂತೆ, ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ದ್ವೇಷದಿಂದ ಉದ್ದೇಶಪೂರ್ವಕವಾಗಿ ತೊಂದರೆ ನೀಡಿ ಅವರ ವಿಧ್ಯಾಭ್ಯಾಸವನ್ನು ಮೊಟಕು ಗೊಳಿಸುವ ಸಂದರ್ಭ ಇರುತ್ತದೆ. ಈ ರೀತಿ ಘಟನೆಗಳು ನಡೆಯದಂತೆ ಎಚ್ಚರವಹಿಸಿ ಹೆತ್ತವರಾಗಲೀ ವಿದ್ಯಾರ್ಥಿಗಳಾಗಲೀ ಯಾರೊಂದಿಗೂ ದ್ವೇಷವನ್ನು ಕಟ್ಟಿಕೊಳ್ಳಬಾರದು. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ನೋಡಬೇಕು. ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ಬಿಸಿರಕ್ತವೆಂದು ದ್ವೇಷದಿಂದ ಹೊಡೆದಾಟಕ್ಕೆ ಹೋದಲ್ಲಿ ತನ್ನ ಕಾಲಮೇಲೆ ತಾವೇ ಕಲ್ಲನ್ನು ಹಾಕಿಕೊಂಡಂತೆ ಆಗುತ್ತದೆ. ಸಂಯಮದಿಂದ ವರ್ತಿಸಿ, ಯಾರೊಂದಿಗೂ ಹಗೆ ಸಾದಿಸದಿದ್ದರೆ ತನ್ನ ಗುರಿಯನ್ನು ಮುಟ್ಟಬಹುದು.

ಮರಗಳಲ್ಲಿ ಕಾಯಿಗಳು ತುಂಬಾ ಇದ್ದು, ಅಕಸ್ಮಾತ್ ಯಾವುದಾದರೂ ರೋಗ ಬಂದರೆ ಮರದಲ್ಲಿರುವ ಎಲ್ಲಾ ಕಾಯಿಗಳಿಗೆ ಹರಡಿ ಎಲ್ಲಾ ಕಾಯಿಗಳು ಉದುರಿ ಹೋಗುವುದಂಟು. ಅದಕ್ಕಾಗಿ ಆಗಾಗ್ಗೆ ಪರೀಕ್ಷಿಸಿ ಔಷದಿಗಳನ್ನು ಸಿಂಪಡಿಸುತ್ತಿದ್ದರೆ ಒಳ್ಳೆಯ ಫಲ ದೊರೆಯುತ್ತದೆ. ವಿದ್ಯಾರ್ಥಿಗಳು ಬೆಳೆಯುವ ವಾತಾವರಣ, ಪರಿಸರ, ಸ್ನೇಹಿತರು ಎಲ್ಲರೂ ಒಳ್ಳೆಯವರಿದ್ದರೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಅಕಸ್ಮಾತ್ ಕೆಟ್ಟವರ ಸ್ನೇಹ ಮಾಡಿ ಸಿಗರೇಟು ಸೇವನೆ ಕಲಿತು, ಮದ್ಯಸೇವನೆ ಮಾಡುವುದನ್ನು ಕಲಿತು ಇದರ ಜೊತೆಗೆ ಜೂಜುಗಳಲ್ಲಿ ಭಾಗವಹಿಸುವುದು ಇತ್ಯಾದಿ ದುರಾಭ್ಯಾಸ ಹೊಂದಿ, ಹೆತ್ತವರು ನೀಡುವ ಹಣ ಸಾಲದೆ ಕಳ್ಳತನ ಸೇರಿದಂತೆ ಬೇರೆ ರಿತಿಯಾಗಿ ಹಣವನ್ನು ಸಂಪಾದಿಸಲು ಪ್ರಯತ್ನಿಸಬಹುದು. ದುಷ್ಚಟಗಳಿಂದ ಅನಿರೀಕ್ಷಿತವಾದ ಖಾಯಿಲೆಗಳಿಗೆ ತುತ್ತಾಗಬಹುದು. ಮುಂದಾಲೋಚನೆಯಿಂದ ಹೆತ್ತವರು ಮಕ್ಕಳ ಚಟುವಟಿಕೆಗಳನ್ನು ಗಮನಿಸಿ ಅಕಸ್ಮಾತ್ ಅಂತಹ ಸ್ನೇಹಿತರು ಇದ್ದರೆ ಕೂಡಲೇ ಅವರ ಸಹವಾಸ ಬಿಡಿಸಿದ್ದಲ್ಲಿ ಮಕ್ಕಳು ಹಾಳಾಗುವುದನ್ನು ತಡೆಯಬಹುದು.

ಒಟ್ಟಿನಲ್ಲಿ ಮಕ್ಕಳು ಪೂರ್ಣವಾಗಿ ಓದುವವರೆಗೆ ಹೆತ್ತವರೂ ಹಾಗೂ ಮಕ್ಕಳು ಎಚ್ಚರಿಕೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿದರೆ ಒಳ್ಳೆಯ ವಿದ್ಯಾವಂತನಾಗುವುದರಲ್ಲಿ ಸಂಶಯವಿಲ್ಲ.

ಮನುಷ್ಯನ ಗುಣಗಳನ್ನು ಹಣ್ಣಿಗೆ ಹೋಲಿಸಬಹುದು. ಚಿಕ್ಕವನಿದ್ದಾಗ ಏನೂ ಅರಿಯದವ ರಾಗಿದ್ದು, ದೊಡ್ಡವರಾದ ಮೇಲೆ ಒಳ್ಳೆಯವರಾಗುವುವವರನ್ನು ಬಾಳೆಹಣ್ಣು ಸಪೋಟ ಹಣ್ಣಿಗೆ ಹೋಲಿಸಬಹುದು, ಏಕೆಂದರೆ ಚಿಕ್ಕವರಿದ್ದಾಗ ಇವರಿಂದ ಯಾರಿಗೂ ಏನೂ ತೊಂದರೆ ಆಗಿರುವುದಿಲ್ಲ. ನಂತರ ಹಣ್ಣಾದಾಗ ಸಿಹಿಯಾಗುವಂತೆ ದೊಡ್ಡವರಾದ ಮೇಲೆ ಒಳ್ಳೆಯವರಾಗುತ್ತಾರೆ.

ಇನ್ನೂ ಕೆಲವರು ಚಿಕ್ಕವರಿದ್ದಾಗ ಕೆಟ್ಟವರಿದ್ದು, ದೊಡ್ಡವರಾದಾಗ ಒಳ್ಳೆಯವರಾಗುತ್ತಾರೆ ಎಂದರೆ ಮಾವಿನಹಣ್ಣು ದ್ರಾಕ್ಷಿ ಹಣ್ಣಿನಂತೆ ವಿಂಗಡಿಸಬಹುದು. ಚಿಕ್ಕವರಿದ್ದಾಗ ಕೆಟ್ಟದ್ದನ್ನು ಮಾಡಿ ನಂತರ ಬುದ್ದಿಯನ್ನು ತಿಳಿದುಕೊಂಡು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ದೊಡ್ಡವರಾದ ಮೇಲೆ ಒಳ್ಳೆಯ ಗುಣ ಬಂದರೆ ಅದು ಮಾವಿನಹಣ್ಣಿನಂತೆ ಸಿಹಿಯಾಗುತ್ತಾರೆ ಎಂದು ಅರ್ಥ.

ನಿಂಬೆ ಹಣ್ಣು ಕಾಯಿದ್ದಾಗಲೂ ಹುಳಿ ಇರುತ್ತದೆ ಹಣ್ಣಾಗಲೂ ಹುಳಿ ಇರುತ್ತದೆ. ಅದರ ರುಚಿಯನ್ನು ಬದಲಿಸುವುದಿಲ್ಲ. ಮನುಷ್ಯನು ಚಿಕ್ಕವರಿದ್ದಾಗ ಕೆಲವರ ಜೀವನದಲ್ಲಿ ಹುಳಿ ಹಿಂಡಿ ನಂತರ ದೊಡ್ಡವರಾದಾಗಲೂ ಕೆಲವರ ಜೀವನದಲ್ಲಿ ಹುಳಿ ಹಿಂಡುವ ಗುಣಹೊಂದಿದ್ದರೆ, ಎಂದಿಗೂ ಬುದ್ದಿ ಕಲಿಯುವುದಿಲ್ಲ. ಹುಟ್ಟು ಗುಣ ಸುಟ್ಟರೂ ಹೋಗದು ಎನ್ನುವ ಹಾಗೇ ಚಿಕ್ಕವರಿದ್ದ ಗುಣವನ್ನು ದೊಡ್ಡವರಾದಾಗಲೂ ಮುಂದುವರೆಸಿಕೊಂಡು ಹೋಗುತ್ತಾರೆ. ಇವರು ಇರುವವರೆಗೂ ಯಾವುದೇ ಕಾರಣಕ್ಕೂ ಬದಲಾಗಲ್ಲ. ಅದಕ್ಕೆ ಇಂಥವರನ್ನು ಯಾರೂ ಸೇರಿಸುವುದಿಲ್ಲ.

ಅದಕ್ಕೆ ತೆಂಗಿನಕಾಯನ್ನು ಹೊರತುಪಡಿಸಿ, ಬೇರೆ ಹಣ್ಣಿನ ಕಾಯಿಗಳನ್ನು ದೇವರಿಗೆ ಸಮರ್ಪಿಸುವುದಿಲ್ಲ. ಅದೇರೀತಿ ಮನುಷ್ಯನಾದವನು ಕೆಟ್ಟ ಗುಣಗಳನ್ನು ಹೊಂದಿರುವವರು ದೇವರ ನ್ನೊಳಗೊಂಡು ಯಾರಿಗೂ ಪ್ರಿಯರಾಗಿರುವುದಿಲ್ಲ. ಇವರುಗಳು ಎಷ್ಟೇ ಪೂಜೆ ಮಾಡಲಿ, ಪರೋಪಕಾರ ಮಾಡಲಿ, ದಾನಧರ್ಮ ಮಾಡಿದರೂ ಇವರ ಗುಣ ಒಳ್ಳೆಯದು ಆಗುವ ತನಕ ದೇವರಿಗೆ ಪ್ರಿಯವಾಗುವುದಿಲ್ಲ. ದೇವರಿಗೆ ಪರಿಪೂರ್ಣವಾದ ಹಣ್ಣುಗಳು ಮಾತ್ರ ಪ್ರಿಯವಾಗುವಂತೆ, ಪರಿಪೂರ್ಣನಾದ ಒಳ್ಳೆಯ ಮನುಷ್ಯನನ್ನು ಮಾತ್ರ ದೇವರು ಸ್ವೀಕರಿಸುತ್ತಾನೆ.

ಆದ್ದರಿಂದ ಮನುಷ್ಯನು ಯಾವಾಗಲೂ ಒಳ್ಳೆಗುಣಗಳನ್ನು ಹೊಂದಿ ಎಲ್ಲರಿಗೂ ಪರೋಪಕಾರಿ ಯಾಗಿ, ಸನ್ಮಾರ್ಗದಲ್ಲಿ ನಡೆದಲ್ಲಿ ದೇವರೂ ಸಹ ಮೆಚ್ಚುತ್ತಾನೆ. ದೇವರಿಗೆ ಪ್ರಿಯವಾದ ಹಣ್ಣುಗಳಂತೆ ಆಗಬೇಕು. ಅಂದರೆ ಎಲ್ಲಾ ಅವಗುಣಗಳನ್ನು ಬಿಟ್ಟು ಒಳ್ಳೆಯ ಗುಣಗಳನ್ನು ಹೊಂದಿ ಒಳ್ಳೆಯ ಭಕ್ತನಾಗಬೇಕು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಬೇಕು. ಎಲ್ಲರೂ ಒಳ್ಳೆಯ ವ್ಯಕ್ತಿಗಳೇ, ಹುಟ್ಟಿಂದಿನಿಂದಲೇ ಕೆಟ್ಟ ಗುಣ ಬಂದಿರುವುದಿಲ್ಲ. ಅವರು ಬೆಳೆದ ವಾತಾವರಣ, ಸ್ನೇಹದ ವಾತಾವರಣ ಮನೆಯ ಸಂಸ್ಕøತಿ ಎಲ್ಲವೂ ಮನುಷ್ಯನ ಗುಣಗಳ ಮೇಲೆ ಪ್ರಭಾವ ಬೀರುತ್ತದೆ. ಎಲ್ಲಾ ಮನುಷ್ಯರು ಒಳ್ಳೆಯವರೇ ಅದರೆ ಪರಿಸ್ಥಿತಿ ಅವರನ್ನು ಕೆಲವೊಮ್ಮೆ ಕೆಟ್ಟವರನ್ನಾಗಿ ಮಾಡುತ್ತದೆ. ಅದನ್ನು ತಿದ್ದಿಕೊಳ್ಳಲು ಕೆಲವು ಸಹ ಸಮಾಜ ಅವಕಾಶ ಕೊಡುವುದಿಲ್ಲ. ಒಮ್ಮೆ ಒಬ್ಬ ಕಳ್ಳ ತನಮಾಡಿ ಜೈಲು ಸೇರಿದ್ದಲ್ಲಿ, ಅವನು ಪುನಃ ಹೊರಬಂದು ಒಳ್ಳೆಯವನಾಗಿದ್ದರೂ ಎಲ್ಲರೂ ಅವನನ್ನು ಕಳ್ಳನ ರೀತಿಯಲ್ಲೇ ನೋಡುತ್ತಾರೆ. ಪರಿಸ್ಥತಿಯ ಶಿಶುವಿನಂತೆ ಕೆಟ್ಟ ಕೆಲಸ ಮಾಡಿದ್ದಾನೆ ಈಗ ಸರಿ ಹೋಗಿದ್ದಾನೆ ಎಂದು ಯಾರೂ ಎಣಿಸುವುದಿಲ್ಲ. ಅವನಿಗೆ ಒಂದು ಸಲ ನೀಡಿದ ಹೆಸರು ಅವನು ಸಾಯುವವರೆಗೂ ಕೆಲವೊಮ್ಮೆ ಸತ್ತಮೇಲೂ ಹೋಗುವುದಿಲ್ಲ. ಅವರ ವಂಶದವರಿಗೆ ಆ ಹೆಸರು ಮುಂದುವರೆಸಿರುತ್ತಾರೆ.

ಯಾವರೀತಿ ಕಾಯಿಗಳು ಹಣ್ಣಾಗಿ ಪಕ್ಷವಾಗಿ ತಿನ್ನಲು ಯೋಗ್ಯವಾಗುವುದೋ ಅದೇರೀತಿ ಮನುಷ್ಯನು ತನ್ನ ಸತ್ಕಾರ್ಯದಿಂದ ಒಳ್ಳೆಯವರಾಗಿ ದೇವರು ಸ್ವೀಕರಿಸುವಂತೆ ಆಗಬೇಕು. ಕೃತಕವಾಗಿ ಹಣ್ಣು ಮಾಡಿದಂತೆ ಆಗಬಾರದು. ಸ್ವತಃ ನೈಸರ್ಗಿಕವಾಗಿ ಹಣ್ಣಾಗುವಂತೆ ಮನಸ್ಸನ್ನು ಪಕ್ಷವಾಗಿರಿಸಬೇಕು.