Home Local ಸಿದ್ದಾಪುರ ಹುಲ್ಕುತ್ರಿ ರಸ್ತೆ ಕಾಮಗಾರಿ ಅಪೂರ್ಣ: ಪ್ರತಿಭಟನೆಯ ಎಚ್ಚರಿಕೆ!

ಸಿದ್ದಾಪುರ ಹುಲ್ಕುತ್ರಿ ರಸ್ತೆ ಕಾಮಗಾರಿ ಅಪೂರ್ಣ: ಪ್ರತಿಭಟನೆಯ ಎಚ್ಚರಿಕೆ!

SHARE

ಸಿದ್ದಾಪುರ: ತಾಲೂಕಿನ ಮಾನಿಹೊಳೆ-ಹುಲ್ಕುತ್ರಿ- ಕತ್ರಗಾಲ ಕ್ರಾಸ್​ವರೆಗೆ ಪಿಎಂಜಿಎಸ್ ಯೋಜನೆಯಡಿ ನಡೆದ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

2008ರ ನವೆಂಬರ್​ನಲ್ಲಿ ಪ್ರಾರಂಭಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿ 2012ರ ಅಕ್ಟೋಬರ್ ನಲ್ಲಿ ಪೂರ್ಣಗೊಂಡು ರಸ್ತೆ ನಿರ್ವಹಣೆ ಮುಕ್ತಾಯಗೊಂಡಿದೆ. ಈ ರಸ್ತೆ ಒಟ್ಟು 15 ಕಿ.ಮೀ. ಇದ್ದು, ಇದರಲ್ಲಿ 8 ಕಿ.ಮೀ. ಮಾತ್ರ ಡಾಂಬರೀಕರಣಗೊಂಡಿದೆ. (ಕತ್ರಗಾಲ ಕ್ರಾಸ್ ನಿಂದ ಸೋವಿನಕೊಪ್ಪ ಗ್ರಾಪಂವರೆಗೆ) ಇನ್ನುಳಿದ 7 ಕಿ.ಮೀ. ಡಾಂಬರೀಕರಣಗೊಳ್ಳದೇ ಅನಾಥ ವಾಗಿರುವುದರಿಂದ ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ.

ಡಾಂಬರೀಕರಣಗೊಳ್ಳಬೇಕಾದ 7 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಕಳೆದ ಮೂರ್ನಾಲ್ಕು ವರ್ಷದಿಂದ ಸ್ಥಳೀಯ ಜನತೆ, ಸೋವಿನಕೊಪ್ಪ ಗ್ರಾಪಂ ರಸ್ತೆಯಲ್ಲಿನ ಹೊಂಡ ಮುಚ್ಚಿ ಸಂಚಾರಕ್ಕೆ ಅನುಕೂಲತೆ ಮಾಡಿಕೊಂಡಿದ್ದರು. ಈ ನಡುವೆ ಪಿಎಂಜಿಎಸ್​ವೈ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ ಒಂದೆರಡು ಕಿ.ಮೀ. ರಸ್ತೆ ಸರಿಪಡಿಸಿ ನಂತರ ಇತ್ತ ಸುಳಿಯಲೇ ಇಲ್ಲ. ಈಗ ಪುನಃ ಹೊಂಡ ಬಿದ್ದು ಯಾವುದೇ ವಾಹನ ಓಡಾಡದಂತಾಗಿದೆ. ಅಲ್ಲದೆ, ಸಿದ್ದಾಪುರದಿಂದ ಸೊವಿನಕೊಪ್ಪ ಮಾರ್ಗವಾಗಿ ಹುಲ್ಕುತ್ರಿ ಶಾಲೆಯವರೆಗೆ ಬಂದು ಹೋಗುತ್ತಿದ್ದ ಸಾರಿಗೆ ಬಸ್ ಸ್ಥಗಿತಗೊಂಡಿದೆ. ಇದರಿಂದ ಈ ಭಾಗದ 50ಕ್ಕೂ ಹೆಚ್ಚು ಹಳ್ಳಿಯ ಜನತೆ, ಶಾಲೆ-ಕಾಲೇಜ್ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ.

ಡಾಂಬರೀಕರಣ ಯಾಕೆ ಆಗಿಲ್ಲ?: ಸೋವಿನಕೊಪ್ಪದಿಂದ ಮಾನಿಹೊಳೆ ಕ್ರಾಸ್​ವರೆಗಿನ ಕೆಲವು ಕಡೆಗಳಲ್ಲಿ ರಸ್ತೆ ಬದಿಯ ಗುಡ್ಡದ ಮಣ್ಣು ಶೇಡಿ ಮಣ್ಣಿನಿಂದ ಕೂಡಿದೆ. ಮಳೆಗಾಲದಲ್ಲಿ ಗುಡ್ಡ ಕುಸಿದು ರಸ್ತೆ ಹಾನಿಯಾಗಿರುತ್ತದೆ. ಈ ಕುರಿತು ತಾಂತ್ರಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕ್ರಮ ತಿಳಿಸಿದ್ದಾರೆ. ರಸ್ತೆ ಕುಸಿಯುವ ಹಾಗೂ ಮೇದು ಮಣ್ಣು ಇರುವ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಇನ್ನುಳಿದ ಕಡೆಗಳಲ್ಲಿ ಡಾಂಬರೀಕರಣ ಮಾಡುವಂತೆ ಇಲಾಖೆಗೆ ಸೂಚಿಸಿದ್ದಾರೆ. ವರದಿ ನೀಡಿ ಮೂರು ವರ್ಷ ಕಳೆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಂದ ರಸ್ತೆ ಇನ್ನೂ ಸುಧಾರಣೆಗೊಂಡಿಲ್ಲ ಎಂದು ಸೋವಿನಕೊಪ್ಪ ಗ್ರಾಪಂ ಸದಸ್ಯ ರಾಮಚಂದ್ರ ನಾಯ್ಕ ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.