Home Local ಶಿರಸಿ ಜಾತ್ರೆ ಪ್ರಾರಂಭ : ಸರ್ವಾಲಂಕಾರದಿಂದ ಕಂಗೊಳಿಸಿದ ಮಾರಿಕಾಂಬೆ.

ಶಿರಸಿ ಜಾತ್ರೆ ಪ್ರಾರಂಭ : ಸರ್ವಾಲಂಕಾರದಿಂದ ಕಂಗೊಳಿಸಿದ ಮಾರಿಕಾಂಬೆ.

SHARE

ಶಿರಸಿ: ಕರ್ನಾಟಕದ ಅತಿದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ಜಾತ್ರೆಗೆ ಮಂಗಳವಾರ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಮಾರಿಕಾಂಬಾ ದೇವಿಯನ್ನು ದೇವಾಲಯದಿಂದ ಗದ್ದುಗೆಗೆ ಕರೆದುಕೊಂಡು ಬರಲಾಗಿದ್ದು ಸಂಭ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದರು.

ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಭಕ್ತರು ಸರದಿಯಲ್ಲಿ ನಿಂತು ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.

ಮಾರಿಕಾಂಬಾ ದೇವಿಯನ್ನು ಶೋಭಾಯಾತ್ರೆ ಮೂಲಕ ಬಿಡಕಿ ಬಯಲಿನಲ್ಲಿ ನಿರ್ಮಾಣ ಮಾಡಿರುವ ಭವ್ಯ ವೇದಿಕೆಗೆ ಕರೆದುಕೊಂಡು ಬರಲಾಯಿತು. ಜಾತ್ರೆ ಮಾರ್ಚ್ 30 ರ ತನಕ ನಡೆಯಲಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾಗುವ ನಿರೀಕ್ಷೆ ಇದೆ.

ಮಾರಿಜಾತ್ರೆ ಎಂದು ಸ್ಥಳೀಯರಿಂದ ಕರೆಸಿಕೊಳ್ಳುವ ಈ ಜಾತ್ರೆ ಬೇರೆ ಕ್ಷೇತ್ರಗಳ ಜಾತ್ರೆ, ರಥೋತ್ಸವಗಳಿಗಿಂತ ವಿಭಿನ್ನ. ಬೇರೆಡೆ, ಮೂಲ ವಿಗ್ರಹ ದೇವಸ್ಥಾನದಲ್ಲೇ ಇದ್ದು ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ನಡೆಯುತ್ತದೆ. ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ.

ಏಳು ಅಡಿ ಎತ್ತರದ ಭವ್ಯ ವಿಗ್ರಹ, ವಜ್ರ, ನವರತ್ನ ಖಚಿತ ಸ್ವರ್ಣ ಕಿರೀಟ, ಹಾರ, ನೂಪುರ, ಕಡಗಗಳು, ಬೆಳ್ಳಿ ಪ್ರಭಾವಳಿ, ಎಂಟು ಕೈಗಳು, ಒಂದೊಂದು ಕೈಲೂ ಒಂದೊಂದು ವಿಶಿಷ್ಟ ಸ್ವರ್ಣಖಚಿತ ಆಯುಧ ಹಿಡಿದ ಸಿಂಹವಾಹಿನಿ, ಮಹಿಷಮರ್ದಿನಿ, ಕೆಂಬಣ್ಣದ ಮುಖ, ಅರಳಿದ ಕಣ್ಣುಗಳ ಲಕ್ಷಣ ನೋಡಿದರೆ ಸಾಕ್ಷಾತ್ ದುರ್ಗೆಯೇ ನಿಂತಂತೆ ಭಾಸವಾಗುತ್ತದೆ.