Home Article ಸೋಮವಾರದ ಒಪ್ಪತ್ತು ; ಅಂದು ಭಾರತಮಾತೆಯ ರಕ್ಷಣೆಗೆ, ಇಂದು ಗೋಮಾತೆಯ ಸಂರಕ್ಷಣೆಗೆ

ಸೋಮವಾರದ ಒಪ್ಪತ್ತು ; ಅಂದು ಭಾರತಮಾತೆಯ ರಕ್ಷಣೆಗೆ, ಇಂದು ಗೋಮಾತೆಯ ಸಂರಕ್ಷಣೆಗೆ

SHARE

ಸೋಮವಾರದ ಒಪ್ಪತ್ತು ; ಅಂದು ಭಾರತಮಾತೆಯ ರಕ್ಷಣೆಗೆ, ಇಂದು ಗೋಮಾತೆಯ ಸಂರಕ್ಷಣೆಗೆ
~~~~~~~~~~~~~~~~~~~~~~~~~

ಅಂದು 1965ರಲ್ಲಿ ಭೀಕರ ಬರಗಾಲಕ್ಕೆ ದೇಶತತ್ತರಿಸಿ ಹೋಗಿತ್ತು, ಗಡಿನಿಯಂತ್ರಣ ರೇಖೆಯನ್ನು ದಾಟಿ ದೇಶದಮೇಲೆ ದಾಳಿಮಾಡಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಶಾಸ್ತ್ರೀಜಿಯವರು ಯುದ್ಧವನ್ನು ಘೋಶಿಸಿದರು, ತತ್ಪರಿಣಾಮವಾಗಿ ಅಮೇರಿಕಾದಿಂದ ಆಮದಾಗುತ್ತಿದ್ದ ಗೋಧಿ ನಿಂತುಹೋಯಿತು. ಬರ – ಯುದ್ಧ – ಆಹಾರದ ಕೊರತೆ.. ದೇಶದ ಹೊಣೆಹೊತ್ತ ಲಾಲ್ ಬಹದ್ಧೂರ್ ಶಾಸ್ತ್ರಿಗಳು ಬಗ್ಗಲಿಲ್ಲ – ತಗ್ಗಲಿಲ್ಲ – ಜಗ್ಗಲಿಲ್ಲ, ಬದಲಿಗೆ ಎದೆಯುಬ್ಬಿಸಿ ರಾಷ್ಟ್ರರಕ್ಷಣೆಗಾಗಿ ಸಹಕಾರನೀಡುವಂತೆ ದೇಶವಾಸಿಗಳಿಗೆ ಕರೆನೀಡಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರವಾಸಿಗಳನ್ನುದ್ದೇಶಿಸಿ ಮಾತನಾಡಿದ ಶಾಸ್ತ್ರೀಜಿ “ಪಾಕಿಸ್ತಾನದೊಂದಿಗೆ ಯುದ್ಧ ಆರಂಭವಾಗಿದೆ, ಅಮೇರಿಕಾದಿಂದ ಗೋಧಿ ಆಮದಾಗುವುದು ನಿಂತಿದೆ. ದೇಶದ ಜನತೆ ಸಹಕರಿಸಬೇಕಿದೆ: ಒಂದೋ ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯ ಮಾಡಬಹುದು. ಅಥವಾ ಪ್ರತಿ ಸೋಮವಾರ ಉಪವಾಸ ಮಾಡುವ ಮೂಲಕ ನೆರವಾಗಬಹುದು, ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು” ಶಾಸ್ತ್ರೀಜಿಯವರ ಈ ಕರೆಗೆ ದೇಶ ಓಗುಟ್ಟಿತು, ಹಲವರು ಸೇನೆಗೆ ನೇರವಾಗಿ ಸಹಾಯ ಮಾಡಿದರು, ಲಕ್ಷಾಂತರ ಜನ ಸೋಮವಾರ ಒಪ್ಪತ್ತು/ಉಪವಾಸ ಆಚರಿಸುವ ಮೂಲಕ ಸಹಕಾರ ನೀಡಿದರು. ಶಾಸ್ತ್ರೀಜಿಯವರ ದೃಢ  ನಿರ್ಧಾರಕ್ಕೆ ಜನ ಬೆಂಬಲವಾಗಿ ನಿಂತರು,ಸೇನೆ ಪರಾಕ್ರಮ ಮೆರೆಯಿತು, ಬರ – ದಿಗ್ಬಂಧನಗಳ ಮಧ್ಯೆಯೇ ಭಾರತ ಯುದ್ಧ ಗೆದ್ದಿತು!

ಇಂದು 2017ರಲ್ಲಿಯೂ ನಮ್ಮ ನಾಡು ತೀವ್ರಬರಗಾಲವನ್ನು ಎದುರಿಸುತ್ತಿದೆ, ಅಂದು ಭಾರತಾಂಬೆಗೆ ಕಿರೀಟಪ್ರಾಯವಾಗಿರುವ ಕಾಶ್ಮೀರ ಕೈತಪ್ಪುವ ಭೀತಿ ಎದುರಾಗಿತ್ತು, ಇಂದು ಭಾರತೀಯ ಗೋವಂಶದ ಕುಡಿಗಳಾದ ಬರಗೂರು, ಆಲಂಬಾಡಿ ತಳಿಗಳು ಕಣ್ಮರೆಯಾಗುವ ಭೀತಿ ಎದುರಾಗಿದೆ. ಅಂದು ಸರ್ಕಾರ ಹಾಕಿದ ಗಡಿ ಬೇಲಿಯನ್ನು ಪಾಕಿಸ್ತಾನಿಗಳು ದಾಟಿ ಬಂದಿದ್ದು; ದೇಶದ ಸಾರ್ವಭೌಮತೆಗೆ ದಕ್ಕೆಯಾಗುವ ಜೊತೆಗೆ  ಕಾಶ್ಮೀರದ ಅಸ್ತಿತ್ವಕ್ಕೆ ಕುತ್ತುತಂದಿತ್ತು, ಆದರಿಂದು ಸರ್ಕಾರ ಮಲೆಮಹದೇಶ್ವರ ಬೆಟ್ಟಕ್ಕೆ ಹಾಕಿರುವ ಬೇಲಿಯೇ ಗೋವಂಶದ ಅಸ್ತಿತ್ವಕ್ಕೆ ಕುತ್ತುತರುತ್ತಿರುವುದು ಮಾತ್ರ ವಿಪರ್ಯಾಸ.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋಪಾಲಕರು ಪಾರಂಪರಿಕವಾಗಿ ಲಕ್ಷಾಂತರ ಗೋವುಗಳನ್ನು ಸಾಕುತ್ತಿದ್ದು, ಲಾಗಾಯ್ತಿನಿಂದ ಮಲೆಮಹದೇಶ್ವರ ಬೆಟ್ಟವನ್ನೇ ಮೇವಿಗಾಗಿ ಆಶ್ರಯಿಸಿದ್ದಾರೆ. ಆದರೀಗ ಅರಣ್ಯ ಸಂರಕ್ಷಣೆಯ ನೆಪದಲ್ಲಿ ಸರ್ಕಾರ ಬೆಟ್ಟಕ್ಕೆ ಬೇಲಿ ಹಾಕಿರುವುದು, ಬರದಿಂದ ತತ್ತರಿಸಿರುವ ಗೋವುಗಳ ಮೇವಿಗೆ ತಡೆಯಾಗಿದ್ದು, ಲಕ್ಷಾಂತರ ಗೋವುಗಳು ಹಾಗೂ ಅದನ್ನಾಶ್ರಯಿಸಿರುವ ಹಿಂದುಳಿದ ವರ್ಗಗಳ ಗೋಪಾಲಕರಿಗೆ ಮರಣಶಾಸನವೇ ಆಗಿದೆ. ಬೇಸಿಗೆಯ ಆರಂಭಕ್ಕೂ ಮುನ್ನವೇ, ಜನವರಿಯಲ್ಲಿ ಶ್ರೀರಾಮಚಂದ್ರಾಪುರಮಠ ಈ ಕುರಿತಾಗಿ ಸರ್ಕಾರವನ್ನು ಎಚ್ಚರಿಸಿತ್ತು, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಫೆಬ್ರವರಿಯಲ್ಲಿ ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಸ್ಥಳೀಯರು “ನಮ್ಮ ಬೆಟ್ಟ ನಮಗೆ ಬಿಡಿ” ಎಂದು ಆಂದೋಲನ ನಡೆಸಿದರು, 22,550 ಗೋಪಾಲಕರು ಹಸ್ತಾಕ್ಷರ ಸಲ್ಲಿಸಿ ಬೆಟ್ಟದಲ್ಲಿ ಗೋವುಗಳಿಗೆ ಮೇಯಲು ಅವಕಾಶ ಕಲ್ಪಿಸಿ, ಗೋವುಗಳಿಗೆ ಮೇವು ಒದಗಿಸಬೇಕು ಎಂದು ಆಗ್ರಹಿಸಿದರು. ಆದರೆ, ಜನರಿಂದ ಆಯ್ಕೆಯಾದ  ಸರ್ಕಾರ ಜನ-ಜಾನುವಾರುಗಳ ಮನವಿಗೆ ಸ್ಪಂದಿಸಲೇ ಇಲ್ಲ.

ಸರ್ಕಾರದ ಈ ಕ್ರಮವನ್ನು ಅರಣ್ಯ ಸಂರಕ್ಷಣೆ, ಪರಿಸರವಾದ ಎನ್ನಬೇಡಿ. Wildlife Protection Act 1972ರ ಪ್ರಕಾರ ಅಭಯಾರಣ್ಯಕ್ಕೆ ಜಾನುವಾರುಗಳ ಪ್ರವೇಶವನ್ನು ನಿರ್ಭಂಧಿಸಲೇಬೇಕು ಎಂದಿಲ್ಲ, ಅದು ಅರಣ್ಯಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಗೋವುಗಳು ಮೇಯಲು ಅವಕಾಶ ನೀಡಬಹುದಾಗಿದೆ. ಅಂತೆಯೇ, ಹಿಂದುಳಿದ ವರ್ಗಕ್ಕೆ ಸೇರಿದ ಬೆಟ್ಟದ ಗೋಪಾಲಕರಲ್ಲಿ ಲಕ್ಷಾಂತರ ಗೋವುಗಳಿದ್ದರೂ, ಹಾಲನ್ನೆಂದು ಮಾರಾಟ ಮಾಡದೇ, ಕೇವಲ ಸಗಣಿಯನ್ನೇ ಮಾರಾಟ ಮಾಡಿ ಅವರು ಜೀವನ ಸಾಗಿಸುತ್ತಿದ್ದರಾದರೂ, ಕಾಡಿನ ಒಳಗೆ ಗೋವು ಹಾಕಿದ ಸಗಣಿಗೆ ಎಂದು ಕೈಹಾಕಿದವರಲ್ಲ! ಇದು ಗೋಪಾಲಕರಿಗೆ ಕಾಡಿನ ಕುರಿತಾಗಿ ಇರುವ ಕಾಳಜಿಗೆ ಸಾಕ್ಷಿ. ಪಾರಂಪರಿಕವಾಗಿ ಮೇಯುತ್ತಾ ಬಂದಿರುವ ಗೋವುಗಳಿಂದಾಗಿ ಅರಣ್ಯ ನಾಶವಾಗುವ ಸಂಭವವೇ ಇಲ್ಲ, ಇನ್ನು ಗೋಪಾಲಕರಿಗೆ ಕಾಡಿನ ಕುರಿತು ಅತೀವ ಕಾಳಜಿ ಇರುವುದರಿಂದ ಅರಣ್ಯ ನಾಶದ ಕುರಿತಾಗಿ ಭಯಪಡುವ ಪ್ರಮೇಯವೇ ಇಲ್ಲ. ಆದರೆ ನಾಡನ್ನು ಪಾಲಿಸಬೇಕಾದ ಸರ್ಕಾರ ; ಅತ್ತ ಬೇಲಿಯನ್ನೂ ತೆಗೆಯದೇ, ಇತ್ತ ಗೋವುಗಳಿಗೆ ಸಮರ್ಪಕ ಮೇವನ್ನೂ ಒದಗಿಸದೇ, ಗೋವು-ಗೋಪಾಲಕರಿಗೆ ಬರವೆಂಬ ಗಾಯದ ಮೇಲೆ ಕೃತಕ ಬರದ ಬರೆಯನ್ನೂ ಎಳೆಯುತ್ತಿದೆ.

ಸರ್ಕಾರ ಕೈಕಟ್ಟಿ ಕುಳಿತರೇನಂತೆ, ಗೋಪ್ರೇಮಿಗಳು ಗೋವಂಶದ ವಿನಾಶವನ್ನು ನೋಡುತ್ತಾ ಕೂರಲಾದೀತೆ? ಸರ್ವಸಮಾಜದ ಗೋಪ್ರೇಮಿಗಳ ಸಹಕಾರದೊಂದಿಗೆ, ಭೀಕರ ಬರಗಾಲವನ್ನೆದುರಿಸುತ್ತಿರುವ ಗೋವುಗಳಿಗೆ ಮೇವು ಪೂರೈಸುವ “ಗೋಪ್ರಾಣಭಿಕ್ಷಾ” ಬೃಹದಾಂದೋಲನಕ್ಕೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಮುನ್ನುಡಿ ಹಾಕಿದರು. ಆಗ ಶಾಸ್ತ್ರೀಜಿ ದೆಹಲಿಯ ರಾಮಲೀಲಾದಲ್ಲಿ ದೇಶಪ್ರೇಮಿಗಳಿಗೆ ಕರೆನೀಡಿದರೆ, ಈಗ ರಾಘವೇಶ್ವರ ಶ್ರೀಗಳು ಬೆಂಗಳೂರಿನ ಶ್ರೀರಾಮಾಶ್ರದಲ್ಲಿ ಗೋಪ್ರೇಮಿಗಳಿಗೆ “ಸರಳ ಜೀವನ ನಡೆಸಿ, ಮಿಕ್ಕಿದ್ದನ್ನು ಗೋವಿನ ಮೇವಿಗೆ ನೀಡಿ. ಸೋಮವಾರ ಉಪವಾಸ ಆಚರಿಸುವ ಮೂಲಕ, ಆ ಹಣವನ್ನು ಗೋವುಗಳಿಗೆ ಮೇವನ್ನೊದಗಿಸಲು ನೀಡಿ”  ಎಂದು ಕರೆನೀಡಿದ್ದಾರೆ.

ಗೋಸಂರಕ್ಷಣೆಗಾಗಿ, Sri Raghaveshwara Bharathi Swamiji ನೀಡಿದ ಕರೆಗೆ ಗೋಪ್ರೇಮಿಗಳಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಲಕ್ಷಾಂತರ ಜನರು ಸೋಮವಾರದ ಒಪ್ಪತ್ತನ್ನು ಆಚರಿಸಿದರೆ, ಹಲವರು  ಮನೆಯ ಶುಭಕಾರ್ಯಗಳಲ್ಲಿ ವಿಶೇಷ ಸಿಹಿ ಪದಾರ್ಥಗಳನ್ನು ಮಾಡದೆಯೇ, ಹಣವನ್ನು ಉಳಿಸಿ ಗೋವಿನ ಮೇವಿಗೆ ನೀಡಿದ್ದಾರೆ. ಅದೆಷ್ಟೋ ಮಾತೆಯರು ಹಾಗೂ ಮಕ್ಕಳು ತಮ್ಮ ಅಭರಣಗಳನ್ನು ಗೋಪ್ರಾಣಭಿಕ್ಷೆಗೆ ಸಮರ್ಪಿಸಿದರೆ, ಹಲವರು ಗುಟ್ಕಾ – ತಂಬಾಕು ದುಶ್ಚಟಗಳನ್ನು ಬಿಟ್ಟು ; ವರ್ಷದಲ್ಲಿ ಅದಕ್ಕಾಗಿ ವ್ಯಯಿಸುತ್ತಿದ್ದ ಹತ್ತಿಪ್ಪತ್ತು ಸಾವಿರ ರೂಪಾಯಿಯನ್ನು ಗೋವಿಗೆ ನೀಡಿದ್ದಾರೆ! ಜಾಲತಾಣಗಳಲ್ಲೂ ಸೋಮವಾರದ ಒಪ್ಪತ್ತು ಸದ್ದು ಮಾಡಿದ್ದು, ರಾಜ್ಯ- ಹೊರ ರಾಜ್ಯ – ಹೊರದೇಶಗಳ ಲಕ್ಷಾಂತರ ಗೋಪ್ರೇಮಿಗಳು #GiveUpAMeal ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ಊಟದ ಮೊತ್ತವನ್ನು ಗೋವಿನ ಮೇವಿಗೆ ನೀಡುತ್ತಿದ್ದಾರೆ.

ಅಂದು ದೇಶ ರಕ್ಷಣೆಗಾಗಿ, ಶಾಸ್ತ್ರೀಜಿ ಆರಂಭಿಸಿದ ಸೋಮವಾರದ ಒಪ್ಪತ್ತು, ಶಾಸ್ತ್ರಿ ಒಪ್ಪತ್ತು ಎಂಬ ಹೆಸರಿನೊಂದಿಗೆ ಇಂದೂ ಹಲವರು ಆಚರಿಸುತ್ತಿದ್ದಾರೆ. ಇದೀಗ ಗೋಸಂರಕ್ಷಣೆಗಾಗಿ ಆರಂಭವಾಗಿರುವ ಒಪ್ಪತ್ತಿಗೂ ಗೋಪ್ರೇಮಿಗಳಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದ್ದು, ಕೆಲವು ದಿನಗಳ ಹಿಂದೆ ಟ್ವಿಟ್ಟರ್ ನಲ್ಲಿ ನಡೆದ #GiveUpAMeal ಅಭಿಯಾನ ರಾಷ್ಟಮಟ್ಟದ ಟ್ರೆಂಡ್ ಆಗಿ; ಒಂದೇ ದಿನದಲ್ಲಿ ದೇಶ – ಹೊರದೇಶಗಳ  1.02 ಮಿಲಿಯನ್ ಜನರನ್ನು ತಲುಪಿದ್ದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಯಾವುದೇ  ಮೂಲಧನ ಇಲ್ಲದೇ ಆರಂಭವಾದ “ಗೋಪ್ರಾಣಭಿಕ್ಷಾ” ಆಂದೋಲನ, ಸಾರ್ವಜನಿಕರ ಸಹಕಾರದೊಂದಿಗೆ; ಇಂದಿನ ವರೆಗೆ ಸುಮಾರು 2,200 ಟನ್ ಮೇವನ್ನು ಮಲೆಮಹದೇಶ್ವರ ಬೆಟ್ಟದ ಗೋವುಗಳಿಗೆ ವಿತರಿಸಿದೆ! ಪ್ರತಿದಿನ ಬೆಟ್ಟದ ಸುತ್ತಮುತ್ತದ 15 ಕೇಂದ್ರಗಳಲ್ಲಿ 30,000 ಸಾವಿರಕ್ಕೂ ಅಧಿಕ ಗೋವುಗಳಿಗೆ ಮೇವನ್ನು ನೀಡಲಾಗುತ್ತಿದೆ. ಒಟ್ಟು 5.1 ಕೋಟಿ ರೂಪಾಯಿ ಈ ಆಂದೋಲನಕ್ಕೆ ಅಂದಾಜಿಸಲಾಗಿದ್ದು,  ಅಪರೂಪದ ಬರಗೂರು, ಆಲಂಬಾಡಿ ಗೋತಳಿಗಳನ್ನು ರಕ್ಷಿಸಲಾಗುತ್ತಿದೆ.

ಅಂದು ಬರ ಹಾಗು ದಿಗ್ಬಂಧನಗಳ ನಡುವೆ ದೇಶವನ್ನು ರಕ್ಷಿಸಲು ಶಾಸ್ತ್ರೀಜಿ ದೇಶಪ್ರೇಮಿಗಳಿಗೆ ಯಾವ ಎರಡು ಆಯ್ಕೆಗಳನ್ನು ನೀಡಿದ್ದರೋ, ಇಂದು ಬರ ಹಾಗೂ ಸರ್ಕಾರ ಸೃಷ್ಟಿಸಿರುವ ಕೃತಕ ಬರಗಳಿಗೆ ಪ್ರತಿಯಾಗಿ ಸ್ಥಳೀಯ ಗೋತಳಿಗಳನ್ನು ಸಂರಕ್ಷಿಸಿಕೊಳ್ಳಲು ಗೋಪ್ರೇಮಿಗಳಿಗೆ ಅದೇ ಎರಡು ಆಯ್ಕೆಗಳಿವೆ ;

* ಗೋವಿನ ಮೇವಿಗೆ ನೇರವಾಗಿ ಧನಸಹಾಯ ಅಥವಾ ಮೇವಿನ ರೂಪದ ಸಹಾಯ ಮಾಡುವುದು.

* ಸೋಮವಾರ ಒಪ್ಪತ್ತು ಮಾಡುವ ಮೂಲಕ ಆ ಹಣವನ್ನು ಗೋವಿನ ಮೇವಿಗೆ ಒದಗಿಸುವುದು.
( ಗೋವಿನ ಮೇವಿಗೆ ನೆರವಾಗಲು ’ಕಾಮದುಘಾ’ದ ಬ್ಯಾಂಕ್ ಖಾತೆ ವಿವರ – A/C: 09925001016901, IFSC: KARB0000099, Karnataka Bank, Srinagara, Bengaluru | ಸಂಪರ್ಕ 9449595206)

ನಾಡಿನಲ್ಲಿ ಬರದ ಪರಿಸ್ಥಿತಿಯ ಜೊತೆಗೆ ಬೆಟ್ಟದ ತಪ್ಪಲಿನಲ್ಲಿ ಗೋವು ಹಾಗೂ ಮೇವಿನ ನಡುವೆ ಸರ್ಕಾರದ ಬೇಲಿಯೂ ಹಾಗೆಯೇ ಇದೆ. ನಮ್ಮ ನಾಡಿನ ಗೋಸಂಪತ್ತನ್ನು ಸಮರೋಪಾದಿಯಲ್ಲಿ ರಕ್ಷಿಸಿಕೊಳ್ಳಬೇಕಿದ್ದು, ನಮ್ಮ ಒಪ್ಪತ್ತೂಟದ ಹಣ ಗೋವುಗಳಿಗೆ ಮೇವನ್ನು ಒದಗಿಸಲು ಅತ್ಯವಶ್ಯವಾಗಿದೆ. ಹಾಗೆಂದು ದೇಹಾರೋಗ್ಯದ ಬಗ್ಗೆ ಭಯ ಪಡಬೇಕಾಗಿಲ್ಲ, ಉಪವಾಸದಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ, ಹೊರತಾಗಿ ಅದು ಪೂರಕವೇ ಆಗಿದ್ದು, ’ಲಂಘನಂ ಪರಮೌಷಧಂ’ ಎಂದು ಆಯುರ್ವೇದವೇ ಸಾರಿ ಹೇಳಿದೆ.  ಅದೆಲ್ಲಕ್ಕಿಂತ ಮಿಗಿಲಾಗಿ, ಗೋವಿನ ಹಾಲನ್ನು ಕುಡಿದು ಬೆಳೆದ ನಾವು, ಅದು ಮೇವಿಲ್ಲದೇ ಸಾಯುತ್ತಿರುವಾಗ ಹೊಟ್ಟೆ ತುಂಬ ಊಟಮಾಡಿ ನೆಮ್ಮದಿಯಿಂದ ಇರಲಾದರೂ ಹೇಗೆ ಸಾಧ್ಯ?

ಕೃಪೆ. ನಾವಿದ್ದೇವೆ ಬಳಗ.