Home Local ಕಾರವಾರದ ದೊಡ್ಡ ಗ್ರಾಮದ ಕಸ ವಿಲೇವಾರಿಗೇ ಜಾಗ ಇಲ್ಲವೇ? ಊರೆಲ್ಲ ಹರಡುತ್ತಿದೆ ದುರ್ವಾಸನೆ!

ಕಾರವಾರದ ದೊಡ್ಡ ಗ್ರಾಮದ ಕಸ ವಿಲೇವಾರಿಗೇ ಜಾಗ ಇಲ್ಲವೇ? ಊರೆಲ್ಲ ಹರಡುತ್ತಿದೆ ದುರ್ವಾಸನೆ!

SHARE

ಕಾರವಾರ: ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯ್ತಿಗೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಸಿಗದೇ ಊರೆಲ್ಲ ದುರ್ವಾಸನೆ ಹರಡಿದೆ. ಗ್ರಾಮ ಪಂಚಾಯ್ತಿ ಕಚೇರಿ, ಅಂಗನವಾಡಿ, ಮೀನು, ಮಾಂಸ ಮತ್ತು ತರಕಾರಿ ಮಾರುಕಟ್ಟೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಗಿಕೊಂಡೇ ಇರುವ ಜಾಗದಲ್ಲಿ ಇಡೀ ಊರಿನ ತ್ಯಾಜ್ಯ ಸುರಿಯಲಾಗುತ್ತಿದೆ.

ಗ್ರಾಮ ಪಂಚಾಯ್ತಿ ಕಚೇರಿ ಕಟ್ಟಡದ ಹಿಂಭಾಗದಲ್ಲೇ ತ್ಯಾಜ್ಯ ರಾಶಿ ಕೊಳೆಯುತ್ತಿದೆ. ಅದರ ಪಕ್ಕದಲ್ಲಿರುವ ಹೊಂಡದ ನೀರು ಕೂಡ ಸಂಪೂರ್ಣವಾಗಿ ಮಲಿನವಾಗಿ ಬಳಕೆಗೆ ಸಾಧ್ಯವೇ ಇಲ್ಲದಂತಾಗಿದೆ. ಅಂಗನವಾಡಿಯ ದಾರಿಯಲ್ಲೇ ಸತ್ತು ಬಿದ್ದಿದ್ದ ನಾಯಿಮರಿಯ ಕಳೇಬರವನ್ನು ಹದ್ದು, ಕಾಗೆಗಳ ಹಿಂಡು ಕುಕ್ಕಿ ತಿನ್ನುತ್ತಿದ್ದರೂ ಅದನ್ನು ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ, ಸ್ಥಳೀಯ ನಿವಾಸಿಯೂ ಆಗಿರುವ ಮೋಹನ್ ಕೃಷ್ಣ ಕಾಂಬ್ಳೆ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಗ್ರಾಮ ಪಂಚಾಯ್ತಿ ಕಚೇರಿಯೇ ಸ್ವಚ್ಛವಾಗಿಲ್ಲ. ಅಂಥದ್ದರಲ್ಲಿ ಇವರು ಊರಿನ ನೈರ್ಮಲ್ಯವನ್ನು ಹೇಗೆ ಕಾ‍ಪಾಡುತ್ತಾರೆ? ಹತ್ತು ನಿಮಿಷ ಕೂಡ ಇಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇಲ್ಲಿ ಬಂದವನು ಪಕ್ಕದಲ್ಲೇ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮೊದಲು ಹತ್ತಾರು ಮಕ್ಕಳು ಅಂಗನವಾಡಿಗೆ ಬರುತ್ತಿದ್ದರು. ಇಲ್ಲಿನ ಗಲೀಜಿಗೆ ಅಂಜಿದ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳುಹಿಸುತ್ತಿಲ್ಲ. ಈಗ ಬೆರಳೆಣಿಕೆಯ ಹಾಜರಾತಿಯಿದೆ’ ಎನ್ನುತ್ತಾರೆ ಅವರು.

ಮತ್ತೊಬ್ಬ ನಿವೃತ್ತ ಅಧಿಕಾರಿ ಎಫ್.ಡಿ.ಶೇಖ್, ‘ವ್ಯಾಪಾರಿಗಳಿಂದ ಗ್ರಾಮ ಪಂಚಾಯ್ತಿಯು ಬಾಡಿಗೆ ವಸೂಲಿ ಮಾಡುತ್ತದೆ. ಆದರೆ, ತ್ಯಾಜ್ಯ ಹಾಕಲು ಜಾಗವಿಲ್ಲ. ಒಂದೇಕಡೆ ಮಾರುಕಟ್ಟೆ, ಅಂಗನವಾಡಿ, ಆರೋಗ್ಯ ಕೇಂದ್ರವನ್ನು ಆರಂಭಿಸಿದ್ದೇಕೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಹೇಳಿದರು.

‘ಚಿತ್ತಾಕುಲವು ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯ್ತಿಯಾಗಿದೆ. 17 ಸಾವಿರ ಜನಸಂಖ್ಯೆಯಿರುವ ಈ ಗ್ರಾಮ ಪಂಚಾಯ್ತಿಯಲ್ಲಿ 36 ಸದಸ್ಯರಿದ್ದಾರೆ. ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಿ ಎಂದು ಐದು ವರ್ಷಗಳಿಂದ ಠರಾವು ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೆ ಪ್ರಯೋಜನವಾಗುತ್ತಿಲ್ಲ. ಹಾಗೇನಾದರೂ ಆಗಿದ್ದರೆ ಸ್ವಲ್ಪ ಹೆಚ್ಚಿನ ಅನುದಾನ ಸಿಕ್ಕಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುತ್ತಿತ್ತು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ತಾಂಡೇಲ್ ಪ್ರತಿಕ್ರಿಯಿಸಿದರು.

‘ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ₹ 20 ಲಕ್ಷ ಮಂಜೂರಾಗಿದೆ. ಆದರೆ, ಗ್ರಾಮದಲ್ಲಿ ಜಾಗವೇ ಸಿಗುತ್ತಿಲ್ಲ’ ಎಂದು ರಾಜು ತಾಂಡೇಲ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ‘ಎರಡು ಎಕರೆ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಗ್ರಾಮ ಪಂಚಾಯ್ತಿಯಿಂದ ಮನವಿ ಮಾಡಲಾಗಿದೆ.

ಲಾರಿಗಳನ್ನು ಕಳುಹಿಸಿಕೊಟ್ಟರೆ ಅದರ ಬಾಡಿಗೆ ಕೊಡುತ್ತೇವೆ ಎಂದು ಕಾರವಾರ ನಗರಸಭೆಗೂ ಪತ್ರ ಬರೆಯಲಾಗಿದೆ. ಕನಿಷ್ಠ ಮೂರು ತಿಂಗಳಿಗೆ ಒಮ್ಮೆಯಾದರೂ ವಿಲೇವಾರಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಆದರೆ, ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.