Home Local ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ ‘ಗೋಸ್ವರ್ಗ’ಕ್ಕೆ ಶಂಕುಸ್ಥಾಪನೆ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ ‘ಗೋಸ್ವರ್ಗ’ಕ್ಕೆ ಶಂಕುಸ್ಥಾಪನೆ.

SHARE

ಉತ್ತರಕನ್ನಡ : ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ ಮಲೆನಾಡುಗಿಡ್ಡ ಗೊತಳಿಯ ಸಂರಕ್ಷಣೆ, ಸಂವರ್ಧನೆಯ ಮಹಾ ಉದ್ದೇಶದ, ಸಹಸ್ರ ಗೋವುಗಳ ರಕ್ಷಣೆ – ಗೋವು ಲಕ್ಷ್ಮೀ ಎಂಬ ಪರಿಕಲ್ಪನೆಯ, ಮಾದರಿಯಾದ ಹಾಗೂ ವಿಶಿಷ್ಟವಾದ ಗೋಶಾಲೆ ‘ಗೋಸ್ವರ್ಗ’ದ ಶಂಕುಸ್ಥಾಪನೆ ನೆರವೇರಿತು. ನಂದೀಗುಡಿ ಶ್ರೀನಂದೀಶ್ವರ ಶಿವಾಚಾರ್ಯ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದರು. ಅಂದಹಾಗೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ರಾಮದೇವ ಭಾನ್ಕುಳಿಮಠದಲ್ಲಿ ಈ ಯೋಜನೆ ಸಾಕಾರಗೊಳ್ಳತ್ತಿದೆ.

‘ಗೋಸ್ವರ್ಗ’ದ ಮಧ್ಯದಲ್ಲಿ ೫*೫ ಅಡಿಗಳಷ್ಟು ಪವಿತ್ರ ತೀರ್ಥಕುಂಡ , ೩೨ ಅಡಿ ಅಗಲವಾದ ಮಂಟಪದ ಸುತ್ತಲೂ ಕೆರೆ ಹಾಗೂ ಅದರ ಸುತ್ತಲೂ ಗೋಶಾಲೆಯಾಗಿ ಜಗತ್ತಿನಲ್ಲೇ ವಿಶಿಷ್ಟವಾಗಿ ನಿರ್ಮಾಣಗೊಳ್ಳುತ್ತಿದೆ. ಹಾಗೇ ಅತೀ ಶ್ರೇಷ್ಟವಾದ ಮಲೆನಾಡು ಗಿಡ್ಡ ಗೋತಳಿಯ ಅಭಿವೃದ್ದಿ-ಸಂರಕ್ಷಣೆಯ ಮಹತ್ತರ ಯೋಜನೆಯಾಗಿದೆ.

ನಂದಿಗುಡಿ ಶ್ರೀನಂದೀಶ್ವರ ಶ್ರೀಗಳು ‘ಗೋಸ್ವರ್ಗ’ದ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.

ಗೋವು ತಾಯಿ ಮತ್ತು ಪೂಜನೀಯವಾಗಿದೆ. ಪೂಜನೀಯ ಮಾತ್ರವಲ್ಲದೇ ಗೋವು ಲಕ್ಷ್ಮೀ ಎಂದು ಪುರಾಣಗಳಲ್ಲಿಯೂ ಉಲ್ಲೇಖವಿದೆ. ಗೋವು ನಿಜವಾದ ಲಕ್ಷ್ಮಿಯೇ ಆಗಿದೆ. ಗೋವಧಾಜನ್ಯ ವಸ್ತುಗಳನ್ನು ತ್ಯಜಿಸಿ, ಜೀವಂತ ಗೋವೇ ಪ್ರೀತಿಯಿಂದ ನೀಡುವ ಗೋಮೂತ್ರ, ಗೋಮಯ ಮತ್ತು ಹಾಲು ಇವುಗಳನ್ನು ಉಪಯೋಗಿಸಿ ತಯಾರಾದ ಗವ್ಯ ಉತ್ಪನ್ನಗಳನ್ನು ಹೆಚ್ಚು ಜನರು ಬಳಸುವಂತಾಗಬೇಕು. ಆ ಮೂಲಕ ಗೋವಿಗೆ ಹೆಚ್ಚು ಬೆಲೆ ಬಂದಂತಾಗುತ್ತದೆ. ಹಣದ ಹಿಂದೇ ಇರುವ ಆಧುನಿಕ ಜಗತ್ತಿಗೆ ಹಾಲು, ಮೊಸರು, ತುಪ್ಪ, ಗೋಮೂತ್ರ-ಗೋಮಯ ಇವುಗಳನ್ನು ವ್ಯಾಪರದ ರೂಪಕ್ಕೆ ತಂದು ಗೋವು ನಿಜವಾದ ಲಕ್ಷ್ಮೀ ಎಂಬುದನ್ನು ಜಗತ್ತಿಗೇ ತೋರಿಸಬೇಕಾಗಿದೆ. ಇಂತಹ ಕೆಲಸ ‘ಗೋಸ್ವರ್ಗ’ ಎಂಬ ಗೋಶಾಲೆಯಲ್ಲಿ ನಡೆಯುತ್ತದೆ. ಇಂತಹ ಶ್ರೇಷ್ಠ ಗೋಶಾಲೆಯ ಶಂಕುಸ್ಥಾಪನೆ ನೆರವೇರಿಸಿದ್ದು ಪುಣ್ಯದ ಕೆಲಸವಾಗಿದೆ ಹಾಗೇ ಸಂತೋಷವೂ ಆಗಿದೆ. ಆದಷ್ಟುಬೇಗ ‘ಗೋಸ್ವರ್ಗ’ವು ಲೋಕಾರ್ಪಣೆಗೊಳ್ಳಲಿ ಎಂದು ಶ್ರೀಗಳು ಶುಭಕೋರಿದರು.

ಕಾಮಧುಘಾ ಟ್ರಸ್ಟ್’ನ ಅಧ್ಯಕ್ಷರಾದ ಡಾ.ವೈ.ವಿ.ಕೃಷ್ಣಮೂರ್ತಿ ಮಾತನಾಡಿ, ರಾಘವೇಶ್ವರಭಾರತೀ ಶ್ರೀಗಳ ಸಂಕಲ್ಪದಂತೆ ಇಡೀರಾಜ್ಯದ ಗೋವುಗಳಿಗೇ ಸ್ವರ್ಗವಾಗಿ ಈ ಗೋಶಾಲೆಯನ್ನು ನಿರ್ಮಿಸಲಾಗುತ್ತಿದೆ. ಗೋವುಗಳಿಗೆ ಸ್ವಚ್ಛಂದವಾಗಿ ಹಾಗೂ ಸಹಜವಾಗಿ ಬದುಕುವ ವ್ಯವಸ್ಥೆ ಮಾಡಲಾಗುತ್ತದೆ. ಗೋಆಧಾರಿತ ಕೃಷಿ ಮಾತ್ರವಲ್ಲದೇ ಗೋಆಧಾರಿತ ಜೀವನದ ತರಬೇತಿ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಲಾಗುವುದು. ದೇಶದ ಪ್ರಮುಖ ಪ್ರೇಕ್ಷಣೀಯ ಕ್ಷೇತ್ರಗಳಲ್ಲೊಂದಾಗಿ ವಿಶಿಷ್ಟ ಕ್ಷೇತ್ರವಾಗಿ ಬದಲಾಗುವುದಿದೆ. ಎಲ್ಲಾ ಗೋಭಕ್ತರು, ಗೋಪಾಲಕರು, ನಾಡಿನ ಸಂತರು, ಉದಗಯಮಿಗಳು, ಗಣ್ಯರು ಸೇರಿದಂತೆ ಸಮಾಜದ ಎಲ್ಲರೂ ಸೇರಿ ಮಹತ್ತರ ಯೋಜನೆಯನ್ನು ಸಾಕಾರಗೊಳಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಶಶಿಭೂಷಣ ಹೆಗಡೆ, ಜಿಲ್ಲಾಪಂಚಾಯತ್ ಸದಸ್ಯರಾದ ನಾಗರಾಜ ನಾಯ್ಕ್, ಹನುಮಂತ ನಾಯ್ಕ್ ಹುಲಿಮನೆ, ಸಹಕಾರಿ ಮಾರಾಟ ಮಂಡಲದ ನಿರ್ದೇಶಕರಾದ ಎಸ್.ಬಿ.ಗೌಡರ್, ಸಿದ್ದಾಪುರ ಟಿ.ಎಮ್.ಎಸ್ ಅಧ್ಯಕ್ಷರಾದ ಅರ್ಥ.ಎಮ್.ಹೆಗಡೆ ಬಾಳೆಸರ, ಕೋಟೆ ಆಂಜನೇಯ ದೇವಾಲಯದ ವಿ.ಎನ್.ನಾಯ್ಕ, ಸಿದ್ದಾಪುರ ಗೋಪರಿವಾರ ಆರ್.ಜಿ.ಪೈ ಮಂಜೈನ್ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.