Home Article ನಮ್ಮ ಮಕ್ಕಳ ತಲೆಗೆ ಬರಗೂರು ಏನು ತುಂಬುತ್ತಿದ್ದಾರೆ?

ನಮ್ಮ ಮಕ್ಕಳ ತಲೆಗೆ ಬರಗೂರು ಏನು ತುಂಬುತ್ತಿದ್ದಾರೆ?

SHARE


                                                                ಲೇಖಕರು :-  ಪ್ರವೀಣ. ಬಿ. ಹೆಗಡೆ .ಕುಮಟಾ
ಹಲವು ದಶಕಗಳಿಂದ ಕೇಳಿಬರುತ್ತಿರುವ ಆರೋಪ ಪಠ್ಯ ಪುಸ್ತಕಗಳ ಕೇಸರೀಕರಣವಾಗಿದೆ ಎನ್ನುವದು. ಈ ಕೇಸರೀಕರಣ ಶಬ್ದ ಹಲವುಸಾರೆ ಹಲವು ರಾಜಕಾರಣಿಗಳ ಬಾಯಲ್ಲಿ ಬಂದುಹೋದರೂ ಅದಕ್ಕೊಂದು ರೂಪವಿಲ್ಲ. ಯಾವ ಕಾರಣಕ್ಕಾಗಿ ಪಠ್ಯ ಕೇಸರೀಕರಣಗೊಂಡಿದೆ ಎಂದು ಹೇಳುತ್ತಿದ್ದೀರಿ ಎಂದು ಆರೋಪಿಸುವವರನ್ನು ಕೇಳಿದರೆ ಅವರು ಕೊಡುವ ಉತ್ತರ ರಾಮ ಕೃಷ್ಣರ ಕುರಿತು ಪಾಠಗಳಿವೆ, ವಿವೇಕಾನಂದರ, ಶಂಕರಾಚಾರ್ಯರ ಕುರಿತು ವಿವರವಿದೆ ಎನ್ನುತ್ತಾರೆ. ಈ ನೆಲದ ಸಂಸ್ಕøತಿ, ಆಗಿ ಹೋದ ಇತಿಹಾಸ, ಆದರ್ಶ ಮೆರೆದ ವ್ಯಕ್ತಿಗಳ ಕುರಿತು ನಮ್ಮ ಮಕ್ಕಳಿಗೆ ಹೇಳುವದು ಕೇಸರೀಕರಣವಾಗುತ್ತದೆಯೆಂದರೆ ಬೆತ್ಲಹೇಮ್ ಬಗ್ಗೆ, ಮೆಕ್ಕಾ ಮದೀನಾ ಬಗ್ಗೆ ಕಾರ್ಲಮಾಕ್ರ್ಸ ಬಗ್ಗೆ ಹೇಳುವದು ಮಾತ್ರ ಇತಿಹಾಸವಾಗುತ್ತದೆಯೆಂದು ವಾದಿಸುವದು ಒಣ ರಾಜಕೀಯವಲ್ಲದೆ ಇನ್ನೇನು? ತಮ್ಮ ರಾಜಕೀಯ ಸಿದ್ಧಾಂತಗಳನ್ನು ಮಕ್ಕಳ ಮುಗ್ಧ ಮನಸ್ಸಿಗೆ ತುಂಬಿ ರಾಜಕಾರಣ ಮಾಡುವದನ್ನು ಪಾಲಕರುಗಳಾದ ನಾವೆಲ್ಲ ಸುಮ್ಮನೆ ನೋಡುತ್ತ ಕುಳಿತಕೊಳ್ಳಬೇಕೆ? ನಮ್ಮ ಮಕ್ಕಳಿಗೆ ಯಾವುದನ್ನು ಕಲಿಸಬೇಕು,ಯಾವುದು ಬೇಡವೆಂದು ನಿರ್ಧರಿಸುವವರು ಯಾರು?
ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣ ಆದರ್ಶವಾಗಿರಬೇಕು. ನಮ್ಮ ಮಕ್ಕಳು ಸಮಾಜಕ್ಕೆ ಕೊಡುಗೆಯಾಗಬೇಕು, ಸಮಾಜಕಂಟಕನಾಗಬಾರದು ಎಂದು ಎಲ್ಲಾ ಪಾಲಕರೂ ಬಯಸುತ್ತಾರೆ. ಭಾರತ ರಾಮನಾದರ್ಶವನ್ನು ಪಾಲಿಸುವದು ಹೇಗೆ ಕೋಮುವಾದವಾಗುತ್ತದೆ? ವಿವೇಕಾನಂದರ ತತ್ವಬೋಧನೆ ರಾಷ್ಟ್ರಪ್ರೇಮವನ್ನೂ ಕೋಮುವಾದವೆಂದು ಕರೆಯುವವರು ರಾಮನನ್ನು ಮತ್ತು ವಿವೇಕಾನಂದರನ್ನೂ ಪಠ್ಯದಿಂದ ಹೊರಹಾಕಿ ಬಾಬರನನ್ನು ಅಥವಾ ಟಿಪ್ಪೂನಂತವರನ್ನು ನಮ್ಮ ಮಕ್ಕಳ ಆದರ್ಶವನ್ನಾಗಿ ನಿಲ್ಲಿಸುತ್ತಾರೆನ್ನುವದನ್ನು ನಾವು ಒಪ್ಪಿಕೊಳ್ಳೋಣವೇ? ಇಷ್ಟಕ್ಕೂ ಆದರ್ಶಕ್ಕೆ ಧರ್ಮ,ಜಾತಿಯ ಲೇಪ ಹಚ್ಚಿ ಮಕ್ಕಳ ಮುಗ್ಧ ಮನಸ್ಸಿನಮೇಲೆ ಪರಿಣಾಮಬೀರುವದನ್ನು ಶಿಕ್ಷಣವೆಂದು ಹೇಗೆ ಕರೆಯೋಣ? ನಾವೆಲ್ಲ ಈ ಮಣ್ಣಿನ ಸಂಸ್ಕøತಿಯನ್ನು ಪಾಲಿಸಿಕೊಂಡು ನಮ್ಮ ನಂಬಿಕೆಯಂತೆ ನನ್ನ ಮಗ ರಾಮನಾಗಲಿ ಎಂದು ಬಯಸುವದು ತಪ್ಪಲ್ಲ. ಆದರೆ ತಮ್ಮ ರಾಜಕೀಯ ಸಿದ್ದಾಂತಕ್ಕಾಗಿ ರಾಮನನ್ನು ಹಳಿಯುವವರು ನಮ್ಮ ಆದರ್ಶವನ್ನು ಬದಿಗಿಟ್ಟು ತಮ್ಮ ತೆವಲನ್ನು ನಮಗೆ ಆದರ್ಶವೆಂದು ಬೋಧಿಸುವದನ್ನು ನಾವು ಒಪ್ಪಬೇಕೆ?
ನನಗೆ ಭಗವದ್ಗೀತೆ ಆದರ್ಶ. ಹೌದು, ಭಗವದ್ಗೀತೆಯೇ ಆದರ್ಶ.ಭಗವದ್ಗೀತೆಯನ್ನು ಅರ್ಥೈಸಿಕೊಳ್ಳಲು ಬಾರದ ಅಥವಾ ತನ್ನ ಸ್ವಾರ್ಥದ ಅಥವಾ ತತ್ವವಿರೋಧಿ ನಿಲುವಿನ ಕಾರಣದಿಂದ ಬುದ್ಧಿಜೀವಿಯೊಬ್ಬ ತನ್ನ ಬಾಯಿತೆವಲಿಗಾಗಿ ಸುಡುತ್ತೇನೆ ಎಂದರೆ ಸಂವಿಧಾನದಲ್ಲಿ ನನಗೆ ಕೊಡಮಾಡಿದ ಹಕ್ಕಿನ ಉಲ್ಲಂಘನೆಯಾಗುತ್ತದೆ. ಭಗವದ್ಗೀತೆಯನ್ನು ನಂಬುವದು ನನ್ನ ಧಾರ್ಮಿಕ ಸ್ವಾತಂತ್ರ್ಯ. ನನ್ನ ಮಕ್ಕಳು ಕಲಿಯುವ ಪಠ್ಯದಲ್ಲಿ ಭಗವದ್ಗೀತೆಯನ್ನು ಮೂಲೆಗಿಟ್ಟು ಕುರಾನ್ ಪಠಣಮಾಡು, ಪೈಗಂಬರ್ ಜೀವನಚರಿತ್ರೆ ಓದು ಎಂದು ಮನೆಪಾಠವನ್ನು ಕೊಟ್ಟು ಓದಿಸುವದು ನನ್ನ ಧಾರ್ಮಿಕ ನಂಬಿಕೆಯ ಮೇಲೆ ಮಾಡಿದ ದಾಳಿಯೆಂದೇ ನಾನು ತಿಳಿಯುತ್ತೇನೆ. ಭಾರತ ಜಾತ್ಯಾತೀತ ರಾಷ್ಟ್ರ. ನನ್ನ ಮಗ ಅಥವಾ ಮಗಳು ಎಲ್ಲ ಧರ್ಮದ ಕುರಿತೂ ತಿಳುವಳಿಕೆ ಹೊಂದಬೇಕು.ಹಾಗಂತ ನಾನು ಪಾಲಿಸುವ ಧರ್ಮವನ್ನು ಬಿಟ್ಟು ಅಥವಾ ಅದರ ಕುರಿತು ಹೇಳದೆ ಇನ್ನೊಂದು ಧರ್ಮದ ಉಪದೇಶಗಳನ್ನು ನನ್ನ ಮಕ್ಕಳ ತಲೆಗೆ ತುಂಬುವದನ್ನು ಮತಾಂತರದ ಪ್ರಯತ್ನವೆಂದೇ ನಾನು ತಿಳಿಯುವದರಲ್ಲಿ ತಪ್ಪೇನು ? ಧರ್ಮಾತೀತ ದೇಶದಲ್ಲಿ ಎಲ್ಲಾ ಧರ್ಮದ,ಜಾತಿಯ ಜನರೂ ಅವರವರ ಆಚರಣೆಗಳನ್ನು, ಧಾರ್ಮಿಕ ನಂಬಿಕೆಗಳನ್ನು, ಸಂಪ್ರದಾಯಗಳನ್ನು ಪಾಲಿಸಿ ತಮ್ಮ ಪೀಳಿಗೆಗೆ ದಾಟಿಸಿ ಹೋಗುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಹಾಗೆಯೇ ಮುಸ್ಲೀಮರು ರಮ್‍ಜಾನ್ ಉಪವಾಸ ಮಾಡಲಿ, ಬ್ರಾಮ್ಹಣರು ಹೋಮ ಹವನ ಮಾಡಲಿ, ಜೈನ ಸನ್ಯಾಸಿಗಳು ದಿಗಂಬರರಾಗಿರಲಿ,ಅದೆಲ್ಲ ಅವರವರ ಧಾರ್ಮಿಕ ನಂಬಿಕೆಗಳು. ಆದರೆ ಹವನ ಮಾಡುವದರಿಂದ ಆಹಾರಕೊರತೆಯುಂಟಾಗುತ್ತದೆ ಎನ್ನುವವರಿರಲಿ, ರಮ್‍ಜಾನ್ ಉಪವಾಸ ಮಾಡುವದರಿಂದ ಆರೋಗ್ಯ ಕೆಡುತ್ತದೆ ಎನ್ನುವವರಿಗೂ ಮತ್ತೊಂದು ಧರ್ಮದ ಆಚರಣೆಯನ್ನು ಪ್ರಶ್ನಿಸುವ ಅಥವಾ ತುಚ್ಛೀಕರಿಸುವ ಯಾವುದೇ ಹಕ್ಕನ್ನೂ ಭಾರತದ ಸಂವಿಧಾನ ಯಾರಿಗೂ ಕೊಟ್ಟಿಲ್ಲವೆನ್ನುವದನ್ನು ಪಠ್ಯಪುಸ್ತಕ ಪರಿಷ್ಕರಣೆ ಮಾಡುವಂತಹ ಉನ್ನತ ಸ್ಥಾನದಲ್ಲಿರುವವರಿಗೂ ಅರ್ಥವಗದಿರುವದು ಈ ನಾಡಿನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವೆಂದೇ ಹೇಳಬೇಕಾಗುತ್ತದೆ.
ಶ್ರೀಯುತ ಬರಗೂರು ರಾಮಚಂದ್ರಪ್ಪನವರು ಶಿಕ್ಷಣ ತಜ್ಞರೇನಲ್ಲ.ಅವರೊಬ್ಬ ಸಾಹಿತಿ. ಪಠ್ಯಪುಸ್ತಕ ಪರಿಷ್ಕರಣೆಗೆ ಬೇಕಾಗಿದ್ದು ಮಕ್ಕಳ ತಲೆಗೆ ಸಂಸ್ಕøತಿ ಮತ್ತು ಸಂಸ್ಕಾರದ ನೆಲೆಯಲ್ಲಿ ಏನೇನು ಕಲಿಸಬಹುದು ಮತ್ತು ಹೇಗೆ ಕಲಿಸಬಹುದೆನ್ನುವ ತಿಳುವಳಿಕೆ. ಆದರೆ ಬರಗೂರರು ಮತ್ತು ಅವರ ನೇತ್ರತ್ವದ ಸಮಿತಿಯಲ್ಲಿ ಶಿಕ್ಷಣದ ವಿಷಯಕ್ಕೆ ಸಂಬಂಧಿಸಿದಂತೆ ಬದಲಾವಣೆ ಮಾಡಬಯಸುವ ತಜ್ಞರಿಗಿಂತ ತಮ್ಮ ಎಡಪಂಥೀಯ ಸಿದ್ಧಾಂತಗಳನ್ನು ಮಕ್ಕಳ ತಲೆಗೆ ತುಂಬಲು ಹಾತೊರೆಯುವವರೇ ಇದ್ದಂತೆ ಕಾಣುತ್ತಿದೆ. ಇಷ್ಟಕ್ಕೂ ತರಾತುರಿಯಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಇದೇ ಶಿಕ್ಷಣ ವರ್ಷದಿಂದಲೇ ಜಾರಿಮಾಡುವ ತರಾತುರಿಯನ್ನು ಗಮನಿಸಿದರೆ ತಮ್ಮ ಸಿದ್ದಾಂತಗಳನ್ನು ಪಠ್ಯ ಪುಸ್ತಕಗಳಲ್ಲಿ ತುಂಬಲು ಮತ್ತೆ ಅವಕಾಶ ಸಿಗಲಾರದು ಎನ್ನುವ ಧಾವಂತವೇ ಕಂಡುಬರುತ್ತಿದೆ.
6ನೇ ತರಗತಿಯ ಸಮಾಜವಿಜ್ಞಾನ ಭಾಗ 1 ರ 8ನೇ ಪಾಠದಲ್ಲಿ ವೇದಕಾಲದ ಸಾಮಾಜಿಕ ಪರಿಸ್ಥಿತಿಯ ವಿವರಣೆ ಕೊಡಲಾಗಿದೆ. ಅದರಲ್ಲಿ ಧಾರ್ಮಿಕ ಆಚರಣೆಗಳು ಸಂಕೀರ್ಣವೂ ಕಠಿಣವೂ ಆದವು, ಯಾಗ ಯಜ್ಞಗಳ ಆಚರಣೆ ತೀವ್ರವಾಯಿತು. ಹವಿಸ್ಸಿನ ಹೆಸರಿನಲ್ಲಿ ಹಾಲು ತುಪ್ಪ ಧಾನ್ಯಗಳನ್ನು ಬೆಂಕಿಗೆ ಅರ್ಪಿಸುವದು ಹೆಚ್ಚಾದಂತೆ ಆಹಾರದ ಬಿಕ್ಕಟ್ಟು ಉಲ್ಬಣಿಸಿತು.ಬ್ರಮ್ಹ ವಿಷ್ಣು ಮತ್ತು ಶಿವ ಪ್ರಭಾವಿ ದೇವರುಗಳಾದರು ಎಂದು ಹೇಳಲಾಗಿದೆ. ಈ ವಾದವೇ ತಲೆಬುಡವಿಲ್ಲದ್ದು. ಒಂದು ಹವನ ಮಾಡುವ ಕುಟುಂಬದ ಯಜಮಾನ ತನಗೆ ಹೊಟ್ಟೆಗೂ ಉಳಿಸಿಕೊಳ್ಳದಂತೆ ಮನೆಯಲ್ಲಿದ್ದ ದವಸ ಧಾನ್ಯಗಳನ್ನೆಲ್ಲ ಹೋಮಕ್ಕೆ ಸುರಿದುಬಿಡಲಾರನೆನ್ನುವ ಸಾಮಾನ್ಯಜ್ಞಾನವೂ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವವರಿಗೆ ಬೇಕಾಗಿತ್ತು. ಅಲ್ಲದೆ ಹವನಕ್ಕೆ ಹವಿಸ್ಸನ್ನು ಹಾಕುವದರಿಂದ ಆಹಾರ ಬಿಕ್ಕಟ್ಟು ಉಲ್ಬಣಿಸುತ್ತದೆ ಎನ್ನುವ ವಾದವೇ ಹಾಸ್ಯಾಸ್ಪದ.ಇಷ್ಟಕ್ಕೂ ವೇದಕಾಲದಲ್ಲಿ ಎಲ್ಲರೂ ದಿನವಿಡೀ ಹೋಮ ಹಾಕಿ ಕುಳಿತುಕೊಂಡುಬಿಡುತ್ತಿದ್ದರು ಎನ್ನುವ ಅನಿಸಿಕೆಬರುವ ಸಾಲುಗಳಿಗೂ ಯಾವುದೇ ಆಧಾರವಿಲ್ಲ. ಯಾವುದೇ ದಾಖಲೆಗಳು ಅಥವಾ ಮಾಹಿತಿಗೆ ಸಂಬಂಧಿಸಿದ ಪೂರಕ ಅಂಶಗಳಿಲ್ಲದ್ದನುದಿತಿಹಾಸವೆಂದು ಒಪ್ಪಲು ಸಾಧ್ಯವಿಲ್ಲವೆಂದು ಬರಗೂರರ ಸಮಿತಿ ಪ್ರಾರಂಭದಲ್ಲಿಯೇ ಹೇಳುತ್ತದೆ. ಆದರೆ ಹೋಮ ಹವನಕ್ಕೆ ಹವಿಸ್ಸನ್ನು ಹಾಕಿದ್ದರಿಂದ ಆಹಾರಬಿಕ್ಕಟ್ಟು ಉಲ್ಬಣಿಸಿತ್ತು ಎಂದು ಹೇಳುವ ಯಾವುದೇ ಆಧಾರ ಅಥವಾ ದಾಖಲೆಗಳಿದ್ದಲ್ಲಿ ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು. ಬ್ರಮ್ಹ,ವಿಷ್ಣು ಶಿವ ಪ್ರಭಾವಿ ದೇವರುಗಳಾದರು ಎಂದು ಪ್ರಭಾವಿ ರಾಜಕಾರಣಿಗಳಾದರು ಎನ್ನುವ ಧಾಟಿಯಲ್ಲೇ ಹೇಳಿಬಿಟ್ಟಿದ್ದಾರೆ! ಇದು ಕೇವಲ ಒಂದು ಉದಾಹರಣೆಯಷ್ಟೇ. ಇಂತಹ ಅನೇಕಾನೇಕ ಸುಳ್ಳುಗಳನ್ನು ಹಲವು ತರಗತಿಗಳ ಪುಸ್ತಕಗಳಲ್ಲಿ ತುಂಬಿಸಲಾಗಿದೆ.
ಕುರಾನ್ ಪಠಣವನ್ನು ಆಲಿಸುವ ಮತ್ತು ಬೈಬಲ್ಲನ್ನು ಓದುವ ಹಾಗೂ ಮಹಮ್ಮದ ಪೈಗಂಬರರ ಬೋಧನೆಗಳನ್ನು ಮಕ್ಕಳ ಚಟುವಟಿಕೆಯಲ್ಲಿ ನೀಡಲಾಗಿದೆ. ಅದನ್ನು ನಾನು ತಪ್ಪು ಎಂದು ವಾದಿಸುವ ಬದಲಿಗೆ ಸರ್ವಧರ್ಮಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡುವ ಕ್ರಮವೆಂದು ಹೇಳಿಬಿಡುತ್ತೇನೆ. ಉರ್ದು ಶಾಲೆಗಳ ಪಠ್ಯಪುಸ್ತಕಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕುರಿತಂತೆ ಪಠ್ಯ ಚಟುವಟಿಕೆಗಳನ್ನು ನೀಡಿದ್ದಾರೆ. ಆದರೆ ಏಕ ದೇವೋಪಾಸನೆಯ ಕಾರಣದಿಂದ ರಾಷ್ಟ್ರಗೀತೆಯನ್ನೂ ಹೇಳುವದು ಸರಿಯಲ್ಲ ಏಕೆಂದರೆ ಅದರಲ್ಲಿ ಬೇರೆ ದೇವರುಗಳ ಹೆಸರುಗಳಿವೆ ಎಂದು ವಾದಿಸುವವರು ರಾಮಾಯಣ ಮಹಾಭಾರತಗಳನ್ನು ತಮ್ಮ ಮಕ್ಕಳಿಗೆ ಓದಿಸಬಹುದೆ?
ಶಿಕ್ಷಣ ಸಂಸ್ಕøತಿ ಕಲಿಸಬೇಕು. ಸಂಸ್ಕಾರ ಕೊಡಬೇಕು. ರಾಜಕೀಯ ಕಾರಣಗಳಿಗಾಗಿ ತಮ್ಮ ಧೋರಣೆಗಳನ್ನು ಮಕ್ಕಳ ಪಠ್ಯಗಳಲ್ಲಿ ತುಂಬಿ ಸರಿಯಾದ ಇತಿಹಾಸವನ್ನು ತುಂಬುವ ಬದಲಿಗೆ ಸುಳ್ಳನ್ನು ಕಲಿಸಿ ಭವ್ಯ ಭಾರತಕ್ಕೆ ಎಂತಹ ಪ್ರಜೆಗಳನ್ನು ಕೊಡಲು ಮುಂದಾಗಿದ್ದಾರೆ ಎನ್ನುವ ಚಿಂತೆ ಹೆಚ್ಚಿನ ಪಾಲಕರನ್ನು ಕಾಡುತ್ತಿದೆ. ಒಂದುವರ್ಷ ತಡವಾದರೂ ತೊಂದರೆಯಿಲ್ಲ ಈಗ ತುಂಬಿಸಲಾದ ಸುಳ್ಳಿನ ಕಂತೆಗಳನ್ನೆಲ್ಲ ತೆಗೆದು ಸರಿಯಾದ ಇತಿಹಾಸವನ್ನು ತಿಳಿಸಲಿ.ಈ ವಿಚಾರದಲ್ಲಿ ಪಾಲಕರ ನಿರ್ಲಕ್ಷ್ಯವೂ ಸಲ್ಲದು.