Home Important ಜೆಡಿಎಸ್‍ನ ಏಳು ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಿಂದ ಯಾವುದೇ ಸೂಚನೆ ಬಂದಿಲ್ಲ :...

ಜೆಡಿಎಸ್‍ನ ಏಳು ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಿಂದ ಯಾವುದೇ ಸೂಚನೆ ಬಂದಿಲ್ಲ : ಕೆ.ಬಿ.ಕೋಳಿವಾಡ.

SHARE

ಬೆಂಗಳೂರು ಮಾ.21- ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದ ಜೆಡಿಎಸ್‍ನ ಏಳು ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಇಂದಿಲ್ಲಿ ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ಹಾಗೂ ಹÉಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಮಂದಿ ಜೆಡಿ ಎಸ್ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಮೌಖಿಕ ಹಾಗೂ ಲಿಖಿತವಾಗಿ ಯಾವುದೇ ಸೂಚನೆ ಕೋರ್ಟ್‍ನಿಂದ ಬಂದಿಲ್ಲ ಎಂದರು.

ಶಾಸಕರ ಅನರ್ಹತೆ ಪ್ರಕರಣ ಸಂಬಂಧ ತೀರ್ಪು ಕಾಯ್ದಿರಿಸಲಾಗಿದೆ. ತೀರ್ಪು ನೀಡುವ ಪರಮಾಧಿಕಾರ ತಮಗಿದೆ. ಅದನ್ನು ಈಗಲೇ ನೀಡಬಹುದು, ಸಂಜೆ, ನಾಳೆ ಕೊಡಬಹುದು ಅಥವಾ ಕೊಡದೆಯೂ ಇರಬಹುದು ಎಂದರು. ತಾವು ಕಾನೂನಾತ್ಮಕವಾಗಿ, ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ನ್ಯಾಯಾಲಯದ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ ಎಂದ ಅವರು, ಕಾಲಮಿತಿಯಲ್ಲೇ ತೀರ್ಪು ನೀಡಬೇಕೆಂದೇನೂ ಇಲ್ಲ. ಜೆಡಿಎಸ್ ಶಾಸಕರು ಕೇಳಿದ ಕೂಡಲೇ ತೀರ್ಪು ನೀಡಲು ಆಗುವುದಿಲ್ಲ ಎಂದರು.

ಒಂದು ಕಡೆ ಜೆಡಿಎಸ್‍ನವರು ಏಳು ಮಂದಿ ಶಾಸಕರಿಗೆ ವಿಪ್ ನೀಡಿದ್ದಾಗಿ ಹೇಳಿದರೆ, ಮತ್ತೊಂದು ಕಡೆ ಪಕ್ಷದವರಲ್ಲ ಎಂದು ದೂರು ಕೊಟ್ಟಿದ್ದಾರೆ. ಅವರ ಹೇಳಿಕೆಗಳಲ್ಲೇ ಗೊಂದಲವಿದೆ ಎಂದು ಹೇಳಿದರು. ಶಾಸಕರ ಅನರ್ಹತೆ ಪ್ರಕರಣದ ತೀರ್ಪು ನೀಡುವುದು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು. ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕವಾಗಿ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.
ದೂರುದಾರರಾದ ಜೆಡಿಎಸ್‍ನ ಸಿ.ಎನ್.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ಹಾಗೂ ಏಳು ಮಂದಿ ಅನರ್ಹ ಶಾಸಕರು ವಾದ-ವಿವಾದಗಳನ್ನು ಮಂಡಿಸಿದ್ದರು. ಅದನ್ನು ಕೂಲಂಕಶವಾಗಿ ಆಲಿಸಿದ್ದೇನೆ. ದೂರುದಾರರು ಬೇಗ ತೀರ್ಪು ಕೊಡುವಂತೆ ಕೋರಿದ್ದಾರೆ ಎಂದರು.

ಮತ್ತೆ ಸ್ಪರ್ಧೆ:
ವಿಧಾನಸಭೆ ಚುನಾವಣೆಯಲ್ಲಿ ತಾವು ಮತ್ತೆ ಸ್ಪರ್ಧಿಸಲಿದ್ದೇವೆ ಎಂದು ರಾಣೆಬೆನ್ನೂರು ಶಾಸಕರೂ ಆಗಿರುವ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದರು. ಸ್ಪೀಕರ್ ಆಗುವ ಮುನ್ನ ತಮಗೆ ಸಚಿವರಾಗುವ ಇಚ್ಛೆ ಇತ್ತು. ಆದರೆ, ಸ್ಪೀಕರ್ ಹುದ್ದೆ ಒಂದು ಉನ್ನತ ಹುದ್ದೆಯಾಗಿದೆ. ಮುಖ್ಯಮಂತ್ರಿಗಿಂತ ಹೆಚ್ಚಿನ ಹುದ್ದೆ ಎನಿಸಿದೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವುದು ತಮಗೆ ತೃಪ್ತಿ ತಂದಿದೆ ಎಂದು ಹೇಳಿದರು.