Home Local ಶಿರಸಿ ಜಲ‌ ಸಂರಕ್ಷಣೆಯ ಪಾಠ ಬೋಧಿಸುತ್ತಿದೆ : ಶಿವಾನಂದ ಕಳವೆ

ಶಿರಸಿ ಜಲ‌ ಸಂರಕ್ಷಣೆಯ ಪಾಠ ಬೋಧಿಸುತ್ತಿದೆ : ಶಿವಾನಂದ ಕಳವೆ

SHARE

ಶಿರಸಿ: ವಿಶ್ವ ಜಲ ದಿನದ ಅಂಗವಾಗಿ ಶಿರಸಿಯ ಶಂಕರ ತೀರ್ಥದಲ್ಲೊಂದು ಅಪರೂಪದ ಕಾರ್ಯಕ್ರಮ ಶಿರಸಿ ಜೀವಜಲ ಕಾರ್ಯಪಡೆಯ ಆಶ್ರಯದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಲತಜ್ಞ ಶಿವಾನಂದ ಕಳವೆ, ಅಭಿವೃದ್ಧಿಯ ಭರದಲ್ಲಿ ನದಿಯ ಮೂಲವನ್ನು ಹೇಗೆ ನಿರ್ವಹಿಸಬೇಕೆಂದು ನಮಗಿನ್ನೂ ತಿಳಿದಿಲ್ಲ. ಸರಕಾರ ಕೆರೆಗಳನ್ನು ಮಾಡಬೇಕಿಲ್ಲ. ಬದಲಾಗಿ ಜನರೇ ಮಾಡಿರುವ ಕೆರೆಗಳ ಹೂಳನ್ನು ತೆಗೆದರೆ ಸಾಕು. ಕೆರೆಯ ಆಳಕ್ಕಿಳಿದರೆ ಜಲಪಾತ್ರೆ ದೊಡ್ಡದಾಗುತ್ತದೆ. ನೀರಿನ ಸಂರಕ್ಷಣೆಯ ವಿಷಯದಲ್ಲಿ ಶಿರಸಿ ರಾಜ್ಯಕ್ಕೆ ಬೆಳಕು ನೀಡಿದೆ‌ ಎಂದರು.
ತಮ್ಮ ಜಲದ ಕಾಯಕಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿರಸಿಯ ಮಾಜಿ ಸಹಾಯಕ ಆಯುಕ್ತ ರಾಜು ಮೊಗವೀರ ಮಾತನಾಡಿ, ಯಾವುದೇ ವಸ್ತು ಸುಲಭವಾಗಿ ಸಿಗುವಾಗ ಅದರ ಬೆಲೆ ನಮಗೆ ತಿಳಿದಿರುವುದಿಲ್ಲ, ಬದಲಾಗಿ ಅದು ತುಟ್ಟಿಯಾದಾಗ ಅದರ ಬೆಲೆ ಅರಿವಿಗೆ ಬರುತ್ತದೆ. ಶಿರಸಿಯ ಶಂಕರ ಹೊಂಡ ಶಂಕರ ತೀರ್ಥವಾಗಿ ಬದಲಾಗಿದ್ದು ಇಲ್ಲಿಯ ಜೀವಜಲ ಕಾರ್ಯಪಡೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಹಾಗು ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಈ ವರೆಗೆ ಶಂಕರ ತೀರ್ಥಕ್ಕೆ 17 ಲಕ್ಷಕ್ಕೂ ಅಧಿಕ ಖರ್ಚಾಗಿದೆ ಆದರೂ ಸಹ ಶಂಕರ ತೀರ್ಥದ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಮುಂಬರುವ ಎರಡು ತಿಂಗಳೊಳಗೆ ಪೂರ್ತಿ ಕಾಮಗಾರಿ ಮುಗಿಯುವುದು ಎಂಬುದು ನಮ್ಮ ನಂಬಿಕೆಯಾಗಿದೆ. ನಮಗೆ ಸಹಕರಿಸಿರುವ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಅವರು ಹೇಳಿದರು.
ಕಾರ್ಯಪಡೆಯ ಸದಸ್ಯ ಹಾಗು ಶಿರಸಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಡಾ. ಕೆ ವಿ ಶಿವರಾಮ್ ಮಾತನಾಡಿ, 58 ಲಕ್ಷ ವೆಚ್ಚದಲ್ಲಿ ಎಮ್ ಇ ಎಸ್ ಆವರಣದಲ್ಲಿ ಮಳೆ ಕೊಯ್ಲು, ಮಳೆ ನೀರಿನ ಸಂಗ್ರಹ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆಗೆ ಕಾರಣಕ್ಕೆ ಮಾಜಿ ಸಹಾಯಕ ಆಯುಕ್ತ ರಾಜು ಮೊಗವೀರ ಹಾಗು ಇಂಗುಗುಂಡಿಯ ಮೂಲಕ ನೀರಿನ ಇಂಗಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸುಗಾವಿ ಊರಿನ ರಾಘವೇಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಭಟ್ಟ, ರೋಟರಿ ಕ್ಲಬ್ ಅಧ್ಯಕ್ಷ ಪ್ರವೀಣ ಕಾಮತ್, ನಗರ ಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ತಾ ಪಂ ಉಪಾಧ್ಯಕ್ಷ ಚಂದ್ರು ದೇವಾಡಿಗ, ಜೀವಜಲ ಕಾರ್ಯಪಡೆಯ ಸದಸ್ಯರಾದ ಡಾ. ದಿನೇಶ ಹೆಗಡೆ, ಶ್ರೀಕಾಂತ ಹೆಗಡೆ, ಎಮ್ ಎಮ್ ಭಟ್ಟ ಕಾರೇಕೊಪ್ಪ, ವಿರೂಪಾಕ್ಷ ಕಂಚಿಕೈ, ವಿ ಎಮ್ ಭಟ್ಟ ಅಶೋಕ ಭಟ್ಟ,ಚಂದನ್ ಪೈ, ಮಂಜುನಾಥ ಮೊಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.