Home Local ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಜನಪ್ರತಿನಿಧಿಗಳು: ಮತದಾನ ಭಹಿಷ್ಕರಿಸಲು ನಿರ್ಧರಿಸಿದರು ಯಲ್ಲಾಪುರದ ಈ ಗ್ರಾಮಸ್ಥರು!

ಮೂಲಭೂತ ಸೌಕರ್ಯ ಒದಗಿಸಲು ವಿಫಲವಾದ ಜನಪ್ರತಿನಿಧಿಗಳು: ಮತದಾನ ಭಹಿಷ್ಕರಿಸಲು ನಿರ್ಧರಿಸಿದರು ಯಲ್ಲಾಪುರದ ಈ ಗ್ರಾಮಸ್ಥರು!

SHARE

ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಗ್ರಾ.ಪಂ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಜಮಗುಳಿ ಮಜರೆಯ ಜನರು ತಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯವನ್ನು ಒದಗಿಸಿ ಕೊಡುವಲ್ಲಿ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪಟ್ಟಣದಿಂದ ಸಮೀಪವಿದ್ದೂ ಗ್ರಾ.ಪಂ, ತಾ.ಪಂ, ಜಿಪಂ, ಶಾಸಕರು, ಸಂಸದರಿಂದ ಗ್ರಾಮದ ಅಭಿವೃದ್ಧಿ ನಿರ್ಲಕ್ಷಿತವಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ರಸ್ತೆ ಪಕ್ಕದ ಗಿಡಗಂಟಿ ಸವರಿ ನಿರ್ವಹಣೆ ಕೈಗೊಂಡರೂ ಗ್ರಾ.ಪಂದಿಂದ ಕೂಲಿ ಕೆಲಸದ ಆಳುಗಳಿಗೆ ಹಣ ನೀಡದೇ ಇರುವುದು ಗ್ರಾಮಸ್ಥರ ಅಸಮಧಾನಕ್ಕೆ ಕಾರಣವಾಗಿದೆ. ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳೆದ 4 ವರ್ಷಗಳ ಹಿಂದೆ ತಾ.ಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್ ತಮ್ಮ ಅನುದಾನದಲ್ಲಿ ಹಾಗೂ ವೈಯಕ್ತಿಕ ನೆರವಿನಿಂದ ರಸ್ತೆಗೆ ಮಣ್ಣು ಹಾಕಿ ನಿರ್ವಹಣೆ ಕೈಗೊಂಡಿದ್ದರು. ನಂತರ ಒಂದು ಬುಟ್ಟಿ ಮಣ್ಣನ್ನೂ ಸಹ ಹಾಕಿ ನಿರ್ವಹಣೆ ಕೈಗೊಂಡಿಲ್ಲ. ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು, ಬೀದಿದೀಪ, ಸಭಾಭವನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿಲ್ಲ. ಲೋ ವೋಲ್ಟೇಜ್‍ನಿಂದಾಗಿ ವಿದ್ಯುತ್ ಬಳಕೆಗೆ ಗ್ರಾಹಕರು ಪರದಾಡುವಂತಾಗಿದೆ. ಊರಿನಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಸರ್ಕಾರ ಯಾವುದೇ ಅನುದಾನ ನೀಡಿಲ್ಲ.

ಜಮಗುಳಿಯಲ್ಲಿ ಬಡ ಕೃಷಿ ಕೂಲಿಕಾರರು, ವಾಸ್ತವ್ಯ ಮಾಡಿಕೊಂಡಿರುತ್ತಿದ್ದು, ಕನಿಷ್ಠ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಮಜರೆಗೆ ಕಳೆದ 5 ವರ್ಷಗಳಿಂದ ಯಾವುದೇ ಸೌಕರ್ಯಗಳನ್ನು ಜನಪ್ರತಿನಿಧಿಗಳು ಒದಗಿಸಿಕೊಟ್ಟಿಲ್ಲ. ಈ ಬಗ್ಗೆ ಹಲವಾರು ಬಾರಿ ದೂರಿದರೂ ಅವುಗಳನ್ನು ಉಪೇಕ್ಷಿಸುತ್ತ ಬರಲಾಗಿದೆ. ಇದರಿಂದ ಜಮಗುಳಿ ಗ್ರಾಮದ 60 ಕುಟುಂಬಗಳು ತೀರಾ ಸಂಕಷ್ಟವನ್ನು ಎದುರಿಸುವಂತಾಗಿದೆ.

ಪ್ರತಿ ಚುನಾವಣೆಯ ಸಂದರ್ಭದಲ್ಲೂ ಸಾಕಷ್ಟು ಭರವಸೆ ನೀಡಿ, ಮುಗ್ದ ಗ್ರಾಮಸ್ಥರನ್ನು ವಂಚಿಸಲಾಗುತ್ತಿದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯ ಕಾರಣದಿಂದಾಗಿ ಗ್ರಾಮಸ್ಥರು ತೊಂದರೆ ಎದುರಿಸುವಂತಾಗಿದೆ. ಈ ಬಗ್ಗೆ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ವಿಚಾರಿಸಿದಾಗ, ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಸದ್ಯ ತಾ.ಪಂ. ಅಧ್ಯಕ್ಷರಾದವರು “ನನ್ನ ಅಪ್ಪನ ಮನೆಯ ಆಸ್ತಿಯನ್ನು ಮಾರಾಟ ಮಾಡಿ ನಿಮ್ಮ ಬೇಡಿಕೆಯನ್ನು ಈಡೇರಿಸಿ ಕೊಡಬೇಕೆ” ಎಂದು ಉದ್ದಟತನದಿಂದ ಮಾತನಾಡಿದ್ದು, ಗ್ರಾಮಸ್ಥರನ್ನು ಕೆರಳಿಸಿದೆ. ತಾ.ಪಂ ಸದಸ್ಯರಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿ, ಮತ್ತೊಂದು ಪಕ್ಷದ ನೆರವಿನಿಂದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸುತ್ತಿದ್ದರೂ ಇಲ್ಲಿಯ ಅಭಿವೃದ್ಧಿಯ ಬಗೆಗೆ ನಿರ್ಲಕ್ಷ್ಯ ತಾಳಿದ್ದಾರೆ. ಕಳೆದ ತಾ.ಪಂ ಅನುದಾನದಲ್ಲಿ ಗ್ರಾಮದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬೋರ್‍ವೆಲ್ ಕೊರೆಸಿದ್ದು, ಅರ್ಧ ಇಂಚು ಮಾತ್ರ ನೀರು ಬಂದಿತ್ತು. ಇದಕ್ಕೆ ತರಾತುರಿಯಲ್ಲಿ ಪಂಪ್ ಅಳವಡಿಸಿ ಅಪೂರ್ಣ ಕಾಮಗಾರಿಗೆ ಬಿಲ್ ಮಾಡಿಕೊಂಡು ಹೋಗಲಾಗಿದೆ. ಅಸಮರ್ಪಕ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಸಾಕಷ್ಟು ನೀರಿಲ್ಲದ ಬೋರ್‍ವೆಲ್‍ಗೆ ಪಂಪ್ ಅಳವಡಿಸುವ ಅಗತ್ಯವಿತ್ತೇ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಯಾವುದೇ ಪಕ್ಷದ ಜನಪ್ರತಿನಿಧಿಗಳಲ್ಲಿ ಸೌಲಭ್ಯ ಕೇಳಲು ಹೋದರೆ ನಿಮ್ಮ ಗ್ರಾಮದವರು ನಮಗೆ ಮತ ಹಾಕಿಲ್ಲ ಎನ್ನುತ್ತಾರೆ.

ಧೀರ್ಘ ಕಾಲದಿಂದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು,ರಸ್ತೆ, ಬೀದಿ ದೀಪ,ಸಭಾಭವನ,ತ್ರೀಫೇಸ್ ವಿದ್ಯುತ್ ಒದಗಿಸಿ ಕೊಡದೇ ಇರುವುದರಿಂದ ಬೇಸತ್ತು ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಮಜರೆಯಿಂದ ಮತಗಟ್ಟೆಗೆ ಹೋಗದೇ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಮತ ಯಾಚಿಸಲು ಬರುವ ರಾಜಕೀಯ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಊರ ಹೊರಗೆ ಬ್ಯಾನರ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮಸ್ಥರಾದ ವಿಶ್ವನಾಥ ಗಾಂವ್ಕಾರ ಜಮಗುಳಿ, ಗಣಪತಿ ಗಾಂವ್ಕಾರ, ಸಂತೋಷ ಮರಾಠಿ, ನರಸಿಂಹ ಗಾಂವ್ಕಾರ, ಸೀತಾರಾಮ ಗಾಂವ್ಕಾರ, ವಿಘ್ನೇಶ್ವರ ಗಾಂವ್ಕಾರ, ಸುರೇಶ ಮರಾಠಿ, ಮಹಾಬಲೇಶ್ವರ ಮರಾಠಿ, ಉಮೇಶ ಮರಾಠಿ, ಅನಂತ ಮರಾಠಿ, ಈಶ್ವರ ಮರಾಠಿ, ಬಾಳಾ ಗಾವಡೆ, ಲಕ್ಷ್ಮಣ ಗಾವಡೆ, ಪರ್ಸ್ಯಾ ಮರಾಠಿ, ಡುಮಿಂಗ್ ಫರ್ನಾಂಡೀಸ್, ಬಸ್ತ್ಯಾಂವ ಫರ್ನಾಂಡೀಸ್, ಜಗನ್ನಾಥ ರಾಯ್ಕರ್, ವಿನೋದ ರಾಯ್ಕರ್, ಮಾಲಾ ನಾಯ್ಕರ್, ಉಮೇಶ ಗುಂಜಿಕರ್, ವಿಠೋಬಾ ಗಾವಡೆ, ಕವಿತಾ ಮರಾಠಿ ಮುಂತಾದವರು ಮಾಹಿತಿ ನೀಡಿದರು.