Home Local ಬಿಜೆಪಿ ಟಿಕೆಟ್ ಘೋಷಣೆಗೆ ಕ್ಷಣಗಣನೆ! ಉತ್ತರ ಕನ್ನಡದ 2 ಕ್ಷೇತ್ರಗಳ ಹೆಸರು ಹೈಕಮಾಂಡ್ ಗೆ ರವಾನೆ.

ಬಿಜೆಪಿ ಟಿಕೆಟ್ ಘೋಷಣೆಗೆ ಕ್ಷಣಗಣನೆ! ಉತ್ತರ ಕನ್ನಡದ 2 ಕ್ಷೇತ್ರಗಳ ಹೆಸರು ಹೈಕಮಾಂಡ್ ಗೆ ರವಾನೆ.

SHARE

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ನಡೆದ ಪಕ್ಷ ದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 72 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಉತ್ತರ ಕನ್ನಡದ ಕಾರವಾರ ಹಾಗೂ ಶಿರಸಿಯ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರವಾನೆಯಾಗಿದೆ ಎನ್ನಲಾಗಿದೆ. ಕಾರವಾರದಿಂದ‌ ರೂಪಾಲಿ ನಾಯ್ಕ ಹಾಗೂ ಶಿರಸಿಯಿಂದ ಕಾಗೇರಿಯವರ ಹೆಸರು ಸೂಚನೆಗೊಂಡಿದೆ.

ಪಕ್ಷ ದ ಕೇಂದ್ರ ಕಚೇರಿಯಲ್ಲಿ ಸಂಜೆ 6.30ಕ್ಕೆ ಆರಂಭವಾದ ಸಭೆ ರಾತ್ರಿ 9 ಗಂಟೆವರೆಗೆ ನಡೆದರೂ ಸುಮಾರು 30 ಹೆಸರುಗಳ ಬಗ್ಗೆ ರಾಜ್ಯ ನಾಯಕರು ಮತ್ತು ಚುನಾವಣಾ ಸಮಿತಿಯ ನಡುವೆ ಸಹಮತ ಏರ್ಪಡಲಿಲ್ಲ. ಹಾಗಾಗಿ ಕೇವಲ 82 ಅಭ್ಯರ್ಥಿಗಳ ಹೆಸರುಗಳಿಗೆ ಮಾತ್ರ ಸಮಿತಿಯ ಒಪ್ಪಿಗೆಯ ಮುದ್ರೆ ಬಿದ್ದಿದೆ ಎನ್ನಲಾಗಿದೆ.

ಬಿಜೆಪಿಯ ಹಾಲಿ ಶಾಸಕರು, ಇತರ ಪಕ್ಷ ಗಳಿಂದ ಪಕ್ಷ ಕ್ಕೆ ವಲಸೆ ಬಂದಿರುವ ಶಾಸಕರು, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಾಜಿ ಸಚಿವರು ಮತ್ತು ಕಡಿಮೆ ಅಂತರದಿಂದ ಪರಾಭವಗೊಂಡಿರುವವರು ಸೇರಿದಂತೆ ರಾಜ್ಯದ ನಾಯಕರು ಒಟ್ಟು 140 ಹೆಸರುಗಳ ಜತೆ ದಿಲ್ಲಿಗೆ ಆಗಮಿಸಿದ್ದರೆನ್ನಲಾಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಮಧ್ಯಾಹ್ನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತಿತರ ಪ್ರಮುಖ ನಾಯಕರ ಜತೆ ಎರಡು ಸುತ್ತಿನ ಪೂರ್ವಭಾವಿ ಸಭೆಯ ನಂತರ ಅಂತಿಮವಾಗಿ ಸುಮಾರು 110 ಹೆಸರುಗಳ ಜತೆಗೆ ಸಭೆಗೆ ತೆರಳಲಾಗಿತ್ತು ಎನ್ನಲಾಗಿದೆ.

ಆದರೆ, ರಾಜ್ಯದ ನಾಯಕರು ತಂದಿದ್ದ ಪಟ್ಟಿ, ಸರ್ವೆ ಆಧರಿತವಾಗಿ ಅಮಿತ್‌ ಶಾ ಅವರ ಬಳಿ ಇದ್ದ ಪಟ್ಟಿ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಅವರ ಬಳಿ ಇದ್ದ ಸಂಘದ ಪ್ರಮುಖರು ಸಿದ್ಧಪಡಿಸಿದ ಪಟ್ಟಿಗಳ ನಡುವೆ ಹೊಂದಾಣಿಕೆ ಆಗದ ಕಾರಣ ಸಹಮತವಿದ್ದ ಹೆಸರುಗಳಿಗೆ ಮಾತ್ರ ಸಮಿತಿಯ ಹಸಿರು ನಿಶಾನೆ ಸಿಕ್ಕಿದೆ ಎಂದು ಗೊತ್ತಾಗಿದೆ.

ಅಭ್ಯರ್ಥಿಗಳ ಪಟ್ಟಿ ಜತೆಗೆ ಚುನಾವಣೆಯಲ್ಲಿ ಅನುಸರಿಸಬೇಕಾದ ರಣತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು ಎನ್ನಲಾಗಿದೆ.

ಪ್ರಧಾನಿ ಮೋದಿ 12 ರಿಂದ 16 ರ‍್ಯಾಲಿಗಳನ್ನು ರಾಜ್ಯದಲ್ಲಿ ಮಾಡಲೇಬೇಕು ಎಂಬ ಬೇಡಿಕೆಯನ್ನು ರಾಜ್ಯದ ನಾಯಕರು ಸಭೆಯಲ್ಲಿ ಮಂಡಿಸಿದರು ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್‌ ಮೂಲಗಳ ಪ್ರಕಾರ ರಾಜ್ಯದಲ್ಲಿ ಪ್ರಧಾನಿ 8 ರಾರ‍ಯಲಿಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಹೆಚ್ಚಿಗೆ ತಯಾರಿಗಳನ್ನು ಮಾಡಲು ಸಮಯವೂ ಇಲ್ಲ ಎಂಬ ಚರ್ಚೆ ನಡೆದಿದೆ.