Home Article ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-6

ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-6

SHARE


ಮುಂದುವರೆದು,

ಕೆಲವರಿಗೆ ಮಾಡುವ ಕೆಲಸದಲ್ಲಿ ತೃಪ್ತಿಯಾಗಿದ್ದರೂ ಸಹ ವೇತನ ಪಡೆಯುವುದರಲ್ಲಿ ಅಸಮಾಧಾನ ಇರುತ್ತದೆ. ಅಥವಾ ಇದು ವ್ಯತಿರಿಕ್ತವಾಗಿರಬಹುದು. ಎಲ್ಲವೂ ಕಾಲ ಕಾಲಕ್ಕೆ ಅಂದು ಕೊಂಡಂತೆ ನಡೆದರೆ ಮಾತ್ರ ಸಮಾಧಾನದ ಜೊತೆಗೆ ಸಂತೋಷವಾಗಿ, ತೃಪ್ತಿಹೊಂದಿ ನೆಮ್ಮದಿಯಿಂದ ಜೀವನ ನಡೆಸಬಹುದು. ಆದರೆ ಈ ರೀತಿಯಲ್ಲಿ ಎಲ್ಲರ ಜೀವನದಲ್ಲಿ ನಡೆಯವುದು ಬಹಳ ಕಷ್ಟ. ಮನುಷ್ಯನು ಎಲ್ಲವನ್ನು ಅಂದುಕೊಂಡಂತೆ ನಡೆದರೆ ಅವನನ್ನು ಹಿಡಿಯುವವರು ಯಾರಿದ್ದಾರೆ? ಮನುಷ್ಯನು ಅಂದುಕೊಂಡಂತೆ ಯಾವ ಕೆಲಸವೂ ನಿಗದಿತ ವೇಳೆಯಲ್ಲಿ ಮುಗಿಯುವುದಿಲ್ಲ. ಕೆಲವರಿಗೆ ಹಣವಿದ್ದಲ್ಲಿ ಅವರು ಅಂದುಕೊಂಡಂತ ಕೆಲಸಗಳನ್ನು ಮಾಡಿಸಬಹುದು, ಆದರೆ ಮನಸ್ಸಿಗೆ ಸಮಾಧಾನ ಇರುವುದಿಲ್ಲ. ಏಕೆಂದರೆ ಅವರು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿರುತ್ತಾರೆ. ಇದರಿಂದ ಬೇಸರಗೊಳ್ಳುವ ಸಂಭವ ಇರುತ್ತದೆ. ಕೆಲವೊಮ್ಮೆ ಎಷ್ಟು ಹಣ ಖರ್ಚು ಮಾಡಿದರೂ ಅಂದುಕೊಂಡಂತ ಕೆಲಸಗಳು ನಿಗದಿತ ಅವಧಿಯಲ್ಲಿ ಕೈಗೂಡಿರುವುದಿಲ್ಲ. ಇದಕ್ಕೆ ವಿರುದ್ದವಾಗಿ ಕೈಗೊಂಡಿರಬಹುದು.

ಮನುಷ್ಯನಿಗೆ ಒಂದನ್ನು ಪಡೆದಾಗ ತೃಪ್ತಿ ಪಡದೆ ಮತ್ತೊಂದನ್ನು ಪಡೆಯಬೇಕೆಂಬ ಆಸೆ ಮನದಲ್ಲಿ ಚಿಗುರಿದರೆ, ಇದಕ್ಕೆ ಕೊನೆ ಎಲ್ಲಿ ಇರುತ್ತದೆ. ಅಕಸ್ಮಾತ್ ಎರಡನೆಯದು ಸಿಕ್ಕದಿದ್ದಾಗ ನಿರಾಸೆ ಮನೆ ಮಾಡುತ್ತದೆ. ಒಂದನ್ನು ಪಡೆದೆವೆಲ್ಲಾ ಸಾಕು ಎಂದು ಮನಸ್ಸಿಗೆ ಬಂದರೆ ಮಾತ್ರ ಸ್ವಲ್ಪ ಸಮಾಧಾನದಿಂದ ಇರಬಹುದು. ಸುಲಭವಾಗಿ ಸಿಗುವಾಗ ಮಿತಿಯೇ ಇಲ್ಲದಂತೆ ಪಡೆಯಲು ಯತ್ನಿಸಿದರೆ, ಸಮಾಧಾನ ಇರುವುದೇ ಇಲ್ಲ. ಹಣ ಇರಬಹುದು, ಆಸ್ತಿ ಇರಬಹುದು, ಬೇರೆ ಯಾವ ರೀತಿಯ ವಸ್ತುವಾಗಿರ ಬಹುದು, ಯಾವುದಕ್ಕೂ ಒಂದು ಮಿತಿ ಎಂಬ ರೇಖೆಯನ್ನು ಜೀವನದಲ್ಲಿ ಹಾಕಿಕೊಂಡರೆ ಮಾತ್ರ ಸ್ವಲ್ಪ ಸಮಾಧಾನದಿಂದ ಜೀವನ ನಡೆಸಬಹುದು. ಹಸಿವಾದಾಗ ಹೊಟ್ಟೆ ತುಂಬಾ ಊಟ, ಬಾಯಾರಿಕೆ ಯಾದಾಗ ಕುಡಿಯಲು ನೀರು, ಬೇರೆ ರೀತಿಯ ಮಾನಸಿಕ ಇತರೆ ಆಸೆ ಆಕಾಂಕ್ಷೆಗಳು ಪೂರ್ಣಗೊಂಡ ಕ್ಷಣದಲ್ಲಿ ಮಾತ್ರ ಸಮಾಧಾನ ಇರುತ್ತದೆ, ಆದಾಗ್ಯೂ ಇನ್ನೂ ಪಡೆಯಬೇಕೆಂಬ ಆಸೆ ಇರುತ್ತದೆ. ಮನುಷ್ಯನ ದೇಹಕ್ಕೆ ಆ ಕ್ಷಣ ತೃಪ್ತಿಯಾಗಿ ಇನ್ನು ಜಾಸ್ತಿ ಪಡೆಯಲಾರದ ಅಥವಾ ಅನುಭವಿಸಲಾರದ ಸ್ಥಿತಿ ತಲುಪಿದಾಗ ಮಾತ್ರ ಸಮಾಧಾನವಾಯಿತು ಎಂದು ಹೇಳಬಹುದು. ಮನಸ್ಸಿನಲ್ಲಿ ಇನ್ನೂ ಬೇಕಾಗಿತ್ತು ಎಂಬ ಒಳಗಿನ ಅಸೆ ಇದ್ದೇ ಇರುತ್ತದೆ. ದೇಹ ತಡೆಯಲಾರದೆ ಇರುವುದರಿಂದ ಸುಮ್ಮನಾಗಬಹುದಷ್ಟೇ. ತೃಪ್ತಿಯಾಯಿತು ಎಂದು ಸುಮ್ಮನಾಗುವುದಿಲ್ಲ ತನ್ನ ದೇಹ ತಡೆಯುವುದಿಲ್ಲ ಎಂಬ ಹಂತಕ್ಕೆ ತಲುಪಿದಾಗ ಮಾತ್ರ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡಬಹುದು. ದೇಹವು ಎಲ್ಲಿಯವರೆವಿಗೆ ತಡೆಯಲು ಶಕ್ತವಾಗಿರುತ್ತದೋ ಅಥವಾ ಆ ಕ್ಷಣ ತೃಪ್ತಿಯಾಗುವವರೆಗೆ ಮಾತ್ರ ಮಾನಸಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಾನೆ. ಅದೇ ರೀತಿ ಹಣಕ್ಕೆ ಅಥವಾ ಆಸ್ತಿಗಳನ್ನು ಸಂಪಾದಿಸಲು ಒಂದು ಮಿತಿ ಎನ್ನುವುದು ಇದ್ದಿದ್ದರೆ ಆಗ ಹಣ ಆಸ್ತಿ ಸಂಪಾದಿಸಲು ಸ್ವಲ್ಪ ವಿರಾಮವನ್ನು ಹಾಕುತ್ತಿದ್ದರು ಎನಿಸುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ತೃಪ್ತಿ-ನೆಮ್ಮದಿ ಮತ್ತು ಸಂತೋಷ- ಸಮಾಧಾನ ಯಾರೂ ತಂದು ಕೊಡಲು ಆಗುವುದಿಲ್ಲ. ಅಥವಾ ಕೊಳ್ಳಲು ಆಗುವುದಿಲ್ಲ ಮತ್ತು ಯಾರಿಂದಲೂ ಬಲವಂತವಾಗಿ ಪಡೆಯಲು ಆಗುವುದಿಲ್ಲ. ಯಾರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಮನುಷ್ಯನು ತಾನು ಬದುಕಿರುವವರೆಗೆ ಸಮಯಕ್ಕೆ ತಕ್ಕಂತೆ ಬುದ್ದಿ ಉಪಯೋಗಿಸಿ, ಸ್ವಂತ ಬುದ್ದಿಯಿಂದ ಮುಂದೆ ಬರಬಹುದಾದ ಯಾವುದಾದರೂ ಕಷ್ಟ ಮತ್ತು ನೋವುಗಳನ್ನು ಪ್ರಾರಂಭದಲ್ಲೇ ಅದಕ್ಕೆ ಪರಿಹಾರವನ್ನು ಹುಡುಕಿ ಕಷ್ಟದಿಂದ ಪಾರಾಗಬೇಕು. ಒಂದು ರೀತಿಯಲ್ಲಿ ಹೇಳುವುದಾದರೆ ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎನ್ನುವುದು ಗೊತ್ತು. ಸಾವು ನೋವು ಯಾವುದು ಯಾವ ಸಮಯಕ್ಕೆ ಬರುತ್ತದೋ ಯಾರಿಗೂ ತಿಳಿಯವುದಿಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದರೆ ಸ್ವಲ್ಪವಾದರೂ ಅದರಿಂದ ತಪ್ಪಿಸಿಕೊಳ್ಳಬಹುದು.

ಉದಾಹರಣೆಗೆ ನಾವು ರಸ್ತೆಯನ್ನು ದಾಟುವಾಗ ಎದುರಿಗೆ ಯಾವುದಾದರೂ ವಾಹನ ಬರುತ್ತಿದ್ದರೆ ಅದು ಹೋಗುವವರೆಗೂ ಕಾದು ನಂತರ ದಾಟುವುದು ಒಳ್ಳೆಯ ನಿರ್ಧಾರ. ಬೇಕಿದ್ದರೆ ವಾಹನದವನೇ ನಿಲ್ಲಿಸುತ್ತಾನೆ ರಸ್ತೆ ದಾಟಲು ಅವನನ್ನು ಏಕೆ ಕಾಯಬೇಕು? ಎಂದು ಮೊಂಡುವಾದ ಮಾಡಿಕೊಂಡು ಹೋದರೆ ಮಾತ್ರ ವಾಹನಕ್ಕೆ ಸಿಲುಕುವ ಸಂಭವ ಇರುತ್ತದೆ. ಅಕಸ್ಮಾತ್ ಎಚ್ಚರದಿಂದ ರಸ್ತೆ ದಾಟುತ್ತಿದ್ದರೂ ದೂರದಿಂದ ಜೋರಾಗಿ, ಅನಿರೀಕ್ಷಿತವಾಗಿ ಯಾವುದೋ ಬೇರೆ ವಾಹನ ಬರಬಹುದು. ಅಥವಾ ನದಿಯಲ್ಲಿ ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುವಾಗ ದೊಡ್ಡ ಅಲೆಗಳು ಬಂದಿದ್ದರೆ ಅದು ಕಡಿಮೆಯಾಗುವವರೆಗೂ ಕಾದು ನಂತರ ಹೋಗುವುದು ಉತ್ತಮ. ಎಷ್ಟೇ ಎಚ್ಚರಿಕೆಯಿಂದ ನದಿ ದಾಟುತ್ತೇನೆಂದರೂ ಒಂದು ವೇಳೆ ನಮಗೆ ತಿಳಿಯದೆ ಎಲ್ಲೋ ಮಳೆಯಾಗಿ ಅನಿರೀಕ್ಷಿತ ಪ್ರವಾಹಗಳು ಬಂದಲ್ಲಿ ಕಷ್ಟವಾಗುತ್ತದೆ. ಅನಿರೀಕ್ಷಿತವಾಗಿ ಬರುವ ವಾಹನಗಳು ಮತ್ತು ಅನಿರೀಕ್ಷಿತವಾಗಿ ಬರುವ ಪ್ರವಾಹಗಳು ನಮ್ಮ ಜೀವನದಲ್ಲಿ ಬರುವ ಅನಿರೀಕ್ಷಿತ ಸಾವು ನೋವುಗಳಾಗಿರುತ್ತದೆ. ಇದಕ್ಕೆ ಪರಿಹಾರವೇನೆಂದರೆ, ಹತ್ತಿರದ ವಾಹನದ ಮೇಲೆ ದೃಷ್ಠಿಯ ಜೊತೆಗೆ ಹಿಂದೆ ಬರುವ ವಾಹನವನ್ನು ಗುರ್ತಿಸಬೇಕು. ಹತ್ತಿರದಲ್ಲಿರುವ ವಾಹನವನ್ನು ಮಾತ್ರ ಕೇಂದ್ರೀಕರಿಸದೆ ದೂರದಲ್ಲಿಯೂ ನಮ್ಮ ದೃಷ್ಠಿಯನ್ನು ಇಟ್ಟು ಮುನ್ನಡೆಯಬೇಕು. ಹಾಗೆಯೇ ಮಳೆಯ ವಾತಾವರಣ ಇರುವಾಗ ನದಿಯನ್ನು ದಾಟಲು ಹೋಗಬಾರದು.

ಅದೇ ರೀತಿ ಜೀವನದಲ್ಲಿ ದೂರದೃಷ್ಠಿಯನ್ನು ಇಟ್ಟುಕೊಂಡು ಮುನ್ನಡೆದರೆ ಸ್ವಲ್ಪವಾದರೂ ಇಂತಹ ಘಟನೆಗಳಿಂದ ಪಾರಾಗಬಹುದು. ಮನೆಯಲ್ಲಿ ಮುಂದಿನ ದಿನಗಳಲ್ಲಿ ಶುಭ ಕಾರ್ಯ ನಡೆಯಬೇಕಿರುತ್ತದೆ. ಅದಕ್ಕೆ ಬಹಳವಾಗಿ ಹಣದ ಅವಶ್ಯಕತೆ ಇರುತ್ತದೆ. ಕಾರ್ಯಕ್ಕೆ ಹಣದ ಮುಗ್ಗಟ್ಟಿನಿಂದ ತಪ್ಪಿಸಿಕೊಳ್ಳಲು ಆ ಶುಭಕಾರ್ಯವನ್ನು ದೃಷ್ಠಿಯಲ್ಲಿಟ್ಟುಕೊಂಡು ಇಂದಿನಿಂದಲೇ ಅಲ್ಪ ಸ್ವಲ್ಪ ಉಳಿತಾಯ ಮಾಡುತ್ತಾ ಬಂದರೆ ಹಣದ ಮುಗ್ಗಟ್ಟಿನಿಂದ ಪಾರಾಗಬಹುದು. ಬಂದಿರುವ ಹಣವನ್ನು ಯಥೇಚ್ಛವಾಗಿ ದುಂದು ವೆಚ್ಚ ಮಾಡಿ ಶುಭ ಕಾರ್ಯದ ವೇಳೆಗೆ ಯಾವುದಾದರೂ ಬರುತ್ತದೆ. ಈಗಿನಿಂದ ಏಕೆ ಉಳಿಸಬೇಕು? ಎಂಬ ಮನೋಭಾವ ಇದ್ದರೆ ಮಾತ್ರ ಕಷ್ಟಕ್ಕೆ ಸಿಲುಕಬಹುದು.

ಯಾವಾಗಲೂ ಮನುಷ್ಯ ದೂರದೃಷ್ಠಿ ಉಳ್ಳವನಾಗಿರಬೇಕು. ಮೊದಲು ಕೆಟ್ಟದ್ದನ್ನು ಯೋಚಿಸಿ ನಂತರ ಒಳ್ಳೆಯದನ್ನು ಯೋಚನೆ ಮಾಡಬೇಕು. ಕೆಟ್ಟದ್ದನ್ನು ಯೋಚಿಸಿ ಎಂದರೆ ಯಾವುದಾದರೂ ಕಾರ್ಯವನ್ನು ಮಾಡುವಾಗ, ಈ ಕಾರ್ಯದಿಂದ ಮುಂದೆ ಒದಗಬಹುದಾದ ಕಷ್ಟಗಳನ್ನು ಮನಗೊಂಡು, ಇದರಿಂದ ಯಾವ ರೀತಿ ಕಷ್ಟ ಬರುತ್ತದೆ? ಅಥವಾ ಅದಕ್ಕೆ ಪರಿಹಾರ ಮಾಡಬೇಕು? ಅಥವಾ ಮಾಡುವ ಕಾರ್ಯದಿಂದ ಒಳ್ಳೆಯದಾಗುತ್ತದೆಯೇ? ಎಂಬ ಬಗ್ಗೆ ಆಲೋಚಿಸಬೇಕು. ಮಾಡುವ ಕಾರ್ಯದಿಂದ ತನಗೆ ಒಳ್ಳೆಯದಾಗಿ ಬೇರೆಯವರಿಗೆ ಕೆಟ್ಟದಾಗುವಂತಿದ್ದರೆ ಅದರಿಂದ ವಿಮುಖರಾಗುವುದು ಒಳ್ಳೆಯದು. ತನಗೆ ಒಳ್ಳೆಯದಾದರೆ ಸಾಕು ಬೇರೆಯವರನ್ನು ಕಟ್ಟಿಕೊಂಡು ನನಗೇನು? ಎಂಬ ನಿರ್ಧಾರವನ್ನು ಕೈಗೊಳ್ಳಬಾರದು. ಮಾಡುವ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗುವಂತಿದ್ದರೆ ಮಾಡಿದರೆ ಎಲ್ಲರೂ ಸಂತೋಷವಾಗಿರಬಹುದು. ಸಮಾಧಾನ ಪಟ್ಟುಕೊಂಡು ತಾಳ್ಮೆಯಿಂದ, ಅತಿಯಾಗಿ ಆಸೆ ಪಡದೆ, ಇರುವುದರಲ್ಲಿಯೇ ಸಂತೋಷಪಟ್ಟು, ಒಂದು ಕೆಲಸವನ್ನು ಮಾಡುವಾಗ ಎರಡೆರಡು ಬಾರಿ ಯೋಚಿಸಿ ನಿರ್ಧಾರ ಕೈಗೊಂಡು ಮುನ್ನಡೆದು ಆದಷ್ಟೂ ಕಷ್ಟಕ್ಕೆ ಸಿಲುಕದಂತೆ ಜೀವನವನ್ನು ನಡೆಸಿಕೊಂಡು ಹೋದರೆ ಮನುಷ್ಯನು ತನ್ನ ಜೀವನದಲ್ಲಿ ಸಂತೋಷದಿಂದಿರಬಹುದು.