Home Local ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಿಚ್ಚಲಮಕ್ಕಿ ವೆಂಕಟರಮಣ ದೇವಳದ ಅರ್ಚಕ

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಿಚ್ಚಲಮಕ್ಕಿ ವೆಂಕಟರಮಣ ದೇವಳದ ಅರ್ಚಕ

SHARE

ಭಟ್ಕಳ: ಇಲ್ಲಿನ ಆಸರಕೇರಿಯಲ್ಲಿರುವ ನಾಮಧಾರಿ ಸಮಾಜದ ಇತಿಹಾಸ ಪ್ರಸಿದ್ಧ ಶ್ರೀ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನದ ಅರ್ಚಕ ಡೆತ್ ನೋಟ್ ಬರೆದಿಟ್ಟು ತನ್ನ ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಆಸರಕೇರಿ ದೇವಸ್ಥಾನದ ಹಿಂಬದಿ ಮನೆಯ ನಿವಾಸಿ ಶ್ರೀನಿವಾಸ್ ರಾಜು ಅಯ್ಯಂಗಾರ್(30) ಆತ್ಮಹತ್ಯೆ ಮಾಡಿಕೊಂಡ ಅರ್ಚಕ. ಶುಕ್ರವಾರ ಬೆಳಗ್ಗೆ ಮಗನ ಮಲಗುವ ಕೋಣೆಗೆ ಹೋದಾಗ ಆತನ ಮೃತದೇಹ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಶ್ರೀನಿವಾಸ್ ಅವರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಗುರುವಾರ ರಾತ್ರಿ ಸಂತೋಷವಾಗಿ ಮಾತನಾಡಿದ್ದ ಮಗ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿರುವುದರಿಂದ ಶ್ರೀನಿವಾಸ್ ಅವರ ತಾಯಿ ಆಘಾತಕ್ಕೊಳಗಾಗಿದ್ದಾರೆ.

ಶ್ರೀನಿವಾಸರ್ ಅವರ ತಂದೆಯೂ ಶ್ರೀ ನಿಚ್ಛಲಮಕ್ಕಿ ವೆಂಕಟರಮಣ ದೇವಳದಲ್ಲಿ ಅರ್ಚಕರಾಗಿದ್ದರು. ಅವರ ಮರಣ ನಂತರ ಪುತ್ರ ಶ್ರೀನಿವಾಸ್ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದರು.

ಯಾರೊಂದಿಗೂ ವೈರತ್ವ ಇರದ ಇವರು ಕೆಲ ವೈಯಕ್ತಿಕ ಕಾರಣಗಳಿಂದ ಮಾನಸಿಕವಾಗಿ ನೊಂದುಕೊಂಡಿದ್ದರು ಎಂದು ಹೇಳಲಾಗಿದೆ. ”ನನ್ನ ಸಾವಿಗೆ ಯಾರೂ ಕಾರಣವಲ್ಲ ನಾನೆ ನನ್ನ ಸಾವಿಗೆ ಕಾರಣ” ಎಂದು ಶ್ರೀನಿವಾಸ್ ರಾಜು ಅಯ್ಯಂಗಾರ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.