Home Article ಜಿಲ್ಲೆಯ ಬಿಜೆಪಿಯಲ್ಲಿ ಹಲವು ಬಣ ಜಗಳಗಳು ಚಿಗುರೊಡೆಯುತ್ತಿವೆ.

ಜಿಲ್ಲೆಯ ಬಿಜೆಪಿಯಲ್ಲಿ ಹಲವು ಬಣ ಜಗಳಗಳು ಚಿಗುರೊಡೆಯುತ್ತಿವೆ.

SHARE

 

ಪ್ರವೀಣ ಹೆಗಡೆ ಕುಮಟಾ

ರಾಜ್ಯ ಬಿಜೆಪಿ ಎಣ್ಣೆ ಬರುವ ಕಾಲಕ್ಕೆ ಗಾಣ ಮುರಿದುಕೊಂಡಿದೆ.ಸಿದ್ದರಾಮಯ್ಯ ಸರಕಾರದ ಅಧಿಕಾರದ ವೈಫಲ್ಯದ ಲಾಭವನ್ನು ಮತಗಳಾಗಿ ಪರಿವರ್ತಿಸಿಕೊಂಡು ಅಧಿಕಾರದ ಗದ್ದುಗೆಯೇರುವ ಎಲ್ಲ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾಗುವ ಹಂತ ತಲುಪಿದೆ. ಹಿಂದೆ ಮಾಡಿದ ತಪ್ಪಿಗೆ ಐದು ವರ್ಷಗಳ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೋಡುವಂತೆ ಮಾಡಿದ್ದ ಬಿಜೆಪಿ ನರೇಂದ್ರ ಮೋದಿಯವರ ಹವಾದಿಂದ ಈಗ ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವದಂತಿಗಳನ್ನೇ ನಂಬಿ ಪುನಃ ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಬಹಿರಂಗ ಕಚ್ಚಾಟದಲ್ಲಿ ತೊಡಗಿದೆ. ಆ ಮೂಲಕ ಮತದಾರರಿಗಿರುವ ಆಯ್ಕೆಯನ್ನೇ ಪರೀಕ್ಷಿಸಿಕೊಳ್ಳುವಂತೆ ಮಾಡುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ನಿರಾಳರಾಗುವದಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿಯಲ್ಲಿರುವಂತೆಯೇ ಜಿಲ್ಲೆಯಲ್ಲಿಯೂ ಬಣ ರಾಜಕೀಯ ಹಿಂದೆಯೂ ಇತ್ತು. ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕ ವಿಶ್ವೇಶ್ವರ ಹೆಗಡೆಯವರ ಪ್ರತ್ಯೇಕ ಬಣಗಳು ಅಸ್ತಿತ್ವದಲ್ಲಿದ್ದವು. ಕೇಂದ್ರ ಸಚಿವ ಅನಂತಕುಮಾರರ ಬಣದಲ್ಲಿ ಕಾಗೇರಿ ಗುರುತಿಸಿಕೊಂಡಿದ್ದರೆ ಅನಂತಕುಮಾರ ಹೆಗಡೆ ಯಡಿಯೂರಪ್ಪನವರ ಬಣದಲ್ಲಿದ್ದಾರೆ. ಈಗಂತೂ ಅನಂತಕುಮಾರ ಹೆಗಡೆ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಆ ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಹತ್ವದ ಸ್ಥಾನದಲ್ಲಿ ಕುಳಿತಿದ್ದಾರೆ. ಈ ನಡುವೆ ಯಡಿಯೂರಪ್ಪನವರ ಪ್ರತಿಸ್ಪರ್ದಿ ಕೆ ಎಸ್ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿ ಯಡಿಯೂರಪ್ಪನವರನ್ನು ಹಿಮ್ಮೆಟ್ಟಿಸುವ ಹೋರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಅವರ ಹೊಸ ಬಣವೊಂದು ತಯಾರಾಗಿದೆ.
ಇನ್ನೇನು ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ಎಲ್ಲಾ ಪಕ್ಷಗಳೂ ತಮ್ಮ ತಮ್ಮ ರಣತಂತ್ರಗಳನ್ನು ಹೆಣೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷ ಕಟ್ಟುವಕುರಿತು,ಸಂಘಟನೆ ಬಲಪಡಿಸುವ ಕುರಿತು ಒಮ್ಮತದಿಂದ ಕೆಲಸಮಾಡಬೇಕಾದ ಪಕ್ಷವೊಂದು ನಾಯಕರುಗಳ ಬಡಿದಾಟದಿಂದ ಸುದ್ದಿಯಾದರೆ ಕಾರ್ಯಕರ್ತರಿಗೂ ಗೊಂದಲವುಂಟಾಗುತ್ತದೆ. ಯಾವ ನಾಯಕನ ಜೊತೆಗಿದ್ದರೆ ಅನುಕೂಲ ಎನ್ನುವ ಲೆಕ್ಕಾಚಾರದಲ್ಲಿ ಎಲ್ಲಾ ಹಿಂಬಾಲಕರೂ ಲೆಕ್ಕ ಹಾಕುತ್ತಾರೆ. ಅದೇರೀತಿ ಈಗ ಬಿಜೆಪಿಯಲ್ಲಿ ಲೆಕ್ಕಾಚಾರ ಪ್ರಾರಂಭವಾಗಿದೆ.ಪಕ್ಷದಲ್ಲಿ ಯಡಿಯೂರಪ್ಪನವರ ಪ್ರಭಾವ ಹಾಗೂ ಈಶ್ವರಪ್ಪನವರ ಬ್ರಿಗೇಡ್ ಶಕ್ತಿಯನ್ನು ತಾಳೆ ಹಾಕುತ್ತಿದ್ದಾರೆ.
ಬಹುತೇಕ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಟಿಕೆಟ್ ಅಕಾಂಕ್ಷಿಗಳ ದಂಡೇ ಇದೆ. ಒಂದೊಂದು ಕ್ಷೇತ್ರದಲ್ಲಿ ಹಲವು ಮುಖಂಡರು ತಮಗೇ ಟಿಕೆಟ್ ದೊರೆಯುತ್ತದೆಯೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇವರಲ್ಲಿ ಕೆಲವರು ಯಡಿಯೂರಪ್ಪ ತಮಗೆ ಆಶ್ವಾಸನೆ ಕೊಟ್ಟಿದ್ದಾರೆ ಎಂದರೆ ಇನ್ನು ಕೆಲವರು ಸಂಘ ಪರಿವಾರಗಳ ಬೆಂಬಲವಿದೆಯೆಂದು ಹೇಳಿಕೊಳ್ಳುತ್ತಿದ್ದಾರೆ. ಇದರ ನಡುವೆ ಈಶ್ವರಪ್ಪನವರು ಯಡಿಯೂರಪ್ಪನವರಿಗೆ ಹೊಡೆದ ಸೆಡ್ಡಿನಿಂದ ಈಶ್ವರಪ್ಪನವರ ಬಣಕ್ಕೆ ಹೋದರೆ ಭಿನ್ನಮತದ ನೆವದಲ್ಲಿ ಬೇಡಿಕೆ ಮಂಡಿಸಿ ಪ್ರಭಾವ ಬೀರಿ ಟಿಕೆಟ್ ಗಿಟ್ಟಿಸಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಚರ್ಚೆಯಲ್ಲಿರುವ ವಿಧಾನಸಭಾ ಕ್ಷೇತ್ರ ಕುಮಟಾ ಮತ್ತು ಹೊನ್ನಾವರವಾಗಿದೆ. ಪ್ರತಿನಿತ್ಯ ಹೊಸಬರ ಸೇರ್ಪಡೆಯೊಂದಿಗೆ ತಮಗೇ ಟಿಕೆಟ್ ಸಿಗುತ್ತದೆ ಎಂದು ಎಲ್ಲಾ ಅಕಾಂಕ್ಷಿಗಳೂ ಹೇಳುತ್ತ ತಿರುಗಾಡುವದು ಉಳಿದ ಪಕ್ಷಗಳವರಿಗೆ ತಮಾಷೆಯ ಸಂಗತಿಯಾಗುತ್ತಿದೆ. ಈಗಾಗಲೇ ದಿನಕರ ಶೆಟ್ಟಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿ ಜೊತೆಗೆ ತಮ್ಮೆಲ್ಲ ಬೆಂಬಲಿಗರನ್ನೂ ಬಿಜೆಪಿಗೆ ಕರೆತರುವ ಕೆಲಸದಲ್ಲಿ ನಿರತರಾಗಿದ್ದಾರೆ. ಪಕ್ಷ ಸೇರುವದಕ್ಕಿಂತ ಮುಂಚೆ ತಮಗೇ ಟಿಕೆಟ್ ಸಿಗುವಕುರಿತು ಪತ್ರಿಕಾ ಹೇಳಿಕೆಯನ್ನೂ ನೀಡಿದ ದಿನಕರ ಶೆಟ್ಟಿ ತಮಗೆ ಟಿಕೆಟ್ ತರುವದು ಹೇಗೆಂದು ಗೊತ್ತು ಎಂದಿದ್ದರು.ಬಿಜೆಪಿ ಸೇರದ ಶೆಟ್ಟರಿಗೆ ಮೊದಲ ಬಿಜೆಪಿ ಪ್ರತಿಸ್ಪರ್ದಿಯೇ ಸೂರಜ್ ನಾಯ್ಕ ಸೋನಿಯವರಾಗಿದ್ದಾರೆ. ಪ್ರಥಮ ಪ್ರಯತ್ನದಲ್ಲಿ ಗೆದ್ದುಬರಲು ವಿಫಲರಾದ ಸೋನಿ ಈಸಲ ಟಿಕೆಟ್ ತಂದು ಆಯ್ಕೆಯಾಗುವ ಕನಸು ಕಂಡಿದ್ದರು.ಶೆಟ್ಟರ ಸೇರುವಿಕೆ ಅವರ ಯೋಚನೆಯನ್ನು ಅಲ್ಲಾಡಿಸಿದಂತಿದೆ.ಬಹಿರಂಗವಾಗಿಯೇ ಶೆಟ್ಟರನ್ನು ವಿರೋಧಿಸಿದ್ದ ಸೋನಿ ಈಶ್ವರಪ್ಪನವರಿಗೆ ಆತ್ಮೀಯರಾಗಿದ್ದಾರೆ ಎಂದು ಬಿಜೆಪಿವಲಯದಲ್ಲಿ ಸುದ್ದಿ ಹರಿದಾಡುತ್ತಿದೆ. ಯಡಿಯೂರಪ್ಪನವರ ಮೇಲೆ ವಿಶ್ವಾಸವಿಟ್ಟ ವೆಂಕಟ್ರಮಣ ಹೆಗಡೆ ಹೊನ್ನಾವರ ಭಾಗದ ಅಭ್ಯರ್ಥಿ ಆಯ್ಕೆಯಾಗದೇ ಬಹಳ ವರ್ಷವಾಗಿದ್ದು ಎಂ ಪಿ ಕರ್ಕಿಯವರ ನಂತರ ಹೊನ್ನಾವರಕ್ಕೆ ಶಾಸಕತ್ವ ಸಿಗುವ ಕುರಿತು ವಿಶ್ವಾಸ ಹೊಂದಿ ವಿಶೇಷ ಪ್ರಯತ್ನದಲ್ಲಿದ್ದಾರೆ. ಡಾ,ಜಿ ಜಿ ಹೆಗಡೆ ಸಂಘಪರಿವಾರಗಳ ಒಲವು ಗಳಿಸಲು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ನಾಗರಾಜ ನಾಯ್ಕ ಮತ್ತು ಗಾಯತ್ರಿ ಗೌಡ ಯಡಿಯೂರಪ್ಪನವರನ್ನೇ ನಂಬಿದ್ದಾರೆ. ಇವರೆಲ್ಲರ ನಡುವೆ ಹೊಸದಾಗಿ ಸುಬ್ರಾಯ ವಾಳ್ಕೆ ಮತ್ತೊಬ್ಬ ಅಕಾಂಕ್ಷಿಯಾಗಿ ಅಡಿಯಿಟ್ಟಿದ್ದಾರೆ. ಚುನಾವಣೆಗೆ ಬಂಡವಾಳ ಹೂಡುವ ಹೊಸ ಹೊಸಬರು ಬರುತ್ತಿದ್ದಂತೆ ಪಕ್ಷ ಮತ್ತಷ್ಟು ಪಂಗಡಗಳಾಗಿ ವಿಭಜನೆಯಾಗುತ್ತಿದೆ.
ನಿನ್ನೆ ಸಿದ್ದಾಪುರಕ್ಕೆ ಬಂದ ಯಡಿಯೂರಪ್ಪನವರ ಭೇಟಿಗೆ ಟಿಕೆಟ್ ಸಿಗುವದಾದರೆ ಕಾಂಗ್ರೆಸ್ ತೊರೆದು ಜೆಡಿಎಸ್ ಅಥವಾ ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ದಿಸಬಯಸುವ ಅಥವಾ ಯಾರೂ ಟಿಕೆಟ್ ನೀಡದಿದ್ದರೆ ಸ್ವತಂತ್ರವಾಗಿಯಾದರೂ ಸ್ಪರ್ದಿಸುವ ಹುಮ್ಮಸ್ಸುಳ್ಳ ಯಶೋಧರ ನಾಯ್ಕ ತೆರಳಿದ್ದು ಕುಮಟಾ ಕ್ಷೇತ್ರಕ್ಕೆ ಮತ್ತೊಬ್ಬ ಟಿಕೆಟ್ ಅಕಾಂಕ್ಷಿಯನ್ನು ಹೆಚ್ಚಿಸುವ ಸೂಚನೆ ನೀಡಿದೆ.
ಇದೆಲ್ಲ ಪೈಪೋಟಿ,ಕಚ್ಚಾಟಗಳು ಕಾಂಗ್ರೆಸ್ ಶಾಸಕಿ ಶಾರದಾ ಶೆಟ್ಟಿಯವರಿಗೆ ನೆಮ್ಮದಿ ನೀಡಿದೆ. ದಿನಕರ ಶೆಟ್ಟಿಯವರ ಬಿಜೆಪಿ ಸೇರ್ಪಡೆಯಿಂದಾಗಿ ಶಕ್ತಿ ಕಳೆದುಕೊಂಡಂತಿರುವ ಜೆಡಿಎಸ್ ಶಾಸಕರಿಗೆ ಪ್ರಬಲ ಪೈಪೋಟಿ ನೀಡುವದು ಸಾಧ್ಯವಿಲ್ಲ. ಈಗ ಪ್ರತಿಸ್ಪರ್ದಿಯಾಗಿರುವದು ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ಒಳಜಗಳ ಹೆಚ್ಚಿದಷ್ಟೂ ಶಾಸಕಿ ಶಾರದಾ ಶೆಟ್ಟರಿಗೆ ಲಾಭ. ಆದ್ದರಿಂದ ಅವರು ನೆಮ್ಮದಿಯಾಗಿದ್ದಾರೆ.ಬಣ ಜಗಳದಿಂದ ಟಿಕೆಟ್ ಯಾರಿಗೆ ಸಿಗುತ್ತದೆ ಎನ್ನುವ ವಿಷಯ ಕಗ್ಗಂಟಾದರೂ ಮುಂದೆಯೂ ಹೀಗೇ ಕಚ್ಚಾಟದಲ್ಲಿ ತೊಡಗಿದರೆ ಕುಮಟಾ ಹೊನ್ನಾವರ ಮತದಾರರಿಗೆ ಬೇರೆ ಆಯ್ಕೆಯೇ ಇಲ್ಲವೆನ್ನುವದು ಮಾತ್ರ ಸತ್ಯ.