Home Important ಗೋಸಂರಕ್ಷಣೆಗೆ ಬದ್ಧರಾದ ಅಭ್ಯರ್ಥಿಗಳಿಗೆ ಮತಚಲಾಯಿಸುವಂತೆ ರಾಘವೇಶ್ವರ ಶ್ರೀ ಕರೆ

ಗೋಸಂರಕ್ಷಣೆಗೆ ಬದ್ಧರಾದ ಅಭ್ಯರ್ಥಿಗಳಿಗೆ ಮತಚಲಾಯಿಸುವಂತೆ ರಾಘವೇಶ್ವರ ಶ್ರೀ ಕರೆ

SHARE

ಗೋಸಂರಕ್ಷಣೆಯ ಕುರಿತಾಗಿ ಬದ್ಧತೆ ಹೊಂದಿರುವ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು Twitter ಮೂಲಕ ಸಮಸ್ತ ಜನತೆಗೆ ಕರೆನೀಡಿದ್ದಾರೆ.

“ಮತದಾನವನ್ನು ಸರಿಯಾಗಿ ಮಾಡಿದರೆ- ನಾಡನ್ನು ಒಳಿತು ಆಳುವಂತೆ- ಜನವೆಲ್ಲ ಸುಖದಲ್ಲಿ ಬಾಳುವಂತೆ- ವಿಶ್ವರಂಗದಲ್ಲಿ ನಮ್ಮ ರಾಷ್ಟ್ರವು, ರಾಷ್ಟ್ರರಂಗದಲ್ಲಿ ನಮ್ಮ ರಾಜ್ಯವು ರಾಮರಾಜ್ಯವಾಗಿ ರಾರಾಜಿಸುವಂತೆ ಆಗುವಲ್ಲಿ ನಾವು ಕಾರಣರಾಗಬಹುದು. ಅಂತೆಯೇ, ಮತದಾನವನ್ನು ಮಾಡದಿದ್ದರೆ ಅಥವಾ ಸಮರ್ಪಕವಾಗಿ ಮಾಡದಿದ್ದರೆ- ಕೆಡುಕು ನಾಡನ್ನೇ ಕೆಡಿಸಲು, ಜನಸುಖದ ಸರ್ವನಾಶವೇ ಘಟಿಸಲು, ರಾಜ್ಯ-ರಾಷ್ಟ್ರಗಳ ಮರ್ಯಾದೆಗೆ ಮಸಿ ಬಳಿಯಲೂ ಕಾರಣರು ನಾವೇ ಆಗುತ್ತೇವೆ” ಎಂದು ತಮ್ಮ ಬ್ಲಾಗಿನಲ್ಲಿ ಮತದಾನದ ಔಚಿತ್ಯವನ್ನು ತಿಳಿಸಿ ಮತಜಾಗೃತಿ ಮೂಡಿಸಿದ್ದಾರೆ.

ಮತದಾನವು ಪ್ರತಿಯೊಬ್ಬ ಪ್ರಜೆಯ ಆದ್ಯಕರ್ತವ್ಯ; ಸಮಸ್ತ ರಾಜ್ಯದ/ದೇಶದ ಒಳಿತು-ಕೆಡುಕುಗಳು ಮತದಾನವನ್ನವಲಂಬಿಸಿವೆ, ಎಂದರೆ ನಮ್ಮನ್ನೇ ಅವಲಂಬಿಸಿವೆ! ಆದುದರಿಂದ ನೀವೆಲ್ಲರೂ ಮತದಾನವನ್ನು ತಪ್ಪದೇ ಮಾಡಬೇಕು ಮತ್ತು ಯೋಗ್ಯರಿಗೇ ಮಾಡಬೇಕು ಎಂದು ಕರೆನೀಡಿರುವ ಶ್ರೀಗಳು, ಗೋಸಂರಕ್ಷಣೆಯ ಕುರಿತಾಗಿ ಅಭ್ಯರ್ಥಿಯ ಬದ್ಧತೆಯನ್ನು ಖಚಿತಪಡಿಸಿಕೊಂಡು ಆನಂತರ ಯೋಗ್ಯ ಅಭ್ಯರ್ಥಿಗೆ ಮತಚಲಾವಣೆ ಮಾಡುವಂತೆ Tweet ಮೂಲಕ ತಿಳಿಸಿದ್ದಾರೆ ;

” ಮತದಾನದ ಮೊದಲು ನಿಮಗಿದು ಅಂತಿಮ ಸಂದೇಶ: ಮತವೀಯುವ ಮೊದಲು ಅಭ್ಯರ್ಥಿಯ ಗೋರಕ್ಷಣೆಯ ಬದ್ಧತೆಯನ್ನು ಖಚಿತಪಡಿಸಿಕೊಳ್ಳಿ.. ”

– ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ