Home Local ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ ಕಾರವಾರದ ಶಾಸಕ ಸತೀಶ ಸೈಲ್! ಮನೆಯಲ್ಲಿ ಏನು ಮಾಡಿದರು ಗೊತ್ತಾ?

ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ ಕಾರವಾರದ ಶಾಸಕ ಸತೀಶ ಸೈಲ್! ಮನೆಯಲ್ಲಿ ಏನು ಮಾಡಿದರು ಗೊತ್ತಾ?

SHARE

ಕಾರವಾರ: ಒಂದೆಡೆ ಅಬ್ಬರದ ಪ್ರಚಾರ, ಸದಾ ತುಂಬಿ ತುಳುಕುತಿದ್ದ ಜನರ ಸಂತೆ, ಟೀಕೆ ಟಿಪ್ಪಣಿಗಳ ನಡುವೆ ತಾನು ಗೆಲ್ಲಬೇಕೆಂಬ ಹಂಬಲದಲ್ಲಿ ವಿಧಾನಸಭಾ ಚುನಾವಣೆಯ ರಂಗಿನ ರಣರಂಗದಲ್ಲಿ ಸದಾ ಬಿಸಿಯಾಗಿದ್ದ ಪ್ರತಿಷ್ಠಿತ ಕಣವಾದ ಕಾರವಾರ ವಿಧಾನಸಭಾ ಕ್ಷೇತ್ರದ ಮೂರು ಪಕ್ಷದ ನಾಯಕರು ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

ಸದಾ ಜನರ ಮಧ್ಯೆ ಇರುವ ನಾಯಕರು ತಮ್ಮ ವೈಯಕ್ತಿಕ ಬದುಕಿಗೆ ಸಮಯ ಕೊಟ್ಟದ್ದು ಅಲ್ಪ ಸಮಯ. ಇದೇ ತಿಂಗಳ 15 ರಂದು ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ನಾಯಕರು ಇಂದು ತಮ್ಮ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ಅಡುಗೆ ಮಾಡಿ ಕುಟುಂಬವರಿಗೆ ಬಡಿಸಿದ್ದಾರೆ.

ಕಳೆದ ಎರಡು ತಿಂಗಳ ಚುನಾವಣಾ ಕುರುಕ್ಷೇತ್ರಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇನ್ನು 15ನೇ ದಿನಾಂಕದಂದು ಜನರ ನಿರ್ಧಾರದ ಫಲಿತಾಂಶ ಬರಬೇಕಿದೆ. ತಾವು ಪಟ್ಟ ಶ್ರಮದ ನಿರೀಕ್ಷೆಯಲ್ಲಿ ನಾಯಕರು ಒತ್ತಡದಲ್ಲಿ ಇರೋದು ಸಹಜವಾಗಿದೆ. ತ್ರಿಕೋನ ಸ್ಪರ್ಧೆ ಇರುವ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್, ಜೆಡಿಎಸ್ ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತು ಬಿಜೆಪಿಯಿಂದ ರೂಪಾಲಿ ನಾಯ್ಕ ಸ್ಪರ್ಧಿಸಿದ್ದರು.

ಕಳೆದ ಎರಡು ತಿಂಗಳಿಂದ ಕ್ಷೇತ್ರ ಸುತ್ತಿ ಪ್ರಚಾರ ನಡೆಸಿ ದಣಿದಿರುವ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೋವಾಕ್ಕೆ ತೆರಳಿ ರಿಲ್ಯಾಕ್ಸ್ ಮಾಡುತ್ತಿದ್ದು, ಅವರ ಅಧಿಕೃತ ನಿವಾಸ ಜನರಿಲ್ಲದೇ ಬಿಕೋ ಎನ್ನುತಿತ್ತು. ಒತ್ತಡ ಮರೆಯಲು ಜನರಿಂದ ದೂರ ವಿರಲು ಬಯಸಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಾರವಾರದ ಸೋನಾರವಾಡದಲ್ಲಿರುವ ಮನೆಯ ಮುಂಭಾಗಕ್ಕೆ ಬೀಗ ಹಾಕಿ ಒಳ ಸೇರಿದ್ದಾರೆ. ಮನೆಯ ಬಳಿ ಬಂದ ಜನರ ಸಂಪರ್ಕಕ್ಕೆ ಸಿಗಲಿಲ್ಲ.

ಇನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ರವರ ಮಾಜಾಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಮನೆ ಕೂಡ ಯಾವುದೇ ಕಾರ್ಯಕರ್ತರ ಸದ್ದಿಲ್ಲದೇ ತಟಸ್ಥವಾಗಿತ್ತು. ಶಾಂತವಾಗಿದ್ದ ಮನೆಯಲ್ಲಿ ಸತೀಶ್ ಸೈಲ್ ಪತ್ನಿ ಕಲ್ಪನಾರೊಂದಿಗೆ ಅಡುಗೆ ಮನೆ ಸೇರಿ ಮಧ್ಯಾಹ್ನದ ಊಟಕ್ಕಾಗಿ ಚಿಕನ್ ತಯಾರಿಸಿದ್ದಾರೆ. ಅವರ ಕುಷಲೋಪರಿ ವಿಚಾರಿಸಲು ಬಂದವರಿಗೆ ತಮ್ಮ ಕೈಯಾರೆ ಟೀ ಮಾಡಿ ನೀಡಿದ್ದಾರೆ.