Home Uncategorized ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಬಿಎಸ್‌ವೈಗೆ ಸವಾಲು ; ವಿಶ್ವಾಸ ಮತ ಸಾಬೀತಿಗೆ ಸಂಜೆ 4ರ ಮುಹೂರ್ತ.

ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಬಿಎಸ್‌ವೈಗೆ ಸವಾಲು ; ವಿಶ್ವಾಸ ಮತ ಸಾಬೀತಿಗೆ ಸಂಜೆ 4ರ ಮುಹೂರ್ತ.

SHARE

ಕ್ಷಣಗಣನೆ…ಅಧಿವೇಶನದ ಹಿನ್ನೆಲೆಯಲ್ಲಿ ಶುಕ್ರವಾರ ಸದನದ ಪೀಠೊಪಕರಣಗಳನ್ನು ಸ್ವಚ್ಛಗೊಳಿಸಲಾಯಿತು.
ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಅನೇಕ ವಿದ್ಯಮಾನಗಳು ಜರುಗಿ, ಅದೀಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿ, 15 ದಿನ ಕಾಲಾವಕಾಶ ಕೊಟ್ಟಿದ್ದರ ವಿರುದ್ಧ ಸಿಡಿದೆದ್ದ ಜೆಡಿಎಸ್‌-ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರ ಮುಂದುವರಿಯಲು ಬಿಡಬಾರದೆಂದು ಪಣತೊಟ್ಟು ನಿಂತಿದ್ದರೆ, ಬಿಜೆಪಿ ಬಹುಮತ ಸಾಬೀತು ಪಡಿಸುವ ಆತ್ಮವಿಶ್ವಾಸದಲ್ಲಿದೆ. ಈ ಫೈನಲ್‌ ಹಣಾಹಣಿಗೆ ಕ್ಷಣಗಣನೆ ಆರಂಭಗೊಂಡಿದೆ.

ಬೆಂಗಳೂರು: ಸರ್ಕಾರ ರಚನೆ ಕುರಿತ ರಾಜಕೀಯ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ದೇಶದ ಗಮನವೇ ಈಗ ಕರ್ನಾಟಕದತ್ತ ನೆಟ್ಟಿದೆ!

ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿ ಆಹ್ವಾನಿಸಿದ ಬಳಿಕ ನಡೆದ ರಾಜ್ಯ ರಾಜಕೀಯದ ಸಂಚಲನ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್‌ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆದೇಶಿಸಿದೆ.

ಆದರೆ, ಯಡಿಯೂರಪ್ಪ ಬಹುಮತ ಸಾಬೀತುಪಡಿಸುವರೇ, ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ. ಈ ಪ್ರಕ್ರಿಯೆ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಅವಲಂಬಿಸಿದ್ದು, ರಾಜ್ಯ ರಾಜಕೀಯ ಕುತೂಹಲಕಾರಿ ತಿರುವು ಪಡೆದುಕೊಳ್ಳಲಿದೆ. ಒಂದೊಮ್ಮೆ ಬಹುಮತ ಸಾಬೀತು ಸಾಧ್ಯವಾಗದಿದ್ದಲ್ಲಿ, ಬಿಜೆಪಿ ಕೂಡ ಕಾನೂನು ಹೋರಾಟಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

221 ಸದಸ್ಯ ಬಲದ ಪೈಕಿ ಬಹುಮತ ಸಾಬೀತಿಗೆ 112 ಸ್ಥಾನಗಳು ಬೇಕು. ಬಿಜೆಪಿ 104 ಸ್ಥಾನ ಹೊಂದಿದ್ದರೂ ತಾವು ಶನಿವಾರ ಬಹುಮತ ಸಾಬೀತುಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ದನಿಗೂಡಿಸುತ್ತಿದೆ. ಆದರೆ, ನಮ್ಮ ಬಳಿ 116 ಶಾಸಕರಿದ್ದು, ವಿಶ್ವಾಸಮತ ನಿರ್ಣಯಕ್ಕೆ ಸೋಲಾಗುವುದು ಖಚಿತ. ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಹೇಳುತ್ತಿದೆ. ಹೀಗಾಗಿ ಶನಿವಾರ ಸಂಜೆಯ ವೇಳೆ ಏನಾಗುವುದೋ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕಾಗಿದ್ದರಿಂದ ಬಹುಮತ ಸಾಬೀತು ಪಡಿಸಲು ರಾತ್ರಿಯೇ ಆಗಲೂಬಹುದು.

ಒಂದೊಮ್ಮೆ ಯಡಿಯೂರಪ್ಪ ಬಹುಮತ ಸಾಬೀತುಪಡಿಸಿದರೆ ಮುಂದಿನ ಆರು ತಿಂಗಳು ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಸಚಿವ ಸಂಪುಟ ವಿಸ್ತರಣೆ ಸೇರಿ ಮುಂದಿನ ಪ್ರಕ್ರಿಯೆಗಳನ್ನು ನಡೆಸಬಹುದು. ಬಹುಮತ ಸಾಬೀತುಪಡಿಸಲು ವಿಫ‌ಲರಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ಬಳಿಕ ರಾಜ್ಯಪಾಲರು ಜೆಡಿಎಸ್‌-ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಆಹ್ವಾನ ನೀಡಬೇಕಾಗುತ್ತದೆ. ಆಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ಬಿರುಸಿನ ರಾಜಕೀಯ ಚಟುವಟಿಕೆ

* ಶನಿವಾರವೇ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಸೂಚಿಸಿದ ಬೆನ್ನಲ್ಲೇ ಶುಕ್ರವಾರ ರಾಜಕೀಯ ಚಟುವಟಿಕೆಗಳು ಭಿರುಸುಗೊಂಡವು.

* ಆಪರೇಷನ್‌ ಕಮಲ ಭೀತಿಯಿಂದ ಹೈದರಾಬಾದ್‌ಗೆ ತೆರಳಿದ್ದ ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಅಲ್ಲೇ ಸಂಭ್ರಮಾಚರಣೆ ಮಾಡಿ ಶನಿವಾರದ ಕಲಾಪಕ್ಕೆ ಬೆಂಗಳೂರಿಗೆ ಆಗಮಿಸಲು ಸಿದ್ಧತೆ ನಡೆಸಿದರು.

* ಶಾಸಕರನ್ನು ಕರೆತರಲು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಹೈದರಾಬಾದ್‌ಗೆ ತೆರಳಿ, ಅಲ್ಲಿಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

* ಇತ್ತ ಸರ್ಕಾರ ಉಳಿಸಿಕೊಳ್ಳಲು ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್‌, ಪ್ರಕಾಶ್‌ ಜಾವಡೇಕರ್‌, ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದರು. ಮುಂದೆ ಮಾಡಬೇಕಾದ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಹಂಗಾಮಿ ಸ್ಪೀಕರ್‌ ಖಡಕ್‌ ಬೋಪಯ್ಯ

ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡುತ್ತಿದ್ದಂತೆ ವಿಧಾನಸಭೆ ಕಲಾಪಕ್ಕೆ ಸಿದ್ಧತೆ ತೀವ್ರವಾಗಿದ್ದು, ಶಾಸಕರ ಪ್ರಮಾಣವಚನ ಸ್ವೀಕಾರ ಮತ್ತು ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆಸಲು ರಾಜ್ಯಪಾಲ ವಜೂಭಾಯಿ ವಾಲಾ ಅವರು ಬಿಜೆಪಿಯ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಿದ್ದಾರೆ. ಮುಂದಿನ ಸ್ಪೀಕರ್‌ ಆಯ್ಕೆವರೆಗೆ ಅವರು ಕಲಾಪ ನಡೆಸಿಕೊಡುತ್ತಾರೆ. ಈ ನಡುವೆ ಬೋಪಯ್ಯ ನೇಮಕದ ವಿರುದ್ಧವೂ ಕಾಂಗ್ರೆಸ್‌ ಕೋರ್ಟ್‌ ಮೆಟ್ಟಿಲೇರಿದ್ದು, ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.