Home Local ಭೂರಮೆಯ ಮಡಿಲಲ್ಲಿ ಗೋಸ್ವರ್ಗ ಲೋಕಾರ್ಪಣೆಗೆ ಕ್ಷಣಗಣನೆ

ಭೂರಮೆಯ ಮಡಿಲಲ್ಲಿ ಗೋಸ್ವರ್ಗ ಲೋಕಾರ್ಪಣೆಗೆ ಕ್ಷಣಗಣನೆ

SHARE

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಸಹ್ಯಾದ್ರಿ ಶೃಂಗದಲ್ಲಿ ರಾರಾಜಿಸುವ ರಮಣೀಯ ಪ್ರಕೃತಿಯ ನಡುವೆ ವಿಶ್ವದ ಏಕೈಕ ಹಾಗೂ ಮೊಟ್ಟಮೊದಲ ಗೋವುಗಳ ಸ್ವಚ್ಛಂದ ಓಡಾಟದ ಗೋಸ್ವರ್ಗ ಈ ತಿಂಗಳ 27ರಂದು ಲೋಕಾರ್ಪಣೆಗೊಳ್ಳಲಿದೆ.

ಹಸಿರು ಹೊದ್ದ ಊರು ಬಾನ್ಕುಳಿಯ ತಂಪು ಪರಿಸರದಲ್ಲಿ ಪುಟ್ಟ ಪುಟ್ಟ ಬೆಟ್ಟಗಳ ನಡುವೆ ಭತ್ತ ಬೆಳೆಯುವ ಬಯಲು, ಇದರ ಮಧ್ಯದಲ್ಲಿ ಪೂರ್ವಾಚಾರ್ಯರು ನಿರ್ಮಿಸಿದ ಪುಟ್ಟ ಪುಷ್ಕರಣಿ, ಗದ್ದೆಯಂಚಿನಲ್ಲಿ ಹರಿವ ಮಧುರ, ನಿರ್ಮಲ, ಶೀತಲ ಜಲದ ಕಿರುತೊರೆಯ ರಮ್ಯ ಮನೋಹರ ಪರಿಸರದಲ್ಲಿ ಗೋಸ್ವರ್ಗ ತಲೆ ಎತ್ತುತ್ತಿದೆ.

ಸುಮಾರು 100 ಎಕರೆ ಪ್ರದೇಶದಲ್ಲಿ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಪರಿಕಲ್ಪನೆ ಗೋಸ್ವರ್ಗದ ಮೂಲಕ ಸಾಕಾರಗೊಂಡಿದೆ. ಸಹಸ್ರ ಗೋವುಗಳು ಸ್ವಚ್ಛಂದವಾಗಿ ವಿಹರಿಸುವ ಅವಕಾಶ ಕಲ್ಪಿಸಲಾಗಿದೆ. ಜಗತ್ಪ್ರಸಿದ್ಧ ಜೋಗ ಜಲಪಾತದಿಂದ ಸುಮಾರು 20 ಕಿಲೋಮೀಟರ್ ಅಂತರದಲ್ಲಿರುವ ಈ ರಮ್ಯ ತಾಣ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನಕ್ಷೆಗೆ ಹೊಸ ಸೇರ್ಪಡೆಯಾಗಲಿದೆ.

ಗೋವುಗಳ ಮುಕ್ತ ಆಹಾರ- ವಿಹಾರಕ್ಕಾಗಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಭವ್ಯ ಗೋಧಾಮ, ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಜ್ಜಾಗಿದೆ. ಗೋಸ್ವರ್ಗವನ್ನು ಸಮಗ್ರ ಗೋಸೌಖ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದ್ದು, ಗೋವಂಶದ ಸಹಜ ಹುಟ್ಟು, ಸಹಜ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಲಾನ್ಯಾಸಗೊಂಡು ಕೇವಲ 80 ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ ಈ ವಿಶಿಷ್ಟ ಯೋಜನೆ, ಭಾರತೀಯ ಗೋವಂಶದ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ಹೊಸ ಮಾರ್ಗವನ್ನು ದೇಶಕ್ಕೆ ತೋರಿಸಿಕೊಡಲಿದೆ.

ಪಶ್ಚಿಮ ಘಟ್ಟದ ಎರಡು ಬೆಟ್ಟಗಳ ನಡುವಿನ ಬಯಲು ಪ್ರದೇಶದಲ್ಲಿ ಗೋಸ್ವರ್ಗ ತಲೆ ಎತ್ತಿದ್ದು, ಗೋತೀರ್ಥ ಸರೋವರದ ಮಧ್ಯದ ಸಪ್ತಸಾನ್ನಿಧ್ಯ, ಆಸ್ತಿಕ ಭಕ್ತರಿಗೆ ವಿಶಿಷ್ಟ ಅನುಭವ ನೀಡಲಿದೆ. ಸರೋವರದ ಮಧ್ಯೆ ಶಿಲಾಮಂಟಪದಲ್ಲಿ ಜಲರೂಪದ ಸಪ್ತಸನ್ನಿಧಿ, ಸರೋವರದ ಸುತ್ತ ನಾಲ್ಕು ಗೋ ಪದ ವೇದಿಕೆಗಳು, ಗೋವುಗಳ ವಿಶ್ರಾಂತಿಗಾಗಿ 30 ಸಾವಿರ ಚದರ ಅಡಿಯ ಗೋವಿರಾಮ ಮಂಟಪ, ಸ್ವಚ್ಛಂದ ವಿಹಾರಕ್ಕೆ 70 ಸಾವಿರ ಚದರ ಅಡಿಯ ವಿಶಾಲ ಪ್ರದೇಶ, ಗೋವುಗಳಿಗೆ ಬೇಕೆನಿಸಿದಾಗ ಮೇವು ಒದಗಿಸುವ ಸದಾತೃಪ್ತಿ, ಜಲಪಾನಕ್ಕಾಗಿ ಸುಧಾಸಲಿಲ, ತೀರ್ಥಪಥ, ಪ್ರೇಕ್ಷಾಪಥ, ರಥಪಥ, ತೀರ್ಥಸ್ನಾನಕ್ಕಾಗಿ ಗೋಗಂಗಾ ಸ್ನಾನಘಟ್ಟ, ಗೋಪಾಲಕರ ವಸತಿಗಾಗಿ ಗೋಪಾಲ ಭವನ, ಪಶ್ಚಿಮ ಅಂಚಿನಲ್ಲಿ ಗೋಧಾರಾ ತೊರೆ, ತೊರೆಯ ತೀರದಲ್ಲಿ ಗೋವರ್ಧನ ಗಿರಿ, ಗಿರಿಯ ಮೇಲೆ ಕಂಗೊಳಿಸುವ ಗೋನಂದನ ಉದ್ಯಾನ, ಗಿರಿಯ ನೆತ್ತಿನಲ್ಲಿ ವೀಕ್ಷಾಗೋಪುರ, ಹಸಿಮೇವಿಗಾಗಿ ಮೇವು ಬೆಳೆಸುವ ಸುಗ್ರಾಸದಂಥ ವಿಶಿಷ್ಟ ಅಂಶಗಳು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿವೆ.

ಸ್ವಚ್ಛ ಪರಿಸರದಲ್ಲಿ ಸ್ವಚ್ಛಂದ ವಿಹಾರ

ಗೋಸ್ವರ್ಗದಲ್ಲಿ ಗೋವುಗಳಿಗೆ ಬಂಧನದ ಬವಣೆ ಇಲ್ಲ. ವಿಶಾಲ, ನಿರ್ಮಲ, ರಮಣೀಯ ಪರಿಸರದಲ್ಲಿ ಅವು ತಮ್ಮಿಚ್ಛೆಯಂತೆ ವಿಹರಿಸಬಹುದು. ಬಿಸಿಲು- ನೆರಳು ಆಯ್ಕೆ ಕೂಡಾ ಅವುಗಳದ್ದೇ. ಗೋನಿವಾಸದಲ್ಲಿ ಶೇಕಡ 70ರಷ್ಟು ಪ್ರದೇಶ ಸೂರ್ಯರಶ್ಮಿಗೆ ತೆರೆದುಕೊಂಡಿದ್ದರೆ, ಉಳಿದ 30 ಭಾಗದಲ್ಲಿ ಛಾವಣಿ ಇದೆ. ಎಲ್ಲಿಗೂ ಗೋಡೆಗಳ ಬಂಧನವಿಲ್ಲ. ತಮಗೆ ಹಿತವೆನಿಸಿದಲ್ಲಿ ಗೋವುಗಳು ವಿಹರಿಸಲು ಅವಕಾಶ ಕಲ್ಪಿಸಲಾಗಿದೆ.

ಗೋವುಗಳು ಇಷ್ಟಪಡುವ, ಅವುಗಳಿಗೆ ಪುಷ್ಟಿ ನೀಡುವ ಮೇವನ್ನು ಸುಗ್ರಾಸ ಯೋಜನೆಯಡಿ ವಿಷಮುಕ್ತ ಕೃಷಿಪದ್ಧತಿಯಲ್ಲಿ ಬೆಳೆಸಿ, ಗೋವುಗಳಿಗೆ ಸದಾಕಾಲವೂ ತೃಪ್ತಿಯಾಗುವಷ್ಟು ಮೇವನ್ನು ಪೂರೈಸಲಾಗುತ್ತದೆ. ಬೇಕಾದಾಗ, ಬೇಕಾದಷ್ಟು ಮೇವು ಮೆಲ್ಲುವ ಸ್ವಾತಂತ್ರ್ಯವೂ ಗೋಸ್ವರ್ಗದ ವಿಶೇಷ. ಎಲ್ಲ ಸಮಯದಲ್ಲೂ ಪರಿಶುದ್ಧ ಪ್ರಾಕೃತಿಕ ಜಲ ಶಿಲಾಮಯವಾದ ಮಹಾಪಾತ್ರಗಳಲ್ಲಿ ಲಭ್ಯ.

ಕರು ಸದಾ ತಾಯಿಯ ಕಣ್ಮುಂದೆಯೇ ಕುಣಿದಾಡುತ್ತಿರಲು ಅವಕಾಶ ಕಲ್ಪಿಸುವ ಧೇನುಶಾಲೆ, ತಾಯಿಯ ಹಾಲು ಕರುವಿಗೆ ಸದಾ ಲಭ್ಯವಾಗುವ ವ್ಯವಸ್ಥೆ, ರೋಗಮುಕ್ತ ಪರ್ಯಾವರಣದ ನಡುವೆಯೇ ಸರ್ವಸಜ್ಜಿತ ಗೋಚಿಕಿತ್ಸಾಲಯ, ಸಹಜ ಗೋಸಂವರ್ಧನೆಗೆ ಅವಕಾಶದಂಥ ಹತ್ತು ಹಲವು ವೈಶಿಷ್ಟ್ಯಗಳು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಲಿವೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಗೋ ಪ್ರವಾಸೋದ್ಯಮಕ್ಕೆ ವಿಶಿಷ್ಟ ಪರಿಕಲ್ಪನೆ ಅವಕಾಶ ಕಲ್ಪಿಸಲಿದ್ದು, ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಒದಗಿಸಲಿದೆ.

ಗೋಶಾಲೆ ವೀಕ್ಷಿಸಿಲು ವ್ಯವಸ್ಥೆ:

ಗೋಸ್ವರ್ಗದ ಒಳಗೆ ಹಾಗೂ ಹೊರಗೆ ಸಾರ್ವಜನಿಕ ವೀಕ್ಷಿಸಲು ಪ್ರೇಕ್ಷಾಪಥ ರಚಿಸಲಾಗಿದೆ. ಇದರ ಮೂಲಕ ಗೋವುಗಳ ಸ್ವಚ್ಛಂದ ವಿಹಾರದ ಜತೆಗೆ ಜನರೂ ಸ್ವಚ್ಛಂದವಾಗಿ ಓಡಾಡಬಹುದಾಗಿದೆ. ಜೊತೆಗೆ ಪಕ್ಕದಲ್ಲೇ ಗೋನಂದನ ಉದ್ಯಾನವನವಿರಲಿದ್ದು, ಅಲ್ಲಿಯ ವೀಕ್ಷಾ ಗೋಪುರದಿಂದಲೂ ಗೋಸ್ವರ್ಗ ವೀಕ್ಷಣೆ ಮಾಡಬಹುದಾಗಿದೆ.

3D View: