Home Local ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ – ರಾಘವೇಶ್ವರ ಶ್ರೀ

ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ – ರಾಘವೇಶ್ವರ ಶ್ರೀ

SHARE

ಬಾನ್ಕುಳಿ: ಉತ್ತಮ ಕಾರ್ಯಗಳನ್ನು ಯಾರೋ ಮಾಡಬೇಕು ಎಂದು ಬಯಸುವುದು ಸರಿಯಲ್ಲ, ಸರ್ಕಾರ ಮಾಡಬೇಕು, ಬೇರೆಯಾರೋ ಮಾಡಬೇಕು ಎಂದು ಕಾಯುತ್ತಾ ಕೂರುವುದಲ್ಲ. ಉತ್ತಮವಾದ ಹಾಗೂ ಆಗಬೇಕಾದ ಕಾರ್ಯಗಳನ್ನು ನಾವೇ ಮಾಡಬೇಕು. ಹಾಗಾಗಿ ಈ ಕಾರ್ಯಕ್ಕೆ ನಾವು ತೊಡಗಿಸಿಕೊಂಡೆವು. ಇದನ್ನು ಮಾದರಿಯಾಗಿಸಿಕೊಂಡು ಊರು ಊರುಗಳಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯಬೇಕಾಗಿದೆ. ಗೋಶಾಲೆಗಳು ಹಲವಿದೆ, ಆದರೆ ಜಗತ್ತಿನ ಏಕೈಕ ಗೋಸ್ವರ್ಗ ಇದಾಗಿದೆ. ಗೋವಿನ ನೋವಿಗೆ ಅಂತ್ಯ ಹಾಡಲು, ಗೋಸೌಖ್ಯ ಕೇಂದ್ರಿತ ಗೋಧಾಮ ನಿರ್ಮಿಸಲು ಸಂಕಲ್ಪಿಸಿದೆವು ಎಂದು ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಗಳು ಹೇಳಿದರು.

ಅವರು ಸಿದ್ದಾಪುರ ಸಮೀಪದ ಶ್ರೀ ರಾಮದೇವ ಬಾನ್ಕುಳಿ ಮಠದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಮಾದರಿ ಗೋಶಾಲೆ ಗೋಸ್ವರ್ಗದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೋವಿಗೆ ಗೋಗ್ರಾಸ ನೀಡಿ ಆಶೀರ್ವಚನ ನೀಡಿದರು.

ಎಂಬತ್ತು ದಿನಗಳಲ್ಲಿ ಗೋಸ್ವರ್ಗ ನಿರ್ವಾಣವಾಗಿದ್ದು ಗೋಪ್ರೇಮಿಗಳ ಶಕ್ತಿಯ ಪ್ರತೀಕ. ಇಲ್ಲಿ ನಾವು ನಿಮಿತ್ತ ಮಾತ್ರ. ಯಾವುದೋ ದೈವಶಕ್ತಿಯ ಅನುಗ್ರಹದಿಂದ ಇದು ಸಾಧ್ಯವಾಗಿದೆ. ದೇವ ಸಂಕಲ್ಪ ಇದ್ದಾಗ ಆ ಕಾರ್ಯ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಇಂದು ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ಹಾಗೂ ಗೋಪ್ರೇಮ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ. ಇಂದು ಇರುವ ಗೋಸ್ವರ್ಗ ಕೃಷ್ಣ ಶಿಶು ಮಾತ್ರ. ಮುಂದಿನ ದಿನಗಳಲ್ಲಿ ಗೋಸ್ವರ್ಗದ ವಿಶ್ವರೂಪ ದರ್ಶನವಾಗಲಿದೆ. ಯಾವುದು ಸರಿಯೋ ಅದನ್ನು ಮಾಡಬೇಕು. ಸಾಧ್ಯಾಸಾಧ್ಯತೆಯ ಕುರಿತು ಚಿಂತಿಸಬಾರದು. ಕಾರ್ಯಗಳನ್ನು ಮಾಡುವಾಗ ಅಪವಾದ – ಆಪತ್ತು – ವಿಪತ್ತುಗಳು ಎದುರಾಗಬಹುದು, ಆದರೆ ನಾವು ಸರಿಯಾದ ಕಾರ್ಯಗಳನ್ನು ಎಡಬಿಡದೇ ಮಾಡಬೇಕು ಎಂದರು.

ಶ್ರೀಶೈಲ ಜಗದ್ಗುರು ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಗೋಸಂದೇಶ ನೀಡಿ, ಯಾವ ದೇಶಗಳಲ್ಲಿ ಗೋವುಗಳನ್ನು ಪೂಜಿಸುವ ಸಂಸ್ಕೃತಿ ಇದೆಯೋ ಅದೇ ದೇಶದಲ್ಲಿ ಇಂದು ಗೋವು ಭರ್ಭರವಾಗಿ ಹತ್ಯೆಯಾಗುತ್ತಿರುವುದು ದುರ್ದೈವದ ಸಂಗತಿ. ಗೋವುಗಳು ಸ್ವಚ್ಛಂದವಾಗಿ ಇರುವ ವ್ಯವಸ್ಥೆ ಮಾಡಿರುವ ರಾಘವೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ. ಇದು ನಿಜಕ್ಕೂ ಅನ್ವರ್ಥಕ ಸ್ವರ್ಗ. ಎಂಬತ್ತೇ ದಿನಗಳಲ್ಲಿ ಇಂತಹ ನಿರ್ಮಿತಿ ನಿರ್ಮಿಸಿರುವುದು ನಮ್ಮ ಪ್ರಕಾರ ಜಗತ್ತಿನ ಎಂಟನೇ ಅದ್ಭುತ. ಶ್ರೀಗಳ ಎಲ್ಲ ಕಾರ್ಯಕ್ಕೆ ಶ್ರೀಶೈಲ ಪೀಠದ ಸಹಕಾರ ಸದಾ ಇದೆ ಎಂದರು.

ಕಾಂಚಿಕಾಮಕೋಟಿ ಮಠದ ಶ್ರೀ ಶಂಕರವಿಜಯೇಂದ್ರ ಸರಸ್ವತಿ ಶ್ರೀಗಳು ಸಂದೇಶ ಕಳಿಸಿ, ಗೋವುಗಳಿಗೆ ಸ್ವರ್ಗ ಸದೃಶ ಸ್ಥಾನವಾದ ಜಗತ್ತಿನ ಏಕೈಕ ಗೋಸ್ವರ್ಗ ಎಂಬ ಅಪರೂಪದ ಲೋಕವನ್ನು ನಿರ್ಮಿಸುತ್ತಿರುವ ಗೋಕರ್ಣಮಂಡಲಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಹಾಪ್ರಯತ್ನವು ಸಾಕಾರವಾಗಲಿ ಎಂದು ವಿಶೇಷವಾದ ಶ್ಲೋಕರೂಪದಲ್ಲಿ ಸಂದೇಶವನ್ನು ಕಳಿಸಿ ತಮ್ಮ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿರುತ್ತಾರೆ.

ನಾಗಪುರ ಗೋವಿಜ್ಞಾನ ಅನುಸಂಧಾನ ಕೇಂದ್ರದ ಗೋವಿಜ್ಞಾನಿ ಸುನಿಲ್ ಮಾನ್ ಸಿಂಗ್ ಮಾತನಾಡಿ, ಇದು ಗೋಸ್ವರ್ಗವಲ್ಲ ಇದು ವೈಕುಂಠದ ವೈಭವವನ್ನು ಮೀರಿಸುವಂತಿದೆ. ಗೋಮೂತ್ರ ಎಲ್ಲಾ ರೋಗಗಳಿಗೆ ಪರಮೌಷಧವಾಗಿದ್ದು, ಗೋಮಯ ಆರ್ಥಿಕತೆಯ ಮೂಲವಾಗಿದೆ. ಗೋವಂಶದ ಕುರಿತಾಗಿ ರಾಘವೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ. ಪ್ರತಿಯೊಂದು ರಾಜ್ಯದಲ್ಲಿ ರಾಘವೇಶ್ವರ ಶ್ರೀಗಳಂತವರು ಬೇಕಿದ್ದು, ಆಗ ದೇಶಗಳಲ್ಲಿ ಗೋವಂಶವನ್ನು ಉಳಿಸಿ ಬೆಳಸಿಕೊಳ್ಳಬಹುದು ಎಂದರು.

ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಉತ್ತಮ ಸಂಕಲ್ಪ ಇದ್ದಾಗ ಕಾರ್ಯ ಸಾಕಾರವಾಗುತ್ತದೆ. ಎಂಬತ್ತು ದಿನಗಳಲ್ಲಿ ಇಂತಹ ಬೃಹತ್ ನಿರ್ಮಾಣ ಆಗಿರುವುದು ಶ್ರೀಗಳ ಸಂಕಲ್ಪ ಶಕ್ತಿಗೆ ಸಾಕ್ಷಿ ಎಂದರು.

ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಹಟ್ಟಿ ಅವರು ಗೋಸಂದೇಶ ನೀಡಿ ಸ್ವಾಮಿಗಳು ಆಸ್ತಿ ಮಾಡುವುದನ್ನು, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದನ್ನು ನೋಡುತ್ತೇವೆ, ಆದರೆ ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ಸಾಕುತ್ತಿರುವ ಏಕೈಕ ಸ್ವಾಮಿಗಳು ರಾಘವೇಶ್ವರ ಶ್ರೀಗಳು. ನಾನು ಕೂಡ ಶ್ರೀರಾಮಚಂದ್ರಾಪುರಮಠದಿಂದ ಗೋವುಗಳನ್ನು ತೆಗೆದುಕೊಂಡು ಸಾಕುತ್ತಿದ್ದೇನೆ. ನಾವು ಸ್ವರ್ಗವನ್ನು ನೋಡಿಲ್ಲ, ಆದರೆ ಈ ಗೋಸ್ವರ್ಗ ನೋಡಿದ ನಂತರ ಸ್ವರ್ಗವನ್ನು ಮೀರಿಸುವಂತಿದೆ ಎಂದು ಮನಸ್ಸು ಹೇಳುತ್ತಿದೆ. ನಾನು ಸಾಕುತ್ತಿರುವ ಗೋವುಗಳ ಆಶೀರ್ವಾದದಿಂದ ನಾನಗೆ ಜೀವನದಲ್ಲಿ ಉನ್ನತಿಯಾಗಿದೆ. ಪ್ರತಿಯೊಬ್ಬರೂ ಮನೆಯಲ್ಲಿ ಒಂದೊದು ಗೋವುಗಳನ್ನು ಸಾಕಬೇಕು ಎಂದು ಆಶಿಸಿದರು.

ಬಾಷ್ ಸಂಸ್ಥೆಯ ಸಿಎಸ್’ಆರ್ ಮುಖ್ಯಸ್ಥರಾದ ಡಾ. ಎಂಪಿ ಕಾಮತ್ ಮಾತನಾಡಿ, ಮುಖ ಪ್ರಾಣಿ ಗೋವಿನ ಕುರಿತಾಗಿ ನಾವು ತೊಡಗಿಸಿಕೊಳ್ಳಲೇ ಬೇಕು ಎಂದರು.

ಸಾಗರದ ಶಾಸಕ ಹರತಾಳು ಹಾಲಪ್ಪನವರು ಮಾತನಾಡಿ, ನಾಲ್ಕುದಿನಗಳ ಹಿಂದೆ ನಾನು ಭಾನ್ಕುಳಿಗೆ ಭೇಟಿ ನೀಡಿದ್ದೆ. ಎಲ್ಲಾ ಕೆಲಸ ಕಾರ್ಯಗಳು ಬಾಕಿ ಇದ್ದವು. ಲೋಕಾರ್ಪಣೆ ದಿನಕ್ಕೆ ಇದು ಪೂರ್ಣವಾಗುವುದಿಲ್ಲ ಎಂದು ಹೇಳಿದ್ದೆ. ಆದರೆ ಇದು ಬಂದು ನೋಡಿದಾಗ ಆಶ್ಚರ್ಯವಾಗುತ್ತಿದೆ. ಇದು ಶ್ರೀಗಳ ಸಂಕಲ್ಪ ಶಕ್ತಿ ಹಾಗೂ ಗೋಕಾರ್ಯಕ್ಕೆ ಇರುವ ಜನ ಬೆಂಬಲವನ್ನು ಸೂಚಿಸುತ್ತದೆ. ಗೋಸಂರಕ್ಷಣೆಗೆ ನಾವೆಲ್ಲ ದೀಕ್ಷಾಬದ್ಧರಾಗಬೇಕು ಎಂದರು.

ಆರ್ ಎಸ್ ಎಸ್ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಗೋವಿಗೆ ಸ್ವರ್ಗದಂತಹ ಬದುಕನ್ನು ಕಲ್ಪಿಸಿದಾಗ ಅದು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತದೆ. ಜೀವಿಗಳಲ್ಲಿ ತಾಯಿ ಶ್ರೇಷ್ಠ, ತಾಯಿಯಲ್ಲಿ ಗೋತಾಯಿ ಶ್ರೇಷ್ಠ. ಇಂತಹ ಮಹತ್ವದ ವಿಚಾರವನ್ನು ರಾಘವೇಶ್ವರ ಶ್ರೀಗಳು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ಇವೆಲ್ಲವಕ್ಕೂ ನಾವೆಲ್ಲ ಕೈಜೋಡಿಸೋಣ ಎಂದರು.

ಸೊರಬದ ಶಾಸಕ ಕುಮಾರ ಬಂಗಾರ ಮಾತನಾಡಿ, ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಜೀವನದಲ್ಲಿ ಒಂದು ಬಾರಿ ಅನುಭವಿಸಬಹುದಾಗಿದೆ. ಗೋಸ್ವರ್ಗದ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಶ್ರೀಗಳು ಹೇಳಿದಂತೆ ನಾವು ತೊಡಗಿಸಿಕೊಳ್ಳಲು ಬದ್ಧವಾಗಿದ್ದು, ಗೋಸಂರಕ್ಷಣೆಗೆ ಸದಾ ಸಿದ್ದರಿದ್ದೇವೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋಮಾಂಸ ಭಕ್ಷಿಸುವವರು ಮಾತ್ರ ಕಟುಕರಲ್ಲ, ಗೋವನ್ನು ಮಾರುವವರು ಕಟುಕರು. ಶ್ರೀಗಳ ಕಾರ್ಯಗಳಿಗೆ ಸಮಾಜದ ಬೆಂಬಲ ಸದಾ ಇದೆ ಎಂದರು.

ಜೆಎಸ್’ಡಬ್ಲು ಸಂಸ್ಥೆಯ ಡಾ. ವಿಶ್ವನಾಥ್ ಪಲ್ಲೇದ್ ಮಾತನಾಡಿ, ಕೆಲವೇ ದಿನಗಳಲ್ಲಿ ಗೋಸ್ವರ್ಗ ನಿರ್ಮಿಸಿರುವ ಕಾರ್ಯ ಅಭಿನಂದನೀಯ. ಪ್ರತಿಯೊಬ್ಬರೂ ಗೋಸೇವೆಯಲ್ಲಿ ಭಾಗಿಗಳಾಗೋಣ ಎಂದರು.

ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ರಾಜ್ಯ ಗೋಪರಿವಾರದ ಅಧ್ಯಕ್ಷ ತ್ರಿವಿಕ್ರಮಾನಂದ ಸರಸ್ವತಿ ಮಠದ ಪಾಂಡುರಂಗ ಮಹಾರಾಜ್, ಕುಮಟಾ ಶಾಸಕ ದಿನಕರ ಶೆಟ್ಟಿ, ಇಮಾಮಿ ಫೌಂಡೇಶನ್ ಚ್ಯಾರ್ಮ್ಯಾನ್ ಆರ್ ಎಸ್ ಗೋಯಾಂಕ, ಜಿಲ್ಲಾ ಗೋಪರಿವಾರದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಬಿ. ಎಸ್. ಯಡಿಯೂರಪ್ಪ, ಡಿ. ವಿ. ಸದಾನಂದ ಗೌಡ ವಿಶೇಷ ಸಂದೇಶ ಕಳುಹಿಸಿದ್ದರು. ಲಕ್ಷ ಗೋಗಂಗಾರತಿಯನ್ನು ಸಲ್ಲಿಸಲಾಯಿತು.