Home Local ಶಿರಸಿ ಕಸ ಸಂಗ್ರಹಣೆಯ ವಾರ್ಷಿಕ ಕರವನ್ನು 180 ರೂಪಾಯಿಯಿಂದ 220 ರೂಪಾಯಿಗೇರಿಸಲು ತೀರ್ಮಾನ

ಶಿರಸಿ ಕಸ ಸಂಗ್ರಹಣೆಯ ವಾರ್ಷಿಕ ಕರವನ್ನು 180 ರೂಪಾಯಿಯಿಂದ 220 ರೂಪಾಯಿಗೇರಿಸಲು ತೀರ್ಮಾನ

SHARE

ಶಿರಸಿ: ಸಮರ್ಪಕ ಘನತ್ಯಾಜ್ಯ ನಿರ್ವಹಣೆ ಉದ್ದೇಶದಿಂದ ಮನೆಮನೆ ಕಸ ಸಂಗ್ರಹಣೆಯ ವಾರ್ಷಿಕ ಕರವನ್ನು 180 ರೂಪಾಯಿಯಿಂದ 220 ರೂಪಾಯಿಗೇರಿಸಿ ನಗರಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಮನೆಮನೆ ಕಸ ಸಂಗ್ರಹಣೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದ ನಗರಸಭೆಗೆ ಹೊರೆ ಕಡಿಮೆಯಾದಂತಾಗಿದೆ.

ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2009ರ ಕಾನೂನಿನನ್ವಯ ಮನೆಮನೆ ಕಸ ಸಂಗ್ರಹದ ಕರವನ್ನು 180 ರೂ.ನಿಂದ 360 ರೂಪಾಯಿಗೆ ಏರಿಸಲು ಸರ್ಕಾರ ನಿರ್ದೇಶಿಸಿದ್ದು ಆ ಪ್ರಕಾರ ಕರ ನಿಗದಿ ಮಾಡಲಾಗಿತ್ತು. ಇದಕ್ಕೆ ಸದಸ್ಯರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ವಿಷಯ ಚರ್ಚಿಸಲಾಯಿತು. ಸದಸ್ಯ ಶ್ರೀಧರ ಮೊಗೇರ ಮಾತನಾಡಿ, ಮನೆಮನೆ ಕಸ ಸಂಗ್ರಹಣೆಯ ಕರವನ್ನು ದ್ವಿಗುಣಗೊಳಿಸಿದರೆ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಕಸ ಸಂಗ್ರಹಣೆಯ ವ್ಯವಸ್ಥೆ ಸರಿಯಿರದಿದ್ದರೂ ಕರ ಹೆಚ್ಚಳ ಏಕೆ? ಎಂದು ಪ್ರಶ್ನಿಸಿದರು. ತಿಂಗಳಿಗೆ 20 ರೂಪಾಯಿಗಿಂತ ಹೆಚ್ಚು ಕೊಡುವುದು ಸೂಕ್ತವಲ್ಲ ಎಂದು ಶ್ರೀಧರ ಮೊಗೇರ ಹೇಳಿದರು. ಎರಡು ದಿನಕ್ಕೊಮ್ಮೆ ಕಸದ ವಾಹನ ಬರುತ್ತದೆ. ಫೀಯನ್ನು ದ್ವಿಗುಣಗೊಳಿಸಿದರೆ ಕಷ್ಟವಾಗುತ್ತದೆ ಎಂದು ಸದಸ್ಯೆ ವೀಣಾ ಶೆಟ್ಟಿ ಹೇಳಿದರು. ಪೌರಾಯುಕ್ತೆ ಅಶ್ವಿನಿ ಮಾತನಾಡಿ, ಶಿರಸಿಯಲ್ಲಿ 18000 ಆಸ್ತಿಯಿದೆ. ಪ್ರತೀ ನಿವೇಶನಕ್ಕೆ 360 ರೂ.ನಂತೆ ಸಂಗ್ರಹವಾದರೆ 70.31 ಲಕ್ಷ ರೂ.ಆಗುತ್ತದೆ. ಆದರೆ ಕಳೆದ ಸಾಲಿನಲ್ಲಿ 180 ರೂ.ನಂತೆ ಕರ ಸಂಗ್ರಹಿಸಲಾಗಿದ್ದು ಕೇವಲ 32 ಲಕ್ಷ ರೂ. ಸಂಗ್ರಹವಾಗಿದೆ. ಇದು ನಗರಸಭೆಯ ಮೇಲೆ ಹೊರೆಯಾಗುತ್ತದೆ. ಹಾಗಾಗಿ ಆಸ್ತಿ ತೆರಿಗೆ ಹಾಗೂ ಆವರಣದ ವಿಸ್ತಾರದ ಪ್ರಕಾರ ಕರ ನಿಗದಿ ಮಾಡುವುದು ಉತ್ತಮ ಎಂದರು. ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ, 1 ಸಾವಿರ ಚದರಡಿ ನಿವೇಶನವಿದ್ದರೆ 360 ರೂ. ಕರ ಹಾಗೂ ಅದಕ್ಕಿಂತ ಕಡಿಮೆಯಿದ್ದರೆ 180 ರೂ. ದರ ನಿಗದಿ ಮಾಡಲಾಗಿದೆ.

ನಲ್ಲಿಗಳಿಗೆ ಮೀಟರ್ ಅಳವಡಿಕೆ ಮಾಡಿ ಬಿಲ್ಲಿಂಗ್‍ಗೆ ಗಣಕೀಕರಣ ವ್ಯವಸ್ಥೆಗೆ ಟೆಂಡರ್ ಕರೆಯುವುದು ಹಾಗೂ ಕಮೀಶನ್ ಆಧಾರದ ಮೇಲೆ ಸಂಬಳ ನೀಡುವುದು ನಗರಸಭೆಗೆ ಹೊರೆಯಾಗುತ್ತದೆ. ಇದು ಸರಿಯಲ್ಲ ಎಂದು ಸದಸ್ಯ ಶ್ರೀಧರ ಮೊಗೇರ ಹೇಳಿದರು.
ನಗರದ ಕೋಟೆಕೆರೆ ಸುತ್ತಮುತ್ತಲೂ ತ್ಯಾಜ್ಯದ ಹಾವಳಿ ಹೆಚ್ಚಿದೆ. ಕೆರೆ ಪಕ್ಕದಲ್ಲಿರುವ ಶೌಚಾಲಯದ ಸೇಪ್ಟಿಕ್ ಟ್ಯಾಂಕ್ ಸೋರುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಸರ್ವೆ ನಂಬರ್ 1006ರಲ್ಲಿ ಸುತ್ತಮುತ್ತಲ ತ್ಯಾಜ್ಯ ಹಾಕಲಾಗುತ್ತಿದೆ. ನಗರಸಭೆಯಿಂದ ಸ್ವಚ್ಛತೆ ಕಾರ್ಯವಾಗುತ್ತಿಲ್ಲ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ಸದಸ್ಯ ರಾಖೇಶ ತಿರುಮಲೆ ಹೇಳಿದರು. ಕೋಟೆಕೆರೆ ಸ್ಥಳ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳುವದಾಗಿ ಅಧ್ಯಕ್ಷ ಪ್ರದೀಪ ಶೆಟ್ಟಿ ಭರವಸೆ ನೀಡಿದರು. ಬೀಡಾಡಿ ನಾಯಿ ಹಾಗೂ ಬೀದಿ ದನಗಳ ಹಾವಳಿ ಹೆಚ್ಚಿದೆ. ಸೂಕ್ತ ಕ್ರಮ ಕೈಗೊಳ್ಳಿ ಎಂದು ಸದಸ್ಯೆ ವೀಣಾ ಶೆಟ್ಟಿ ಹೇಳಿದರು. ನಗರದ ಹಲವೆಡೆ ರಸ್ತೆ ಬದಿ ಮೀನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಮೀನು ಮಾರುಕಟ್ಟೆಯಲ್ಲನ ಅಂಗಡಿಕಾರರಿಗೆ ನಷ್ಟವಾಗುತ್ತಿದೆ. ತಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪ್ರಾನ್ಸಿಸ್ ನರೋನ್ಹಾ ಒತ್ತಾಯಿಸಿದರು.