Home Local ಕಾಶೀನಾಥ ನಾಯಕ ಎಂಬ ಕರ್ಮಯೋಗಿ.

ಕಾಶೀನಾಥ ನಾಯಕ ಎಂಬ ಕರ್ಮಯೋಗಿ.

SHARE

ನಾನು ಚಿಕ್ಕವನಿದ್ದಾಗ ಕಾಗಾಲದಲ್ಲಿ ಪ್ರಾಥಮಿಕ ಶಾಲೆಯ ಪ್ರವಾಸವೆಂದರೆ ಹತ್ತಿರದಲ್ಲಿಯೇ ಇರುವ ಉಪ್ಪಿನ ಆಗರ.ಕಿರುಬೇಲೆ ಗುಹೆ.ಬಾಡ ಕಾಂಚಿಕಾಂಬಾ ದೇವಸ್ಥಾನ ಇವು ಮಹತ್ವದ ಸ್ಥಳವಾಗಿತ್ತು .ಪ್ರತೀ ವರ್ಷ ಈ ಸ್ಥಳಗಳಲ್ಲಿ ಯಾವುದಾದರೂ ಒಂದು ಸ್ಥಳದ ಪ್ರವಾಸ ಪಕ್ಕಾ ಆಗಿರುತ್ತಿತ್ತು.
ಉಪ್ಪಿನ ಆಗರಕ್ಕೆ ಸುಡುಸುಡುವ ಬಿಸಿಲಲ್ಲಿ ಹೋಗಿ ರಾಶಿ ರಾಶಿಯಾಗಿ ಬಿದ್ದಿರುವ ಬಿಳಿಬಿಳಿ ಉಪ್ಪನ್ನು ನೋಡಿ ಬರುವ ವೇಳೆಗೆ ನಮ್ಮ ಮುಖ ಕಪ್ಪು ಮಸಿಯಾಗುತಿತ್ತು.
ಈ ಉಪ್ಪಿನ‌ ಆಗರದ ಬಗ್ಗೆ ಹೇಳುವಾಗ ಇದರ ಮಾಲಿಕರು ಸೀತಾರಾಮ ವಡೇದಿರು ಅಂತ ಅಲ್ಲಿರುವ ಶ್ರಮಿಕರು ಹೇಳುತಿದ್ದರು.
ಇಂದಿಗೂ ಆ ಪರಿವಾರದ ಸದಸ್ಯರನ್ನು ಹೆಸರಿಸುವಾಗ ವಡೆಯಾ ಎಂದು ಸಂಬೋಧಿಸುವ ವಾಡಿಕೆ ಇದೆ.
ಇದೇ ಸೀತಾರಾಮ ವಡೇದಿರು ಸಂಸ್ಥಾಪಕರಾಗಿ ಮೈದಳೆದ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟನ ಶಿಕ್ಷಕನಾಗಿ ನನಗೆ ಸೇವೆಸಲ್ಲಿಸುವ ಅವಕಾಶ ಸಿಕ್ಕಾಗ ಅವರ ನಿಧನಾನಂತರ ಅವರ ಸುಪುತ್ರ ಕಾಶೀನಾಥ ವಡೇದಿರು ಅದರ ಸದಸ್ಯರಾದರು. ಮುಂದೆ ಅಧ್ಯಕ್ಷ ರಾದ ಮಹಾನ್ ದಾನಿ ಬಂಟ್ವಾಳ ಕೃಷ್ಣ ಭಂಡಾರ್ಕರ್ ಅವರು ದಿವಗಂತರಾದ ಬಳಿಕ ನಮ್ಮ ಸಂಸ್ಥೆಯ ಅಧ್ಯಕ್ಷರಾದವರು ನಮ್ಮೂರ ಜನಸಾಮಾನ್ಯರ ಮನದಲ್ಲಿ ಇಂದಿಗೂ ಒಡೆಯರಾಗಿರುವ ಕಾಶೀನಾಥ ನಾಯಕರವರು.

ಕಾಶೀನಾಥ ನಾಯಕರು ೧೯೪೫ ರಲ್ಲಿ ಕುಮಟೆಯ ಬಾಡ ಗ್ರಾಮದಲ್ಲಿ ಜನಿಸಿದವರು.ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರು ಬಾಡದಲ್ಲಿ ಪೂರೈಸಿ ಕಾಲೇಜು ಶಿಕ್ಷಣವನ್ನು ಡಾ ಎ ವಿ ಬಾಳಿಗ ಕಾಲೇಜಿನಲ್ಲಿ ಪಡೆದು ಮುಂದೆ ಗುಲಬರ್ಗಾ ದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪದವಿಪಡೆದು ಕೆಲಕಾಲ ಹೊರ ರಾಜ್ಯಗಳಲ್ಲಿ ಉತ್ತಮ ಉದ್ಯೋಗ ಸಂಪಾದಿಸಿದರು.ಮುಂದೆ ಜನ್ಮ ಭೂಮಿಯೇ ಸ್ವರ್ಗ ಎಂದು ಕುಮಟಾಕೆ ಬಂದು ಇಲ್ಲಿಯೇ ಸ್ವತಃ ಉದ್ಯಮ ಸ್ಥಾಪಿಸಿದವರು.
ಶಿಸ್ತಿನಲ್ಲಿ ಇವರನ್ನು ಮೀರಿಸುವವರು ಸಿಗುವುದು ದುರ್ಲಭ. ಸದಾ ಕೋಟುಧರಿಕೊಂಡು ಗಂಭೀರತೆಯನ್ನು ಕಾಯ್ದುಕೊಂಡು ಶಿಸ್ತಿಗೆ ಹೆಸರಾದವರು. ಪ್ರತೀ ಮಾತನ್ನೂ ವಿಚಾರಮಾಡಿ ಆಡುವವರು.ಪ್ರತಿಯೊಂದು ವಿಷಯವನ್ನು ಅಳೆದೂ ಸುರಿದೂ ಇದಮಿತ್ಥಂ ಎಂದು ತೀರ್ಮಾನಿಸುವವರು.
ನಮ್ಮ ಸಂಸ್ಥೆಯ ಅಧ್ಯಕ್ಷರಾದ ಇವರ ಬಳಿ ಯಾವುದೇ ಸಿಬ್ಬಂದಿಯೂ ನಿರ್ಭಯವಾಗಿ ವ್ಯವಹರಿಸಬಹುದಾಗಿತ್ತು.ಮಗುವಿನ ಮನಸ್ಸಿನ ಇವರ ಮನದಾಳದಲ್ಲಿ ಕಪಟ, ವಂಚನೆಯ ಲವಲೇಶವೂ ಹುಡುಕಲಾಗದು.ತಮ್ಮ ಅಭಿಪ್ರಾಯವನ್ನು ಮಂಡಿಸುವಾಗ ಯಾರಿಗೂ ನೋವಾಗದ ಹಾಗೆ ಹೇಳುವುದು ಇವರ ವಿಶೇಷವಾದ ಗುಣವಾಗಿತ್ತು.ಯಾವುದೇ ಕಾರ್ಯಕ್ರಮವು
ನಿಗದಿಪಡಿಸಿದ ಸಮಯದಲ್ಲಿ ಪ್ರಾರಂಭವಾಗಬೇಕು ಎಂಬುದು ಇವರ ನಿಲುವಾಗಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾಧಾರೆಯಲ್ಲಿ ನಂಬಿಕೆ ಉಳ್ಳ ಇವರು ಅಪ್ಪಟ್ಟ ದೇಶಾಭಿಮಾನಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಮಾತನಾಡುವಾಗ ಪುಳಕಿತರಾಗುತ್ತಿದ್ದ ಇವರು ದೇಶದಲ್ಲಿ ಸ್ವಾಭಿಮಾನ ಸ್ವಚ್ಛತೆ ಆರ್ಥಿಕ ಭದ್ರತೆ ಸದಾ ಇರಬೇಕು ಭಾರತ ಸಿಂಗಾಪೂರ, ನ್ಯೂಯಾರ್ಕ್‌ ಸಿಟಿಯಂತೆ ಕಂಗೊಳಿಸಬೇಕು ಎಂದು ಸದಾ ಕನವರಿಸುತಿದ್ದರು.
ಜೀವನೋತ್ಸಾಹಕ್ಕೆ ಇನ್ನೊಂದು ಹೆಸರೇ ಕಾಶೀನಾಥ ನಾಯಕರು ಎಂದರೆ ತಪ್ಪಾಗಲಾರದು.
ಸದಾ ಲವಲವಿಕೆಯಿಂದ ಇರುವ ಇವರು ತಮ್ಮ ಸುಪುತ್ರರ ಆಶಯದಂತೆ ಪ್ರತೀ ವರ್ಷವೂ ವಿದೇಶಪ್ರವಾಸವನ್ನು ಮಾಡಿಬರುತ್ತಿದ್ದರ.ಬಂದ ಬಳಿಕ ಅಲ್ಲಿ ಸವಿ ಘಟನೆಗಳನ್ನು ವಿದ್ಯಾರ್ಥಿಗಳ ಬಳಿ ಮೆಲಕು ಹಾಕುತಿದ್ದರು.ಪ್ರತಿಯೊಬ್ಬರು ಶ್ರಮಜೀವಿಯಾಗಿ ದುಡಿದು ತಿನ್ನಬೇಕು.ಹಣವನ್ನು ಪೋಲುಮಾಡಬಾರದು.ಪ್ರತಿಯೊಂದಕ್ಕೂ ಒಂದು ರೂಪುರೇಷೆ ಇರಲೇ ಬೇಕೆಂದು ಹಂಬಲಿಸಿದವರು.
ನಮ್ಮ ಸಂಸ್ಥೆಯ ಕೃಷಿ ಕೌಶಲ್ಯ ಅಭಿವೃದ್ಧಿಯ ವಿಭಾಗದಲ್ಲಿ ಟಿಗ್ ವೆಲ್ಡ್ ಮತ್ತು ಮಿಗ್ ವೆಲ್ಡ್ ತರಬೇತಿಯ ಬಗ್ಗೆ ವಿಶೇಷ ಕಾಳಜಿವಹಿಸಿ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿಸಿದ ಪುಣ್ಯಾತ್ಮರು.ಅವರ ಈ ಪರಿಶ್ರಮದ ಫಲವಾಗಿ ಅನೇಕ ಯುವಕರು ಇಂದು ದೇಶ ವಿದೇಶಗಳಲ್ಲಿ ಉದ್ಯೋಗ ಪಡೆದು ಬದುಕುತ್ತಿದ್ದಾರೆ.
ನಿಜವಾದ ಅರ್ಥದಲ್ಲಿ ಅಜಾತಶತ್ರುಗಳೆನಿಸಿದ ಇವರನ್ನು ಕೊಂಕಣ ಎಜುಕೇಶನ್ ಟ್ರಸ್ಟನ ಪ್ರತಿಯೊಬ್ಬರೂ ಪ್ರಾಂಜಲ ಮನಸ್ಸಿನಿಂದ ಪ್ರೀತಿಸುತ್ತಾರೆ
ಅಂತಹ ಕಾಶೀನಾಥ ನಾಯಕರು ಇಂದು ಇಹಲೋಕ ತ್ಯಜಿಸಿದರು ಎಂದು ಹೇಳಿದರೆ ನಂಬಲಾಗದ ಸ್ಥಿತಿಯಲ್ಲಿ ಎಲ್ಲರೂ ನಲುಗಿಹೋಗಿದ್ದಾರೆ.ಕೆಲವು ಕಾಲದ ಅನಾರೋಗ್ಯ ಅವರನ್ನು ವಿಧಿವಶರನ್ನಾಗಿಸಿದ್ದು ವಿಪರ್ಯಾಸ!
ದಿನಾಂಕ ೨/೬/೧೮ರ ಶನಿವಾರ ಸಂಕಷ್ಢಿಯ ಶುಭದಿನ ಅವರು ವೈಕುಂಠವಾಸಿಗಳಾಗಿದ್ದಾರೆ.
ನಾವಿಂದು ಶಿಕ್ಷಣ ಪ್ರೇಮಿಯೊಬ್ಬರನ್ನು ಕಳೆದುಕೊಂಡಿದ್ದೇವೆ.ಸರ್ ಸೋಮವಾರ ಕೊಂಕಣಕ್ಕೆ ರಜೆ ಇದೆಯೇ ? ಯಾಕೆ ನೀಡಿಲ್ಲ ಎಂದು ಕೆಲವರು ದೂರುವಾಣಿಯಲ್ಲಿ ಕೇಳಿದಾಗ
ಯಾವ ವ್ಯಕ್ತಿ ಜೀವನವನ್ನು, ಬದ್ಧತೆಯನ್ನು ಪ್ರೀತಿಸಿ ಮಹಾನ್ ವ್ಯಕ್ತಿಗಳ ಸಾವಿನ ಶೋಕಾಚರಣೆ ಎಂದರೆ ರಜೆ ನೀಡಿ ವಿಶ್ರಾಂತಿ ಪಡೆಯುವುದಲ್ಲ.ಬದಲಿಗೆ ದಿನದ ಕೆಲಸಕ್ಕಿಂತ ಹೆಚ್ಚು ಕೆಲಸಮಾಡಿ ಅವರಿಗೆ ಶೃದ್ದಾಂಜಲಿ ನೀಡಬೇಕೆಂದು ಪ್ರತಿಪಾದಿಸಿದ ಕಾಶೀನಾಥ ವಡೇದಿರ ನಿಧನದ ಸಂಧರ್ಭದಲ್ಲಿ ರಜೆನೀಡಿದರೆ ಅವರ ಆತ್ಮ ಒಪ್ಪೀತೆ ? ಎಂದು ಮರು ಪ್ರಶ್ನೆ ಹಾಕಿದಾಗ ,ಹೌದು ಸರ್ ನೀವು ಹೇಳುವುದೇ ಸರಿ.ಅವರು ಗ್ರೇಟ್ ಸರ್.
ಎಂದು ಪಾಲಕರು ಹೇಳಿದಾಗ ಕಾಶೀನಾಥ ನಾಯಕಬಗೆಗಿನ ಗೌರವ ಇಮ್ಮಡಿ ಆಗುತ್ತದೆ.

ನಿಜ ಕಾಶೀನಾಥ ನಾಯಕರು ಇನ್ನಿಲ್ಲ.
ಆದರೆ ಅವರ ಆದರ್ಶ,ಜೀವನದ ಬಗೆಗಿನ ಕಳಕಳಿ, ಮಾನವೀಯತೆ ಮೌಲ್ಯಗಳು ಸದಾ ಬದುಕಿರುವಂತದ್ದು.
ವಡೆದಿರು ಎಂದಿಗೂ ಅಮರ.

*ಚಿದಾನಂದ ಭಂಡಾರಿ ಕಾಗಾಲ. ಶಿಕ್ಷಕ,ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ.
8970612257.