Home Local ಉಚಿತ ಬಸ್ ಪಾಸ್ ನೀಡುವಂತೆ ಶಾಸಕ ದಿನಕರ‌ ಶೆಟ್ಟಿಯವರಿಗೆ ಎಬಿವಿಪಿ ಮನವಿ.

ಉಚಿತ ಬಸ್ ಪಾಸ್ ನೀಡುವಂತೆ ಶಾಸಕ ದಿನಕರ‌ ಶೆಟ್ಟಿಯವರಿಗೆ ಎಬಿವಿಪಿ ಮನವಿ.

SHARE

ಕುಮಟಾ: ರಾಜ್ಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಗಾಗಿ ರಾಜ್ಯದ ಎಲ್ಲಾ ಚುನಾಯಿತ ಶಾಸಕರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಗುರುವಾರ ಮನವಿ ಸಲ್ಲಿಸಿದ್ದು, ಅದರಂತೆ ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರಿಗೆ ಅವರ ಮನೆಗೆ ತೆರಳಿದ ಸ್ಥಳೀಯ ಎಬಿವಿಪಿ ಸಂಘಟನೆಯವರು ಮನವಿ ಸಲ್ಲಿಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 2018-19 ನೇ ಸಾಲಿನ ವಾರ್ಷಿಕ ಬಜೆಟ್ ನಲ್ಲಿ ಎಸ್ಸಿ-ಎಸ್ಟಿ ಸೇರಿದಂತೆ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಿತ್ತು, ಈಗಿನ ರಾಜ್ಯ ಸರ್ಕಾರ ಆ ಯೋಜನೆಯನ್ನು ಜಾರಿಗೊಳಿಸದೆ, ಕೇವಲ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಬಸ್ ಪಾಸ್ ನೀಡಿ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಈ ವಿದ್ಯಾರ್ಥಿ ವಿರೋಧಿ ಕ್ರಮವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.

ಪ್ರಸಕ್ತ ವರ್ಷ ರಾಜ್ಯದಲ್ಲಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದರಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಅನುಕೂಲವಾಗುತ್ತದೆ. ಉಚಿತ ಬಸ್ ಪಾಸ್ ವಿತರಣೆಯಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ರೀತಿಯ ಹೆಚ್ಚು ಹೊರೆಯಾಗುವುದಿಲ್ಲ, ಬದಲಿಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಪ್ರೋತ್ಸಾಹ ನೀಡಿದಂತಾಗುತ್ತದೆ.

ಈ ವಿಷಯವನ್ನು ಶಾಸಕರು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರದ ಗಮನ ಸೆಳೆದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ABVP ಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂದೇಶ ನಾಯ್ಕ ,ಕುಮಟಾದ ಡಿಗ್ರಿ ಕಾಲೇಜ್,ಬಾಳಿಗಾ ಕಾಲೇಜ್ ನ ABVP ಪ್ರಮುಖರಾದ ಕಾರ್ತಿಕ ನಾಯ್ಕ , ಆದರ್ಶ ನಾಯ್ಕ, ಮಹೇಂದ್ರ ನಾಯ್ಕ , ಅಜಯ್ ನಾಯ್ಕ , ಪ್ರಜ್ವಲ ಹಾಗೂ ಇತರ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.