Home Local ಶೈಕ್ಷಣಿಕ ಸಾಧನೆಯ ಮೈಲಿಗಲ್ಲು ಬರೆಯುತ್ತಿರುವ ಚಿತ್ರಿಗಿ ಪ್ರೌಢಶಾಲೆ:ದಿನಕರ ಶೆಟ್ಟಿ

ಶೈಕ್ಷಣಿಕ ಸಾಧನೆಯ ಮೈಲಿಗಲ್ಲು ಬರೆಯುತ್ತಿರುವ ಚಿತ್ರಿಗಿ ಪ್ರೌಢಶಾಲೆ:ದಿನಕರ ಶೆಟ್ಟಿ

SHARE

ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲೆಯ ಸಂಸ್ಥಾಪನಾ ದಿನದ ನಿಮಿತ್ತ, ಪ್ರತಿಭಾ ಪುರಸ್ಕಾರ, ಗುರುವಂದನೆ ಹಾಗೂ ವಿವಿಧ ಶೈಕ್ಷಣಿಕ ಚಟುವಟಿಕೆ ಬುನಾದಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ದಿನಕರ ಶೆಟ್ಟಿ ನೆರವೇರಿಸಿದರು. ಶಾಲೆಯ ಇತ್ತೀಚೆಗಿನ ವರ್ಷಗಳ ಪ್ರಗತಿಯನ್ನು ಶ್ಲಾಘಿಸಿ, ಶಿಕ್ಷಕ ವರ್ಗದ ಅವಿರತ ಪ್ರಯತ್ನದಿಂದ ಇಂಗ್ಲೀಷ ಮಾಧ್ಯಮದ ಶಾಲೆಗೆ ಪೈಪೋಟಿ ನೀಡುತ್ತಾ ಕನ್ನಡದಲ್ಲೂ ತಕ್ಕುದಾದ ಸುಸಂಸ್ಕ್ರತ ಶಿಕ್ಷಣ ನೀಡಬಹುದೆಂದು ಈ ಶಾಲೆ ಸಾರಿ ಸಾರಿ ಹೇಳುತ್ತಿದೆ ಎಂದರು.

ಪಾಲಕರನ್ನು ಉದ್ದೇಶಿಸಿ, ತಾವು ಪ್ರೀತಿಯಿಂದ ಆರಿಸಿ ತಂದ ನಿಮ್ಮ ಮೇಲೆ ನನ್ನ ಋಣವಿದೆ. ಅದಕ್ಕಾಗಿ ಶಾಲೆಯ ಉನ್ನತಿಗಾಗಿ ನಾನು ಅಗತ್ಯ ಕಾರ್ಯಮಾಡಿಕೊಡುತ್ತೇನೆ ಎಂದರಲ್ಲದೇ ತುರ್ತು ಸಹಾಯಧನ ನೀಡಿ ಉಪಕರಿಸಿದರು. ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ದ್ವಿತೀಯ, ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯಾ ಗುರುನಾಥ ಶಾನಭಾಗ ಇವಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಊರ ನಾಗರಿಕರ ಪರವಾಗಿ ಮುಖ್ಯಾಧ್ಯಾಪಕ ಹಾಗೂ ಶಿಕ್ಷಕ ಸಿಬ್ಬಂದಿಗಳನ್ನು ಅವರು ಗೌರವಿಸಿದರು.‌

ನೂತನವಾಗಿ ಆಯ್ಕೆಗೊಂಡ ಮಂತ್ರಿಮಂಡಳದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಇದೇ ವೇದಿಕೆ ಸಾಕ್ಷಿಯಾಯಿತು. ಶಾಲೆಯ ಸಂಸತ್ತನ್ನು 24 ಮಂತ್ರಿಗಳು ಪ್ರವೇಶಿಸಿದರು. ಮುಖ್ಯ ಮಂತ್ರಿಯಾಗಿ ಪ್ರಣೀತ್ ಕಡ್ಲೆ ಹಾಗೂ ತನುಜಾ ಗೌಡ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿ ಹಾಗೂ ಶಾಲಾ ಅಭಿಮಾನಿ ಮೋಹನ ಶಾನಭಾಗ ತಮ್ಮ ತಾಯಿಯವರ ಹೆಸರಿನಲ್ಲಿ ಐದು ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸಲು ನಗದು ಹಣ ನೀಡಿದರು. 60 ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಆರ್ಥಿಕ ಅಡಚಣೆಯಿಂದ ಯಾರೂ ಕಲಿಕೆಗೆ ಇತಿಶ್ರೀ ಹಾಡಬಾರದೆಂದರು.

ರುಕ್ಮಾ ಶಾನಭಾಗ ಇಬ್ಬರು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿದರು.‌ ಮಾಜಿ ಪುರಸಭಾ ಅಧ್ಯಕ್ಷ ಸಂತೋಷ ನಾಯ್ಕ, ರೋಟರಿ ಉಪಾಧ್ಯಕ್ಷ ಸುರೇಶ ಭಟ್ಟ, ಅಪಾರ ಸಂಖ್ಯೆಯಲ್ಲಿ ಪಾಲಕ ವರ್ಗದವರು ಉಪಸ್ಥಿತರಿದ್ದರು.