Home Article ಕಳೆದುಹೋದ ಎಳೆಯ ದಿನಗಳು ಭಾಗ ೧೬

ಕಳೆದುಹೋದ ಎಳೆಯ ದಿನಗಳು ಭಾಗ ೧೬

SHARE

ನಮಸ್ಕಾರ ನನ್ನವರೇ..ನೆನಪಿನಂಗಳದಲ್ಲಿ..ಕ್ಷಣಕಾಲ ಸುಖಿಸೋಣ..ಬನ್ನಿ..

ಅಗಿನ ಹಬ್ಬಗಳನ್ನು ನೆನಪಿಸಿಕೊಳ್ಳಲೇಬೇಕು…ಯುಗಾದಿ ನಮಗೆ ಅತ್ಯಂತ ಕೆಟ್ಟ ಹಬ್ಬ..ಆದಿನ ಬಹುತೇಕ ನಮಗೆ ಊಟ ಸೇರುತ್ತಿರಲಿಲ್ಲ..ಮೊದಲ ತುತ್ತು ಕೈಬೇವಿನ ಸಪ್ಪು ತುಪ್ಪದಲ್ಲಿ ಹುರಿದು ಇಡುತ್ತಿದ್ದರು.ಅದು ತಿನ್ನ ಬೇಕಾಗಿತ್ತು.ದಿನಾಲೂ ನಂಬ್ರ ಮಾಡಿ ದೊಡ್ಡಬಾಳೆ..ಪಂಕ್ತಿ ಮದ್ಯದಲ್ಲಿ ಕುಳಿತುಕೊಳ್ಳುವವರು ಆದಿನ..ತುದಿಬಾಳೆಗೆ ಜಗಳ ಮಾಡುತ್ತಿದ್ದೆವು.ಅತ್ಯಂತ ಪ್ರೀತಿಯ ಹಬ್ಬ ಎಂದರೆ ಸೋಣೆಸಂಕ್ರಾಂತಿ..ಹೊಸ್ತಿಲ ಪುಜೆ .ಆದಿನ ತುಪ್ಪಸಕ್ಕರೆ..ಸುಟ್ಟ ಗೋವೇಬೀಜ..ಸುಟ್ಟಹಲಸಿನ ಬೇಳೆ…ಅದರ‌ ಸುಖ..ಮತ್ತೆ ಬರಲಾರದು..ನಾನು ಹಲಸಿನ ಬೇಳೆ ತಿನ್ನುತ್ತಿರಲಿಲ್ಲ..ಏಕೆಂದರೆ ಒಂದುಸಲ ಒಣಗಿಸಿದ ಬೇಳೆರಾಶಿಮೇಲೆ..ಪಕ್ಕಿಕುನ್ನಿ ಕುರಣೆ ಹಾಕಿತ್ತು.ಈಗಲೂ ಬೇಳೆ ಮೆಚ್ಚುವುದಿಲ್ಲ.

ಹಾಗಂತ ಬೇಳೆಬುಡ್ಡಣ್ಣ..ಹೋಳಿಗೆ ..ಪ್ರೀತಿ..ಬೆಳೆದ ಸೋಣೆ ಸೋಡಗೆ ಆಡಿದ್ದು ನೆನಪಿದೆ.ಅದನ್ನ ಒಡೆದಾಗ ಸಣ್ಣ ಬೀಜ ಹಾರುತ್ತಿತ್ತು..ಬಣ್ಣಬಣ್ಣದ ಹೂವಿನ ಸೋಣೆಗಿಡ ನೆಡುತ್ತಿದ್ದರು..ಅದರಲ್ಲಿ ಕೆಂಪು ಬಣ್ಣದ ಹೂವನ್ನು ತಿಕ್ಕಿ..ಉಗುರಿಗೆ ಹಚ್ಚಿ ಒಣಗಿಸಿಕೊಳ್ಳುತ್ತಿದ್ದೆವು.ಅದೇ ನಮಗೆ ಕುಟೆಕ್ಸ..ಮಕ್ಕಳ ತುಟಿ ಕೆಂಪಾಗಲೆಂದು ಮದ್ದೆನಮಲ್ಲಗೆ ಹೂವನ್ನು ಶಿಶಮಕ್ಕಳ ತೊಡಿಗೆ ಹಚ್ಚುತ್ತಿದ್ದರು..ನಾವೂ ಕದ್ದು ಹೂವನ್ನು ತಿಕ್ಕಿ ತೊಡಿಗೆ ಹಚ್ಚಿಕೊಂಡಿದ್ದು ನೆನಪಿದೆ.ಇನ್ನು ಭೂಮಿ ಹುಣ್ಣಿಮೆಯಲ್ಲಿ ಅಜ್ಜ ಅಜ್ಜಿ ಮಣ್ಣಿಂದ ಮಾಡಿ ತೊಳ್ಸಿಕಟ್ಟೆಮೇಲೆ ಇಟ್ಟು ಒಂದುದಿನ ಪೂಜೆ ಮಾಡಿ ಮರುದಿನ ಬೆಳಿಗ್ಗೆ ಕಪ್ಪಕಪ್ಪಿರುವಾಗ..ಜವ್ಟೆ ಬಾರಿಸುತ್ತ..ಹೊತ್ತು ಎಕ್ಲರ ಮನೆ ತೋಟಕ್ಕೆ ಒಂದೊಂದು ಚೂರು ಒಗೆದು ಬರುವುದು ಪದ್ದತಿ..ಮೊದಲು ಬೊಮ್ಮಣ್ಣ ಅಜ್ಜ ಅಜ್ಜಿ ಮಾಡುತ್ತಿದ್ದ..ಅವ ದೊಡ್ಡವಾದ ಮೇಲೆ..ನಾನೇ ಮೂರ್ತಿ ಕಲಾವಿದ.

ಎಲ್ಲ ಬಯ್ಯುತ್ತಾರೆಂದು ಅಜ್ಜನ ಎರಡೂ ತೊಡೆ ಅಡಿಗೆ ಕಾಣದಂತೆ..ಎರಡು ಮಣ್ಣುಂಡೆ ಇಟ್ಟು..ಅಸಲಗಂಟು ಎಂದು..ಖುಷಿಪಟ್ಟಿದ್ದೂ ನೆಪಿಗೆ ಬರುತ್ತದೆ..ಇಡೀ ವರ್ಷ ಅಜ್ಜ ಅಜ್ಜಿ ನಮಗೆ ಬಯ್ಯದ ಸಿಟ್ಟನ್ನು ಮೂರ್ತಿ ಮುರಿದು ಒಗೆಯುವಾಗ ತೀರಿಸಿಕೊಳ್ಳುತ್ತಿದ್ದೆವು..ಅಜ್ಜನ ಕಾಲು..ಕುತ್ಗೆ ಮುರಿವವ ನಾನು..ಅಜ್ಜನ ಅಸಲಗಂಟು ಒಗೆಯುತ್ತಿರಲಿಲ್ಲ.. ಅಲ್ಲೆ ಮಿಷನ್ ಶಡ್ ನಲ್ಲಿ ಉಗ್ಗಿಸಿ ಇಡುತ್ತಿದ್ದೆವು…ದಿನಾಲೂ ತೋಟದಲ್ಲಿ ಹಳ್ಳಕ್ಕೆ ಎರಡಕ್ಕೆಗೆ ಹೋದಾಗ ನೋಡಿಬರುತ್ತಿದ್ದೆವು..ಕೃಷ್ಣಾಷ್ಟಮಿ..ನಮಗೆ ಮತ್ತೊಂದು ಪ್ರೀತಿಯ ಹಬ್ಬ..ಯಾಕೆಂದರೆ ಅದರ ನೈವೇದ್ಯವೇ ಹಾಗಿತ್ತು..ಹೊದ್ಲುಂಡೆ..ಅದರಲ್ಲಿ ಗೋವೇಬೀಜ ಹಾಕುತ್ತಿದ್ದರು..

ಭತ್ತ ನೆನೆಸಿ ಸಂಶಿ ಮಿಲ್ಲಿಗೆ ತಗಿಂಡು ಹೋಗಿ..ಹೊದ್ಲು ಮಾಡಿಸಿಕೊಂಡು ಬರುತ್ತಿದ್ದರು..ಹೊಳಿಮೇಲೆ ಹೊದ್ಲ ಚೀಲ ಸೊರಗಿ ಎಲ್ಲಾ ಸುತ್ಲೂ ಕುಳಿತು ಹೆಕ್ಕುತ್ತಿದ್ದದ್ದು ನೆನಪಿದೆ..ನಾನು ಆಚೀಚೆಯವರ ಹೊದ್ಲು ಕದ್ದು..ರಾಶಿ ಹೆಕ್ಕಿದೆ ಎಂದು ನಂಬ್ರ ಮಾಡಿದ್ದೇ ಹೆಚ್ಚು.ಉಮೇಶ ಪಾಪ ಕೆಲಸ ಮಾಡುತ್ತಿದ್ದ.ನಮ್ಮನೆಲಿ ಗೋವೆಬೀಜ ಇರಲಿಲ್ಲ..ಏಕೆಂದರೆ..ನಮಗೆ ಗೋವೆಹಕ್ಲು ಪಾಲಿಗೆ ಬರಲಿಲ್ಲ. ಅವರಿವರಮನೆ ಬೇಡಿ ಒಂದ ಕೊಳಗ ಬೀಜ ಮಾಡುತ್ತಿತ್ತು ಆಯಿ..ಅದಕ್ಕೆ ಆಚೀಚೆ ಮನೆ ಹೊದ್ಲುಂಡೆಗೆ..ಬಾಯಿಪರಿತಿದ್ದೆವು.ಕೃಷ್ಣಾಷ್ಟಮಿ ರಾತ್ರಿಗೆ..ನಮಗೆ ಬೇಗ ವರ್ಕ ಬರುತ್ತಿತ್ತು..ಅದಕ್ಕೆ ಬೇಗ ಪೂಜೆ ಮಾಡುತ್ತಿದ್ದರು..ಉಡಪಿಯಲ್ಲಿ ರಾತ್ರೆ ಹನ್ನೆರಡ ಗಂಟೆಗೆ ದನುಕರು ಹುಟ್ತು..ಎಂದು ಕತೆ ಹೇಳುತ್ತಿದ್ದರು…ಹರಕು ಅಂಗಿಯಾದರೂ..ಇದ್ದ ಒಂದೇ ಹೋಪಲ್ಲಿ ಹೊಸ ಅಂಗಿಯಲ್ಲಿ ನಮ್ಮ ಹಬ್ಬ ತೀರುತ್ತಿತ್ತು..ಆದರೆ ಇಂದು ತುಪ್ಪಸಕ್ಕರೆ ರಾಶಿಯಿದೆ..ಗುಡ್ಡೆಯಷ್ಟು ಹೊಸಂಗಿಗಳಿವೆ..ಬಿಳಿಬಿಳಿ ಇಡೀ ಗೋವೆಬೀಜದ ಕೆಜಿಗಟ್ಳೆ ಕರಡಿಗೆಯಲ್ಲಿದೆ..ಆದರೆ ಆ ಹಬ್ಬಗಳ ಸಂಭ್ರಮವಿಲ್ಲ..ಒಗ್ಗಟ್ಟಿಲ್ಲ..ಮನೆಯ ಬಾಗಿಲು ಕಿಟಕಿ ಮುಚ್ಚಿ..ವಿಜ್ರಂಭಣೆಯಿಂದ ಹಬ್ಬ ಆಚರಿಸುತ್ತಾರೆ..ಅದೇನು ವಿಜ್ರಂಭಣೆಯೋ..ಪ್ರಾರಬ್ಧ..
ಹಬ್ಬಗಳ ನೆನಪು ಮತ್ತೆ ಇದೆ..ಸಂಭ್ರಮಿಸೋಣ..

……ತಿಗಣೇಶ ಮಾಗೋಡು.