Home Important ರೈತರ ಸಾಲ ಎಷ್ಟೇ ಸಾವಿರ ಕೋಟಿಯಿದ್ದರೂ ಮನ್ನಾ ಮಾಡಲು ಬದ್ಧ : ಎಚ್ ಡಿ ಕೆ.

ರೈತರ ಸಾಲ ಎಷ್ಟೇ ಸಾವಿರ ಕೋಟಿಯಿದ್ದರೂ ಮನ್ನಾ ಮಾಡಲು ಬದ್ಧ : ಎಚ್ ಡಿ ಕೆ.

SHARE

ಬೆಂಗಳೂರು, -ರೈತರ ಸಾಲ ಎಷ್ಟೇ ಸಾವಿರ ಕೋಟಿಯಿದ್ದರೂ ಮನ್ನಾ ಮಾಡಲು ಬದ್ಧವಾಗಿದ್ದು, ವೈಜ್ಞಾನಿಕವಾಗಿ ಅದರ ಪ್ರಯೋಜನ ರೈತರಿಗೆ ತಲುಪುವಂತೆ ಮಾರ್ಗಸೂಚಿ ರೂಪಿಸಲಾಗುತ್ತಿದೆ. ಸಾಲ ಮನ್ನಾ ವಿಚಾರದಲ್ಲಿ ಸಹಕಾರಿ ಬ್ಯಾಂಕ್‍ಗಳು, ಮಧ್ಯವರ್ತಿಗಳ ದುರುಪಯೋಗಕ್ಕೆ ಅವಕಾಶವಿಲ್ಲದಂತೆ ಕ್ರಮಕೈಗೊಳ್ಳಲಾಗುವುದು, ಬ್ಯಾಂಕ್‍ನ ಮುಖ್ಯಸ್ಥರೊಂದಿಗೆ ಚರ್ಚಿಸಿ ಜನರಿಗೆ ಹೊರೆಯಾಗದಂತೆ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದ್ದು, ಅದರ ಬಗ್ಗೆ ಅಪನಂಬಿಕೆ ಬೇಡ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆವರೆಗೂ ಅಥವಾ ಇನ್ನೊಂದು ವರ್ಷ ತಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತೀರಾ ಎಂಬುದನ್ನು ಹೇಳಿದ್ದಾಗಿ ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರದ ರಾಜಧರ್ಮ ಪಾಲನೆ ಮಾಡುವ ಮೂಲಕ ಐದು ವರ್ಷ ಸುಭದ್ರ ಸರ್ಕಾರ ನಡೆಸುವುದರ ಜೊತೆಗೆ ರೈತರ ಸಾಲ ಮನ್ನಾ ಮಾಡುವ ಬದ್ಧತೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಜನರಿಗೆ ಹೊರೆಯಾಗದಂತೆ ಆರ್ಥಿಕ ಶಿಸ್ತಿಗೆ ಒಳಪಟ್ಟೆ ರೈತರ ಸಾಲ ಮನ್ನಾ ಮಾಡಲಾಗುವುದು. ಸರ್ಕಾರದಲ್ಲಿನ ತೋರಿಕೆ ತಡೆಗಟ್ಟಿ ಸಾಲ ಮನ್ನಾ ಹಾಗೂ ಜನಕಲ್ಯಾಣದಂತಹ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಲಾಗುವುದು. ಜುಲೈ ಮೊದಲನೆ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡನೆ ಮಾಡುವ ಬಗ್ಗೆ ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನಿನ್ನೆ ಭೇಟಿ ಮಾಡಿದ್ದು ವೈಯಕ್ತಿಕ ವಿಚಾರಕ್ಕಲ್ಲ. ಕಾಂಗ್ರೆಸ್ ನಾಯಕರ ವಿರುದ್ಧ ಗದಾಪ್ರಹಾರಕ್ಕೂ ಅಲ್ಲ, ಯಾರಿಗೋ ಗುನ್ನಾ ಹಾಕಲು ಭೇಟಿ ಮಾಡಿರಲಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮುಕ್ತ ಚರ್ಚೆ ಮಾಡಿ ಅವರಿಂದ ಸಾಕಷ್ಟು ಸಲಹೆ ಪಡೆದಿರುವುದಾಗಿ ತಿಳಿಸಿದರು.

ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬಂದರೆ 24 ಗಂಟೆಯೊಳಗಾಗಿ ರೈತರ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದು ನಿಜ, ಆದರೆ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಬರಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕಾಗಿ 2 ಲಕ್ಷ ಕೋಟಿ ರೂ. ಸಂಗ್ರಹ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಅದರಲ್ಲಿ ಶೇ.25ರಷ್ಟನ್ನು ರೈತರ ಸಾಲಮನ್ನಾ ಕಡೆಗೂ ವರ್ಗಾಯಿಸಿ ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.ದೆಹಲಿಯ ಕೆಲವು ರಾಷ್ಟ್ರೀಯ ನಾಯಕರು ನೀಡುತ್ತಿರುವ ಗೌರವ ತಮ್ಮ ವೈಯಕ್ತಿಕಕ್ಕಿಂತ ನಾಡಿನ ಜನರಿಗೆ ಕೊಡುತ್ತಿರುವ ಗೌರವವಾಗಿದೆ ಎಂದು ಹೇಳಿದ ಅವರು, ಇದು ಅಚ್ಚರಿಯನ್ನುಂಟು ಮಾಡಿದೆ ಎಂದರು.

ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನವನ್ನು ಮತ್ತೆ ಪ್ರಾರಂಭಿಸಲಾಗುವುದು. ಜನತಾ ದರ್ಶನದಲ್ಲಿ ತಮ್ಮ ಬಳಿಗೆ ಜನರು ನೇರವಾಗಿ ಬಂದು ಭೇಟಿಯಾದರೆ, ಗ್ರಾಮ ವಾಸ್ತವ್ಯದಲ್ಲಿ ತಾವೇ ಜನರ ಮನೆ ಬಾಗಿಲಿಗೆ ಜನರ ಸೇವಕನಾಗಿ ಹೋಗುವುದಾಗಿ ಹೇಳಿದರು.

ನಾಡಿನ ಜನರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದು, ಅದಕ್ಕೆ ಪೂರಕವಾಗಿ ಆಡಳಿತ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಬೆಂಗಳೂರು ವರದಿಗಾರರ ಕೂಟ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.