Home Article ಶ್ರೀಧರರು ಶ್ರೀ ಪ್ರಥ್ವೀರಾಜ ಭಾಲೇರಾವ, ಪುಣೆ ಅವರಿಗೆ ಬರೆದ ಪತ್ರ.

ಶ್ರೀಧರರು ಶ್ರೀ ಪ್ರಥ್ವೀರಾಜ ಭಾಲೇರಾವ, ಪುಣೆ ಅವರಿಗೆ ಬರೆದ ಪತ್ರ.

SHARE

ಇದೊಂದು ದೊಡ್ಡ ವಿಚಿತ್ರ ವಿನೋದವೇ ಆಗಿದೆ. ಇದು ಒಂದು cinemaವೇ ಆಗಿದೆ. ಇದೆಲ್ಲ ಮಾಯೆಯ ಚಲನಚಿತ್ರದ ಪರದೆಯಲ್ಲಿದೆ.
(ಶ್ರೀ ಪ್ರಥ್ವೀರಾಜ ಭಾಲೇರಾವ, ಪುಣೆ ಅವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

||ಶ್ರೀರಾಮ ಸಮರ್ಥ||
ಸಜ್ಜನಗಡ
ಅಧಿಕ ಜ್ಯೇಷ್ಟ, ಶು|೧೫, ಶ ೧೮೮೪
ಚಿ. ಪೃಥ್ವೀರಾಜನಿಗೆ ಆಶೀರ್ವಾದ,
ನಿನ್ನ ಪತ್ರ ಮೊನ್ನೆ ನನ್ನ ಕೈಗೆ ಸಿಕ್ಕಿತು. ಸಂಪೂರ್ಣ ಓದಿ ನೋಡಿದೆ.
ಮಗಾ! ಆನಂದಮಾತ್ರ ಸರ್ವಾದ್ಯ ಪರಮಾತ್ಮಸ್ವರೂಪದಲ್ಲಿ ದುಃಖ, ಶೋಕ, ಭಯ, ಚಿಂತೆ ಮತ್ತು ಉದ್ವಿಗ್ನತೆಯಂತ, ಯಾವುದೇ ಆಭಾಸ ಸುಮ್ಮನೇ ಚಿತ್ತದಲ್ಲಿ ಅಲೆಯಾಗಿ ತೋರುತ್ತದೆ ಮತ್ತು ತಕ್ಷಣ ಸುಖರೂಪವಾಗಿರುವ ಸ್ಥಿತಿಯ ವಿಸ್ಮರಣೆಯಾಗುತ್ತದೆ – ಇದೇ ಆಭಾಸಕ್ಕೇ ಮಾಯಾಕಾರ್ಯ ಎಂದು ಹೇಳುತ್ತಾರೆ.
‘ಆಕಾಶದಲ್ಲಿ ಮೋಡದ ಪರ್ವತ| ಎತ್ತುವದತಿ ಎತ್ತರ|
ಹಾಗೇ ತನ್ನದೆಂಬಳು ಆಡಂಬರ| ಮಾಯಾದೇವಿ||’ ದಾ. ೭|೪|೪೦
ಇಲ್ಲಿ ಎತ್ತು ಅಂದರೆ ಹಾರಾಡು ಎಂಬ ಅರ್ಥ ತೆಗೆದುಕೊಳ್ಳಬೇಕು.
‘ಶಬ್ದ ಸೃಷ್ಟಿಯ ರಚನೆ| ಆಗುಹೋಗುತ್ತಿದೆ ಪ್ರತಿಕ್ಷಣ| ಆದರದು ಸ್ಥಿರವಾಗದು| ಅದು ವಾಯುಮಾತ್ರದಂತೆ||’ -೨೫
ಇದೊಂದು ದೊಡ್ಡ ವಿಚಿತ್ರ ವಿನೋದವೇ ಆಗಿದೆ. ಇದು ಒಂದು cinemaವೇ ಆಗಿದೆ. ಇದೆಲ್ಲ ಮಾಯೆಯ ಚಲನಚಿತ್ರದ ಪರದೆಯಲ್ಲಿದೆ. ಒಂದು ಶುಭ್ರ ಬಿಳಿಯ ವಸ್ತ್ರ ದ ಪಡದೆಯ ಮೇಲೆ ಹಿಂದಿನಿಂದ ಹೇಗೆ ಒಂದು ಚಲನಚಿತ್ರ ಕಾಣಿಸುತ್ತದೆಯೋ ಅದೇ ರೀತಿ, ಅಂತಃಕರಣರೂಪಿ ಶುಭ್ರ ನಿರ್ವಿಕಲ್ಪ ಅರಿವಿನ ರೂಪದ ಪರದೆಯ ಮೇಲೆ ವಿವಿಧ ಕಾಲ್ಪನಿಕ ದೃಶ್ಯಗಳು ಒಂದರ ನಂತರ ಒಂದು ತಾನೇತಾನಾಗಿ ಎದ್ದು ನಂತರ ಕರಗಿ ಹೋಗುತ್ತಿರುತ್ತವೆ. ವಿಶಾಲ ಸಮುದ್ರದಲ್ಲಿ ಅನೇಕ ತರಂಗಗಳ ಆರ್ಭಟದಂತೆ, ವಿಶಾಲ ಅಂತಃಕರಣದಲ್ಲಿ ಅನೇಕ ಕಲ್ಪನೆಗಳ ಆವೇಶ ನಡೆಯುತ್ತಿರುತ್ತದೆ. ಶ್ರೀಸಮರ್ಥರು ಏಳನೇ ದಶಕದಲ್ಲಿನ ಐದನೇ ಸಮಾಸದಲ್ಲಿ ಕಲ್ಪನೆಯ ಈ ಆರ್ಭಟಗಳ ಅತಿ ಉತ್ತಮ ವರ್ಣನೆ ಮಾಡಿದ್ದಾರೆ.

ಕಲ್ಪನೆಯ ಆಟ –
ಕ್ಷಣವೊಮ್ಮೆ ವಿಪತ್ತು| ಮರುಕ್ಷಣಕೆ ಸುಸ್ಥಿರತೆ|
ಮತ್ತೊಂದು ಕ್ಷಣ ಬರಲು| ವಿಸ್ಮಯವು ಬ್ರಹ್ಮಪದದಿ| ||೨೨||
ಒಂದು ಕ್ಷಣ ಪುಟಿದೆದ್ದು| ಒಂದು ಕ್ಷಣ ತಂಗುವದು|
ಬಹು ವಿಕಾರವ ಸೃಜಿಸುತಿರುವದು| ಅರಿತಿಕೋ ಅದೇ ಕಲ್ಪನೆ| ||೨೩||
ಮಾಯೆ ಕಳೆವುದು ಕಲ್ಪನೆ| ಬ್ರಹ್ಮಪದಕೇರಿಪುದು ಕಲ್ಪನೆ|
ಸಂಶಯವ ಹುಟ್ಟಿಸುತ ಮತ್ತೆ ಕಳೆಯುತ| ಅದುವೆ ಕಲ್ಪನೆ| ||೧೮||
ಕಲ್ಪನೆಯೆ ಬಂಧನಕೆ ಕಾರಣವು| ಕಲ್ಪನೆಯೆ ಕಾರಕ ಸಮಾಧಾನಕೆ|
ಬ್ರಹ್ಮಪದಕನುಸಂಧಾನ| ಅದು ಕೂಡ ಕಲ್ಪನೆಯು| ||೧೯||
ಕಲ್ಪನೆಯೆ ದ್ವೈತದ ಮಾತೆ| ಕಲ್ಪನೆಯೆ ಜ್ಞಾನ ತತ್ವಗಳು|
ಬದ್ಧತೆಯು ಮುಕ್ತತೆಯು| ಕಲ್ಪನೆಯ ಗುಣವೂ| ||೨೦||
ನಿಶ್ಚಿತ ಕಲ್ಪನೆಯು ಅಂತರಾಳದಿ| ಬೇಡ ಜಗ ಸುತ್ತುವದು|
ಸಾಕು ಕ್ಷಣದ ನಿರ್ಮಲ ಏಕಾಂತ| ಸ್ವರೂಪ ಧರಿಸಲಿಕೆ| ||೨೧||

ಹೀಗೆಯೇ, ಈ ಚಂಚಲ ಮೂಲಕಲ್ಪನೆಗಳ ಚಂಚಲ ಕಾರ್ಯ, ಏನಾದರೊಂದು ನಡೆದೇ ನಡೆದಿರುತ್ತದೆ.

ಕಲ್ಪನೆಯು ಜನ್ಮದ ಮೂಲ| ಕಲ್ಪನೆಯು ಭಕ್ತಿಯ ಫಲವು|
ಮತ್ತದೇ ಕಲ್ಪನೆಯು ಕೇವಲ| ಮೋಕ್ಷದಾಯಕವು| ||೨೪||
ಇರಲಿ ಈ ಕಲ್ಪನೆಯ ವಿಲಾಸ| ಸಾಧನದಿ ಸಮಾಧಾನ|
ಏನೆಂದರೂ ಕಲ್ಪನೆಯೆ ಇದಕೆಲ್ಲ| ಮೂಲ ಕಾರಣವು| || ೨೫||
ಹಾಗಾಗಿ ಎಲ್ಲದರ ಮೂಲ| ಅದು ಈ ಕಲ್ಪನೆಯು ಕೇವಲ|
ಇದನು ಮಾಡಿ ನಿರ್ಮೂಲ| ಪಡೆ ಬ್ರಹ್ಮಪ್ರಾಪ್ತಿ| || ೨೬||

ಇದನ್ನೋದಿದಾಗ ನಗೆ ಬರುತ್ತದೆ, ಅಲ್ಲವೇ? ಆದುದರಿಂದಲೇ ಇದೊಂದು ದೊಡ್ಡ ವಿಚಿತ್ರ ವಿನೋದವಾಗಿದೆ ಎಂದು ಮೊದಲೇ ನಾನು ಬರೆದೆ.

ಮೋಕ್ಷದ ಸಾಧನೆಯನ್ನು ಶ್ರೀಸಮರ್ಥರು ಹೇಳುತ್ತಾರೆ

ಶ್ರವಣ ಮತ್ತು ಮನನ| ನಿದಿಧ್ಯಾಸದಲಿ ಸಮಾಧಾನ|
ಮಿಥ್ಯಾ ಕಲ್ಪನೆಯ ಮತಿ| ಹಾರಿ ಹೋಗಲಿ| ||೨೭||
ಶುದ್ಧ ಬ್ರಹ್ಮದ ನಿಶ್ಚಯ| ಆಗಲಿ ಕಲ್ಪನೆಯ ಜಯ|
ನಿಶ್ಚಿತಾರ್ಥದಲಿ ಸಂಶಯ| ಮುರಿದು ಹೋಗಲಿ| ||೨೮||

ಈ ಎಲ್ಲ ಕಲ್ಪನೆಗಳನ್ನು ನೋಡುವ, ಕೇವಲ ಜ್ಞಾನರೂಪ ‘ನಾನು’ ಒಂದೇ ಮೃಗಜಲದಲ್ಲಿನ ಸೂರ್ಯಪ್ರಕಾಶದಂತೆ ಸತ್ಯರೂಪವಿದ್ದೇನೆ.

(ಇದರ ನಂತರ ಸಮಾಸ ೨೯ರಿಂದ ೩೯ರ ವರೆಗೆ ಮನೋಕಲ್ಪನೆಯ ವರ್ಣನೆ ಮತ್ತು ಶುದ್ಧಾಶುದ್ಧ ಕಲ್ಪನೆಯ ರೂಪರೇಷೆ ಇದೆ)

ಕಲ್ಪನೆಯ ಸಮರಸವೆಂದರೆ ಸಮುದ್ರದಲ್ಲಿ ಆಣೆಕಲ್ಲು ಕರಗುವಂತೆ ಆನಂದರೂಪದಲ್ಲಿ ಕರಗಿ ಆನಂದರೂಪೇ ಆಗುವದು. ಚಾಂಚಲ್ಯ ನಷ್ಟವಾಗಿ ಕಲ್ಪನೆ ನಿಶ್ಚಲ ಆನಂದರೂಪವಾಯಿತು ಅಂದರೆ ಅನಾದ್ಯಾನಂತ ಒಂದು ಆನಂದವೇ ಉಳಿಯಿತು. ಅದರಲ್ಲಿ ಕಲ್ಪನೆ ಎದ್ದೇ ಇಲ್ಲ ಎಂದಾಗಿ ಕಾಲ್ಪನಿಕ ವಿಶ್ವದ ಅಧಿಷ್ಟಾನ ಇಲ್ಲವಾಗುತ್ತದೆ. ಮೂರು ಕಾಲದಲ್ಲೂ ಏಕರೂಪವಾಗಿರುವ ಸರ್ವಕಾರಣ ಬ್ರಹ್ಮರೂಪ ಆನಂದದಲ್ಲಿ ಬೇರೇನೂ ಆಗೇ ಇಲ್ಲ ಎಂಬ ಸಿದ್ಧಾಂತ ಪ್ರತ್ಯಯಕ್ಕೆ ಬರುವದರಿಂದ,
‘ಕಲ್ಪನೆಯಿಂದ ಮಿಥ್ಯತ್ವ ಬಂತು| ಸಹಜತೆಯಿಂದ ತದ್ರೂಪವಾಯಿತು|
ಆತ್ಮನಿಶ್ಚಯದಿಂದ ಅಳಿಸಿ ಹೋಯಿತು| ಕಲ್ಪನೆಯ ಜಗವು|

ಕಲ್ಪನೆ ಬೇಕಾದರೆ ಯಾವುದರದ್ದೇ ಆಗಲಿ, ಅದರ ಉತ್ಪತ್ತಿ ಮತ್ತು ಅದರ ನಾಶ ಆನಂದರೂಪಿ ‘ನಾನು’ ನೋಡುತ್ತಿದ್ದೇನೆ; ಈ ಧಾರಣೆ ಅಖಂಡವಾಗಿಟ್ಟು,
‘ಆಪುಲೇನ ಅನುಭವೇ | …………..
…………………………………….
ನಿತ್ಯಾನಿತ್ಯ ವಿಚಾರ ಘಡೇ| ಸಮಾಧಾನ|

ಅರೇ, ಅಂಬಿಗ, ಸದೃಢ ದೋಣಿಯನ್ನು ನಡೆಸುತ್ತಿರುವಾಗ ಕೆಳಗಿನ ನೀರು ನೋಡಿ ಹೆದರಬಾರದು. ನಿರಾಳನಾಗಿರು. ನೀನು ಭಾಗ್ಯವಂತನು. ಇಲ್ಲಿ ಯಾವುದಕ್ಕೂ ಗಾಭರಿಯಾಗುವ ಕಾರಣವಿಲ್ಲ.

In the broad field of battle
In the bivouac of life
Be not dumb driven cattle
Be a hero in the strife
ಶ್ರೀಧರ

ಸೂಚನೆ: ದಾಸಬೋಧದ ಭಾಷೆ, ಮರಾಟಿ ಬಲ್ಲವರಿಗೂ ಕ್ಲಿಷ್ಟವಾಗಿದೆ. ಅದಲ್ಲದೇ ದಾಸಬೋಧದ ಆಧ್ಯಾತ್ಮದ ಸೂಕ್ಷ್ಮ ತತ್ವವಿಚಾರ ಗೂಢವಾಗಿದೆ. ನಮ್ಮಿಂದಾದ ಪ್ರಯತ್ನವನ್ನೇನೋ ಮಾಡಿದ್ದಾಗಿದೆ. ಶ್ರೋತೃಗಣಕ್ಕೆ ನಮ್ಮ ಪ್ರಾರ್ಥನೆಯೆಂದರೆ,
‘ತಂ ಸಂತಃ ಶ್ರೋತುಮರ್ಹಂತಿ ಸದಸದ್ವಕ್ತಿ ಹೇತವಃ| ಹೇಮ್ನಃ ಸಂಲಕ್ಷತೇ ಹ್ಯಾಗ್ನೌ ವಿಶುದ್ಧಿಃ ಶ್ಯಾಮಿಕಾಪಿವಾ’