Home Important ಮಹಾರುದ್ರವಾದ ನೂರನೇ ಪ್ರತಿರುದ್ರ

ಮಹಾರುದ್ರವಾದ ನೂರನೇ ಪ್ರತಿರುದ್ರ

SHARE

➖➖➖➖➖➖➖➖➖➖

ಮುಳ್ಳೇರಿಯ ಮಂಡಲಾಂತರ್ಗತ ಪಳ್ಳತ್ತಡ್ಕ ವಲಯವು, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆದೇಶದಂತೆ, 2014 ನೇ ಇಸವಿಯಿಂದ ಎಲ್ಲ ಪ್ರದೋಷ ಕಾಲದಲ್ಲಿ ಪ್ರತಿರುದ್ರ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. 25-6-2018 ರ ಸೋಮಪ್ರದೋಷದ ಸಂದರ್ಭದಲ್ಲಿ ಪಳ್ಳತ್ತಡ್ಕ ಮುದ್ದು ಮಂದಿರದಲ್ಲಿ ಐತಿಹಾಸಿಕ ನೂರನೇ ಪ್ರತಿರುದ್ರವು, ಭಜನ ರಾಮಾಯಣ, ಶಿವಪೂಜೆ ಮತ್ತು ಗೋಪೂಜೆಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳಿಂದ 138 ಕ್ಕೂ ಹೆಚ್ಚು ಮಂದಿ ರುದ್ರಾಧ್ಯಾಯಿಗಳು ಭಾಗವಹಿಸಿ, ನೂರನೇ ಪ್ರತಿರುದ್ರವು ಮಹಾರುದ್ರವಾಗಿ ಸಂಪನ್ನಗೊಳ್ಳುವಂತೆ ಮಾಡಿದರು.

” ಪ್ರತಿರುದ್ರವೆಂಬ ನಮ್ಮ ಸಂಕಲ್ಪವು ಎಲ್ಲರ ಸಹಕಾರದಿಂದ ಮಹಾರುದ್ರವಾಗಿ ಪರಿಣಮಿಸಿದೆ. ಸಂಕಲ್ಪ ಶಕ್ತಿಯೊಂದು ದೃಢವಾಗಿದ್ದರೆ ಕಾರ್ಯಸಿದ್ಧಿಯಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ. ಇದು ನಮಗೆ ಬಹಳ ತುಪ್ತಿದಾಯಕವಾಗಿ ಪರಿಣಮಿಸಿದೆ ‘ ಎಂಬುದಾಗಿ ಹಿರಿಯ ವಿದ್ವಾಂಸರಾದ ವೇ. ಮೂ. ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ತಮ್ಮ ಎನಿಸಿಕೆಯನ್ನು ವ್ಯಕ್ತಪಡಿಸಿದರು.

* ರುದ್ರ ಪಾರಾಯಣದ ಕೊನೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಯವರು ಸ್ವಾಗತಿಸಿ, ವಲಯ ಉಲ್ಲೇಖ ಪ್ರಧಾನರಾದ ಚಂದ್ರಶೇಖರ ಭಟ್ ಪಳ್ಳತ್ತಡ್ಕ ಅವರು ಪ್ರಸ್ತಾವನೆ ಮಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಸಂಸ್ಥಾನದವರು ಧ್ವನಿಮುದ್ರಿತ ಆಶೀರ್ವಚನದ ಮೂಲಕ ನೆರೆದ ಭಕ್ತರನ್ನು ಆಶೀರ್ವದಿಸಿ ಪುಳಕಗೊಳಿಸಿದರು. ಮಹಾ ಮಂಡಲಾಧ್ಯಕ್ಷೆ ಈಶ್ವರೀ ಬೇರ್ಕಡವು, ಮಂಡಲಾಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್, ಮಂಡಲ ಗುರಿಕ್ಕಾರರಾದ ಮೊಗ್ರ ಸತ್ಯನಾರಾಯಣ ಭಟ್, ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ, ಮಂಡಲ ಉಪಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಪೈಸಾರಿ, ವಲಯಾಧ್ಯಕ್ಷ ರಾಮಕೃಷ್ಣ ಭಟ್ ಕೋರಿಕ್ಕಾರು ಇವರು ಸಾಂದರ್ಭಿಕ ನುಡಿಗಳನ್ನಾಡಿದರು.

* ವಲಯದಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ಉಚಿತವಾಗಿ ವೇದ ಶಿಕ್ಷಣವನ್ನು ನೀಡುತ್ತಿರುವ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರಿಗೆ ಹಾಗೂ ಪ್ರತಿರುದ್ರವು ನಿರಂತರವಾಗಿ ಸಾಗಲು ಶ್ರಮಿಸಿದ ವಿಷ್ಣು ಶರ್ಮ ಕೋರಿಕ್ಕಾರು ಇವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು .

ನೂರನೇ ಪ್ರತಿರುದ್ರದಲ್ಲಿ ವಿಶೇಷವಾಗಿ, ವೃತ್ತಿನಿರತ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿದರು. ರುದ್ರ ಪಠಣದಲ್ಲಿ ಸಹಕರಿಸಿದ ಬಾಂಧವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಮಾತೆಯರು ತಯಾರಿಸಿದ ಪರಂಪರಾಗತ ಆರೋಗ್ಯದಾಯಕ ರುಚಿಕರ ಭೋಜನವು ನೆರೆದ ಭಕ್ತ ಜನರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

* ನೂರನೇ ಪ್ರತಿರುದ್ರದಲ್ಲಿ ಶತಾಧಿಕ ವಿಪ್ರರಿಂದ ಏಕ ಕಂಠದಲ್ಲಿ ಪಾರಾಯಣ ಜರಗಿದಾಗ ಆ ಮಹಾರುದ್ರನೇ ಸಂಪ್ರೀತನಾದಂತೆ ಸುರಿದ ಧಾರಾಕಾರ ಮಳೆಗೆ, ಇಳೆಯ ಸುತ್ತಲೂ ವಿದ್ಯುತ್ತು ನಿಲುಗಡೆಯಾದರೂ ಪಾರಾಯಣ ಸನ್ನಿಧಾನದಲ್ಲಿ ಮಾತ್ರ ವಿದ್ಯುತ್ತು ತನ್ನ ಬೆಳಕನ್ನು ನೀಡುತ್ತಾ ಇರುವುದು ವಿಶೇಷವಾಗಿ ಕಂಡಿತು.

➖➖➖➖➖➖➖➖🙏