Home Article ದೂರಕ್ಕೆ ಸರಿ-ಪಕ್ಕಕ್ಕೆ ಸರಿ : ಭಾಗ-2

ದೂರಕ್ಕೆ ಸರಿ-ಪಕ್ಕಕ್ಕೆ ಸರಿ : ಭಾಗ-2

SHARE


ಜೀವನದಲ್ಲಿ ಯಾವುದಾದರೂ ಒಂದು ಕಾರಣಕ್ಕೆ ಮಾಡುವ ಕೆಲಸದಲ್ಲಿ ಹಿಂದೆ ಅಥವಾ ಪಕ್ಕಕ್ಕೆ ಸರಿಯುವುದುಂಟು. ಇನ್ನು ಕ್ರೀಡಿಯ ವಿಷಯಕ್ಕೆ ಬಂದರೆ, ಕಾಲ್ಚೆಂಡು ಅಥವಾ ಹಾಕಿ ಕ್ರೀಡೆ ಆಡುವಾಗ ಎದುರಾಳಿ ಆಟಗಾರರನ್ನು ಹಿಂದೆ ಅಥವಾ ಪಕ್ಕಕ್ಕೆ ಸರಿಸುವುದು ಸರ್ವೇ ಸಾಮಾನ್ಯ. ಎದುರಾಳಿ ಆಟಗಾರರನ್ನು ಪಕ್ಕಕ್ಕೆ ಸರಿಸಿ, ತಳ್ಳಿ ಅಥವಾ ಕೆಳಕ್ಕೆ ಬೀಳಿಸಿ ಗೋಲನ್ನು ಹೊಡೆದು ತಮ್ಮ ತಂಡಕ್ಕೆ ಜಯವನ್ನು ತರುವುದುಂಟು. ಇದು ಬಹುಷಃ ಬೇರೆ ಆಟಕ್ಕೆ ಅಷ್ಟಾಗಿ ಅನ್ವಯಿಸುವುದಿಲ್ಲ.

ಅಕಸ್ಮಾತ್ ಸ್ನೇಹಿತರ ಜೊತೆಯಲ್ಲಿ ಬಲವಂತದಿಂದ ಹೋಟೆಲ್‍ಗೆ ಹೋದರೆ ತನ್ನ ಜೇಬಿನಲ್ಲಿ ಹಣವಿಲ್ಲದಿದ್ದರೆ ಅಥವಾ ಇದ್ದರೂ ಜಿಪುಣತನದಿಂದ ಕೊಡಲು ಮನಸ್ಸಿಲ್ಲದಿದ್ದರೆ ತಮ್ಮ ಸ್ನೇಹಿತರನ್ನು ಮುಂದೆ ಬಿಟ್ಟು ಹಿಂದೆ ಸರಿಯುವುದುಂಟು. ಇದು ಒಮ್ಮೆ ಅಥವಾ ಎರಡನೇ ಸಲ ಸರಿಕಾಣಿಸಬಹುದು ಎಲ್ಲರೂ ದುಡ್ಡು ತಂದಿಲ್ಲ ಎಂದು ತಿಳಿಯಬಹುದು. ಈ ಪ್ರವೃತ್ತಿಯನ್ನು ಪದೇ ಪದೇ ಬೆಳೆಸಿಕೊಂಡಲ್ಲಿ ಸ್ನೇಹಿತರಿಂದ ಅಪಹಾಸ್ಯಕ್ಕೆ ಗುರಿಯಾಗಿ ಜಿಪುಣ ಎಂಬ ಬಿರುದನ್ನು ಪಡೆದು ಎಲ್ಲರಿಂದಲೂ ದೂರವಾಗುವ ಸನ್ನಿವೇಶ ಬಂದೊದಗುತ್ತದೆ.

ಯಾರಾದರೂ ಗಣ್ಯವ್ಯಕ್ತಿಗಳು ಬಂದರೆ ಅವರಿಗೆ ಗೌರವ ನೀಡಲು ಪಕ್ಕಕ್ಕೆ ಸರಿಯಬಹುದು, ದೂರ ಸರಿಯಬಹುದು ಅಥವಾ ಅವರಿಗೆ ದಾರಿ ಬಿಟ್ಟು ಹಿಂದೆ ಸರಿಯಬಹುದು. ಸ್ಪರ್ಧೆಗಳ ವಿಷಯ ಬಂದಾಗ ಎದುರಾಳಿಗಳು ತಮ್ಮವರೇ ಆಗಿದ್ದ ಪಕ್ಷದಲ್ಲಿ ಅವರೇ ಗೆಲ್ಲಲಿ ಎಂಬ ಉದ್ದೇಶದಿಂದಲೂ ಸ್ಪರ್ದೆಯಿಂದ ಹಿಂದೆ ಸರಿಯಬಹುದು.

ಯುದ್ದದಲ್ಲಿ ಎದರಾಳಿಯ ಸೈನ್ಯ ಬಲಯುತವಾಗಿದ್ದು, ಅದನ್ನು ನೋಡಿಯೇ ಹೆದರಿಕೊಂಡು ಯುದ್ದ ಭೂಮಿಯಿಂದ ಪಲಾಯನ ಮಾಡಿದರೆ ಅಂತಹವರನ್ನು ಹೇಡಿ ಎನ್ನುತ್ತಾರೆ. ಧೈರ್ಯದಿಂದ ಎದುರಿಸಿ ಗೆದ್ದರೆ ಸಾಮ್ರಾಜ್ಯ ಸೋತರೆ ವೀರಸ್ವರ್ಗ ಎಂದು ಮನಸ್ಸನ್ನು ದೃಡ ಮಾಡಿಕೊಂಡು ಸೆಣಸಿದರೆ ಇವರ ಧೈರ್ಯಬಲದಿಂದ ಗೆಲುವನ್ನು ಸಾಧಿಸಬಹುದು. ಅಥವಾ ಒಮ್ಮೆ ಸೋತರೂ ಅನುಭವ ಬಂದು ಮುಂದಿನ ಯುದ್ದದಲ್ಲಿ ಗೆಲುವನ್ನು ಸಾಧಿಸಬಹುದು. ಎದುರಾಳಿ ಸೈನ್ಯವನ್ನು ಹಿಮ್ಮೆಟ್ಟಿಸುವುಲ್ಲಿ ಹಿಂದಕ್ಕೆ ಸರಿಯಬಾರದು.

ವಿದ್ಯಾರ್ಥಿಗಳ ವಿಷಯಕ್ಕೆ ಬಂದಾಗ ಅವರ ಸಹಪಾಠಿಗಳು ಓದು, ಕ್ರೀಡೆ ಅಥವಾ ಬೇರೆ ಸ್ಪರ್ಧೆಗಳಲ್ಲಿ ಮುಂದೆ ಇದ್ದರೆ ಅವರನ್ನು ಮೀರಿಸಿ ತಾನೇ ಮೊದಲ ಸ್ಥಾನ ಪಡೆಯಬೇಕೆಂಬ ಹಠದಿಂದ ಅವರನ್ನು ಹಿಂದಿಕ್ಕಲು ಪ್ರಯತ್ನಿಸಿ ಅವರನ್ನು ಮೀರಿಸಲು ಸಾಧ್ಯವಾಗದಿದ್ದರೆ ಸ್ಪರ್ಧೆಯಿಂದಲೇ ಹಿಂದೆ ಸರಿಯುವುದುಂಟು. ಯಾವತ್ತೂ ಒಬ್ಬರ ವಿರುದ್ದ ಇನ್ನೊಬ್ಬರು ಸೆಣೆಸುವಾಗ ಪಂದ್ಯವನ್ನಾಡಿ ಸೋತರೆ ಮಾತ್ರ ಗೌರವ ಇರುತ್ತದೆ. ಒಂದು ಸಲ ಸೋತರೂ ಮುಂದಿನ ಸಲ ಗೆಲ್ಲಬಹುದು ಎಂಬ ದೃಡ ವಿಶ್ವಾಸ ಬರುತ್ತದೆ. ಎದುರಾಳಿ ಬಹಳ ಶಕ್ತಿಯುತನಾಗಿದ್ದಾನೆ ಬಹಳ ಬುದ್ದಿವಂತನಾಗಿದ್ದಾನೆ ಅವನನ್ನು ಸೋಲಿಸಲು ಆಗುವುದಿಲ್ಲ ಎಂದು ಹೆದರಿ ಪಂದ್ಯದಿಂದಲೇ ಅಥವಾ ಓದಿನಿಂದಲೇ ದೂರ ಸರಿದರೆ ಅಂತಹ ವಿದ್ಯಾರ್ಥಿ ಎಂದೂ ತನ್ನ ಗುರಿಯನ್ನು ಮುಟ್ಟಲಾರ ಹಾಗೂ ಜೀವನದಲ್ಲಿ ಏನನ್ನೂ ಸಾಧಿಸಲಾರನು. ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ಹುಮ್ಮಸ್ಸಿನಿಂದ ಪುನಃ ಪ್ರಯತ್ನಪಡಬೇಕು. ಒಮ್ಮೆ ಸೋತರೇನು ಇನ್ನೊಮ್ಮೆ ಗೆಲುವು ತಾನಾಗೇ ಬರುತ್ತದೆ.

ವಿದ್ಯಾಭ್ಯಾಸ ಮುಗಿದ ನಂತರ ಕೆಲಸಕ್ಕೆ ಸೇರಿದಾಗ ಮಾಡುವ ಕೆಲಸ ಎಷ್ಟೇ ಕಠಿಣವಾದರೂ ಅದನ್ನು ಕರಗತ ಮಾಡಿಕೊಂಡು ಕೆಲಸ ನಿರ್ವಹಿಸಿದರೆ ಕೆಲಸದಲ್ಲಿ ಅನುಭವ ಹೊಂದಿ ಆ ಕೆಲಸದಲ್ಲಿಯೇ ನುರಿತ ಕೆಲಸಗಾರನಾಗಿ ಪ್ರವೀಣನಾಗಬಹುದು. ಕೆಲಸವು ಬಹಳ ಕಷ್ಟ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹಿಂದೆ ಸರಿದು ಬೇರೆ ಕೆಲಸಕ್ಕೆ ಸೇರಲು ಪ್ರಯತ್ನ ಪಟ್ಟರೆ ಒಳ್ಳೆಯ ಕೆಲಸಗಾರರು ಎಂದಿಗೂ ಆಗುವುದಿಲ್ಲ. ಸೋಮಾರಿಗಳಾಗುತ್ತಾರೆ. ಎಷ್ಟೇ ಕಷ್ಟವಾದ ಕೆಲಸವನ್ನು ನೀಡಿದ್ದರೂ ಅದನ್ನು ಛಲದಿಂದ ಪೂರೈಸಿದರೆ, ಬೇರೆಯವರಿಗೆ ಮಾರ್ಗದರ್ಶನ ಮಾಡುವ ಸಾಮಥ್ರ್ಯ ಬರುತ್ತದೆ. ಇಲ್ಲದಿದ್ದಲ್ಲಿ ಯಾವುದೋ ಕೆಲಸಕ್ಕೆ ಸೇರಿ ಜೀವನಪರ್ಯಂತ ಕೊರಗಬೇಕಾಗುತ್ತದೆ.

ಮಕ್ಕಳ ವಿವಾಹ ಸಂದರ್ಭದಲ್ಲಿ ಹೆತ್ತವರಿಗೆ ತಮ್ಮ ಮಗಳು ಒಳ್ಳೆಯ ಮನೆಯನ್ನು ಸೇರಿ ಸುಖವಾಗಿರಲಿ ನಮ್ಮ ಮನೆಯಲ್ಲಿ ಕಷ್ಟ ಪಟ್ಟಿದ್ದು ಸಾಕು ಎಂಬ ಮನೋಭಾವದಿಂದ ತಮ್ಮ ಮಗಳಿಗೆ ಒಳ್ಳೆಯ ವರನನ್ನು ನೋಡಿರುತ್ತಾರೆ. ಆದರೆ ಆ ವರನ ಬೇಡಿಕೆ ಹೆಚ್ಚಾಗಿದ್ದು, ಅದನ್ನು ಪೂರೈಸಲು ಕಷ್ಟವಾಗಿದ್ದಲ್ಲಿ ಮಾತ್ರ ಬೇರೆ ಸಂಬಂಧವನ್ನು ಹುಡುಕಿ ವಿವಾಹ ಮಾಡೋಣ ಎಂದು ಹಿಂದೆ ಸರಿಯುವುದುಂಟು. ಆದರೆ ಹಲವಾರು ಸನ್ನಿವೇಶಗಳಲ್ಲಿ ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಇರುವ ಒಬ್ಬ ಮಗಳನ್ನು ಒಳ್ಳೆಯ ಕಡೆ ಸೇರಿಸಬೇಕೆಂದು ತಾವು ಇರುವ ಮನೆ ಅಥವಾ ಜಮೀನು ಇದ್ದರೆ ಅದನ್ನು ಮಾರಾಟ ಮಾಡಿಯಾದರೂ ವಿವಾಹವನ್ನು ಮಾಡುವುದುಂಟು. ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂದರೆ ಯಾರೂ ತಮ್ಮ ಕರ್ತವ್ಯದಿಂದ ಮಕ್ಕಳ ಹಿತರಕ್ಷಣೆ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ.
ಮುಂದುವರೆಯುತ್ತದೆ.