Home Article ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿ.

ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿ.

SHARE

ಯಾರು ಸ್ವರೂಪದಲ್ಲಿರುವ ಅನಂತಾನಂದದ ಮೇಲೆ ಆರೋಪಿತವಾಗಿರುವ ಪಿಂಡ, ಬ್ರಹ್ಮಾಂಡ, ಜೀವೇಶಾದಿ, ಹಾಗೇ ಪುರುಷಭಾವನಾದಿಗಳನ್ನು ತೊರೆದು, ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿಯು.
(ಶೀಗೇಹಳ್ಳಿ ಶ್ರೀ ಪರಮಾನಂದ ಸ್ವಾಮಿಗಳಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

||ಶ್ರೀರಾಮ ಸಮರ್ಥ||
ಚಿ. ಪರಮಾನಂದನಿಗೆ ಆಶೀರ್ವಾದ
ಶ್ರೀ ಗುರುಮಾತೆಗೆ ಅನನ್ಯ ಶರಣನಾದ ಪರಮಾನಂದನಿಗೆ ಪರಮ ಆನಂದವಾಗಬೇಕು ಎಂದುಕೊಂಡು ಪರಮಾನಂದದಿಂದ ಕೊಟ್ಟ ಆಶೀರ್ವಾದ.
ಮಗನೇ! ಸುಖರೂಪವಾಗಿದ್ದೀ ತಾನೇ! ಒಬ್ಬನ ಆನಂದರೂಪವೇ ಆಗಿರುವ ಆ ಅದು, ಎರಡನೆಯವರ ಸಮ್ಯಕನ್ಯಾಸ ಅಂದರೆ ಸಂನ್ಯಾಸ; ಆನಂದರೂಪವಾಗಿ, ತನ್ನನ್ನೂ ಬಿಟ್ಟಿ ಇರುವದು, ಬೇರೆಲ್ಲದನ್ನೂ ತ್ಯಾಗ ಮಾಡುವದು ಅಂದರೇನೇ ಸನ್ಯಾಸ.

‘ಅಜಿವ್ಹ್ಯಃ ಪಡಶಃ ಪಂಗುಃ ಅಂಧೋ ಬಧಿರ ಏವ ಚ| ಮುಗ್ಧಶ್ಚ ಮುಚ್ಯತೇ ಭಿಕ್ಷು ಷಡ್ರಿರೇತ್ವರ್ನ ಸಂಶಯಃ|’
ಭಿಕ್ಷು ಅಂದರೆ ಸಂನ್ಯಾಸಿ. ಈ ಲಕ್ಷಣಗಳು ಅವನದೇ ಆಗಿದೆ. ಈ ಆರು ಲಕ್ಷಣಗಳು ಅವನಲ್ಲಿ ಇದ್ದರೆ ಮಾತ್ರ ಆ ಸನ್ಯಾಸಿ ಸುಖದಿಂದ ಭವಸಾಗರವನ್ನು ದಾಟಲು ಶಕ್ತನಾಗುತ್ತಾನೆ. ಅವನು ‘ನಿರವಧಿಃ’ ಆನಂದಸ್ವರೂಪವಾಗಿರುವ ಮೋಕ್ಷಪ್ರಾಪ್ತಿ ಮಾಡಿಕೊಳ್ಳಲು ಶಕ್ತನಾಗುತ್ತಾನೆ.

೧. ‘ಇದು ಇಷ್ಟ, ಅದು ಅನಿಷ್ಟ; ಇದು ರುಚಿಕರ, ಅದು ಅರುಚಿಕರ’ ಹೀಗೆ ಯಾರಿಗೆ ಭೋಜನ ಮಾಡುವಾಗ ಅನಿಸುವದಿಲ್ಲವೋ ಮತ್ತು ಯಾರು ಹಿತಕರ ಮತ್ತು ಸತ್ಯವಾದಿಯಿರುತ್ತಾನೋ, ಮಿತಭಾಷಿಯಿರುತ್ತಾನೋ, ಅವನಿಗೆ ‘ಅಜಿವ್ಹ್ಯಃ’ ಅಂದರೆ ‘ನಾಲಿಗೆ ಇಲ್ಲದವ’ ಎಂದೇ ಹೇಳಲ್ಪಡುತ್ತದೆ. ಇದು ಸನ್ಯಾಸಿಯ ಮೊದಲ ಲಕ್ಷಣ.
೨. ಆಗತಾನೇ ಹುಟ್ಟಿದ ಹೆಣ್ಮಗು, ೧೬ ವರ್ಷದ ತರುಣಿ ಮತ್ತು ನೂರು ವರ್ಷದ ವೃದ್ಧೆ ಈ ಎಲ್ಲರನ್ನೂ ನೋಡುವಾಗ ಅವರ ದೇಹಭಾವದೆಡೆ ನೋಡದೇ, ಅಶರೀರ-ನಿರ್ವಿಕಾರ ಆತ್ಮಸ್ವರೂಪವಿರುವ ಆ ಜೀವಾತ್ಮವಿದೆ ಎಂದು ತಿಳಿದು, ಮನಸ್ಸು ಸ್ವಲ್ಪವೂ ವಿಚಲಿತವಾಗದಿರುವದು; ಆ ಅವಿಚಲ ಮನಸ್ಸಿನವನಿಗೇ ‘ಪಡಶ’ ಎಂದು ಹೇಳುತ್ತಾರೆ. ಪಡಶ ಅಂದರೆ ಪ್ರಕೃತಿಯನ್ನು ತ್ಯಾಗ ಮಾಡಿದವನು ಅಂದರೆ ನಿವೃತ್ತ ಮಾರ್ಗದಲ್ಲಿ ಹೋಗುವವನು. ಇದು ಸನ್ಯಾಸಿಯ ಎರಡನೆಯ ಲಕ್ಷಣ.
೩. ಯಾರ ಪರ್ಯಟನ ಕೇವಲ ಭಿಕ್ಷೆಗಾಗಿ, ಮಲಮೂತ್ರ ವಿಸರ್ಜನೆಗಾಗಿ ಮತ್ತು ವನದ ಏಕಾಂತ ಸ್ಥಳದಿಂದ ಒಂದೆರಡು ಮೈಲಿಗಿಂತಲೂ ಹೆಚ್ಚಿರುವದಿಲ್ಲವೋ ಅಂತಹ ಯತಿಗೇ ‘ಪಂಗು’ ಅಂದರೆ ‘ಕುಂಟ’ ಎಂದೆನ್ನುತ್ತಾರೆ. ಇದು ಸನ್ಯಾಸಿಯ ಮೂರನೆಯ ಲಕ್ಷಣ.

೪. ಎಲ್ಲಿಗಾದರೂ ಹೋಗುವಾಗ, ಬರುವಾಗ, ಎದ್ದು ನಿಲ್ಲುವಾಗ, ಕುಳಿತುಕೊಳ್ಳುವಾಗ ಯಾರ ದೃಷ್ಟಿ ತನ್ನ ಸುತ್ತಮುತ್ತಲಿನ ನಾಲ್ಕು ಕೈಗಳಿಗಿಂತ ಮುಂದೆ ಹೋಗುವದಿಲ್ಲವೋ, ಅಂತಹ ಯತಿಗೇ ‘ಅಂಧ’ ಅಂದರೆ ‘ಕುರುಡ’ ಎಂದು ಹೇಳುತ್ತಾರೆ. ಇದು ಯತಿಯ ನಾಲ್ಕನೆಯ ಲಕ್ಷಣವಾಗಿದೆ.
೫. ಸ್ತುತಿ-ನಿಂದೆ, ಮನಸ್ಸಿಗೆ ಆನಂದವೀಯುವ ಮಧುರ ಮಾತು, ಸಿಟ್ಟು ಬರುವಂತಹ ಮಾತು ಅಥವಾ ತುಚ್ಛತೆಯಿಂದ ಮಾಡಿದ ಮಾತು ಇದೆಲ್ಲವನ್ನೂ ಕೇಳಿಯೂ ಯಾರು ಅದನ್ನು ಕೇಳಿಲ್ಲವೆಂದು ತಿಳಿದು ಆನಂದ-ಆತ್ಮಸ್ವರೂಪದ ಅನುಸಂಧಾನದಲ್ಲಿ ಮಗ್ನನಾಗಿರುತ್ತಾನೋ ಅವನು ‘ಬಧಿರ’ ಅಂದರೆ ‘ಕಿವುಡ’ ಎಂದೆನ್ನುತ್ತಾರೆ. ಇದು ಯತಿಯ ಐದನೇ ಲಕ್ಷಣ.

೬. ಯಾರು ಸಾಮಾನ್ಯ ಜನರನ್ನು ತನ್ನ ಕಡೆ ಸೆಳೆದು ಮಧುರ ಮಾತಿನಿಂದ ಸುಖವೀಯುತ್ತಾನೋ ಮತ್ತು ತನ್ನ ಮನಸ್ಸಿನ ಶಾಂತತೆ ಕದಡಲಿಕ್ಕೆ ಆಸ್ಪದವನ್ನು ಒದಗಿಸುವದಿಲ್ಲವೋ, ಅಂತಹ ದೇಹೇಂದ್ರಿಯಗಳಿಂದ ಶಕ್ತಯುತನಾಗಿರುವ ತರುಣ ಯತಿಗೆ ‘ಮುಗ್ಧ’ ಎಂದೆನ್ನುತ್ತಾರೆ. ಇದು ಯತಿಯ ಆರನೇ ಲಕ್ಷಣ.
ಮಗಾ! ಇವು ಸನ್ಯಾಸಿಯ ಲಕ್ಷಣಗಳು. ಯಾರು ದಾರೇಷಣಾ, ಪುತ್ರೇಷಣಾ ಮತ್ತು ವಿತ್ತೇಷಣಾ – ಈ ಇಚ್ಛೆಗಳು, ಲೋಕವಾಸನೆ, ಶಾಸ್ತ್ರವಾಸನೆ, ದೇಹವಾಸನೆ ಇವೆಲ್ಲವನ್ನೂ ಬಿಟ್ಟು ಸ್ವಸ್ವರೂಪ ಆತ್ಮಾನಂದವೇ ನಿಜವಾದ ಆನಂದವೆಂದು ತಿಳಿದು, ಅದರಲ್ಲೇ ತಲ್ಲೀನನಾಗುತ್ತಾನೋ ಅವನೇ ನಿಜವಾದ ಸನ್ಯಾಸಿಯು. ಯಾರು ಸ್ವರೂಪದಲ್ಲಿರುವ ಅನಂತಾನಂದದ ಮೇಲೆ ಆರೋಪಿತವಾಗಿರುವ ಪಿಂಡ, ಬ್ರಹ್ಮಾಂಡ, ಜೀವೇಶಾದಿ, ಹಾಗೇ ಪುರುಷಭಾವನಾದಿಗಳನ್ನು ತೊರೆದು, ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿಯು.
ಈ ರೀತಿ ಸತ್ಯಸ್ವರೂಪಿ ಆನಂದ ಪ್ರಾಪ್ತ ಮಾಡಿಕೊಳ್ಳಲು ಸನ್ಯಾಸದ ವಿಚಾರ ಮಾಡಿ ಅದೇ ಸ್ಥಿತಿಯಲ್ಲಿ ನೀನು ಇರಲಿ ಎಂದು ನಿನಗೆ ನನ್ನ ಆಶೀರ್ವಾದ ಇದೆ.
ಶ್ರೀಧರ