Home Important ಸಂಕಷ್ಟಕ್ಕೆ ಸಿಲುಕಿದ್ದಾರೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ 200ಕ್ಕೂ ಹೆಚ್ಚು ಯಾತ್ರಾರ್ಥಿಗಳು

ಸಂಕಷ್ಟಕ್ಕೆ ಸಿಲುಕಿದ್ದಾರೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ 200ಕ್ಕೂ ಹೆಚ್ಚು ಯಾತ್ರಾರ್ಥಿಗಳು

SHARE

ಬೆಂಗಳೂರು: ನೇಪಾಳದ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ 200ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸೇರಿದಂತೆ ನೂರಾರು ಭಾರತೀಯರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ರಕ್ಷಣೆಗಾಗಿ ಭಾರತೀಯ ರಾಯಭಾರಿ ಕಚೇರಿ ನೇಪಾಳ ಸರ್ಕಾರದೊಂದಿಗೆ ನಿರಂತ ಸಂಪರ್ಕದಲ್ಲಿದೆ.

ಇನ್ನು ಮಾನಸ ಸರೋವರ ಯಾತ್ರೆ ಕೈಗೊಂಡು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೆಶನ ನೀಡಿದ್ದಾರೆ.

ಈ ಸಂಬಂಧ ಎಲ್ಲಾ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿಯ ಕರ್ನಾಟಕ ಭವನ ದಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಸ್ಥಾನಿಕ ಆಯುಕ್ತರು ನೇಪಾಳ ಸರ್ಕಾರ ಭಾರತ ರಾಯಭಾರಿ ಕಛೇರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.

ಟ್ರಾವೆಲ್‌ ಏಜೆನ್ಸಿಗಳ ಮೂಲಕ ಜೂನ್ 21ರಂದು ರಾಜ್ಯದಿಂದ ಪ್ರವಾಸ ಆರಂಭಿಸಿದ ಯಾತ್ರಿಗಳು ಮಾನಸ ಸರೋವರಕ್ಕೆ ತೆರಳಿ ಅಲ್ಲಿಂದ ಅಮರನಾಥಕ್ಕೆ ತೆರಳಬೇಕಿತ್ತು. ಆದರೆ, ಅಷ್ಟರಲ್ಲಿ ಭಾರೀ ಮಳೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನೇಪಾಳದ ಸಿಮಿಕೋಟ್‌ ಎಂಬ ಪ್ರದೇಶದಲ್ಲಿ ಯಾತ್ರಿಗಳು ವಾಸ್ತವ್ಯ ಹೂಡಿದ್ದಾರೆ.

ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು, ಧಾರವಾಡ, ಗುಲ್ಬರ್ಗ ಮತ್ತು ಹಾಸನದ ಪ್ರವಾಸಿಗರು ಅಮರನಾಥ, ಕೈಲಾಸ, ಮಾನಸ‌ ಸರೋವರ ಪ್ರವಾಸ ಕೈಗೊಂಡಿದ್ದರು. ಈ ಪೈಕಿ ಮಂಡ್ಯ, ಮೈಸೂರು, ರಾಮನಗರ ಭಾಗದಿಂದ ತೆರಳಿದ ಯಾತ್ರಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಳೆದ ನಾಲ್ಕು ದಿನಗಳಿಂದ ಸಿಮಿಕೋಟ್‌ನಲ್ಲೇ ಉಳಿದುಕೊಂಡಿದ್ದಾರೆ. ಊಟ, ತಿಂಡಿ ಇಲ್ಲದೆ ಮಳೆ ಮತ್ತು ಮಂಜಿನಲ್ಲಿ ಸಿಲುಕಿ ಕೆಲವರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಭಾರತ, ನೇಪಾಳ ಮತ್ತು ಟಿಬೆಟ್‌ ರಾಯಭಾರ ಕಚೇರಿ ಅಧಿಕಾರಿಗಳು ನೆರವಿಗೆ ಬಂದಿದ್ದಾರೆ. ಸಿಮಿಕೋಟ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿಗಳು ಯಾತ್ರಾರ್ಥಿಗಳೊಂದಿಗೆ ನೇರ ಸಂಪರ್ಕ ಸಾಧಿಸಿದ್ದು, ಸಂಕಷ್ಟದಲ್ಲಿ ಸಿಳುಕಿರುವವರಿಗೆ ಆಹಾರ, ನೀರು ಹಾಗೂ ರಕ್ಷಣೆಗಾಗಿ ಸೂಕ್ತ ಸ್ಥಳದ ವ್ಯವಸ್ಥೆ ಮಾಡುತ್ತಿರುವುದಾಗಿ ಹೇಳಿದ್ದಾರೆ.