Home Local ಕಾಮಗಾರಿ ಮುಗಿದರೂ ಸಂದಾಯವಾಗದ ಹಣ: ಶಿರಸಿಯಲ್ಲಿ ಸೃಷ್ಟಿಯಾಯ್ತು ಗೊಂದಲ.

ಕಾಮಗಾರಿ ಮುಗಿದರೂ ಸಂದಾಯವಾಗದ ಹಣ: ಶಿರಸಿಯಲ್ಲಿ ಸೃಷ್ಟಿಯಾಯ್ತು ಗೊಂದಲ.

SHARE

ಶಿರಸಿ:ಕಾಮಗಾರಿ ನಡೆದರೂ ಹಣ ಸಂಧಾಯವಾಗದ ಪ್ರಕರಣವೊಂದು ಶಿರಸಿಯಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ತೆರಕನಳ್ಳಿಯ ತೋಟಗಾರಿಕಾ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಹನಿ ನೀರಾವರಿ ಹಾಗೂ ಕಾರಂಜಿ ಕಾಮಗಾರಿ ನಡೆಸಿದ ಖಾಸಗಿ ಕಂಪನಿಯೊಂದಕ್ಕೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ನಿರ್ಮಿತಿ ಕೇಂದ್ರದವರು ಹಣ ನೀಡದೇ ಸತಾಯಿಸುತ್ತಿರುವ ಬಗ್ಗೆ ವಿಷಯವೀಗ ಬಹಿರಂಗಗೊಂಡಿದೆ.

ತೆರಕನಳ್ಳಿಯ ತೋಟಗಾರಿಕಾ ನರ್ಸರಿಯಲ್ಲಿ ಹನಿ ನೀರಾವರಿ ಹಾಗೂ ಕಾರಂಜಿ ನಿರ್ಮಾಣಕ್ಕೆ ತೋಟಗಾರಿಕಾ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ನಿರ್ಮಿತಿಯವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಡಿಜಿಟ್ರಾನ್‌ ಟೆಕ್ನಾಲಜಿಸ್‌ಗೆ ಸಬ್‌ ಕಾಂಟ್ರಾಕ್ಟ್‌ ಆಧಾರದ ಮೇಲೆ ಮೌಖಿಕ ಆದೇಶದ ಮೇರೆಗೆ 11.4 ಲಕ್ಷ ರೂ.ಗೆ ಕಾಮಗಾರಿ ನಡೆಸಲು ಸೂಚಿಸಿದಂತೆ ಸೂರ್ಯನಾರಾಯಣ ಐತಾಳ ನೇತ್ರತ್ವದ ಡಿಜಿಟ್ರಾನ್‌ ಸಂಪೂರ್ಣ ಕಾಮಗಾರಿ ಮುಗಿಸಿ ಒಂದು ವರ್ಷ ಕಳೆದಿದೆ, ಈವರೆಗೆ ಕೇವಲ 5.30 ಲಕ್ಷ ರೂ. ಮಾತ್ರ ನೀಡಿದ್ದು, ಬಡ್ಡಿ ಸೇರಿ 7.7 ಲಕ್ಷ ರೂ. ನೀಡಬೇಕಿದೆ. ಈ ಕುರಿತು ಸೂರ್ಯನಾರಾಯಣ ನಿರ್ಮಿತಿಯ ಸಹಾಯಕ ಯೋಜನಾಧಿಕಾರಿಗೆ ವಿನಂತಿ ಮಾಡಿದರೂ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ನಿರ್ಮಿತಿ ಕೇಂದ್ರಕ್ಕೆ 2017ರ ಸೆಪ್ಟೆಂಬರ 24ರಂದು 24 ಲಕ್ಷ ರೂ. ನೀಡಲಾಗಿದೆ ಎಂದಿದ್ದು, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಗಳು ಇನ್ನು ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಕಾಮಗಾರಿ ಪೂರ್ತಿಗೊಳಿಸಿದ್ದು ಬಾಕಿ ಮೊತ್ತ ನೀಡುವಂತೆ ಸೂರ್ಯನಾರಾಯಣ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದವರಿಗೂ ಪತ್ರ ಬರೆದಿದ್ದು, ಯಾರಿಂದಲೂ ಹಣ ನೀಡುವ ಕುರಿತು ಉತ್ತರ ಬಂದಿಲ್ಲ ಎನ್ನುತ್ತಾರೆ ಅವರು.