Home Article ಜೀವಿಯ ದೃಷ್ಟಿ ಯಾವಾಗ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ!

ಜೀವಿಯ ದೃಷ್ಟಿ ಯಾವಾಗ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ!

SHARE

ಜೀವಿಯ ದೃಷ್ಟಿ ಯಾವಾಗ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ ಮತ್ತು ನಂತರ ಬಹಿರ್ಮುಖತೆ ಪ್ರಾರಂಭವಾದಂತೆ, ತೋಲ ತಪ್ಪಿ ಗಿರಕಿ ಹೊಡೆದು, ಪೆಟ್ಟು ತಿನ್ನುತ್ತಾ ತಿನ್ನುತ್ತಾ, ಕ್ರಮೇಣ ಮತ್ತು ಮತ್ತೂ ಕೆಳಗುರುಳುತ್ತಾ, ನೆಟ್ಟಗೆ ಸಂಸಾರ ಸಮುದ್ರದ ಆಳಕ್ಕೆ ಹೋಗಿ ಮುಟ್ಟುತ್ತಾನೆ. ಹಾಗಾದ ಮೇಲೆ ಅವನಿಗೆ ಸ್ವಸ್ವರೂಪದ ಸಂಪೂರ್ಣ ವಿಸ್ಮೃತಿಯಾಗುತ್ತದೆ.
(ಮಾತೋಶ್ರೀ ಸಾವಿತ್ರಿ ಭಾಗವತ, ವಾರಣಾಸಿ, ಇವರಿಗೆ ಬರೆದ ಪತ್ರ)
— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

|| ಶ್ರೀರಾಮ ಸಮರ್ಥ ||
ಮಗಳೇ!
ಯಾರೇ ಆಗಲಿ, ಯಾವಾಗ ಸ್ತುತಿಯಿಂದ ಪ್ರಫುಲ್ಲಿತರಾಗಿ ಆನಂದಹೊಂದುತ್ತಾರೋ ಮತ್ತು ನಿಂದೆ ಮಾಡುವದರಿಂದ ಖಿನ್ನರಾಗುತ್ತಾರೋ, ಇದು ದೇಹಾಭಿಮಾನವೇ ಆಗಿದೆ. ಈ ದೇಹಾಭಿಮಾನವನ್ನು ಸ್ವರೂಪ ದೃಷ್ಟಿಯ ಅಖಂಡ ಧಾರಣೆಯಿಂದ ನಷ್ಟ ಮಾಡಬೇಕು. ಸ್ವರೂಪಸ್ಥಿತಿಯು ಸ್ವಾಭಾವಿಕ, ಪೂರ್ಣ, ನಿರ್ವಿಕಲ್ಪ, ಆತ್ಮಸ್ವರೂಪವಿದ್ದು, ಅದರ ಧಾರಣೆಯ ನಿರಂತರ ಅಭ್ಯಾಸ ಮಾಡುತ್ತಿರಬೇಕು. ಅದರಲ್ಲಿ ಬೇರೆ ಯಾವುದೇ ದೈತ ಕಲ್ಪನೆಗೆ ಸ್ಥಾನವೇ ಇಲ್ಲ. ಈ ರೀತಿಯ ಸ್ಥಿತಿಗೆ ಹೋಗಿ, ಆತ್ಮವೇ ಸ್ವತಃ, ಅಹಂ ಸ್ಮೃತಿ ವಿರಹಿತ, ನಿರ್ವಿಕಲ್ಪ, ನಿರ್ವಿಕಾರ, ನಿರಂತರ ಏಕಮೇವ ರೂಪ, ಸ್ವಯಂ ಪ್ರಕಾಶಕ ಅಹಂಭಾವಕ್ಕೂ ಮೂಲತತ್ವವಾದ ಏಕಮೇವ ಆತ್ಮವಾಗಿ, ತಾನೇ ಸರ್ವತ್ರ ವ್ಯಾಪಿಸಿಕೊಂಡಿದೆ. ಇದೇ ನನ್ನ ಸ್ವರೂಪವೆಂದು ದೃಢ ನಿಶ್ಚಯ ಮಾಡಿ, ನಿತ್ಯ-ನಿರ್ವಿಕಲ್ಪ ಸ್ಥಿತಿಯಲ್ಲಿಯೇ ಯಾವಾಗಲೂ ಇರಬೇಕು.

ಅಹಂಸ್ಮೃತಿಯ ಮುಂದೆ ಮಾಯೆ-ಅವಿದ್ಯೆಯ ಕ್ಷೇತ್ರವಿದೆ. ಯಾವಾಗ ಜೀವಿಯ ದೃಷ್ಟಿ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ ಮತ್ತು ಬಹಿರ್ಮುಖತೆ ಪ್ರಾರಂಭವಾದಂತೆ, ತೋಲ ತಪ್ಪಿ ಗಿರಕಿ ಹೊಡೆದು, ಪೆಟ್ಟು ತಿನ್ನುತ್ತಾ ತಿನ್ನುತ್ತಾ, ಕ್ರಮೇಣ ಮತ್ತೂ ಮತ್ತೂ ಕೆಳಗುರುಳುತ್ತಾ, ನೆಟ್ಟಗೆ ಸಂಸಾರ ಸಮುದ್ರದ ಆಳಕ್ಕೇ ಹೋಗಿ ಮುಟ್ಟಿಬಿಡುತ್ತಾನೆ. ಹಾಗಾದಾಗ ಅವನಿಗೆ ಸ್ವಸ್ವರೂಪದ ಸಂಪೂರ್ಣ ವಿಸ್ಮೃತಿಯಾಗುತ್ತದೆ ಮತ್ತು ಹೃದಯದಲ್ಲಿ ಮನಸ್ಸಿನ ಅನೇಕ ಪ್ರಕಾರದ ವಿಕ್ಷೇಪಕ ಶಕ್ತಿ ಹಬ್ಬುತ್ತದೆ; ಹಾಗೇ ಅವು ಚಂಚಲತೆ, ಆಶೆ, ತೃಷ್ಣೆ ಮೊದಲಾದವುಗಳಲ್ಲಿ ರೂಪಾಂತರವಾಗುತ್ತವೆ. ಮನಸ್ಸಿನ ಈ ವೃತ್ತಿ ವಿಷರೂಪಿ ವಿಷಯಗಳ ಸೇವನೆ ಮಾಡಿ, ಜೀವಭಾವದ ಮೂಲಕ ಬದ್ಧವಾಗಿ, ಜನ್ಮ-ಮೃತ್ಯುರೂಪದ ಸಂಸಾರಚಕ್ರದಲ್ಲಿ ತಿರುಗುತ್ತಿರುತ್ತವೆ. ಯಾವಾಗ ಗುರುವಿನ ಪೂರ್ಣಕೃಪೆಯಾಗುತ್ತದೆಯೋ, ಆಗ ಮಾತ್ರ ಜೀವಿಗೆ ತತ್ವ ಸಾಕ್ಷಾತ್ಕಾರವಾಗಿ ಮೋಕ್ಷಪ್ರಾಪ್ತಿಯಾಗುತ್ತದೆ. ನಮ್ಮ ಹೃದಯದಲ್ಲಿನ ವಿಕ್ಷೇಪ-ವೃತ್ತಿಯ ಅಧಿಕತೆಗೆ, ಆತ್ಮಸ್ವರೂಪದ ಪ್ರಸಾದದ ಅರಿವೇ ಆಗಬೇಕು. ಬಂಧನ ಮತ್ತು ಮುಕ್ತಿ, ಈ ಎರಡೂ ಜ್ಞಾನ ಮತ್ತು ಅಜ್ಞಾನಗಳ ವಿಲಾಸವೇ ಆಗಿದೆ.

ಎದ್ದೇಳುವ ಪ್ರತಿಯೊಂದು ಕಲ್ಪನೆಯ ತೂಕ-ಅಳತೆ ಮಾಡಿ ನೋಡಿ, ಮತ್ತು ಅದರಲ್ಲಿ ಆತ್ಮಸ್ಮೃತಿ ಮತ್ತು ವಿಸ್ಮೃತಿ ಎಷ್ಟಿದೆ ಎಂದು ನೋಡಿ, ಅದರಲ್ಲಿಯ ಸ್ಮೃತಿಯ ಭಾಗ ಹೆಚ್ಚಿಸುತ್ತ, ವಿಸ್ಮೃತಿಯ ಭಾಗ ಕಡಿಮೆ ಮಾಡುತ್ತಾ ಹೋಗು. ಪ್ರತ್ಯೇಕ ವೃತ್ತಿಯನ್ನು ಸ್ವರೂಪದಲ್ಲಿ ಲಯ ಮಾಡುತ್ತಾ ಹೋಗು.
ಹೇಗೆ ಭ್ರಮೆಯಿಂದ ಹಗ್ಗದ ಸ್ಥಳದಲ್ಲಿ ಹಾವಿನ ಭಾಸವಾಗುತ್ತದೆಯೋ ಮತ್ತು ವಿಚಾರ ಮಾಡಿದಾಗ ಆ ಹಗ್ಗದ ಸ್ಥಳದಲ್ಲಿ ಹೇಗೆ ಹಾವು ಇರುವದಿಲ್ಲವೋ ಮತ್ತು ಹಾವಿನ ಹೆದರಿಕೆಯೂ ಇಲ್ಲದಾಗುವದೋ, ಹಾಗೇಯೇ, ವಿಚಾರದಿಂದ ನಮ್ಮ ವೃತ್ತಿಯನ್ನು ಆತ್ಮದ ಕಡೆಗೆ ಕರೆದೊಯ್ದರೆ, ಆಗ ಜ್ಞಾನದೃಷ್ಟಿಯಿಂದ, ‘ಇದೇನೂ ಇಲ್ಲ’ ಎಂಬುದು ತೋರಿಬರುತ್ತದೆ. ಇದೇ ಸದ್ಗುರುವಿನ ಯಥಾರ್ಥ ಸ್ವರೂಪವಾಗಿದೆ, ಇದೇ ಬ್ರಹ್ಮೈಕ್ಯವಾಗಿದೆ ಮತ್ತು ಇದೇ ಗುರುವಿನ ಅಖಂಡ ಸೇವೆಯಾಗಿದೆ. ಇದೇ ನಮ್ಮ ಆತ್ಮವಾಗಿದೆ ಎಂಬ ಒಂದು ಅದ್ವಿತೀಯ ತತ್ವದ ಧಾರಣೆಯ ಹೊರತು, ಅಲ್ಲಿ ಮತ್ತೇನೂ ಇಲ್ಲ ಎಂಬ ನಿಶ್ಚಯಪೂರ್ವಕ ‘ಅಹಂ ಬ್ರಹ್ಮಾಸ್ಮಿ’ಯ ಸ್ಫೂರ್ತಿಗಿಂತಲೂ ಮೊದಲಿನ ಅಖಂಡ, ಜ್ಞಾನಗಮ್ಯ, ಸತ್ಯಸ್ವರೂಪ, ಆನಂದಘನ, ಅದ್ವಿತೀಯ ಸ್ವರೂಪದಲ್ಲಿ ಬೇರೆ ಯಾವುದೇ ಕಲ್ಪನೆ ಏಳದಿರುವದೇ ಸ್ವರೂಪಸ್ಥಿತಿಯು.
ಇತಿ |
ನಿನ್ನದೇ ಆತ್ಮ
ಶ್ರೀಧರ