Home Article ಬೇಲಿಯಂತೆ ಕಟ್ಟು ಪಾಡಿನ ಜೀವನ: ಭಾಗ-1

ಬೇಲಿಯಂತೆ ಕಟ್ಟು ಪಾಡಿನ ಜೀವನ: ಭಾಗ-1

SHARE


ಪ್ರಾಣಿಗಳು ಹೊಲ ಗದ್ದೆಗಳ ಒಳಗೆ ನುಗ್ಗಿ ಬಂದು ಬೆಳೆ ತಿಂದು ನಾಶಮಾಡುವುದನ್ನು ತಡೆಯುವುದಕ್ಕಾಗಿ ಹಾಗೂ ತನ್ನ ಜಮೀನನ್ನು ಬೇರೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳದಿರುವಂತೆ ತನ್ನ ಜಮೀನಿನ ಪ್ರದೇಶವನ್ನು ಗುರ್ತಿಸಿಕೊಳ್ಳಲು ಬೇಲಿಯನ್ನು ಹಾಕಿರುವುದು ಸಾಮಾನ್ಯ ಸಂಗತಿ. ಬೇಲಿಯನ್ನು ಹಾಕಿದ್ದರೆ ಅದು ಜಮೀನುಗಳಿಗೆ, ಮನುಷ್ಯರಿಗೆ ಹಾಗೂ ಬೆಳೆಗಳಿಗೆ ರಕ್ಷಣೆ ಒದಗಿಸುತ್ತದೆ. ಬೇರೆಯವರು ಅತಿಕ್ರಮಣ ಪ್ರವೇಶ ಮಾಡಬಾರದೆಂದು ರಕ್ಷಾ ಕವಚದಂತೆ ಬೇಲಿಯನ್ನು ಎಲ್ಲಾ ತೋಟಗಳ ಸುತ್ತಲೂ ಮಾತ್ರ ಹಾಕುವುದುಂಟು.. ಮುಳ್ಳಿನ ತಂತಿಯಿಂದ ಅಥವಾ ತೋಟದ ಸುತ್ತಲೂ ದೊಡ್ಡ ದೊಡ್ಡ ಮರವನ್ನು ಬೆಳೆಸುವುದರ ಮೂಲಕ ಅಥವಾ ಅತಿ ಶ್ರೀಮಂತರಾಗಿದ್ದರೆ ಸುತ್ತಲೂ ಕಲ್ಲಿನಿಂದ ಕಾಂಪೌಂಡ್ ನಿರ್ಮಿಸಿರುತ್ತಾರೆ. ಹೊಲಗಳಿಗೆ ಅಷ್ಟಾಗಿ ಬೇಲಿಯನ್ನು ಹಾಕಿರುವುದಿಲ್ಲ ಸುತ್ತಲೂ ಬದುಗಳನ್ನು ನಿರ್ಮಿಸಿರುತ್ತಾರೆ.

ನಮ್ಮ ಜಮೀನು ಇರುವುದು ಇಷ್ಟೆ. ಇದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಜಮೀನನ್ನು ಒಂದು ತೋಟ ಅಥವಾ ಗದ್ದೆ ಮಾಡಬೇಕು ಎಂಬ ಹಂಬಲ ಇರುತ್ತದೆ. ಒಂದು ಕಡೆ ನೀರು ಹರಿದು ಬೆಳೆದಿರುವ ಬೆಳಗೆ ತಲುಪಲು ಅದರ ಸುತ್ತಲೂ ಬದಿಗಳನ್ನು ನಿರ್ಮಿಸಿರುತ್ತಾರೆ. ಅಥವಾ ಮಳೆಗಾಲದಲ್ಲಿ ಮಳೆ ಜಾಸ್ತಿ ಬಂದರೂ ನಿಲ್ಲದಂತೆ ಸರಾಗವಾಗಿ ಹರಿದು ಹೋಗಲು ಎರಡೂ ಬದಿಗಳಲ್ಲಿ ಕಟ್ಟೆಯನ್ನು ಕಟ್ಟಿರುತ್ತಾರೆ. ಜಮೀನು ಬಯಲು ಪ್ರದೇಶವಲ್ಲವೇ? ಅದು ಹೇಗಿದ್ದರೂ ಬೆಳೆಯನ್ನು ಬೆಳೆಯಬಹುದು ಎಂದು ಬಿಟ್ಟರೆ ಅದು ಜಮೀನು ಎನಿಸಿಕೊಳ್ಳುವುದಿಲ್ಲ. ಜೊತೆಗೆ ಸರಿಯಾಗಿ ಬೆಳೆಯನ್ನು ಬೆಳೆಯನ್ನು ಬೆಳೆಯಲು ಆಗುವುದೇ ಇಲ್ಲ.

ಮನುಷ್ಯನ ಜೀವನದಲ್ಲಿಯೂ ಮನುಷ್ಯನಾದವನು ಹೀಗೇ ಬದುಕಬೇಕೆಂಬ ನಿಯಮ ಇರುತ್ತದೆ. ಹೇಗಾದರೂ ಬದುಕಬಹುದು ಎಂದರೆ ಸಮಾಜ ಕೇಳುವುದಿಲ್ಲ. ಅದಕ್ಕೆ ಮನುಷ್ಯನ ಜೀವನದಲ್ಲಿ ಮಾಡಿಕೊಂಡಿರುವ ಕಟ್ಟುಪಾಡುಗಳೇ ಒಂದು ರೀತಿಯ ಬೇಲಿಯಾಗುತ್ತದೆ ಮನುಷ್ಯನಿಂದ ಹಿಡಿದು ದೇಶದವರೆವಿಗೂ ವಿಸ್ತರಿಸಿದರೆ ಪ್ರಾದೇಶಿಕವಾಗಿ ಅವರುಗಳದ್ದೇ ಆದ ವಿಬಿನ್ನವಾದ ಅನೇಕ ಕಟ್ಟುಪಾಡುಗಳಿರುತ್ತವೆ. ದೇಶ, ರಾಜ್ಯ, ಜಿಲ್ಲೆ ತಾಲ್ಲೂಕು, ಊರುಗಳಂತೆ ವಿಂಗಡನೆ ಮಾಡಿ ಅವುಗಳನ್ನು ಗುರ್ತಿಸಲು ಗಡಿರೇಖೆಗಳನ್ನು ಹಾಕಿರುತ್ತಾರೆ. ಸಮುದ್ರದಲ್ಲಿಯೂ ಗಡಿಯನ್ನು ಗುರ್ತಿಸಿರುತ್ತಾರೆ. ನಿಯಮ ಮೀರಿ ಬೇರೆ ದೇಶದವರು ನಮ್ಮ ದೇಶಕ್ಕೆ ಬಂದರೆ ಅಥವಾ ಈ ದೇಶದವರು ಬೇರೆ ದೇಶದ ಗಡಿಗೆ ಹೋದರೆ ಅಂಥವರನ್ನು ಬಂದಿಸುತ್ತಾರೆ.

ಒಬ್ಬ ವ್ಯಕ್ತಿ ತನಗೇ ತಾನು ಕಟ್ಟುಪಾಡು ವಿಧಿಸಿಕೊಂಡಲ್ಲಿ ಅದು ಶಿಸ್ತು ಆಗುತ್ತದೆ, ಸಮಾಜದಲ್ಲಿ ಅಳವಡಿಸಿಕೊಂಡಲ್ಲಿ ಅದು ಸಂಪ್ರದಾಯ ರೂಢಿ ಎಂದಾಗುತ್ತದೆ. ಒಂದು ದೇಶದ ಪ್ರಜೆಗಳನ್ನು ನಿಯಂತ್ರಿಸಲು ಹಲವಾರು ವಿಧದ ನಿಯಮಗಳು ಇರುತ್ತವೆ. ಜೀವನದ ಪ್ರತಿಯೊಂದು ಹೆಜ್ಜೆಗೂ ನೀತಿ ನಿಯಮಗಳನ್ನು ಸರ್ಕಾರವೇ ಮಾಡಿರುತ್ತದೆ. ಇದನ್ನು ಯಾರೂ ಪ್ರಶ್ನಿಸುವ ಹಾಗೂ ಧಿಕ್ಕರಿಸಿ ನಡೆಯುವ ಹಾಗಿಲ್ಲ. ದಿಕ್ಕರಿಸಿ ನಡೆದರೆ ನಿಯಮಗಳಲ್ಲಿ ನಮೂದಿಸಿರುವಂತೆ ನಿಯಮ ಉಲ್ಲಂಘಿಸುವ ವ್ಯಕ್ತಿಗೆ ಶಿಕ್ಷೆಯನ್ನು ವಿಧಿಸಲಾಗುವುದೆಂದು ಎಲ್ಲರಿಗೂ ತಿಳಿದ ವಿಷಯ. ಮನುಷ್ಯನಾದವನು ಹುಟ್ಟಿನಿಂದ ಸಾಯುವವರೆಗೆ ಕಟ್ಟುಪಾಡಿನ ಒಳಗೆ ಬಂದಿಯಾಗಿ ಜೀವನ ಸಾಗಿಸಬೇಕು. ಇಲ್ಲದಿದ್ದಲ್ಲಿ ಪ್ರಾಣಿಗಳಂತೆ ಬದುಕಬೇಕಾಗುತ್ತದೆ. ಮನೆಯಲ್ಲಿ ಸಾಕಿರುವ ಪ್ರಾಣಿಗಳಿಗೆ ನೀತಿ ನಿಯಮ ಕಲಿಸಿರಬಹುದು. ಆದರೆ ಕಾಡಿನಲ್ಲಿ ಇರುವ ಪ್ರಾಣಿಗಳು ಹಸಿವಾದಾಗ ಬೇಟೆಯಾಡಿ ಬಾಯಾರಿಕೆಯಾದಾಗ ನೀರು ಕುಡಿದು ನಿದ್ದೆ ಬಂದಾಗ ಮಲಗುತ್ತವೆ.

ದೇಶದಲ್ಲಿರುವ ಕೋಟ್ಯಾಂತರ ಜನಗಳನ್ನು ನಿಯಂತ್ರಿಸಲು ಪ್ರತಿಯೊಂದು ನಡವಳಿಕೆಗೆ ವಿಧ-ವಿಧವಾದ ನೀತಿನಿಯಮಗಳು ಇರುತ್ತವೆ. ಬೇರೊಬ್ಬರಿಗೆ ತೊಂದರೆ ಕೊಡುವಂತಹ ಯಾವ ಕೆಲಸಗಳನ್ನು ಮಾಡಬಾರದೆಂದು ಕಾನೂನು ರೂಪಿಸಲಾಗಿದೆ. ದೇಶವನ್ನು ಮುನ್ನಡೆಸಲು ಸಂವಿಧಾನ ಎಂಬುದು ಇರುತ್ತದೆ. ಅದನ್ನು ಮೀರಿ ಯಾವುದೇ ಕೆಲಸಗಳನ್ನು ಮಾಡಬಾರದೆಂದು ನೀತಿ ನಿಯಮ ಇರುತ್ತದೆ. ಆದಾಯ ತೆರಿಗೆ ಕಾನೂನು, ಸಿವಿಲ್ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, ಮೋಟಾರು ವಾಹನಗಳ ಕಾನೂನು, ಕಂಪೆನಿಗಳ ಕಾನೂನು, ಲೇಬರ್ ಲಾ ಹೀಗೆ ಅನೇಕಾನೇಕ ಕಾನೂನುಗಳು ದೇಶದಲ್ಲಿ ಜಾರಿಯಲ್ಲಿವೆ. ಇವುಗಳೆಲ್ಲವೂ ಪ್ರಜೆಗಳಿಗಾಗಿಯೇ ದೇಶವು ವಿಧಿಸಿದ ಕಟ್ಟುಪಾಡುಗಳಾಗಿವೆ. ದೇಶವನ್ನು ಮುನ್ನಡೆಸುವ ಸಂವಿಧಾನ ರಚಿಸಿರುವ ಸನ್ಮಾನ್ಯ ಭಾರತರತ್ನ ಬಿ.ಆರ್. ಅಂಬೇಡ್ಕರ್‍ರವರ ಹಾಗೂ ಪ್ರತಿಯೊಂದಕ್ಕೂ ಕಾನೂನು ಕಟ್ಟಲೆಗಳನ್ನು ಮಾಡಿರುವ ಮಹನೀಯರುಗಳ ಕಾರ್ಯ ಶ್ಲಾಘನೀಯ.