Home Article ಕಳೆದುಹೋದ ಎಳೆಯ ದಿನಗಳು ಭಾಗ ೨೦

ಕಳೆದುಹೋದ ಎಳೆಯ ದಿನಗಳು ಭಾಗ ೨೦

SHARE

ನಮಸ್ಕಾರ..ಆದಿತ್ಯವಾರ..ನಿಮ್ಮ ಆದಿ ದಿನಗಳು ಕಳೆದ ಹಾದಿಯ ನೆನಪುಗಳನ್ನು..
ಮತ್ತೊಮ್ಮೆ ನೆನೆಯುವಂತೆ ಪ್ರಯತ್ನಿಸುವೆ….

ಬಡತನದ ಹಬ್ಬಗಳು ಮರೆಯಲೇ ಇಲ್ಲ ನನಗೆ.ಅಗೆಲ್ಲ ದೋಸೆ..ಕಾಣುವುದು ಹಬ್ಬದಲ್ಲೆ.ಅಯಿ ಗಂಗಾಷ್ಟಮಿ ದಿನ ಮಿಂದು ಮಡಡಿಯುಟ್ಟು ಬಾವಿಗೆ ಹೋಗಿ ನೀರು ತಂದು ದೇವರಮುಂದಿಟ್ಟು ಪೂಜೆ ಮಾಡುತ್ತಿದ್ದಳು.ಮತ್ತದೇ ಸಕ್ಕರೆ..ತಟ್ಟೆಪಾಯಸ..ಅನೇಕ ಸರ್ತಿ ಹಿತ್ಲಕಡ ಬಾಗಿಲಿನಿಂದ ಅವರಿವರ ಮನೆಯಿಂದ ಪಾಯಸ ತಂದು ನನ್ನನ್ನು ಸುಮ್ಮನಿರಿಸಿದ್ದಿದೆ..ನಮ್ಮನೆ ದೀಪಾವಳಿ ತೊಳಸಿಕಟ್ಟೆಗೆ ಇಡುವ ಎರಡು ಹಣ್ತಗೆಯಲ್ಲಿ ಮುಗಿಯುತ್ತಿತ್ತು.ಹತ್ತಿಪ್ಪತ್ತು ನೆಣೆಯಲ್ಲಿ ನಮ್ಮನೆ ದೀಪಾವಳಿ.ಆಚೀಚೆ ಮನೆಯ ಸುರ್ ಸುರ್ ಕಡ್ಡಿಯ ಬೆಳಕು..ಹಾಗಲಬತ್ತಿ ಕೀರಿದಾಗ ಬರುವ ಹೊಗೆ..ಹೊಳ್ಳಿಗೆ ಬಡಿದ ನೆಲಗುಮ್ಮ..ಹಾವಿನ ಗುಳಿಗೆ..ನೆಲಚಕ್ರ..ಕೋಡುಗಳಕನ್ನು ಕಣ್ಣುಮುಚ್ಚದೇ ನೋಡಿ ..ದೀಪಾವಳಿ ತೆರೆದ ಕಣ್ಣಿನ ಕನಸಿನಲ್ಲಿಯೇ ಮುಗಿಯುತ್ತಿತ್ತು.ಆದರೂ ಒಂದು ಪೆಕೆಟ್ ಸುರ್ ಕಡ್ಡಿತಂದು..ಅದನ್ನೇ ತೊಳ್ಸಿಹಬ್ಬ..ಗಂಟಿಹಬ್ಬದ ವರೆಗೆ ಮುಗಿಸಿದ್ದಿದೆ.ಎದುರು ಮನೆಯವರು ಸುರ್ ಕಡ್ಡಿ ಹಚ್ಚುವಾಗ..ನಾವು ಹೊಳ್ಳಿಮೇಲೆ ಚಿಮಣಿ ಬುರಡೆಗೆ..ಹಿಡಿಕಡ್ಡಿಗೆ ಬೆಂಕಿ ಹಚ್ವಿ ..ತಲಬು ತೀರಿಸಿಕೊಂಡಿದ್ದು ನೆನಪಿದೆ.ಅಲ್ಲದೇ ಅವರು ಹಚ್ಚುವಾಗಾವರ ಕೈ ಮುಟ್ಟಿ ಸಮಾಧಾನ ಪಟ್ಟಿದ್ದಿದೆ. ಇನ್ನು ಸುರ್ ಎಂದು ಕತ್ತುವ ಮಾರುದ್ದದ ಬತ್ತಿ ಹಚ್ಚಿ ಅಂಗಳತುಂಬ ಅವರೆಲ್ಲ ಕುಣಿಯುತ್ತಿದ್ದರು..ಅಯಿಯ ಹಳೆಯ ಲಂಗದ ಬಾರ..ಅಪ್ಪನ ಹಳೆಯ ಅಂಡರವೇರನ ಬಾರಕ್ಕೆ ಚಿಮಣಿಎಣ್ಣೆ ಅದ್ದಿಸಿ ಹಚ್ಚಿ ..ಬೈಸಿಕೊಂಡಿದ್ದಿದೆ.

ಮಡಣದಬತ್ತಿ ವಿಶೇಷ.ಅದು ಒಂದು ಪೆಕೆಟ ತಂದರೆ ಕಪಾಟಿನಲ್ಲಿ ಇಡುತ್ತಿದ್ದರು..ನನ್ನ ತಮ್ಮ ಸಣ್ಣ..ಮತ್ತು ಎಲ್ಲದಕ್ಕೂ ಹೊಂದುತ್ತಿದ್ದ.ನಾನು ರಗಳೆ ಪೋರ.ನಮ್ಮ ಎಲ್ಲ ಜಾನಪದ ಬೈಗಳವನ್ನೂ ನಾನು ಬೈಸಿಕೊಂಡವ..ಹಡಬೆಪೋರ..ಇದು ನನಗೆ ಸಾಮಾನ್ಯವಾಗಿತ್ತು.ಹಟ ಮಡುತ್ತಿದ್ದೆನೇ ವಿನಹ ಚಪ್ಪರಕತನ ಮಾಡುತ್ತಿರಲಿಲ್ಲ.ಅಂಗಳದಲ್ಲಿ ಬಿದ್ದ ಅರ್ಧ ಕತ್ತಿದ ಮದ್ದಿನಸಾಮಾನಿನಲ್ಲಿ..ನಾವು ವಿಜ್ರಂಭಣೆಯಿಂದ ಹಿತ್ಲಕಡದ ಹೊಳ್ಳಿಯಲ್ಲಿ..ದೀಪಾವಳಿ ಮಾಡಿದ್ದಿದೆ..ಆಯಿ ಸುಮ್ಮನೆ ತಳಿಗಂಡಿಯಲ್ಲಿ ನೋಡುತ್ತ ನಿಂತಿರುತ್ತಿದ್ದ ಚಿತ್ರ ಈಗ ಕಣ್ಣಿಗೆ ಕಟ್ಟುತ್ತದೆ..ಆಯಿಯ ಆ ಅಸಹಾಯಕ ಭಾವದ ನೆನಪು ಈಗಲು ಒಮ್ಮೊಮ್ಮೆ ಅಳುವಂತೆ ಮಾಡುತ್ತದೆ.
ಕಡಬು ವಿಶೇಷ ತಿಂಡಿ..ನಮಗಂತೂ ಇನ್ನೂ ವಿಶೇಷ.ನಮ್ಮನೆಯಲ್ಲಿ ಕರು ಇತ್ತು.ಹಾಲು ಮಜ್ಜಿಗೆಗೆ ಬರವಿಲ್ಲ..ಅಯಿ ಚಾಪುಡಿ..ಸಕ್ಕರೆ ಕಾಸಾದರೂ ಆಗಲೆಂದು ನಮ್ಮ ಬಾಯ್ಮೆಲೆ ಹೊಡೆದು ಹನಿಹನಿ ತುಪ್ಪ ಮಾಡಿ ಮಾರುತ್ತಿದ್ದರು.ಕಡಬು ಬೆಲ್ಲಕ್ಕೆ ಹನೀ ತುಪ್ಪ ಹಾಕಿ ಕರಡಿಗೆ ಉಗ್ಗಿಸಿಡುತ್ತಿದ್ದರು..

ಬಾಳೆಕೀಳೆ ಹತ್ತ ತಿನ್ನುತ್ತಿದ್ದೆವು.ಆ ಬಾಳೆಕೀಳೆ..ಕೊಟ್ಗೆಯ ಕರುವಿಗೆ ಕೊಟ್ಟು..ಅದಕ್ಕೂ ಹಬ್ಬದ ರುಚಿ ತೋರಿಸುತ್ತಿದ್ದೆವು ಕಡುಬನ್ನು ಬಾಳೆನೀರಿನಲ್ಲಿ ಮಾಡುತ್ತಿದ್ದರು..ಯಾಕೆಂದರೆ
ಮುಸುರೆ ಆಗಬಾರದೆಂದು.

ಆಗ ನಮಗೆ ಒಕ್ಕಲು ಬಹಳ.ಯಾಕೆಂದರೆ ನಾವು ದೊಡ್ಡ ಜಮೀನ್ದಾರರಾಗಿದ್ದೆವಂತೆ..ಅದೇ ಭಾವನೆಯಲ್ಲಿ ನಮ್ಮನೆಯಲ್ಲಿ ಆಗ ಕೆಲಸಮಾಡಿದ ಆಳುಗಳ ಕುಟುಂಬದವರೆಲ್ಲ..ಒಡೆಯನಮನೆ ಎಂದು ನಮ್ಮನೆಗೇ ಹಬ್ಬಗಾಣಕೆ ಕಾಣಲು ಬರುತ್ತಿದ್ದರು..ಯಾಕೆಂದರೆ ನಾವಿದ್ದದ್ದು ಮೂಲಮನೆಯಲ್ಲಿ..ಮೂಲ ದೇವರಿದ್ದದ್ದು ನಮ್ಮನೆಯಲ್ಲಾಗಿತ್ತು. ಒಂದು ಮೊಗೆಕಾಯಿ..ಅಥವಾ ಸವತೆಕಾಯಿ ತಂದು ಬಾಗಿಲುಮುಂದೆ ಇಟ್ಟು ಕೈ ಮುಗಿಯುತ್ತಿದ್ದರು.ಆಗ ಅವರಿಗೆ ಅರ್ಧಕಟ್ಟು ಎಲೆ..ಐದು ಅಡಿಕೆ..ಒಂದು ಹೊಗೆಸಪ್ಪಿನ ದಂಟು..ಎರಡು ಶಿದ್ದೆ ಅವಲಕ್ಕಿ..ಒಂದ ಹನಿ ಚಾ..ಇದು ಪದ್ದತಿ. ನಮ್ಮನೆಯಲ್ಲಿ ಹೊಗೆಸಪ್ಪಿಗೂ ತತ್ವಾರ ಇತ್ತು..ಅವಲಬತ್ತ ನೆನೆಸಿ ಮಾಡಿದ ಅವಲಕ್ಕಿ ಇರುತ್ತಿತ್ತು.ಆಳುಗಳು”ಇರಲ್ರ ಸರಸಮ್ಮ..ಪದ್ದತಿ ಮಾಡ್ತೀರಿ..ಅದೇ ಖುಷಿ..ಮಾಣ್ಕೊಳ ಅವ್ರಯಲ್ರ..ನಾಳಿಕೆ ಮಾಡ್ಕ ಹೋಯ್ತರೆ ತೀಡುಕೊಗಬೇಡಿ” ಎಂದು ಸಮಾಧಾನ ಮಾಡಿದ್ದ ಆಳುಗಳು ಇಂದಿಲ್ಲ..ಆ ಆಳುಗಳ ಆ ಪ್ರೀತಿ ಇಂದು ನೆನಪಿದೆ..ಆ ಕುಟುಂಬದವರು ಈಗಲೂ ಬಿಟ್ಟಿಲ್ಲ.ಅಗ ಮುರುಟು ಸಮ್ತೆಮಿಡಿ ತಂದು ನಮಗೆ ಕೊಟ್ಟು “ಮಾಣಿ ತಿನ್ರ” ಎಂದು ಕೊಟ್ಟಿದ್ದು ನೆನಪಿದೆ.

ಇಂದು ಸಿಡಿಮದ್ದಿನ ಅಂಗಡಿಯನ್ನೇ ತರುವ ಶಕ್ತಿಯಿದೆ..ಆದರೆ ಹಬ್ಬಕ್ಕೆ ರುಚಿಯೇ ಇಲ್ಲ..ಪೇಟೆಯ ಸಂಸ್ಕೃತಿ ಬಂದು ಬಾಗಿಲುಮುಚ್ಚಿ ಹಬ್ಬ ಮಾಡುತ್ತಾರೆ..ಸವಲತ್ತುಗಳು ಸಂಸ್ಕೃತಿಯನ್ನು ನುಂಗಿದೆ..
ಭಾವಮರೆತ ಹಲ್ಲುಗಳು ನಗುವಂತೆ ನಟಿಸುತ್ತಿವೆ..ಕಣ್ಣೀರು ಬಂದರೂ..ಆಗಿನ ಕಷ್ಟದ ಹಬ್ಬದ ಸಂಭ್ರಮ..ಇಂದಿನ ಸುಖದ ದಿನದ ಹಬ್ಬಗಳಿಗಿಲ್ಲ..ಆ ಸಂಭ್ರಮದ ನೆನಪಿನಲ್ಲಿ ಹನಿ ಕಣ್ಣೀರು..ಬಿತ್ತು….ಬರೆಯಲಾರೆ ಮತ್ತೆ..ನಮಸ್ಕಾರ.

ತಿಗಣೇಶ ಮಾಗೋಡು.(9343596619)