Home Article ನಮಸ್ತುಲಸಿ ಕಲ್ಯಾಣಿ

ನಮಸ್ತುಲಸಿ ಕಲ್ಯಾಣಿ

SHARE
-ಶುಭಶ್ರೀ ಭಟ್ಟ ಗುಡಬಳ್ಳಿ,ಬೆಂಗಳೂರು
   
    “ಓಂ ತುಳಸೀಚ ವಿದ್ಮಹೇ
   ವಿಷ್ಣುಪ್ರಿಯಾಯ ಧಿಮಹೇ
   ತನ್ನೋ ವೃಂದಾ ಪ್ರಚೋಯದಾತ್||”
   ಈ ತುಳಸೀ ಗಾಯತ್ರಿ ಮಂತ್ರದ ಅರ್ಥ ಹೀಗಿದೆ- “ವಿಷ್ಣುವಿನ ಪ್ರೀತಿಪಾತ್ರಳಾದ ಶ್ರೀತುಳಸಿಯೇ ನಾನು ನಿನ್ನನ್ನು ಧ್ಯಾನಿಸುತ್ತೆನೆ.ಅಪರಿಮಿತವಾದ ಜ್ನಾನವನ್ನು ಕೊಟ್ಟು ನನ್ನ ಬುದ್ಧಿಯನ್ನು ಪ್ರಚೋದಿಸು”. ಇದನ್ನು ನಿತ್ಯವೂ ಶುಚಿರ್ಭುತರಾಗಿ,ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕುತ್ತಾ,ಶುದ್ಧಮನಸ್ಸಿನಿಂದ,ಉಚ್ಛಾರ ದೋಷವಿಲ್ಲದೇ ಪಟಿಸುವುದರಿಂದ ಶ್ರೀಮಹಾಲಕ್ಷ್ಮೀಯ ಅನುಗ್ರಹವಾಗುವುದರ ಜೊತೆಗೆ,ಉಸಿರಾಟಕ್ಕೆ ಸಂಬಂಧ ಪಟ್ಟ ತೊಂದರೆಗಳು ಕ್ರಮೇಣ ದೂರವಾಗುವವು ಎಂದು ಜೈನಗುರುಗಳೊಬ್ಬರು ನಮ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ಪ್ರವಚನದಲ್ಲಿ ಪ್ರಸ್ಥಾಪಿಸಿದ್ದರು.
  ಸರ್ವರಿಂದಲೂ ಪೂಜಿಸಲ್ಪಡುವ ಈ ಹರಿಪ್ರಿಯ ತುಳಸಿಯು,ಉಳಿದೆಲ್ಲಾ ಸಸ್ಯಗಳಿಗಿಂತಲೂ ವಿಶಿಷ್ಠ ಸ್ಥಾನಮಾನವನ್ನು ಹೊಂದಿದೆ.
 “ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ
 ಯದಗ್ರೇ ಸರ್ವದೇವಾಶ್ಚ ತುಲಸೀ ತ್ಮಾಂ ನಮಾಮ್ಯಹಂ|| ” ಈ ಶ್ಲೋಕದ ಮೂಲಕ ತುಳಸಿಗೆ ಸರಿಸಾಟಿಯಾದುದು ಯಾವುದೂ ಇಲ್ಲವೆಂದೆ ಹೇಳಿದ್ದಾರೆ ಹಿರಿಯರು.
ತುಳಸಿಯು ‘ಹರಿಪ್ರಿಯಾ,ವಿಷ್ಣುಪ್ರಿಯಾ,ವೃಂದಾ,ದಿವ್ಯಾ,ವೈಷ್ಣವಿ,ವಿಷ್ಣುವಲ್ಲಭೆ,ಪವಿತ್ರಾ, ಭಾರತೀ,ಧಾರಿಣಿ,ಸಾವಿತ್ರಿ,ಪದ್ಮಿನಿ,ಶ್ರೀಮತಿ,ತೃಷ್ಣಾ,ಕಾಮಕ್ಷೀ’ ಹೀಗೆ ಬಹುನಾಮಗಳಿಂದ ಕರೆಯಲ್ಪಡುತ್ತಾಳೆ.ಅಮೃತವನ್ನು ಪಡೆಯಲಿಕ್ಕಾಗಿ ದೇವದಾನವರು ಕ್ಷೀರಸಮುದ್ರವನ್ನು ಕಡೆಯತೊಡಗಿದ್ದರು. ದೇವಾಸುರರ ನಡುವೆ ಅಮೃತಕ್ಕಾಗಿ ಘರ್ಷಣೆಯಾಗುತ್ತಿದ್ದಾಗ ಹರಿಯ ಕೈಯಲ್ಲಿದ್ದ ಕಲಶದಲ್ಲಿ ಬಿದ್ದ ಅಮೃತಬಿಂದುವಿನಿಂದ ಹುಟ್ಟಿದವಳೇ ‘ತುಳಸಿ’,ಅದಕ್ಕೆ ಇವಳು ಹರಿಪ್ರಿಯಳು ಎಂಬ ಕಥೆಯೊಂದಿದೆ. ಇನ್ನು ಕೆಲವು ಮೂಲಗಳ ಪ್ರಕಾರ ‘ಜಲಂಧರ(ಶಿವನ ಮೂರನೇ ಕಣ್ಣಿಂದ ಜನಿಸಿದವ)ನ ಪತ್ನಿಯಾದ ವೃಂದಾ ಅಪರಿಮಿತ ಪತಿವೃತೆಯಾಗಿ,ವಿಷ್ಣುವಿನ ಪರಮ ಭಕ್ತಳಾಗಿದ್ದಳು.ವೃಂದೆಯ ಶಕ್ತಿಯನ್ನು ದುರುಪಯೋಗಿಸುತ್ತಾ ಜಲಂಧರನು ದುರಹಂಕಾರಿಯಾದನು.ಅವನನ್ನು ಹುಡುಕುವುದು ಸಾಕ್ಷಾತ್ ಪರಶಿವನಿಗೇ ಕಷ್ಟವಾದಾಗ,ದೇವತೆಗಳೆಲ್ಲಾ ವಿಷ್ಣುವಿನ ಮೊರೆಹೊಕ್ಕರು.ವಿಷ್ಣುವು ಉಪಾಯದಿಂದ ಜಲಂಧರನ ವೇಷ ಧರಿಸಿ ವೃಂದೆಯ ಕಣ್ಮುಂದೆ ಬಂದಾಗ ತನ್ನ ಪತಿಯೆಂದೇ ತಿಳಿದು ವಿಷ್ಣುವನ್ನು ಸ್ಪರ್ಶಿಸಿದಳು.ಸ್ಪರ್ಶಮಾತ್ರದಿಂದ ತನ್ನ ಪಾತಿವೃತ್ಯದ ಶಕ್ತಿಕಳೆದುಕೊಂಡಾಗ ಅದು ಜಲಂಧರನ ಅವಸಾನಕ್ಕೆ ಕಾರಣವಾಯ್ತು.ಅದಕ್ಕೆ ತನ್ನ ಇಷ್ಟದೈವವಾದ ವಿಷ್ಣುವಿನ ಮೇಲೆ ಸಿಟ್ಟುಕೊಂಡ ತುಳಸಿಯು ‘ಕಲ್ಲಾಗು’ ಎಂದು ಶಪಿಸಿದಾಗ,ಅದನ್ನು ಸಂತೋಷದಿಂದಲೇ ಸ್ವೀಕರಿಸಿದ ವಿಷ್ಣುವು ‘ಸಾಲಿಗ್ರಾಮ’ವೆಂಬ ಹೆಸರಿನಲ್ಲಿ ಕಲ್ಲಾದನು. ಯೋಗಾಗ್ನಿಯಲ್ಲಿ ತನ್ನನ್ನು ತಾನು ದಹಿಸಿಕೊಳ್ಳಲು ಹೊರಟ ವೃಂದೆಗೆ ‘ಇನ್ನುಮುಂದೆ ನೀನು ತುಳಸಿಯೆಂಬ ಸಸ್ಯವಾಗಿ ಪ್ರಸಿದ್ಧಿ ಪಡೆಯುವೆ,ನೀನಿಲ್ಲದೇ ಮಾಡುವ ಯಾವ ಪೂಜೆಯೂ ನನಗೆ ಸಲ್ಲುವುದಿಲ್ಲ.’ಎಂದು ವರವನ್ನಿತ್ತನೆಂದು ಕಥೆಯಿದೆ.
 ಪವಿತ್ರವಾದ ತುಳಸಿಯಲ್ಲಿಯೂ ಎರಡು ವಿಧವಿದೆ.ಒಂದು ಶ್ರೀತುಳಸಿ(ರಾಮ ತುಳಸಿ),ಇನ್ನೊಂದು ಕೃಷ್ಣತುಳಸಿಯೆಂದು.ಶ್ರೀತುಳಸಿಯ ಎಲೆಗಳು ಹಸಿರಾಗಿದ್ದರೆ,ಕೃಷ್ಣತುಳಸಿಯ ಎಲೆಗಳು ಕಪ್ಪುಬಣ್ಣದಂತಿರುತ್ತದೆ.ಈ ಪೂಜ್ಯ ತುಳಸಿಯು ಸಾಲಿಗ್ರಾಮದ ಪೂಜೆಗೆ ಅತ್ಯವಶ್ಯವಾದುದ್ದು,ಜೊತೆಗೆ ಶ್ರೇಷ್ಠ ಕೂಡ. ಕಾರ್ತಿಕಮಾಸದ ಉತ್ಥಾನ ದ್ವಾದಶಿಯಂದು ‘ವಿಷ್ಣುವಿಗೂ-ತುಳಸಿಗೂ’ ಮದುವೆ ಮಾಡುವ ವಿಶಿಷ್ಠ ಸಂಪ್ರದಾಯ ಇನ್ನೂ ನಮ್ಮಲ್ಲಿ ಜೀವಂತವಾಗಿದೆ. ಹೆಚ್ಚಾಗಿ ಸ್ತ್ರೀಯರೇ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಗೊಂದು ಮೆರುಗಿಟ್ಟಂತೆ.
   ತುಳಸಿ ಕೇವಲ ಪೂಜನೀಯ ಮಾತ್ರವಲ್ಲ,ಉಪಯುಕ್ತ ಔಷದೀ ಸಸ್ಯವೂ ಹೌದು.ಮನೆಯ ಸುತ್ತಾಮುತ್ತಾ ತುಳಸಿಯಿದ್ದರೇ ಯಾವ ದುಷ್ಟಶಕ್ತಿಗೂ ಮನೆಯೊಳಗೆ ಬರಲಾಗುವುದಿಲ್ಲವಂದು ಹಿರಿಯರು ಹೇಳುವ ಮಾತು ಉತ್ಪ್ರೇಕ್ಷೆಯಂತೂ ಖಂಡಿತ ಅಲ್ಲ. ವೈಜ್ನಾನಿಕ ದೃಷ್ಥಿಕೋನದಿಂದ ನೋಡುವುದಾದರೆ ತುಳಸಿಗಾಳಿಯನ್ನು ಸೇವಿಸುವವರು ಹೆಚ್ಚುಕಾಲ ಆರೋಗ್ಯದಿಂದ ಬಾಳುತ್ತಾರೆ.ಸಸ್ಯಶಾಸ್ತ್ರದ Lumiaccae ಕುಟುಂಬಕ್ಕೆ ಸೇರಿದ ಇದನ್ನು ಆಂಗ್ಲಭಾಷೆಯಲ್ಲಿ ‘Holly Basils’ ಎಂದು ಕರೆಯುತ್ತಾರೆ.
 ತುಳಸೀ ಕಟುಕಾ ತಿಕ್ತಾ
  ಹೃದ್ಯೋಷ್ಣಾ ದಾಹಪಿತ್ತಕೃತ್|
 ದೀಪನೀ ಕುಷ್ಠಕೃಚ್ಛಾಸ್ರ
 ಪಾರ್ಶ್ವರುಕ್ ಕಫವಾತಜಿತ್||
    ತುಳಸಿಯು ರುಚಿಯಲ್ಲಿ ಕಹಿ-ಖಾರದಿಂದ ಕೂಡಿದ್ದರೂ,ಅದು ಆರೋಗ್ಯಕ್ಕೆ ಅತೀ ಉಪಯೋಗಕಾರಿ.ಹೃದಯದ ಕಾಯಿಲೆಗೆ,ವಿಷಚಿಕಿತ್ಸೆಗೆ,ಜ್ವರಕ್ಕೆ, ಕುಷ್ಠರೋಗಕ್ಕೆ,ಚರ್ಮರೋಗ-ಮೂತ್ರರೋಗ ತೊಂದರೆಗೆ ತುಳಸಿಯು ತುಂಬಾ ಉಪಯುಕ್ತವಾದುದ್ದು. ಕಾಲರಾ ರೋಗ ನಿವಾರಣೆಯಲ್ಲೂ ಬಲು ಸಹಕಾರಿ.
   ಇಂತಹ ಬಹುಪಯೋಗಿ ತುಳಸಿಯನ್ನು ದೇಹಾಂತವಾದ ಮೇಲೂ ಉಪಯೋಗಿಸುತ್ತಾರೆ.ಇದರಿಂದ ವೈಕುಂಠವಾಸ ಪ್ರಾಪ್ತವಾಗುವುದೆಂದು ನಂಬಿಕೆಯಿದೆ. ‘ಒಂದು ದಳ ಶ್ರೀ ತುಳಸಿ,ಒಂದು ಗಂಗೋದಕವು’ ಎಂದು ದಾಸರು ಹಾಡಿ ತುಳಸಿಯ ಮಹಿಮೆಯನ್ನು ಜಗತ್ತಿಗೆ ಸಾರಿದ್ದಾರೆ. ಗಂಗಾಜಲದಷ್ಟೇ ಪವಿತ್ರವಾದುದು ಈ ತುಳಸಿ ನೀರು ಎಂದು ಇದರಿಂದ ತಿಳಿದುಬರುತ್ತದೆ.
   ಸರ್ವರಿಗೂ ತುಳಸಿಯ ಮಹತ್ವದ ಅರಿವಾಗಲಿ,ಮನೆಮನೆಯಲ್ಲಿ ತುಳಸೀ ಬನವಿರಲಿ ಎಂದು ಆಶಿಸುತ್ತಾ
 “ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೆ ಶುಭೆ
   ನಮೋ ಮೋಕ್ಷಪ್ರದೇ ದೇವಿ ನಮಸ್ಸಂಪತ್ಪ್ರಾದಾಯಿನಿ||”